ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: 2028ಕ್ಕೂ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ: ಡಿ.ಕೆ.ಶಿವಕುಮಾರ್

Ramanagar News: ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದ್ದು, ನಾನು ಬಡವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆʼ ಎಂದು ತಿಳಿಸಿದ್ದಾರೆ.

2028ಕ್ಕೂ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದ ಡಿಕೆಶಿ

-

Profile Siddalinga Swamy Sep 19, 2025 7:43 PM

ರಾಮನಗರ: ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದಲ್ಲಿ ಶುಕ್ರವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʼನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವುದಕ್ಕೆ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದೇನೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಜಾತಿ ಮೇಲೆ ನಂಬಿಕೆಯಿಟ್ಟಿರುವವನಲ್ಲ. ನೀತಿ ಮೇಲೆ ನಂಬಿಕೆಯಿಟ್ಟಿರುವವನು. ಬಡವರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆʼ ಎಂದರು.

100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ

ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಬೇಕು ಎಂದು ಜಿಲ್ಲೆಯ ಪ್ರತಿನಿಧಿಗಳ ಸಭೆ ಕರೆದು ಈಗಾಗಲೇ ತೀರ್ಮಾನ ಮಾಡಲಾಗಿದೆ. ʼಬಗರ್ ಹುಕುಂ ಸೇರಿದಂತೆ, ಭೂ ಸುಧಾರಣಾ ಕಾಯ್ದೆಯಡಿ ಮಂಜೂರಾತಿಗೆ ಬಾಕಿ ಇರುವ ಭೂಮಿಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆʼ ಎಂದರು.

ʼದೇವರು ಅವಕಾಶ ಮಾತ್ರ ಕೊಡುತ್ತಾನೆ. ಸಿಕ್ಕಂತಹ ಅವಕಾಶವನ್ನು ಬಳಸಿಕೊಂಡು ಬಡ ಜನರ ಏಳಿಗೆ ಮಾಡದಿದ್ದರೆ ಅಧಿಕಾರವಿದ್ದು ಏನು ಲಾಭ? ಕನಕಪುರದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಮಹಿಳೆಯರ ಹೆಸರಿಗೆ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ನಾನು ಸುಮಾರು 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿದ್ದೇನೆ. ಈಗ ಡಿ.ಕೆ.ಸುರೇಶ್ ಅವರಿಗೆ ಈ ಸಮಿತಿಯ ಜವಾಬ್ದಾರಿ ನೀಡಲಾಗಿದೆʼ ಎಂದರು.

ʼಕುಮಾರಸ್ವಾಮಿ ಅವರು ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು, ಬಡವರಿಗೆ ನಿವೇಶನ ಹಂಚಲು ಆಗಲಿಲ್ಲ. ಹೀಗಿದ್ದ ಮೇಲೆ ರಾಜಕಾರಣ ಏಕೆ ಮಾಡಬೇಕು? ರಾಜಕೀಯ ಮಾಡುವ ಅವಕಾಶವನ್ನೇ ಜನತಾದಳದವರು ಕಳೆದುಕೊಂಡಿದ್ದಾರೆʼ ಎಂದು ಅವರು ಆರೋಪಿಸಿದರು.

ʼಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ತೆಗೆದು ಹಾಕುವುದಾಗಿ ಯಾರೋ ಬಿಜೆಪಿ ನಾಯಕರು ಇತ್ತೀಚೆಗೆ ಹೇಳಿದ್ದಾರಂತೆ. ಮಿಸ್ಟರ್ ಅಶೋಕ್, ಅಶ್ವತ್ಥ ನಾರಾಯಣ, ಜನತಾ ದಳದ ನಾಯಕರೇ ನಿಮ್ಮ ಯಾರ ಹಣೆಯಲ್ಲೂ ಬದಲಾವಣೆ ಮಾಡುವ ಬಗ್ಗೆ ಬರೆದಿಲ್ಲ. ಅಶೋಕಣ್ಣಾ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಲು 2028ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಈ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ. ನೀವು ಇನ್ನು ಅಧಿಕಾರ ಮರೆತುಬಿಡಿʼ ಎಂದು ವ್ಯಂಗ್ಯವಾಡಿದರು.

ಜಾತಿ ಹೆಸರು ಸರಿಯಾಗಿ ನಮೂದಿಸಿ

ಈ ದೇಶದ ಬಡವರು, ಹಿಂದುಳಿದ ವರ್ಗದವರ ಪರವಾಗಿ ಕೆಲಸ ಮಾಡಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಓಬಿಸಿಗಳ ಏಳಿಗೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ನಿಮ್ಮ ಜಾತಿಯನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬರೆಸಬೇಕು. ನೀವು ಸರಿಯಾಗಿ ನಿಮ್ಮ ಜಾತಿ ನಮೂದಿಸದಿದ್ದರೆ ಇಡೀ ಸಮಾಜಕ್ಕೆ ಅನ್ಯಾಯ ಎಸಗಿದಂತೆ, ಆತ್ಮಸಾಕ್ಷಿಗೆ ಮೋಸ ಮಾಡಿದಂತೆ ಎಂದು ಹೇಳಿದರು.

ʼಆಧಾರ್ ಕಾರ್ಡ್, ಪಿಂಚಣಿ, ಉಳುವವನೆ ಭೂಮಿಯ ಒಡೆಯ ಸೇರಿದಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಒಂದೇ ಒಂದು ಯೋಜನೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಆಗಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮರು ಜನ್ಮವೆತ್ತಿ ಬಂದರೂ ದಳ ಹಾಗೂ ಬಿಜೆಪಿಯವರು ನಿಲ್ಲಿಸಲು, ಬದಲಾವಣೆ ಮಾಡಲು ಆಗುವುದಿಲ್ಲ. ಈ ಮಾತನ್ನು ದೇವರಾಜ ಅರಸು ಅವರ ಭಾವಚಿತ್ರದ ಮುಂದೆ ಹೇಳುತ್ತಿದ್ದೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಈ ಸುದ್ದಿಯನ್ನೂ ಓದಿ | MB Patil: ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270.83 ಕೋಟಿ ರೂ. ಕೊಡಲು ಸಚಿವ ಸಂಪುಟ ಒಪ್ಪಿಗೆ- ಎಂ.ಬಿ.ಪಾಟೀಲ್

ಜನರ ಬದುಕು ಬದಲಾವಣೆ ಮಾಡುವಂತಹ ಕಾರ್ಯಕ್ರಮಗಳನ್ನು ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ನೀಡಿದ್ದರು. ಬಡವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದವರು ದೇವರಾಜ ಅರಸು ಅವರು. ಸಾಮಾಜಿಕ ನ್ಯಾಯ ನೀಡಿದವರು. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ತಂದರು. ವೃದ್ದಾಪ್ಯ ವೇತನ ನೀಡುವುದನ್ನು ರಾಜ್ಯದಲ್ಲಿ ಜಾರಿಗೆ ತಂದರು. ವಿಧವಾ ಪಿಂಚಣಿ, ಬಡವರಿಗೆ ನಿವೇಶನಗಳನ್ನು ನೀಡಲಾಯಿತು. ಹೀಗೆ ಇಲ್ಲದವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಬಗರ್ ಹುಕುಂ ಸಾಗುವಳಿ ಭೂಮಿ ನೀಡುವ ಕೆಲಸವೂ ಆಯಿತು. ರಾಮನಗರದಲ್ಲಿ ಶಾಸಕರಾಗಿದ್ದ ಸಿ.ಎಂ. ಲಿಂಗಪ್ಪ ಅವರು ನೂರಾರು ಜನರಿಗೆ ಭೂಮಿ ಹಂಚಿಕೆ ಮಾಡಿದರು. ಈ ಜಿಲ್ಲೆಯವರಾದ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ನಿರ್ಮಿಸಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.