ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mankuthimmana Kagga Movie: ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ ಚಿತ್ರದ ಟ್ರೈಲರ್ ಬಿಡುಗಡೆ

Mankuthimmana Kagga Movie: ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ ವನ್ನು ಚಿತ್ರದ ಮೂಲಕ ತೆರೆಗೆ ತರುತ್ತಿದ್ದಾರೆ. ಎನ್.ಎ. ಶಿವಕುಮಾರ್ ಅವರು ನಿರ್ಮಿಸಿರುವ ಹಾಗೂ ಮೀನಾ‌ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಈ ಕುರಿತ ವಿವರ ಇಲ್ಲಿದೆ.

ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ ಚಿತ್ರದ ಟ್ರೈಲರ್ ಬಿಡುಗಡೆ

Profile Siddalinga Swamy Apr 22, 2025 1:45 PM

ಬೆಂಗಳೂರು: ಹೆಸರಾಂತ ಸಾಹಿತಿ ಡಾ.ಡಿ.ವಿ. ಗುಂಡಪ್ಪ (ಡಿ.ವಿ.ಜಿ) ಅವರ ಜನಪ್ರಿಯ ಪದ್ಯ ಪುಸ್ತಕ ʼಮಂಕುತಿಮ್ಮನ ಕಗ್ಗʼ. ಕನ್ನಡದಲ್ಲಿ ಈಗಾಗಲೇ ಕೆಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ರಾಜ ರವಿಶಂಕರ್ (ವಿ.ರವಿ), ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ ವನ್ನು ಚಿತ್ರದ (Mankuthimmana Kagga Movie) ಮೂಲಕ ತೆರೆಗೆ ತರುತ್ತಿದ್ದಾರೆ. ಎನ್.ಎ. ಶಿವಕುಮಾರ್ ಅವರು ನಿರ್ಮಿಸಿರುವ ಹಾಗೂ ಮೀನಾ‌ ಶಿವಕುಮಾರ್ ಸಹ ನಿರ್ಮಾಣವಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ರಾಮೋಹಳ್ಳಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ನಿರ್ದೇಶಕಿ, ನಟಿ ರೂಪ ಅಯ್ಯರ್, ನಟ ಸುಂದರರಾಜ್, ಸಂಗೀತ ನಿರ್ದೇಶಕ ವಿ. ಮನೋಹರ್, ಸಂಗಮೇಶ್ ಉಪಾಸೆ, ನಿರ್ಮಲ ಸಿ ಎಲಿಗಾರ್, ಮಾಜಿ ಶಾಸಕ ಲಕ್ಷ್ಮೀನಾರಾಯಣ್ ಸೇರಿದಂತೆ ಅನೇಕ ಗಣ್ಯರು ಡಿ.ವಿ.ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಟ್ರೈಲರ್ ಅನಾವರಣ ಮಾಡಿದರು.



ಆರಂಭದಲ್ಲಿ ಆದರ್ಶ್ ಅವರು ʼಮಂಕುತಿಮ್ಮನ ಕಗ್ಗʼ ದ ನಾಲ್ಕು ಪದ್ಯಗಳನ್ನು ಮನಮುಟ್ಟುವಂತೆ ಹಾಡಿದರು. ನಂತರ ಗಣ್ಯರು ಡಿ.ವಿ.ಜಿ ಅವರ ಬಾಲ್ಯವನ್ನು ಸಿನಿಮಾ ರೂಪಕ್ಕೆ ತಂದಿರುವ ನಿರ್ದೇಶಕ ಹಾಗೂ ನಿರ್ಮಾಪಕರ ಜತೆಗೆ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅದಕ್ಕೂ ಮುನ್ನ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಈ ಚಿತ್ರದಲ್ಲಿ‌‌ ಡಿ.ವಿ.ಜಿ ಅವರ ಬಾಲ್ಯದ ದಿನಗಳ ಬಗ್ಗೆ ತೋರಿಸಲಾಗಿದೆ.‌ ಬಾಲ್ಯದಲ್ಲಿ ಡಿ.ವಿ.ಜಿ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಅವರ ಸೋದರಮಾವ ತಿಮ್ಮಣ್ಣ ಮೇಷ್ಟ್ರು. ಸೋದರಮಾವ ಹಾಗೂ ಸೋದರಳಿಯನ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಸೋಮಿ (ಡಿ.ವಿ.ಜಿ) ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ. ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ. ನನಗೆ ಹಾಗೂ ನಿರ್ಮಾಪಕರಿಗೆ ಈ ಚಿತ್ರ ಮಾಡಬೇಕೆನಿಸಿದಾಗ‌ ಗೋಖುಲೆ‌ ಇನ್ಸ್‌ಟಿಟ್ಯೂಟ್ ಅವರ ಬಳಿ ʼಮಂಕುತಿಮ್ಮನ ಕಗ್ಗʼ ವನ್ನು ಸಿನಿಮಾ ಮಾಡುತ್ತೇವೆ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಗೆ ನೀಡಿದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರಾಜ ರವಿಶಂಕರ್ ತಿಳಿಸಿದರು.

ಹಲವು ವರ್ಷಗಳಿಂದ ಪ್ರಸಾದನ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿದ್ದೇನೆ. ಇಪ್ಪತ್ತು ವರ್ಷಗಳ ಹಿಂದೆ ʼಅವಳೆ ನನ್ನ ಗೆಳತಿʼ ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ಡಿ.ವಿ.ಜಿ ಅವರ ಚಿತ್ರ ಮಾಡಿರುವುದಕ್ಕೆ ಹೆಮ್ಮೆ ಇದೆ ಎಂದು ನಿರ್ಮಾಪಕ ಶಿವಕುಮಾರ್ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Royal Blue Colour Fashionwears: ಸೀಸನ್‌ ಫ್ಯಾಷನ್‌ವೇರ್‌ಗಳಲ್ಲಿ ರಾಯಲ್‌ ಬ್ಲ್ಯೂ ಕಲರ್‌ ಹಂಗಾಮ

ತಿಮ್ಮಣ್ಣ ಮೇಷ್ಟ್ರು ಪಾತ್ರ ಮಾಡಿರುವುದು ಬಹಳ ಖುಷಿಯಾಗಿದೆ ಎಂದರು ಹಿರಿಯ ನಟ ರಾಮಕೃಷ್ಣ. ಚಿತ್ರದಲ್ಲಿ ನಟಿಸಿರುವ ಭವ್ಯಶ್ರೀ ರೈ, ರವಿನಾರಾಯಾಣ್, ಓಂ ಸಾಯಿಪ್ರಕಾಶ್, ಮಾಸ್ಟರ್ ರಣವೀರ್ ಹಾಗೂ ಸಂಗೀತ ನಿರ್ದೇಶಕ ಎ.ಟಿ. ರವೀಶ್ ಮುಂತಾದವರು ʼಮಂಕುತಿಮ್ಮನ ಕಗ್ಗʼ ಚಿತ್ರದ ಕುರಿತು ಮಾತನಾಡಿದರು.