Indira canteen: ಇಂದಿರಾ ಕ್ಯಾಂಟೀನ್‌ನಲ್ಲಿ ಲೆಕ್ಕಪತ್ರ ಅವ್ಯವಸ್ಥೆ ಆರೋಪ: ಗ್ಯಾಸ್ ಕೊರತೆಯಿಂದ ಕ್ಯಾಂಟೀನ್ ಸೇವೆ ಅಸ್ತವ್ಯಸ್ತ
ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಆಹಾರದ ಗುಣಮಟ್ಟ ಹಾಗೂ ಸಮಯ ಪಾಲನೆ ಮೇಲೆ ಪರಿಣಾಮ ಬಿದ್ದಿದೆ ಎಂದು ಊಟಕ್ಕೆ ಬರುವ ಜನರು ಆರೋಪಿಸಿದ್ದಾರೆ. ವಿಶೇಷವಾಗಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದಲ್ಲಿ ವಿಳಂಬವಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದ್ದು, ಕೆಲವೊಮ್ಮೆ ಆಹಾರ ಸಿಗದೇ ಹಿಂತಿರುಗುವ ಪರಿಸ್ಥಿತಿಯೂ ಉಂಟಾಗಿದೆ
-
ಶಿಡ್ಲಘಟ್ಟ,: ನಗರದ ಇಂದಿರಾ ಕ್ಯಾಂಟೀನ್(Indira Canteen)ನಲ್ಲಿ ಇತ್ತೀಚೆಗೆ ಹಲವು ಅವ್ಯವಸ್ಥೆಗಳು ಬೆಳಕಿಗೆ ಬರುತ್ತಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಕ್ಯಾಂಟೀನ್‌ನಲ್ಲಿ ಅಡುಗೆ ವ್ಯವಸ್ಥೆ ಅಸ್ತವ್ಯಸ್ತ ಗೊಂಡಿದ್ದು, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಳೆದ ಮೂರು ತಿಂಗಳಿಂದ ಗೃಹಬಳಕೆಯ ಸಿಲಿಂಡರ್ ಮೂಲಕವೇ ಅಡುಗೆ ನಡೆಸುತ್ತಿರುವುದು ಗಮನಾರ್ಹ ವಾಗಿದೆ.
ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ಆಹಾರದ ಗುಣಮಟ್ಟ ಹಾಗೂ ಸಮಯ ಪಾಲನೆ ಮೇಲೆ ಪರಿಣಾಮ ಬಿದ್ದಿದೆ ಎಂದು ಊಟಕ್ಕೆ ಬರುವ ಜನರು ಆರೋಪಿಸಿದ್ದಾರೆ. ವಿಶೇಷ ವಾಗಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದಲ್ಲಿ ವಿಳಂಬವಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದ್ದು, ಕೆಲವೊಮ್ಮೆ ಆಹಾರ ಸಿಗದೇ ಹಿಂತಿರುಗುವ ಪರಿಸ್ಥಿತಿಯೂ ಉಂಟಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಇದನ್ನೂ ಓದಿ: Indira Canteens: ನಿರ್ಮಾಣ ಕಾರ್ಯ ಮುಗಿದ ಇಂದಿರಾ ಕ್ಯಾಂಟೀನ್‌ಗಳನ್ನು ವಾರದೊಳಗೆ ಆರಂಭಿಸಿ: ಸಿಎಂ ಆದೇಶ
ಇದಲ್ಲದೆ, ಕ್ಯಾಂಟೀನ್‌ನ ಲೆಕ್ಕಪತ್ರಗಳಲ್ಲಿ ಗೊಂದಲವಿರುವ ಆರೋಪವೂ ಕೇಳಿ ಬರುತ್ತಿದೆ. ದಿನ ನಿತ್ಯದ ವಹಿವಾಟು, ಆಹಾರ ವಿತರಣೆ ಹಾಗೂ ಬಳಕೆದಾರರ ಸಂಖ್ಯೆಯ ಬಗ್ಗೆ ಸರಿಯಾದ ದಾಖಲೆ ಗಳು ಇರಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಯೋಜನೆ ಬಡಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ ಆರಂಭವಾಗಿದ್ದು, ಇಂತಹ ಅವ್ಯವಸ್ಥೆಗಳು ಯೋಜನೆಯ ಉದ್ದೇಶಕ್ಕೂ ಧಕ್ಕೆ ಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸ್ಥಳೀಯ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳತ್ತ ಗಮನಹರಿಸಿ, ಗ್ಯಾಸ್ ಪೂರೈಕೆ ಸುಧಾರಿಸುವ ಜೊತೆಗೆ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರ ಸ್ಪಷ್ಟನೆ
ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರರಾದ ಶ್ವೇತಾ, “ವಾಣಿಜ್ಯ ಗ್ಯಾಸ್ ಲಭ್ಯವಿಲ್ಲದ ಕಾರಣ ಗೃಹ ಬಳಕೆಯ ಸಿಲಿಂಡರ್ ಬಳಸುತ್ತಿದ್ದೇವೆ. ಸಿಬ್ಬಂದಿಯ ಮನೆಗಳಿಂದ ಸಿಲಿಂಡರ್ ತಂದು ಅಡುಗೆ ಮಾಡಲಾಗುತ್ತಿದೆ. ನೋಂದಣಿ ಪುಸ್ತಕದಲ್ಲಿನ ಸಂಖ್ಯೆಗಳು ಅಂತಿಮ ಲೆಕ್ಕವಲ್ಲ; ಸರ್ಕಾರಕ್ಕೆ ಬೇರೆ ಲೆಕ್ಕ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.