ʻಯಶ್ ಡಿಪ್ರೆಷನ್‌ನಲ್ಲಿದ್ದಾರೆʼ ಎಂದಿದ್ದ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಮೇಲೆ ʻರಾಕಿ ಭಾಯ್ʼ ಅಮ್ಮ ಪುಷ್ಪಾ ಗರಂ
ಹೈದರಾಬಾದ್‌ನ ಜ್ಯೋತಿಷಿ ವೇಣು ಸ್ವಾಮಿ ಅವರು ಯಶ್ ಖಿನ್ನತೆಯಲ್ಲಿದ್ದಾರೆ ಎಂದು ನೀಡಿದ್ದ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಕ್ಕ ಉತ್ತರ ನೀಡಿದ್ದಾರೆ. "ನನ್ನ ಮಗ ಕಲ್ಲುಗುಂಡು, ಅವನ ಬಗ್ಗೆ ಗೊತ್ತಿಲ್ಲದೆ ಪಬ್ಲಿಸಿಟಿಗಾಗಿ ಮಾತನಾಡಬೇಡಿ" ಎಂದು ಜ್ಯೋತಿಷಿಯ ವಿರುದ್ಧ ಅವರು ಹರಿಹಾಯ್ದಿದ್ದಾರೆ.
-
ಹೈದರಾಬಾದ್‌ನ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ವಿವಾದಗಳಿಂದಲೇ ಸುದ್ದಿಯಾದವರು. ಟಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳಿ, ಸುದ್ದಿಯಾಗುತ್ತಿದ್ದ ವೇಣು ಸ್ವಾಮಿ ಈಚೆಗೆ ನಟ ಯಶ್ ಅವರ ಬಗ್ಗೆ ಮಾತನಾಡಿದ್ದರು. ಏಕವಚನದಲ್ಲಿಯೇ ಯಶ್ ಬಗ್ಗೆ ಮಾತನಾಡಿದ್ದ ವೇಣು ಸ್ವಾಮಿ, "ಯಶ್ ಅಂತ ಒಬ್ಬ ಹೀರೋ ಇದ್ದಾನೆ. ಸದ್ಯ ಆತನ ಪರಿಸ್ಥಿತಿ ಕಷ್ಟದಲ್ಲಿದೆ. ಆತ ಡಿಪ್ರೆಷನ್ (ಖಿನ್ನತೆ) ಅಲ್ಲಿದ್ದಾನೆ" ಎಂದೆಲ್ಲಾ ಬಡಬಡಾಯಿಸಿದ್ದರು.
ಮಾತಾಡೋಕೆ ಇವರಿಗೆಲ್ಲಾ ಸೆಲೆಬ್ರಿಟಿಗಳೇ ಬೇಕು
2 ತಿಂಗಳ ಹಿಂದೆ ನೀಡಿದ್ದ ಸಂದರ್ಶನ ಇದಾಗಿದ್ದು, ಈಗ ವೈರಲ್ ಆಗಿದೆ. ಯಶ್ ಬಗ್ಗೆ ಹೀಗೆ ಮಾತನಾಡಿರುವುದಕ್ಕೆ ಅವರ ಅಭಿಮಾನಿಗಳು ಗರಂ ಆಗಿದ್ದಾರೆ. ವೇಣು ಸ್ವಾಮಿಗೆ ಛೀಮಾರಿ ಹಾಕುತ್ತಿದ್ದಾರೆ. ಈ ನಡುವೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, "ಒಬ್ಬ ಸೆಲೆಬ್ರಿಟಿ ಬಗ್ಗೆ ಹಿಂದೆ ಮುಂದೆ ಗೊತ್ತಿಲ್ಲದೇ ಹೀಗೆಲ್ಲಾ ಸಂದರ್ಶನದಲ್ಲಿ ಮಾತನಾಡುತ್ತಾರೆ. ರೋಡ್‌ನಲ್ಲಿ ಎಷ್ಟೋ ಜನಕ್ಕೆ ತೊಂದರೆ ಇರಬಹುದು. ಆದರೆ ಅಂಥವರ ಬಗ್ಗೆ ಇವರಿಗೆ ಮಾತನಾಡೋಕಾಗಲ್ಲ. ಮಾತಾಡೋಕೆ ಇವರಿಗೆಲ್ಲಾ ಸೆಲೆಬ್ರಿಟಿಗಳೇ ಬೇಕು. ಆಗಲೇತಾನೇ ಜನ ನೋಡುವುದು" ಎಂದು ಗರಂ ಆಗಿದ್ದಾರೆ ಪುಷ್ಪಾ.
Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
ತೆಲುಗಿನವರ ಬಗ್ಗೆ ನಾವು ಮಾತಾಡ್ತೀವಾ?
"ಸೆಲೆಬ್ರಿಟಿಗಳ ಬಗ್ಗೆ ಮಾತನಾಡಲಿ, ಆದರೆ ಒಳ್ಳೆಯ ರೀತಿಯಲ್ಲಿ ಮಾತನಾಡಲಿ. ಯಶ್ ಡಿಪ್ರೆಶನ್‌ನಲ್ಲಿದ್ದಾರೆ ಅಂತ ಅವರು ಹೇಳಿದಾಗ, ಎಷ್ಟೋ ಅಭಿಮಾನಿಗಳು ನನಗೆ ಫೋನ್ ಮಾಡಿದ್ದರು. "ಅಮ್ಮ, ನಮಗೆ ಸಿಟ್ಟು ಬಂದಿದೆ" ಅಂತ ಹೇಳಿದ್ದರು. ಕನ್ನಡದ ಹೀರೋಗಳೆಂದರೆ, ಅಷ್ಟೊಂದು ಹಗುರವೇ? ತೆಲುಗು ನಟರ ಬಗ್ಗೆ ನಾವು ಹೀನಾಯವಾಗಿ ಮಾತನಾಡುತ್ತೇವಾ" ಎಂದು ಯಶ್ ತಾಯಿ ಪುಷ್ಪ ಪ್ರಶ್ನೆ ಮಾಡಿದ್ದಾರೆ.
ವೇಣು ಸ್ವಾಮಿ ಭವಿಷ್ಯದ ವಿಡಿಯೋ
ಯಶ್ ಬಗ್ಗೆ ತಿಳ್ಕೊಂಡು ಮಾತನಾಡಬೇಕು
"ವೇಣು ಸ್ವಾಮಿ ಯಾರೆಂದೇ ನನಗೆ ಗೊತ್ತಿರಲಿಲ್ಲ. ನಮ್ಮ ಹುಡುಗರೆಲ್ಲಾ ಫೋನ್ ಮಾಡಿ, ಹೇಳಿದರು. ಆಗ ನಾನು ವಿಡಿಯೋ ನೋಡಿದೆ. ಕೆಜಿಎಫ್ ಸಿನಿಮಾದ ಸಕ್ಸಸ್ ಬಗ್ಗೆಯೂ ಮಾತನಾಡಿದ್ದಾರೆ. ಯಶ್ ನಮ್ಮ ಮಗ ಅಲ್ಲ, ಅವನು ಈಗ ಇಡೀ ಜಗತ್ತಿನ ಮಗ. ನನ್ನ ಮಗ ಕಲ್ಲುಗುಂಡು. ಅವನನ್ನ ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಯಶ್ ಬಗ್ಗೆ ತಿಳ್ಕೊಂಡು ಆದರೂ ಆ ವ್ಯಕ್ತಿ ಮಾತನಾಡಬೇಕು ಅಲ್ವಾ? ಈಗ ನೋಡಿ, ಸುಮ್‌ಸುಮ್ನೆ ಮಾತಾಡಿ ಗೌರವ ಕಳೆದುಕೊಂಡರು. ಬರೀ ಯಶ್ ಬಗ್ಗೆ ಅಂತಲ್ಲ. ನಮ್ಮ ಕನ್ನಡದ ಯಾವ ನಟರ ಬಗ್ಗೆ ಮಾತನಾಡಿದರೂ ಬೇಜಾರಾಗುತ್ತದೆ. ನಮ್ಮ ಕಲಾವಿದರು ಎಷ್ಟು ಶ್ರಮ ಹಾಕ್ತಾರೆ ಅಂತ ನಮಗೆ ಗೊತ್ತು" ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಹೇಳಿದ್ದಾರೆ.