Kantara Chapter 1: ಕಾಂತಾರ ಚಾಪ್ಟರ್ 1 ಬಿಡುಗಡೆ ಅಪ್‌ಡೇಟ್, ವದಂತಿಗಳಿಗೆ ತೆರೆ ಎಳೆದ ಚಿತ್ರತಂಡ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ʻಕಾಂತಾರ ಚಾಪ್ಟರ್ 1’ ಸಿನಿಮಾಗೆ ಇತ್ತೀಚೆಗೆ ಸಾಕಷ್ಟು ಅಡಚಣೆಗಳು ಎದುರಾಗಿವೆ. ಹೀಗಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹಬ್ಬಿದ್ದವು. ಇದೀಗ ಆ ವದಂತಿಗಳಿಗೆ ಹೊಂಬಾಳೆ ಫಿಲಂಸ್ ಸ್ಪಷ್ಟನೆ ನೀಡಿದೆ.


ಬೆಂಗಳೂರು: ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್ 1ʼ (Kantara Chapter 1) ಸಿನಿಮಾದ ರಿಲೀಸ್ ಬಗ್ಗೆ ಹಲವಾರು ಊಹಾಪೋಹಗಳು ಎದ್ದಿರುವ ಹಿನ್ನೆಲೆಯಲ್ಲಿ ಕಾಂತಾರ ಚಿತ್ರತಂಡ ಇದೀಗ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದೆ. ಕಾಂತಾರ ಚಾಪ್ಟರ್ 1 ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2, 2025ಕ್ಕೆ ನಿಗದಿಪಡಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್ (Homabale Films) ಈಗಾಗಲೇ ಘೋಷಿಸಿತ್ತು. ಆದರೆ ಇತ್ತೀಚೆಗೆ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಈ ದಿನಾಂಕದ ಬಗ್ಗೆ ಕೆಲವು ಊಹಾಪೋಹಗಳು ಹರಡಿದ್ದವು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೊಂಬಾಳೆ ಫಿಲಂಸ್, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಹಿಂದಿನ ʼಕಾಂತಾರʼ ಚಿತ್ರದ ಯಶಸ್ಸಿನ ನಂತರ ʼಕಾಂತಾರ ಚಾಪ್ಟರ್ 1ʼ ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯಲಿದೆ. ನಿಮ್ಮ ಕಾತುರಕ್ಕೆ ತಕ್ಕಂತೆ ಚಿತ್ರವೂ ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಆದರಿಂದ ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನಷ್ಟೆ ನಂಬಲು ಚಿತ್ರತಂಡ ಮನವಿ ಮಾಡಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ʻಕಾಂತಾರ ಚಾಪ್ಟರ್ 1’ ಸಿನಿಮಾಗೆ ಇತ್ತೀಚೆಗೆ ಸಾಕಷ್ಟು ಅಡಚಣೆಗಳು ಎದುರಾಗಿವೆ. ಚಿತ್ರ ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಹೀಗಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವದಂತಿಗಳು ಹಬ್ಬಿದ್ದವು. ಇತ್ತೀಚೆಗೆ ʻಕಾಂತಾರʼ ಚಿತ್ರದಲ್ಲಿ ನಟಿಸಿದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಅವರು ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ನಿಧನರಾದರು. ಈ ಘಟನೆಯಿಂದ ಚಿತ್ರತಂಡ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯಿತು. ಇತ್ತೀಚೆಗೆ ʻಕಾಂತಾರ ಚಾಪ್ಟರ್ 1ʼ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾದರು. ಅಲ್ಲದೇ ರಿಷಬ್ ಶೆಟ್ಟಿ ಅವರಿಗೆ ದೈವ ಎಚ್ಚರಿಕೆ ಕೊಟ್ಟಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ, ಈ ಘಟನೆಗಳಿಂದ ಚಿತ್ರತಂಡಕ್ಕೆ ಆಘಾತವಾಗಿದೆ, ಶೂಟಿಂಗ್‌ಗೆ ಅಡಚಣೆ ಉಂಟಾಗಿ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಬಹುದು ಎನ್ನುವ ವದಂತಿ ಹಬ್ಬಿತ್ತು. ಇಂತಹ ಗಾಸಿಪ್‌ಗಳಿಗೆ ಹೊಂಬಾಳೆ ಸಂಸ್ಥೆ ಇದೀಗ ಸ್ಪಷ್ಟನೆ ನೀಡಿದೆ.
ʻಕಾಂತಾರʼ ಪ್ರೀಕ್ವೆಲ್‌ಗಾಗಿ ಪ್ರೇಕ್ಷಕರು ಕಾದು ಕುಳಿತಿದಿದ್ದಾರೆ. ʻಕಾಂತಾರ ಚಾಪ್ಟರ್ 1’ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಮೊದಲೇ ಅನೌನ್ಸ್ ಮಾಡಿದ್ದ ಅದೇ ದಿನದಂದು, ಅಂದರೆ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ನಟ ರಿಷಬ್ ಶೆಟ್ಟಿ ನಿರ್ದೇಶನದ ʻಕಾಂತಾರʼ ಸಿನಿಮಾ ಬಾಕ್ಸಾಫೀಸ್ ಧೂಳಿಪಟ ಮಾಡಿತ್ತು. ವಿಶ್ವಮಟ್ಟದಲ್ಲಿ ಕಾಂತಾರ ಸಿನಿಮಾವನ್ನು ನೋಡಿ ಪ್ರೇಕ್ಷಕರು ಕೊಂಡಾಡಿದ್ದರು. ಆ ಬೆನ್ನಲ್ಲೇ ʻಕಾಂತಾರ 1ʼ ಸಿನಿಮಾ ಮಾಡುವ ಸಲುವಾಗಿ ರಿಷಬ್ ದೈವ ನರ್ತಕರ ಸಲಹೆ ಪಡೆದಿದ್ದರು.
ಇದನ್ನೂ ಓದಿ: Kantara Movie: ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ತಪ್ಪದ ಸಂಕಷ್ಟ: ದೈವ ನುಡಿದ ಮಾತು ನಿಜವಾಯ್ತಾ?