ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So records: ಒಂದೇ ವಾರದಲ್ಲಿ ಹಲವು ದಾಖಲೆ ಉಡೀಸ್‌ ಮಾಡಿದ 'ಸು ಫ್ರಂ ಸೋ'

Su from So: ಈ ಸಿನಿಮಾ ಈವರೆಗೆ ಸುಮಾರು 35.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಂದರೆ ಬಜೆಟ್​ನ ಹತ್ತು ಪಟ್ಟು ಗಳಿಕೆ ಆಗಿದೆ. ಪರಭಾಷೆಗಳಿಂದಲೂ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಶುರುವಾಗಿದೆ. ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ತೆಲುಗಿಗೆ ಶೀಘ್ರದಲ್ಲೇ ಡಬ್ ಆಗುತ್ತಿದೆ.

ಒಂದೇ ವಾರದಲ್ಲಿ ಹಲವು ದಾಖಲೆ ಉಡೀಸ್‌ ಮಾಡಿದ 'ಸು ಫ್ರಂ ಸೋ'

ಹರೀಶ್‌ ಕೇರ ಹರೀಶ್‌ ಕೇರ Aug 4, 2025 9:14 AM

ಬೆಂಗಳೂರು: ಈ ವರ್ಷದ ಸರ್‌ಪ್ರೈಸ್‌ ಹಿಟ್‌ ಆಗಿರುವ 'ಸು ಫ್ರಂ ಸೋ' ಸಿನಿಮಾ (Su from So movie) ಹಲವು ದಾಖಲೆಗಳನ್ನು (Su from So records) ಬರೆದು ಮುನ್ನುಗ್ಗುತ್ತಿದೆ. ಪ್ರೀಮಿಯರ್ ಶೋನಿಂದ ಶುರುವಾದ ಸಿನಿಮಾ ಕ್ರೇಜ್ ಎರಡನೇ ವಾರಕ್ಕೂ ಕಮ್ಮಿ ಆಗಿಲ್ಲ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು, ಕೇವಲ 10 ದಿನಗಳಲ್ಲಿ 10 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್‌ಮೈ ಶೋನಲ್ಲೇ ಬುಕ್ ಆಗಿದೆ. ‘ಸು ಫ್ರಮ್ ಸೋ’ ಚಿತ್ರದ ಬಜೆಟ್ 3-4 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದ್ದು, ಎರಡನೇ ವಾರಾಂತ್ಯದ ಭಾನುವಾರ ಒಂದೇ ದಿನ ಸುಮಾರು 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಬಜೆಟ್​ನ ದುಪ್ಪಟ್ಟು ಕಲೆಕ್ಷನ್ ಭಾನುವಾರ ಒಂದೇ ದಿನ ಆಗಿದೆ.

ಈಗಾಗಲೇ ಕಾಮಿಡಿ ಎಂಟರ್‌ಟೈನರ್ ಸಿನಿಮಾ 30 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಸಿನಿಮಾ ಈವರೆಗೆ ಸುಮಾರು 35.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅಂದರೆ ಬಜೆಟ್​ನ ಹತ್ತು ಪಟ್ಟು ಗಳಿಕೆ ಆಗಿದೆ. ಮಲಯಾಳಂ ಭಾಷೆಯಲ್ಲೂ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಅನಾಯಾಸವಾಗಿ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ತೆಲುಗು ಹಾಗೂ ಹಿಂದಿಯಲ್ಲಿ ರಿಲೀಸ್ ಆದ ಬಳಿಕ ಚಿತ್ರ ಕ್ಲಿಕ್ ಆದರೆ ಒಳ್ಳೆಯ ಯಶಸ್ಸು ಸಿಗಲಿದೆ.

ದೊಡ್ಡ ದೊಡ್ಡ ಸಿನಿಮಾಗಳ ದಾಖಲೆಯನ್ನು ಹಿಂದಿಕ್ಕಿ ಈ ಹೊಸಬರ ಸಿನಿಮಾ ಸದ್ದು ಮಾಡ್ತಿದೆ. ಪರಭಾಷೆಗಳಿಂದಲೂ ಸಿನಿಮಾ ಡಬ್ ಮಾಡುವಂತೆ ಬೇಡಿಕೆ ಶುರುವಾಗಿದೆ. ಈಗಾಗಲೇ ಮಲಯಾಳಂ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ತೆಲುಗಿಗೆ ಶೀಘ್ರದಲ್ಲೇ ಡಬ್ ಆಗುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿ ಕೂಡ 'ಸು ಫ್ರಂ ಸೋ' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಡಬ್ ಮಾಡಿ ಬಿಡುಗಡೆ ಮಾಡಿದರೆ ಮತ್ತಷ್ಟು ಜನರನ್ನು ತಲುಪಲಿದೆ.

ಕೇರಳದಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಚಿತ್ರತಂಡ ಖುಷಿಯಾಗಿದೆ. 2ನೇ ವಾರ ಟಿಕೆಟ್ ಸಿಗುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುವ ಮಟ್ಟಕ್ಕೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸೆಕೆಂಡ್ ವೀಕೆಂಡ್‌ನಲ್ಲಿ ಭಾರೀ ಕಲೆಕ್ಷನ್ ಆಗಿದೆ ಎಂದು ಟೀಮ್‌ ಲೆಕ್ಕ ಕೊಟ್ಟಿದೆ.

ಬುಕ್‌ಮೈ ಶೋನಲ್ಲಿ 'ಸು ಫ್ರಂ ಸೋ' ಸಿನಿಮಾ ಕಲೆಕ್ಷನ್ ಹೇಗಿದೆ ಎನ್ನುವ ಲೆಕ್ಕ ಸಿಗುತ್ತಿದೆ. 9 ದಿನಕ್ಕೆ 10 ಲಕ್ಷದ 10 ಸಾವಿರ ಟಿಕೆಟ್ ಬುಕ್‌ಮೈಶೋನಲ್ಲಿ ಬುಕ್ ಆಗಿರುವುದು ದಾಖಲೆಯೇ ಸರಿ. ಆಗಸ್ಟ್ 3ರಂದು ಕೂಡ ಗಂಟೆಗೆ 9 ಸಾವಿರಕ್ಕೂ ಅಧಿಕ ಟಿಕೆಟ್‌ ಆನ್ಲೈನ್‌ನಲ್ಲಿ ಬುಕ್ ಆಗಿತ್ತು. ಎರಡು ದಿನದ ಹಿಂದೆ ಬಿಡುಗಡೆ ಆಗಿರುವ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಚಿತ್ರಕ್ಕೆ ಗಂಟೆಗೆ 5 ಸಾವಿರ ಟಿಕೆಟ್ ಮಾತ್ರ ಬುಕ್ ಆಗ್ತಿದೆ.

ಕಳೆದ ಒಂದೂವರೆ ವರ್ಷದಿಂದ ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಲೆಕ್ಕ ಕೊಡುತ್ತಿದೆ. ಈವರೆಗೆ ಕನ್ನಡದಲ್ಲಿ 'ಕಾಟೇರ' ಸಿನಿಮಾ ಟಿಕೆಟ್ ಆನ್ಲೈನ್‌ನಲ್ಲಿ ಹೆಚ್ಚು ಬುಕ್ ಆಗಿದ್ದ ದಾಖಲೆ ಹೊಂದಿತ್ತು. ಆ ದಾಖಲೆಯನ್ನು ಈಗ 'ಸು ಫ್ರಂ ಸೋ' ಸಿನಿಮಾ ಹಿಂದಿಕ್ಕಿದೆ. ಆದರೆ ಆಫ್‌ಲೈನ್‌ನಲ್ಲಿ ಹೆಚ್ಚು ಜನ ಟಿಕೆಟ್ ಖರೀದಿಸಿ 'ಕಾಟೇರ' ಸಿನಿಮಾ ವೀಕ್ಷಿಸಿದ್ದರು. ಈ ಲಿಸ್ಟ್‌ನಲ್ಲಿ ಸುದೀಪ್ ನಟನೆಯ 'ಮ್ಯಾಕ್ಸ್' 3ನೇ ಸ್ಥಾನದಲ್ಲಿದ್ದರೆ ಉಪ್ಪಿ ನಿರ್ದೇಶಿಸಿ ನಟಿಸಿದ 'ಯುಐ' 4ನೇ ಸ್ಥಾನದಲ್ಲಿದೆ.

ಆರಂಭದಲ್ಲಿ ಕಡಿಮೆ ಸ್ಕ್ರೀನ್‌ಗಳಲ್ಲಿ ಕಡಿಮೆ ಶೋಗಳೊಂದಿಗೆ 'ಸು ಫ್ರಂ ಸೋ' ಸಿನಿಮಾ ಬಿಡುಗಡೆ ಆಗಿತ್ತು. ಬಳಿಕ ರೆಸ್ಪಾನ್ಸ್‌ಗೆ ತಕ್ಕಂತೆ ಶೋಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗಲಾಯಿತು. ಇದೀಗ ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಾಕಷ್ಟು ಕಡೆ ಸಿನಿಮಾ ತೆರೆಕಂಡಿದೆ. ಹಾಗಾಗಿ ಸಹಜವಾಗಿಯೇ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದೆ. ಅಚ್ಚರಿ ಎಂದರೆ 2ನೇ ಶುಕ್ರವಾರ ಹಾಗೂ ಶನಿವಾರ ಒಂದೂವರೆ ಲಕ್ಷಕ್ಕೂ ಅಧಿಕ ಟಿಕೆಟ್ ಆನ್ಲೈನ್‌ನಲ್ಲಿ ಬುಕ್ ಆಗಿದೆ.

ಮೊದಲ ವಾರ ಬುಕ್‌ಮೈ ಶೋನಲ್ಲಿ ಅತಿಹೆಚ್ಚು ಟಿಕೆಟ್(7 ಲಕ್ಷದ 75 ಸಾವಿರ) ಬುಕ್ ಆದ ಸಿನಿಮಾ 'ಸು ಫ್ರಂ ಸೋ' ಎನಿಸಿಕೊಂಡಿದೆ. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಎನ್ನುವ ದಾಖಲೆ 'ಸು ಫ್ರಂ ಸೋ' ಪಾಲಾಗಿದೆ. 'ಎಕ್ಕ' ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ. ಪೀಕ್ ಅವರ್‌ಗಳಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆಗಿದ್ದ ಸಿನಿಮಾ, 24 ಗಂಟೆಗಳಲ್ಲಿ ಅತಿಹೆಚ್ಚು ಟಿಕೆಟ್(ಆಗಸ್ಟ್ 1ರಂದು 1 ಲಕ್ಷದ 68 ಸಾವಿರ) ಬುಕ್ ಆಗಿದ್ದ ಸಿನಿಮಾ, ಈ ವರ್ಷ ಬೆಂಗಳೂರಿನಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಸಿನಿಮಾ ಹೀಗೆ ಸಾಕಷ್ಟು ದಾಖಲೆಗಳನ್ನು 'ಸು ಫ್ರಂ ಸೋ' ಸ್ವಂತ ಮಾಡಿಕೊಂಡಿದೆ.

ಇದನ್ನೂ ಓದಿ: Su From So Box Office Collection: ವಾರ ಕಳೆದರೂ ತಗ್ಗಿಲ್ಲ ಸುಲೋಚನಾ ಹವಾ; ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಸು ಫ್ರಮ್‌ ಸೋʼ ಚಿತ್ರ