B. Saroja Devi: ಬಿ. ಸರೋಜಾ ದೇವಿ ಪತಿ ಯಾರು? ಅವರು ಸಾವನ್ನಪ್ಪಿದ್ದು ಹೇಗೆ?
B. Saroja Devi: ಪತಿಯ ಅಕಾಲಿಕ ಮರಣದಿಂದ ಸರೋಜಾ ದೇವಿ ತೀವ್ರ ಆಘಾತಕ್ಕೊಳಗಿದ್ದರು. ಪತಿ ವಿಧಿವಶರಾದ ಮೇಲೆ ಮಾನಸಿಕವಾಗಿ ತೀವ್ರ ನೊಂದಿದ್ದ ಸರೋಜಾ ದೇವಿ ಒಂದು ವರ್ಷ ನಟನೆ ಮಾಡಿರಲಿಲ್ಲ. ಆದರೆ, ಅದಾಗಲೇ 8 ಚಿತ್ರಗಳನ್ನ ಅವರು ಒಪ್ಪಿಕೊಂಡಿದ್ದರಿಂದ ಅದನ್ನು ಮುಗಿಸಲೇಬೇಕಿತ್ತು.



ಕನ್ನಡದ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಹೆಸರಾದ ಬಹುಭಾಷಾ ತಾರೆ ಬಿ. ಸರೋಜಾ ದೇವಿ (87) ಬೆಂಗಳೂರಿನಲ್ಲಿ ಸೋಮವಾರ ವಿಧಿವಶರಾಗಿದ್ದಾರೆ. ಕನ್ನಡ ಸೇರಿ ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟಿ, ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಅವರ ಪತಿಯ ಅಕಾಲಿಕ ಮರಣದಿಂದ ಸರೋಜಾ ದೇವಿ ತೀವ್ರ ಆಘಾತಕ್ಕೊಳಗಿದ್ದರು.

ಸರೋಜಾ ದೇವಿ ಅವರು 1938ರ ಜ. 7 ರಂದು ಬೆಂಗಳೂರಿನಲ್ಲಿ ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು. ತಂದೆ ಭೈರಪ್ಪ ಪೊಲೀಸ್ ಆಫೀಸರ್, ತಾಯಿ ರುದ್ರಮ್ಮ ಗೃಹಿಣಿ. ದಂಪತಿಗೆ ಇವರು ನಾಲ್ಕನೇ ಪುತ್ರಿ. ಚಿತ್ರರಂಗಕ್ಕೆ ಕಾಲಿಡುವಾಗಲೇ, ‘’ಯಾರನ್ನೂ ಲವ್ ಮಾಡುವ ಹಾಗಿಲ್ಲ. ನಮ್ಮ ಜಾತಿಯ ಹುಡುಗನ ಜತೆಗೆ ನಿನ್ನ ಮದುವೆ’’ ಅಂತ ತಾಯಿ ರುದ್ರಮ್ಮ ಕಂಡೀಷನ್ ಹಾಕಿದ್ದರಂತೆ. ಅಮ್ಮನ ಮಾತನ್ನು ಸರೋಜಾ ದೇವಿ ಮೀರಲಿಲ್ಲ. ಅಪ್ಪ - ಅಮ್ಮ ಹುಡುಕಿದ ಹುಡುಗನನ್ನೇ ಸರೋಜಾ ದೇವಿ ಮದುವೆಯಾಗಿದರು.

ಸರೋಜಾ ದೇವಿ ಯಶಸ್ಸಿನ ಉತ್ತುಂಗದಲ್ಲಿ ಇದ್ದ ಕಾಲಘಟ್ಟದಲ್ಲಿ ತಮಿಳಿನ ಸೂಪರ್ ಸ್ಟಾರ್ ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಜತೆ ಹಲವು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದರು. ತೆಲುಗು ಹಾಗೂ ಕನ್ನಡದಲ್ಲೂ ಬಹುಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ ಅತೀ ಹೆಚ್ಚು ಸಂಭಾವನೆಯನ್ನೂ ಪಡೆಯುತ್ತಿದ್ದರು. ಇದೇ ಟೈಮ್ನಲ್ಲೇ ಮದುವೆಯಾಗುವ ನಿರ್ಧಾರ ಮಾಡಿದರು. ತಮಗೆ 29 ವರ್ಷ ವಯಸ್ಸಾಗಿದ್ದಾಗ, 1967ರ ಮಾರ್ಚ್ 1 ರಂದು ಸರೋಜಾ ದೇವಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಶ್ರೀಹರ್ಷ ಎಂಬುವರನ್ನ ಸರೋಜಾ ದೇವಿ ಮದುವೆಯಾದರು.

ಮೆಕಾನಿಕಲ್ ಎಂಜಿನಿಯರ್ ಆಗಿದ್ದ ಶ್ರೀಹರ್ಷ, ಸರೋಜಾದೇವಿ ಕುಟುಂಬಸ್ಥರು ಹುಡುಕಿದ್ದ ವರ. ಮದುವೆಗೆ ಒಪ್ಪಿದ ಮೇಲೆ ಮನೆಯಲ್ಲೇ ಶ್ರೀಹರ್ಷ - ಬಿ ಸರೋಜಾ ದೇವಿ ನಿಶ್ಚಿತಾರ್ಥ ನಡೆದಿತ್ತು. ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆಯಿತು.

ಮದುವೆಯಾದ ಸಂದರ್ಭದಲ್ಲಿ ಸರೋಜಾ ದೇವಿ ಇನ್ಕಮ್ ಟ್ಯಾಕ್ಸ್ ಸಂಕಷ್ಟದಲ್ಲಿ ಸಿಲುಕಿದ್ದರು. ಈ ವೇಳೆ ಹಣಕಾಸು ವಿಚಾರದಲ್ಲಿ ಸರೋಜಾ ದೇವಿ ಅವರನ್ನು ಪತಿ ಹರ್ಷ ಸಂಕಷ್ಟದಿಂದ ಪಾರು ಮಾಡಿದ್ದರು.

1985 ರಿಂದ ಪತಿ ಶ್ರೀಹರ್ಷಗೆ ಅನಾರೋಗ್ಯ ಕಾಡಲು ಆರಂಭಿಸಿತು. ಶ್ರೀಹರ್ಷ ಅಸ್ವಸ್ಥರಾಗುತ್ತಿದ್ದಂತೆಯೇ ಬಿ ಸರೋಜಾ ದೇವಿ ನಟನೆಯಿಂದ ಬ್ರೇಕ್ ಪಡೆದರು. 1986 ರಲ್ಲಿ ಶ್ರೀಹರ್ಷ ಹೃದಯಾಘಾತದಿಂದ ವಿಧಿವಶರಾದರು. ಪತಿಯ ನಿಧನದಿಂದ ಸರೋಜಾ ದೇವಿ ತೀವ್ರ ಆಘಾತಕ್ಕೊಳಗಾಗಿದ್ದರು.

ಪತಿ ವಿಧಿವಶರಾದ್ಮೇಲೆ ಮಾನಸಿಕವಾಗಿ ತೀವ್ರ ನೊಂದಿದ್ದ ಸರೋಜಾ ದೇವಿ ಒಂದು ವರ್ಷ ನಟನೆ ಮಾಡಲಿಲ್ಲ. ಆದರೆ, ಅದಾಗಲೇ 8 ಚಿತ್ರಗಳನ್ನ ಅವರು ಒಪ್ಪಿಕೊಂಡಿದ್ದರು. ಅದನ್ನು ಮುಗಿಸಲೇಬೇಕಿತ್ತು. 1987 ಬಳಿಕ ತಾವು ಒಪ್ಪಿಕೊಂಡಿದ್ದ ಚಿತ್ರಗಳನ್ನು ಸರೋಜಾ ದೇವಿ ಮುಗಿಸಿಕೊಟ್ಟರು. ಆನಂತರ 5 ವರ್ಷಗಳ ಕಾಲ ನಟನೆಯಿಂದ ದೂರ ಸರಿದರು. 1993 ಬಳಿಕ ಬಿ ಸರೋಜಾ ದೇವಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು.

ಮತ್ತೊಂದು ಮದುವೆ ಆಗಲಿಲ್ಲ
ಪತಿಯ ನಿಧನದ ಬಳಿಕ ತಮಗೆ ಯಾರೂ ಕುಂಕುಮ ಕೊಡ್ತಿರ್ಲಿಲ್ಲ, ಶುಭ ಕಾರ್ಯಗಳಿಗೆ ಕರೆಯುತ್ತಿರಲಿಲ್ಲ ಎಂದು ಸರೋಜಾ ದೇವಿ ತುಂಬಾ ನೊಂದುಕೊಂಡಿದ್ದರು. ಆದರೂ, ಇನ್ನೊಂದು ಮದುವೆಯಾಗೋದಕ್ಕೆ ಅವರ ಮನಸ್ಸು ಒಪ್ಪಲೇ ಇಲ್ಲ. ಮತ್ತೊಂದು ಮದುವೆಯಾಗುವಂತೆ ತಾಯಿ ಹಠ ಹಿಡಿದಿದ್ದರು. ಆದರೆ, ಶ್ರೀಹರ್ಷ ಅವರ ಸ್ಥಾನದಲ್ಲಿ ಬೇರೊಬ್ಬರನ್ನ ಊಹಿಸಿಕೊಳ್ಳಲು ಸರೋಜಾ ದೇವಿಗೆ ಇಷ್ಟವಿರಲಿಲ್ಲ. ಹೀಗಾಗಿ, ಬಿ ಸರೋಜಾ ದೇವಿ ಮತ್ತೊಂದು ಮದುವೆ ಆಗಲಿಲ್ಲ.