6 ನಗರ 10,000 ಟೆಕ್ಕಿಗಳು: ಭಾರತದಲ್ಲಿ ಕಾಗ್ನಿಜೆಂಟ್‌ನಿಂದ ಬೃಹತ್ 'ಓಪನ್ಎಐ ಕೋಡೆಕ್ಸ್ ಹ್ಯಾಕಥಾನ್'! ಏನಿದರ ಉದ್ದೇಶ?
'ಓಪನ್ಎಐ ಕೋಡೆಕ್ಸ್' ಎಂಬುದು ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಅತ್ಯಾಧುನಿಕ ಎಐ ಕೋಡಿಂಗ್ ಪ್ಲಾಟ್ ಫಾರ್ಮ್ ಆಗಿದೆ. ಉದ್ಯೋಗಿಗಳು ಈ ವೇದಿಕೆಯನ್ನು ಬಳಸಿಕೊಂಡು ಹೊಸ ತಂತ್ರಜ್ಞಾನಗಳನ್ನು ಕಲಿಯಲು, ಪ್ರಯೋಗಗಳನ್ನು ಮಾಡಲು ಮತ್ತು ನೈಜ ವ್ಯಾಪಾರ-ವ್ಯವಹಾರಗಳ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಈ ಹ್ಯಾಕಥಾನ್ ಅವಕಾಶ ಕಲ್ಪಿಸಿದೆ.
-
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಮುಖ ಐಟಿ ಸೇವಾ ಸಂಸ್ಥೆ ಕಾಂಗ್ನಿಜೆಂಟ್ ದೊಡ್ಡ ಹೆಜ್ಜೆಯಿಟ್ಟಿದೆ. ಜನಪ್ರಿಯ ಓಪನ್ಎಐ ಸಂಸ್ಥೆಯ ಸಹಯೋಗದೊಂದಿಗೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ʼಓಪನ್ಎಐ ಕೋಡೆಕ್ಸ್ ಹ್ಯಾಕಥಾನ್ʼ ಆಯೋಜಿಸಿದೆ.
ʼಎಂಜಿನಿಯರಿಂಗ್ ದಿ ಫ್ರಾಂಟಿಯರ್ʼ ಎಂಬ ಥೀಮ್ ಅಡಿಯಲ್ಲಿ ನಡೆಯುತ್ತಿರುವ ಈ ಹ್ಯಾಕಥಾನ್ ನಲ್ಲಿ ಭಾರತದ 6 ಪ್ರಮುಖ ಐಟಿ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಪುಣೆ, ಕೊಯಮತ್ತೂರು ಮತ್ತು ಕೊಚ್ಚಿಯ ಬರೋಬ್ಬರಿ 10,000 ಕಾಂಗ್ನಿಜೆಂಟ್ ಉದ್ಯೋಗಿಗಳು ಭಾಗವಹಿಸಿದ್ದಾರೆ.
ಏನಿದು ಹ್ಯಾಕಥಾನ್? ಇದರ ಉದ್ದೇಶವೇನು?
'ಓಪನ್ಎಐ ಕೋಡೆಕ್ಸ್' ಎಂಬುದು ಸಾಫ್ಟ್‌ವೇರ್ ಕ್ಷೇತ್ರದಲ್ಲಿನ ಅತ್ಯಾಧುನಿಕ ಎಐ ಕೋಡಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಉದ್ಯೋಗಿಗಳು ಈ ವೇದಿಕೆಯನ್ನು ಬಳಸಿಕೊಂಡು ಹೊಸ ತಂತ್ರಜ್ಞಾನ ಗಳನ್ನು ಕಲಿಯಲು, ಪ್ರಯೋಗಗಳನ್ನು ಮಾಡಲು ಮತ್ತು ನೈಜ ವ್ಯಾಪಾರ-ವ್ಯವಹಾರಗಳ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಈ ಹ್ಯಾಕಥಾನ್ ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ: Congnizant: ಎಐ ಲ್ಯಾಬ್ ಮತ್ತು ಕಾಗ್ನಿಜೆಂಟ್ ಮೊಮೆಂಟ್ ಸ್ಟುಡಿಯೋ ಅನಾವರಣಗೊಳಿಸಿದ ಕಾಗ್ನಿಜೆಂಟ್
ಉದ್ಯೋಗಿಗಳಿಗೆ ಇದರಿಂದಾಗುವ ಲಾಭಗಳೇನು?
ಈ ಕಾರ್ಯಕ್ರಮ ಕೇವಲ ಕೋಡಿಂಗ್‌ಗೆ ಸೀಮಿತವಾಗಿಲ್ಲ. ಇದರಲ್ಲಿ ಭಾಗವಹಿಸುವ ಉದ್ಯೋಗಿ ಗಳಿಗೆ ಓಪನ್ಎಐ ವತಿಯಿಂದ ಎಕ್ಸ್‌ಕ್ಲೂಸಿವ್ ಮಾಸ್ಟರ್ ಕ್ಲಾಸ್‌ಗಳು ಸಿಗಲಿವೆ. ಜೊತೆಗೆ ತಜ್ಞರೊಂದಿಗೆ ಸಂವಾದ, ಕಲಿಯಲು ಅಗತ್ಯ ಸಂಪನ್ಮೂಲಗಳು ಹಾಗೂ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾದ ತಮ್ಮ ಐಡಿಯಾಗಳನ್ನು ಗಣ್ಯರ ಮುಂದೆ ಪ್ರದರ್ಶಿಸುವ ಅದ್ಭುತ ಅವಕಾಶವೂ ಲಭ್ಯವಿದೆ.
ಈ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಕಾಂಗ್ನಿಜೆಂಟ್ ಇಂಡಿಯಾದ ಅಧ್ಯಕ್ಷ ಮತ್ತು ಎಂಡಿ ರಾಜೇಶ್ ವಾರಿಯರ್, “ಮಾನವನ ಬುದ್ಧಿಮತ್ತೆ ಮತ್ತು ಎಐ ಸಾಮರ್ಥ್ಯವನ್ನು ಒಟ್ಟಿಗೆ ಸೇರಿಸು ವುದು ನಮ್ಮ ಪ್ರಮುಖ ಗುರಿ. ಭಾರತದಲ್ಲೇ ಇಂತಹ ಜಾಗತಿಕ ಮಟ್ಟದ ಹ್ಯಾಕಥಾನ್ ಆಯೋಜಿಸು ತ್ತಿರುವುದು ನಮಗೆ ಹೆಮ್ಮೆಯ ವಿಷಯ. ಇದು ನಮ್ಮ ಉದ್ಯೋಗಿಗಳಿಗೆ ಭವಿಷ್ಯದ ತಂತ್ರಜ್ಞಾನ ವನ್ನು ಕರಗತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ,” ಎಂದು ಹೇಳಿದ್ದಾರೆ.
ಓಪನ್ಎಐ ಉಪಾಧ್ಯಕ್ಷೆ ಕಾಲೀನ್ ಕಪಾಸ್ ಮಾತನಾಡಿ, “ಕಾಂಗ್ನಿಜೆಂಟ್ ಭಾರತದ 10 ಸಾವಿರ ಉದ್ಯೋಗಿಗಳಿಗೆ ಎಐ ಜೊತೆ ಕೆಲಸ ಮಾಡುವ ಅವಕಾಶ ನೀಡುತ್ತಿದೆ. ಗ್ರಾಹಕರಿಗೆ ಅತ್ಯುತ್ತಮ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಂಗ್ನಿಜೆಂಟ್‌ನ ಈ ಹೆಜ್ಜೆ ಪ್ರಶಂಸನೀಯ,” ಎಂದಿದ್ದಾರೆ.
ಮುಂದಿನ ಗುರಿ 50,000! ಜೊತೆಗಿದೆ 'ಗಿನ್ನೆಸ್' ದಾಖಲೆಯ ಇತಿಹಾಸ
ಮುಂಬರುವ ತಿಂಗಳುಗಳಲ್ಲಿ ಇಂತಹ ಮತ್ತಷ್ಟು ಹ್ಯಾಕಥಾನ್‌ಗಳನ್ನು ಆಯೋಜಿಸುವ ಮೂಲಕ ಭಾಗವಹಿಸುವವರ ಸಂಖ್ಯೆಯನ್ನು 50,000ಕ್ಕೆ ಹೆಚ್ಚಿಸುವ ಬೃಹತ್ ಗುರಿಯನ್ನು ಕಾಂಗ್ನಿಜೆಂಟ್ ಹೊಂದಿದೆ.c
ಅಂದಹಾಗೆ, ಕಾಂಗ್ನಿಜೆಂಟ್ ಸಂಸ್ಥೆಯು ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಆನ್‌ಲೈನ್ ಜೆನ್ ಎಐ ಹ್ಯಾಕಥಾನ್ ಆಯೋಜಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿತ್ತು. ಆ ಕಾರ್ಯಕ್ರಮದಲ್ಲಿ ಉದ್ಯೋಗಿಗಳು ಬರೋಬ್ಬರಿ 30,000 ಕ್ಕೂ ಹೆಚ್ಚು ಮಾದರಿಗಳನ್ನು ಸೃಷ್ಟಿಸುವ ಮೂಲಕ ಇತಿಹಾಸ ಬರೆದಿದ್ದರು. ಕೃತಕ ಬುದ್ಧಿಮತ್ತೆ ಜಗತ್ತನ್ನು ಆಳುತ್ತಿರುವ ಇಂದಿನ ದಿನಗಳಲ್ಲಿ ಕಾಂಗ್ನಿಜೆಂಟ್‌ನ ಈ ಪ್ರಯತ್ನವು, ಭಾರತೀಯ ಟೆಕ್ಕಿಗಳನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸುತ್ತಿದೆ.