GST ಸಂಗ್ರಹದಲ್ಲಿ ಗಣನೀಯ ಸಾಧನೆ: ಆಗಸ್ಟ್‌ನಲ್ಲಿ ಶೇಕಡಾ 14.8ರಷ್ಟು ಏರಿಕೆ
GST Collections: ಆಗಸ್ಟ್‌ಲ್ಲಿ ಭಾರತದ ಒಟ್ಟು ಜಿಎಸ್‌ಟಿ ಸಂಗ್ರಹ ₹ 1,99,853 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 14.8ರಷ್ಟು ಏರಿಕೆಯಾಗಿದೆ. ಮರುಪಾವತಿಗಳ ಬಳಿಕ ನಿವ್ವಳ GST ಸಂಗ್ರಹ ₹ 1,68,057 ಕೋಟಿಯಾಗಿದ್ದು, ಶೇ. 8.3ರಷ್ಟು ಬೆಳವಣಿಗೆ ದಾಖಲಾಗಿದೆ. ಆಮದುಗಳಿಂದ ಬಂದ GST ಆದಾಯದಲ್ಲೂ ಶೇ. 29ರಷ್ಟು ಏರಿಕೆ ಕಂಡುಬಂದಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 1: ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಆಗಸ್ಟ್‌ನಲ್ಲಿ ₹ 1,99,853 ಕೋಟಿಗೆ ತಲುಪಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ₹ 1,74,116 ಕೋಟಿ ಸಂಗ್ರಹವಾಗಿದ್ದರೆ, ಈ ಬಾರಿ ಶೇ. 14.8ರಷ್ಟು ಏರಿಕೆ ದಾಖಲಾಗಿದೆ. ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ (ಸೆಪ್ಟೆಂಬರ್ 1) ಬಿಡುಗಡೆ ಮಾಡಿದ ತಾತ್ಕಾಲಿಕ ಅಂಕಿಅಂಶಗಳಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಮರುಪಾವತಿಗಳನ್ನು (Refunds) ಕಡಿತಗೊಳಿಸಿದ ಬಳಿಕ ಆಗಸ್ಟ್‌ನ ನಿವ್ವಳ GST ಸಂಗ್ರಹ ₹1,68,057 ಕೋಟಿ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹ 1,55,181 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ನಿವ್ವಳ ಸಂಗ್ರಹದಲ್ಲಿ ಶೇ. 8.3ರಷ್ಟು ಬೆಳವಣಿಗೆ ಕಂಡುಬಂದಿದೆ.
GST ಸಂಗ್ರಹದ ಏರಿಕೆಯಲ್ಲಿ ಆಮದು ವಹಿವಾಟು ಪ್ರಮುಖ ಪಾತ್ರ ವಹಿಸಿದೆ. ಆಗಸ್ಟ್‌ನಲ್ಲಿ ಆಮದುಗಳಿಂದ ಬಂದ GST ಆದಾಯ ಶೇ. 29ರಷ್ಟು ಏರಿಕೆಯಾಗಿ ₹ 62,604 ಕೋಟಿಗೆ ತಲುಪಿದೆ. ದೇಶೀಯ ವಹಿವಾಟಿನಿಂದ ಬಂದ GST ಆದಾಯವೂ ಶೇ. 9.3ರಷ್ಟು ಹೆಚ್ಚಾಗಿ ₹ 1,37,249 ಕೋಟಿ ಬಂದಿದೆ. ಆಗಸ್ಟ್‌ನಲ್ಲಿ CGST ₹38,413 ಕೋಟಿ, SGST ₹46,316 ಕೋಟಿ ಹಾಗೂ ದೇಶೀಯ ವಹಿವಾಟಿನ IGST ₹52,520 ಕೋಟಿ ಸಂಗ್ರಹವಾಗಿದೆ.
GST ಮರುಪಾವತಿಯಲ್ಲಿ ಶೇ.67.9ರಷ್ಟು ಏರಿಕೆ
ಒಟ್ಟು GST ಮರುಪಾವತಿ ಮೊತ್ತವು ಆಗಸ್ಟ್‌ನಲ್ಲಿ ₹ 31,795 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ₹ 18,935 ಕೋಟಿ ಮರುಪಾವತಿ ನೀಡಲಾಗಿತ್ತು. ಅಂದರೆ, ಈ ಬಾರಿ ಮರುಪಾವತಿಯಲ್ಲಿ ಶೇ. 67.9ರಷ್ಟು ಹೆಚ್ಚಳವಾಗಿದೆ. ದೇಶೀಯ ಮರುಪಾವತಿ ಶೇ. 72.6ರಷ್ಟು ಏರಿಕೆಯಾಗಿ ₹ 18,490 ಕೋಟಿ, ರಫ್ತು ಸಂಬಂಧಿತ ಮರುಪಾವತಿ ಶೇ. 61.8ರಷ್ಟು ಹೆಚ್ಚಾಗಿ ₹ 13,305 ಕೋಟಿ ಆಗಿದೆ.
"ವಿದೇಶ ಪ್ರಯಾಣ ಬೇಡ, ಚಿನ್ನ ಖರೀದಿ ಮಾಡಬೇಡಿ"; GDP ಏರಿದರೂ ಸ್ವದೇಶಿ ಮಂತ್ರ ಪಠಿಸಿದ ಮೋದಿ
ಏಪ್ರಿಲ್–ಆಗಸ್ಟ್ ಅವಧಿಯಲ್ಲೂ ಉತ್ತಮ ಬೆಳವಣಿಗೆ
2026–27ನೇ ಹಣಕಾಸು ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಒಟ್ಟು GST ಸಂಗ್ರಹ ಶೇ. 11ರಷ್ಟು ಏರಿಕೆಯಾಗಿ ₹ 10.43 ಲಕ್ಷ ಕೋಟಿಗೆ ತಲುಪಿದೆ. ಇದೇ ಅವಧಿಯ ನಿವ್ವಳ GST ಸಂಗ್ರಹವು ಶೇ. 9ರಷ್ಟು ಹೆಚ್ಚಾಗಿ ₹ 8.90 ಲಕ್ಷ ಕೋಟಿಗೆ ತಲುಪಿದೆ. ಆದರೆ ಆಗಸ್ಟ್‌ನ ಒಟ್ಟು GST ಸಂಗ್ರಹವು ಜುಲೈ 2026ರ ₹ 2.11 ಲಕ್ಷ ಕೋಟಿ ಸಂಗ್ರಹಕ್ಕಿಂತ ಕಡಿಮೆಯಾಗಿದೆ.
ಸೆಪ್ಟೆಂಬರ್ 12ರಂದು ಜಿಎಸ್‌ಟಿ ಮಂಡಳಿ ಸಭೆ
ಈ ನಡುವೆ 57ನೇ GST ಮಂಡಳಿ ಸಭೆ ಸೆಪ್ಟೆಂಬರ್ 12ರಂದು ನವದೆಹಲಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 11ರಂದು ಅಧಿಕಾರಿಗಳ ಸಭೆ ನಡೆಯಲಿದ್ದು, ತೆರಿಗೆ ಅನುಸರಣೆ ಸರಳೀಕರಣ ಸೇರಿ ಹಲವು ವಿಷಯಗಳು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ. ತಜ್ಞರ ಪ್ರಕಾರ, ಜಿಎಸ್‌ಟಿ ಸಂಗ್ರಹವು ಸುಮಾರು ₹ 2 ಲಕ್ಷ ಕೋಟಿಯ ಮಟ್ಟದಲ್ಲಿ ಮುಂದುವರಿಯುತ್ತಿರುವುದು ದೇಶದ ಆರ್ಥಿಕ ಚಟುವಟಿಕೆ ಮತ್ತು ತೆರಿಗೆ ಅನುಸರಣೆಯ ಸ್ಥಿರತೆಯನ್ನು ತೋರಿಸುತ್ತದೆ. ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿರುವ ಹಿನ್ನೆಲೆಯಲ್ಲಿ GST ಅಂಕಿಅಂಶಗಳು ಆರ್ಥಿಕತೆಯ ಬಲವನ್ನು ಮತ್ತಷ್ಟು ಪ್ರತಿಬಿಂಬಿಸಿದೆ.