Budget 2025 Live Stream: ಇಂದು ಎಷ್ಟು ಹೊತ್ತಿಗೆ ಬಜೆಟ್ ಮಂಡನೆ- ಲೈವ್ ನೋಡುವುದು ಹೇಗೆ?; ಇಲ್ಲಿದೆ ಮಾಹಿತಿ
Budget 2025 Time: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಇಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೂರನೇ ಅವಧಿಯ ಮೊದಲ ಬಜೆಟ್ ಆಗಿದ್ದು, ನಿರ್ಮಲಾ ಸೀತಾರಾಮನ್ ಸತತ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ(Finance Minister) ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇದೇ ಫೆಬ್ರವರಿ 1, 2025 ರಂದು 2025-26ನೇ ಸಾಲಿನ ಕೇಂದ್ರ ಬಜೆಟ್(Budget) ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು.
ಕೇಂದ್ರ ಬಜೆಟ್ 2025ರ ಮಂಡನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಶನಿವಾರದ ರಜಾದಿನವಾಗಿದ್ದರೂ ತೆರೆದು ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಿಸಿದೆ. ಕೇಂದ್ರ ಬಜೆಟ್ ಮಂಡನೆಯಾಗುವ ಕಾರಣ ಷೇರುಪೇಟೆಯಲ್ಲಿ ಲೈವ್ ಟ್ರೇಡಿಂಗ್ ಸೆಷನ್ ಕೂಡ ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸುತ್ತೋಲೆಯಲ್ಲಿ ತಿಳಿಸಿವೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಎಲ್ಲಾ ಶನಿವಾರ ಮತ್ತು ಭಾನುವಾರದಂದು ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಮಂಡನೆ ಈ ಹಿಂದೆ ಶನಿವಾರ ನಡೆಸಿದ ಉದಾಹರಣೆಗಳೂ ಇದೆ. ಆಗ ವಹಿವಾಟು ನಡೆಸಿದ್ದೂ ಇದೆ.
ಎಷ್ಟು ಹೊತ್ತಿಗೆ ಬಜಟ್ ಮಂಡನೆ?
ಕೇಂದ್ರ ಬಜೆಟ್ 2025 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ ಅಧಿವೇಶನದ ವೇಳೆ ಮಂಡಿಸುತ್ತಾರೆ. ಸಂಸತ್‌ನ ಬಜೆಟ್ ಅಧಿವೇಶ ಜನವರಿ ಕೊನೆಯಲ್ಲಿ ಶುರುವಾಗುವ ಸಾಧ್ಯತೆ ಇದ್ದು, ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದು. ಇದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿಕೊಂಡಿವೆ. ಇನ್ನು ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡನೆ ಮಾಡಿದ್ದರು.
ಇದನ್ನು ಓದಿ: Mahakumbh: ಕುಟುಂಬ ಸಮೇತ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಅಮಿತ್ ಶಾ- ಸಂಗಮದಲ್ಲಿ ಪವಿತ್ರ ಸ್ನಾನ
ಬಜೆಟ್ ಲೈವ್ ವೀಕ್ಷಣೆ ಹೇಗೆ?
ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಪ್ರಸಾರ ಮಾಡಲಿದೆ. ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳು ಕೇಂದ್ರ ಬಜೆಟ್ 2025-26 ರ ಮಂಡನೆಯನ್ನು ಪ್ರಸಾರ ಮಾಡುತ್ತವೆ.
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಎಲ್ಲಿ ಸಿಗುತ್ತೆ?
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಮೊಬೈಲ್ ಆಪ್‌ನಲ್ಲಿ ಪಿಡಿಎಫ್ ಪ್ರತಿಯ ರೂಪದಲ್ಲಿ ಲಭ್ಯವಿದೆ. ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ಅಥವಾ Android ಮತ್ತು iOS ಬಳಕೆದಾರರು ಯೂನಿಯನ್ ಬಜೆಟ್‌ನ ಬಹುಭಾಷಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಬಜೆಟ್ ಪ್ರತಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ.
ಇನ್ನು ಈ ಬಾರಿಯ ಬಜೆಟ್‌ನಲ್ಲಿ ದಾಖಲೆ ಮೊತ್ತದ ಬಂಡವಾಳ ವೆಚ್ಚವನ್ನು ಘೋಷಿಸುವ ಸಾಧ್ಯತೆ ಇದೆ. ರಸ್ತೆ ಮಾರ್ಗಗಳು ಮತ್ತು ಭಾರತೀಯ ರೈಲ್ವೇಯ ಮೇಲೆ ಹೆಚ್ಚು ಹೂಡಿಕೆ ಘೋಷಿಸಬಹುದು ಎಂದುಕೊಳ್ಳಲಾಗಿದೆ. ಸಾಮಾನ್ಯ ಜನರು, ವೇತನ ಪಡೆಯುವ ತೆರಿಗೆದಾರರು ಮತ್ತು ಮಧ್ಯಮ ವರ್ಗದವರು ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸುತ್ತಿದ್ದಾರೆ.