Ratan Tata: ನಿಗೂಢ ವ್ಯಕ್ತಿಗೆ ರತನ್ ಟಾಟಾ ವಿಲ್! 500 ಕೋಟಿ ರುಪಾಯಿ ಕೊಟ್ಟರೇ?
ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದ ದಿವಂಗತ ರತನ್ ಟಾಟಾ, ಕಳೆದ ವರ್ಷ ಡಿಸೆಂಬರ್ 28ರಂದು ನಿಧನರಾದರು. ಅವರ ಉಯಿಲು ಅಥವಾ ವಿಲ್ ಅನ್ನು ಇತ್ತೀಚೆಗೆ ತೆರೆಯಲಾಯಿತು. ಆಗ ಅನಿರೀಕ್ಷಿತ ಅಚ್ಚರಿಯೊಂದು ಕಾದಿತ್ತು. ನಿಗೂಢ ವ್ಯಕ್ತಿಯೊಬ್ಬರಿಗೆ ರತನ್ ಟಾಟಾ ಅವರು 500 ಕೋಟಿ ರುಪಾಯಿ ಆಸ್ತಿಯನ್ನು ವಿಲ್‌ನಲ್ಲಿ ಬರೆದಿಟ್ಟಿದ್ದರು ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
![Ratan Tata](https://cdn-vishwavani-prod.hindverse.com/media/images/Ratan_Tata.max-1280x720.jpg)
![Profile](https://vishwavani.news/static/img/user.png)
ನವದೆಹಲಿ: ಟಾಟಾ ಗ್ರೂಪ್‌ನ(Tata Group) ಅಧ್ಯಕ್ಷರಾಗಿದ್ದ ದಿವಂಗತ ರತನ್ ಟಾಟಾ(Ratan Tata), ಕಳೆದ ವರ್ಷ ಡಿಸೆಂಬರ್ 28ರಂದು ನಿಧನರಾದರು. ಅವರ ಉಯಿಲು ಅಥವಾ ವಿಲ್ ಅನ್ನು ಇತ್ತೀಚೆಗೆ ತೆರೆಯಲಾಯಿತು. ಆಗ ಅನಿರೀಕ್ಷಿತ ಅಚ್ಚರಿಯೊಂದು ಕಾದಿತ್ತು. ನಿಗೂಢ ವ್ಯಕ್ತಿಯೊಬ್ಬರಿಗೆ ರತನ್ ಟಾಟಾ ಅವರು 500 ಕೋಟಿ ರುಪಾಯಿ ಆಸ್ತಿಯನ್ನು ವಿಲ್‌ನಲ್ಲಿ ಬರೆದಿಟ್ಟಿದ್ದರು ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ. ರತನ್ ಟಾಟಾ ಅವರು ಮೋಹಿನಿ ಮೋಹನ್ ದತ್ತಾ ಎಂಬ ಜೆಮ್‌ಶೆಡ್ಪುರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 500 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ವಿಲ್‌ನಲ್ಲಿ ಬರೆದಿಟ್ಟಿದ್ದಾರೆ. ಆದರೆ ಇವರು ಯಾರೆಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ವರದಿಗಳ ಪ್ರಕಾರ ಮೋಹಿನಿ ಮೋಹನ್ ದತ್ತಾ ಅವರು ರತನ್ ಟಾಟಾ ಅವರಿಗೆ ದಶಕಗಳ ಕಾಲ ಪರಿಚಿತರಾಗಿದ್ದರು.
ಹೀಗಿದ್ದರೂ, ರತನ್ ಟಾಟಾ ಅವರ ಆಪ್ತರ ಬಳಗದಲ್ಲೂ ಈ ಮೋಹಿನಿ ಮೋಹನ್ ದತ್ತಾ ಅವರ ಹೆಸರು ಹುಬ್ಬೇರಿಸಿದೆ. ರತನ್ ಟಾಟಾ ಅವರ ಬದುಕಿನಲ್ಲಿ ದತ್ತಾ ಅವರ ಪಾತ್ರವೇನಾಗಿತ್ತು? ಭಾರತದ ಪ್ರತಿಷ್ಠಿತ ಉದ್ಯಮಿಯ ಆಸ್ತಿಯಲ್ಲಿ ಈ ವ್ಯಕ್ತಿಗೆ ಪಾಲು ಸಿಕ್ಕಿದ್ದು ಹೇಗೆ? ಮೋಹಿನಿ ಮೋಹನ್ ದತ್ತಾ ಅವರಿಗೆ ರತನ್ ಟಾಟಾ ಅವರ ಭೇಟಿ ಮತ್ತು ಫ್ರೆಂಡ್‌ಶಿಪ್ ಹೇಗಾಯಿತು? ದತ್ತಾ ಅವರಿಗೆ ಈಗ 74 ವರ್ಷ ವಯಸ್ಸು.
ರತನ್ ಟಾಟಾ ಅವರು ಜೆಮ್‌ಶೆಡ್‌ಪುರದಲ್ಲಿ ದತ್ತಾ ಅವರನ್ನು ಭೇಟಿಯಾಗಿದ್ದರು. 1960ರಲ್ಲಿ ರತನ್ ಟಾಟಾ 24 ವರ್ಷದ ಯುವಕನಾಗಿದ್ದಾಗಲೇ ದತ್ತಾ ಅವರ ಪರಿಚಯ ಇತ್ತು. ಜೆಮ್ ಶೆಡ್‌ಪುರದ ಡೀಲರ್ಸ್ ಹಾಸ್ಟೆಲ್ ಹೋಟೆಲ್‌ನಲ್ಲಿ ನಮ್ಮಿಬ್ಬರ ಭೇಟಿಯಾಗಿತ್ತು ಎಂದು ಕಳೆದ ವರ್ಷ ದತ್ತಾ ಹೇಳಿದ್ದರು.ಮೋಹಿನಿ ಮೋಹನ್ ದತ್ತಾ ಅವರು ತಮ್ಮದೇ ಸ್ಟಾಲಿಯೊನ್ ಟ್ರಾವೆಲ್ ಏಜೆನ್ಸಿಯನ್ನು ಆರಂಭಿಸುವುದಕ್ಕೆ ಮುನ್ನ ತಾಜ್ ಗ್ರೂಪ್ ಆಫ್ ಹೋಟೆಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಅವರ ಟ್ರಾವೆಲ್ ಏಜೆನ್ಸಿಯೂ ಬಳಿಕ ತಾಜ್ ಸರ್ವೀಸ್‌ನಲ್ಲಿ ವಿಲೀನವಾಯಿತು. ಟಾಟಾ ಕ್ಯಾಪಿಟಲ್ ಮತ್ತಿತರ ಕಂಪನಿಗಳಲ್ಲಿ ದತ್ತಾ ಅವರಿಗೂ ಷೇರುಗಳಿವೆ.
ದತ್ತಾ ಅವರ ಮಗಳು, ಟಾಟಾ ಟ್ರಸ್ಟ್‌ನಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದರು. ತಾಜ್ ಹೋಟೆಲ್‌ನಲ್ಲಿ ಅವರು ಕರಿಯರ್ ಶುರು ಮಾಡಿದ್ದರು. 2024ರ ಡಿಸೆಂಬರ್‌ನಲ್ಲಿ ಮುಂಬಯಿನಲ್ಲಿ ರತನ್ ಟಾಟಾ ಅವರ ಜನ್ಮ ದಿನಾಚರಣೆ ಸಮಾರಂಭಕ್ಕೆ ದತ್ತಾ ಅವರಿಗೂ ಅತಿಥಿಯಾಗಿ ಆಹ್ವಾನ ಇತ್ತು. ರತನ್ ಟಾಟಾ ಅವರು ತಮ್ಮ ಬಹುತೇಕ ಎಲ್ಲ ವೈಯಕ್ತಿಕ ಸಂಪತ್ತನ್ನು ಸಮಾಜ ಸೇವೆಯ ಕಾರ್ಯಕ್ರಮಗಳಿಗೆ ಧಾರೆ ಎರೆದಿದ್ದಾರೆ. ಕೆಲವು ಭಾಗಗಳನ್ನು ತಮ್ಮ ಮಲ ಸೋದರಿಯರಿಗೆ ನೀಡಿದ್ದಾರೆ. ಅವರು ಕೂಡ ರತನ್ ಟಾಟಾ ಕೊಟ್ಟಿರುವ ಆಸ್ತಿಯನ್ನು ಚಾರಿಟಿಗಳಿಗೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.ಕಾನೂನು ತಜ್ಞರು ರತನ್ ಟಾಟಾ ಅವರ ವಿಲ್ ಅನ್ನು ವಿವರವಾಗಿ ಪರಿಶೀಲಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ ಒಂದು ವಿಷಯವಂತೂ ಸ್ಪಷ್ಟ. ಮೋಹಿನಿ ಮೋಹನ್ ದತ್ತಾ ಅವರು ಈಗ ರತನ್ ಟಾಟಾ ಅವರ ಬದುಕಿನ ಅಧ್ಯಾಯದಲ್ಲಿ ತೆರೆಮರೆಯಲ್ಲಿ ಉಳಿದಿಲ್ಲ.
ಹಾಗಾದರೆ ರತನ್ ಟಾಟಾ ವಿಲ್‌ನಲ್ಲಿ ಏನಿತ್ತು?
ರತನ್ ಟಾಟಾ ಅವರ ನಿಧನದ ಎರಡು ವಾರಗಳ ಬಳಿಕ ಉಯಿಲನ್ನು ತೆರೆಯಲಾಯಿತು. ಅವರು ತಮ್ಮ ವೈಯಕ್ತಿಕ ಆಸ್ತಿಯನ್ನು ಹಲವು ಫಲಾನುಭವಿಗಳಿಗೆ ಹಂಚಿದ್ದರು. ತಮ್ಮ ಮಲ ಸಹೋದರ, ಮಲ ಸಹೋದರಿಯರು, ಮನೆಯ ನಿಷ್ಠಾವಂತ ಸಿಬ್ಬಂದಿ, ಆಪ್ತ ಸಹಾಯಕ ಶಂತನು ನಾಯ್ಡು ಅವರಿಗೆ ಸಂಪತ್ತನ್ನು ಹಂಚಿದ್ದರು. ಟಾಟಾ ಸನ್ಸ್‌ನಲ್ಲಿದ್ದ ಅವರ ಷೇರುಗಲನ್ನು ರತನ್ ಟಾಟಾ ಎಂಡೊಮೆಂಟ್ ಟ್ರಸ್ಟ್‌ಗೆ ವರ್ಗಾಯಿಸಲಾಗಿತ್ತು. ವಿಶೇಷವೇನೆಂದರೆ ರತನ್ ಟಾಟಾ ಅವರು ತಮ್ಮ ನೆಚ್ಚಿನ ನಾಯಿ ಟಿಟೊಗೆ ಅದರ ಜೀವನಪೂರ್ತಿ ಆರೈಕೆಗೆ ವ್ಯವಸ್ಥೆ ಕಲ್ಪಿಸಲೂ ವಿಲ್‌ನಲ್ಲಿ ಬರೆದಿದ್ದರು.
ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ 2024ರಲ್ಲಿ ರತನ್ ಟಾಟಾ ಅವರು ಟಾಟಾ ಸನ್ಸ್‌ನಲ್ಲಿ ಹೊಂದಿದ್ದ ಷೇರುಗಳ ಮೌಲ್ಯ 7,900 ಕೋಟಿ ರುಪಾಯಿ. ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ರತನ್ ಟಾಟಾ ಅವರ ಆಸ್ತಿಯ ಒಟ್ಟು ಮೌಲ್ಯ 15,000 ಕೋಟಿ ರುಪಾಯಿ ಇರಬಹುದು. ರತನ್ ಟಾಟಾ ಅವರು 2022ರಲ್ಲಿ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜಸೇವಾ ಯೋಜನೆಗಳಿಗೆ ಬಳಸಿಕೊಳ್ಳಲು ಮತ್ತು ನಿರ್ವಹಿಸಲು ಎರಡು ಸಂಸ್ಥೆಗಳನ್ನು ರಚಿಸಿದ್ದರು. ಅವುಗಳು ಯಾವುದು ಎಂದರೆ- RTEF ಮತ್ತು ರತನ್ ಟಾಟಾ ಎಂಡೊಮೆಂಟ್ ಟ್ರಸ್ಟ್.
ರತನ್ ಟಾಟಾ ಅವರ ವಿಲ್‌ನಲ್ಲಿ ಅವರ ಮಲ ಸೋದರ ನೋಯೆಲ್ ಟಾಟಾ ಮತ್ತು ಅವರ ಮಕ್ಕಳ ಹೆಸರಿಲ್ಲ. ರತನ್ ಟಾಟಾ ಅವರ ಕಿರಿಯ ಸೋದರ ಜಿಮ್ಮಿ ಟಾಟಾ ಅವರಿಗೆ 50 ಕೋಟಿ ರುಪಾಯಿ ಆಸ್ತಿ ಮಂಜೂರಾಗಿದೆ.ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ನೆರವಿನಲ್ಲಿ ರತನ್ ಟಾಟಾ ವಿಲ್ ಪ್ರಕಾರ ಅವರ ಆಸ್ತಿ ಹಂಚಿಕೆಯಾಗುವ ನಿರೀಕ್ಷೆ ಇದೆ.