Stock market crash: ಟ್ರಂಪ್ ತೆರಿಗೆ ಸಮರ ಎಫೆಕ್ಟ್: ಸೆನ್ಸೆಕ್ಸ್ 1,291 ಅಂಕ ಕುಸಿತ
ಡೊನಾಲ್ಡ್ ಟ್ರಂಪ್ ಅವರ ಟಾರಿಫ್ ಘೋಷಣೆಗೆ ಮುನ್ನ ಮಾರುಕಟ್ಟೆ(Stock market crash) ಅನಿಶ್ಚಿತತೆಯಿಂದ ತತ್ತರಿಸಿತು. ಸೆನ್ಸೆಕ್ಸ್ 1,291 ಅಂಕಗಳನ್ನು ಕಳೆದುಕೊಂಡು 76,123ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 331 ಅಂಕ ನಷ್ಟದಲ್ಲಿ 23,187ಕ್ಕೆ ವಹಿವಾಟು ನಡೆಸುತ್ತಿತ್ತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿ ಸ್ಟಾಕ್ಸ್‌ಗಳಾದ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ ದರ ಇಳಿಯಿತು.


- ಕೇಶವ ಪ್ರಸಾದ್ ಬಿ.
ಮುಂಬೈ: ಏಪ್ರಿಲ್ 1ರ ಮಂಗಳವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Stock market crash) ಬೆಳಗ್ಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,291 ಅಂಕಗಳ ಭಾರಿ ಕುಸಿತಕ್ಕೀಡಾಯಿತು. ಬ್ಯಾಂಕಿಂಗ್ ಮತ್ತು ಐಟಿ ಷೇರುಗಳ ದರ ಕುಸಿಯಿತು. ಟ್ರಂಪ್ ಅವರ ಟಾರಿಫ್ ಘೋಷಣೆಗೆ ಮುನ್ನ ಮಾರುಕಟ್ಟೆ ಅನಿಶ್ಚಿತತೆಯಿಂದ ತತ್ತರಿಸಿತು. ಸೆನ್ಸೆಕ್ಸ್ 1,291 ಅಂಕಗಳನ್ನು ಕಳೆದುಕೊಂಡು 76,123ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 331 ಅಂಕ ನಷ್ಟದಲ್ಲಿ 23,187ಕ್ಕೆ ವಹಿವಾಟು ನಡೆಸುತ್ತಿತ್ತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಐಟಿ ಸ್ಟಾಕ್ಸ್‌ಗಳಾದ ಇನ್ಫೋಸಿಸ್, ಟಿಸಿಎಸ್, ಎಚ್‌ಸಿಎಲ್ ಟೆಕ್ ದರ ಇಳಿಯಿತು.
ಈ ನಡುವೆ ಬೆಂಗಳೂರು ಮೂಲದ, ಡಿಫೆನ್ಸ್ ಪಿಎಸ್‌ಯು ಆಗಿರುವ ಎಚ್‌ಎಎಲ್ ಕಂಪನಿಯ ಷೇರಿನ ದರದಲ್ಲಿ 7.5% ಏರಿಕೆಯಾಗಿದೆ. ಎಚ್‌ಎಎಲ್ 2024-25ರಲ್ಲಿ 30,400 ಕೋಟಿ ರುಪಾಯಿಗೂ ಹೆಚ್ಚು ಆದಾಯ ಗಳಿಸಿ ಉತ್ತಮ ಪ್ರಗತಿ ದಾಖಲಿಸಿರುವುದು ಇದಕ್ಕೆ ಕಾರಣ. ಎಚ್‌ಎಎಲ್ ಷೇರಿನ ಈಗಿನ ಮಾರುಕಟ್ಟೆ ದರ 4,269 ರುಪಾಯಿಗಳಾಗಿದೆ.
ಮತ್ತೊಂದು ಕಡೆ ವೊಡಾಫೋನ್ ಐಡಿಯಾ ಷೇರಿನ ದರದಲ್ಲೂ 15% ಏರಿಕೆಯಾಗಿದೆ. ಕೇಂದ್ರ ಸರಕಾರವು ಕಂಪನಿಯ ಬಾಕಿ 36,950 ಕೋಟಿ ರುಪಾಯಿಗಳನ್ನು ಈಕ್ವಿಟಿಯಾಗಿ ಪರಿವರ್ತಿಸಲು ನಿರ್ಧರಿಸಿರುವುದು ಇದಕ್ಕೆ ಕಾರಣ. ಇದರೊಂದಿಗೆ ವೊಡಾಫೋನ್ ಐಡಿಯಾದಲ್ಲಿ ಕೇಂದ್ರ ಸರಕಾರದ ಷೇರು ಪಾಲು 22.6%ರಿಂದ 48.99%ಕ್ಕೆ ಏರಿಕೆಯಾಗುತ್ತಿದೆ. ವೊಡಾಫೋನ್ ಐಡಿಯಾ ಷೇರು ದರ ಈಗ 8 ರುಪಾಯಿಗಳ ಆಸುಪಾಸಿನಲ್ಲಿದೆ.
ಟಾರಿಫ್ ಸಮರ: ಟ್ರಂಪ್ ಉದ್ದೇಶ ಏನು?
- ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವುದು ಮತ್ತು ಆ ಮೂಲಕ ಸಂಗ್ರಹವಾಗುವ ಹಣದಿಂದ ಅಮೆರಿಕದ ಬಜೆಟ್‌ನ ವಿತ್ತೀಯ ಕೊರತೆಯನ್ನು ನೀಗಿಸಿ, ಆರ್ಥಿಕತೆಯನ್ನು ಬಲಪಡಿಸುವುದು ಟ್ರಂಪ್ ಅವರ ಮಹತ್ತ್ವಾಕಾಂಕ್ಷೆ.
- ಅಮೆರಿಕದ ಉತ್ಪಾದನಾ ಕ್ಷೇತ್ರದ ಗತ ವೈಭವವನ್ನು ಮರಳಿ ತರುವುದು. ಇದುವರೆಗೆ ಚೀನಾ ಮತ್ತಿತರ ದೇಶಗಳಿಗೆ ಹೋಗಿರುವ ಅಮೆರಿಕದ ಉತ್ಪಾದನಾ ಕ್ಷೇತ್ರದ ಚಟುವಟಿಕೆಗಳನ್ನು ಮರಳಿಸುವುದು.
- ವಿದೇಶಾಂಗ ನೀತಿಯ ಗುರಿಗಳನ್ನು ಈಡೇರಿಸುವುದು.
- ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದಾಗ ಅವುಗಳ ದರ ಏರುತ್ತವೆ. ಅವುಗಳು ದುಬಾರಿಯಾದಾಗ ಅಮೆರಿಕದ ಜನರು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಆಗ ಅಮೆರಿಕದ ಸ್ಥಳೀಯ ಉತ್ಪಾದಕರಿಗೆ ಅನುಕೂಲವಾಗಲಿದೆ ಎಂಬುದು ಟ್ರಂಪ್ ಅವರ ವಾದ.
ಮೆಕ್ಸಿಕೊ, ಚೀನಾ ಮತ್ತು ಕೆನಡಾದಿಂದ 2024 ರಲ್ಲಿ ಅಮೆರಿಕ ಹೆಚ್ಚು ಆಮದು ಮಾಡಿಕೊಂಡಿರುವ ವಸ್ತುಗಳು ಯಾವುದು?
- ಟ್ರಕ್ಕ್‌ಗಳು
- ಇನ್ಸಲ್ಟೆಡ್ ವೈರ್‌ಗಳು
- ಕಂಪ್ಯೂಟರ್
- ಕಾರು
- ಟೆಲಿಫೋನ್
- ಬ್ರಾಡ್ ಕಾಸ್ಟಿಂಗ್
- ಎಕ್ವಿಪ್‌ಮೆಂಟ್
- ರಿಫೈನ್ಡ್ ಪೆಟ್ರೋಲಿಯಂ
- ಕಚ್ಚಾ ಪೆಟ್ರೋಲಿಯಂ
- ಎಲೆಕ್ಟ್ರಿಕ್ ಬ್ಯಾಟರಿಗಳು
ಟ್ರಂಪ್ ಅವರ ಟಾರಿಫ್ ವಾರ್ ಹೇಗಿದೆ?
- ಫೆಬ್ರವರಿ 4: ಚೀನಾದಿಂದ ಆಮದಾಗುವ ವಸ್ತುಗಳಿಗೆ 10% ತೆರಿಗೆ
- ಫೆಬ್ರವರಿ 7: ಚೀನಾದಿಂದ ಆಮದಾಗುವ 800 ಡಾಲರ್‌ಗಿಂತ ಕಡಿಮೆ ಬೆಲೆಯ ವಸ್ತುಗಳಿಗೆ ವಿನಾಯಿತಿ
- ಮಾರ್ಚ್ 4: ಚೀನಾದಿಂದ ಆಮದಾಗುವ ವಸ್ತುಗಳ ಮೇಲಿನ 10% ತೆರಿಗೆಯನ್ನು 20% ಕ್ಕೆ ಇಮ್ಮಡಿಗೊಳಿಸಿದರು. ಮೆಕ್ಸಿಕೊ, ಕೆನಡಾದಿಂದ ಆಮದಿಗೆ 25% ತೆರಿಗೆ ಘೋಷಣೆ.
- ಮಾರ್ಚ್ 5-6: ಉತ್ತರ ಅಮೆರಿಕದಿಂದ ಆಮದಿಗೆ ವಿನಾಯಿತಿ ಘೋಷಣೆ
- ಮಾರ್ಚ್ 12: ಉಕ್ಕು ಮತ್ತು ಅಲ್ಯುಮಿನಿಯಂ ಆಮದಿಗೆ 25% ತೆರಿಗೆ
- ಏಪ್ರಿಲ್ 2: ಅಮೆರಿಕಕ್ಕೆ ಆಮದಾಗುವ ಕಾರುಗಳ ಮೇಲೆ 25% ತೆರಿಗೆ
- ಏಪ್ರಿಲ್ 2ರಿಂದ ಇತರ ದೇಶಗಳಿಂದ ಆಮದಾಗುವ ವಸ್ತುಗಳಿಗೆ ತೆರಿಗೆ ಘೋಷಣೆ ನಿರೀಕ್ಷೆ
ಜಗತ್ತಿನ ನಾನಾ ದೇಶಗಳು ಅಮೆರಿಕದ ಸರಕುಗಳ ಮೇಲೆ ಭಾರಿ ಆಮದು ತೆರಿಗೆ ವಿಧಿಸುತ್ತವೆ. ಅಂಥ ದೇಶಗಳ ವಿರುದ್ಧ ಅಮೆರಿಕವೂ ಇನ್ನು ಮುಂದೆ ಭಾರಿ ಆಮದು ತೆರಿಗೆ ವಿಧಿಸಲಿದೆ ಎನ್ನುತ್ತಾರೆ ಟ್ರಂಪ್. ಇನ್ನು ಹಲವು ವಸ್ತುಗಳ ಮೇಲೆ ಯಾವ ದೇಶ ಎಂಬುದನ್ನೂ ನೋಡದೆ, ಸಾರ್ವತ್ರಿಕವಾಗಿಯೂ ಟ್ಯಾಕ್ಸ್ ಜಡಿಯಲು ಟ್ರಂಪ್ ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ತೆರಿಗೆ ಆದಾಯವನ್ನು ಹೆಚ್ಚಿಸುವುದು, ಅಮೆರಿಕದ ಉತ್ಪಾದನಾ ಕ್ಷೇತ್ರವನ್ನು ಸುಧಾರಿಸುವುದು, ವಿದೇಶಾಂಗ ನೀತಿಯ ಗುರಿಗಳನ್ನು ಸಾಧಿಸುವುದು ಟ್ರಂಪ್ ಆಶಯ. ಆದರೆ ಇದರಿಂದ ಜಾಗತಿಕ ವಾಣಿಜ್ಯ ವ್ಯವಹಾರಗಳು ಹಳಿ ತಪ್ಪುವ ಮತ್ತು ಸ್ವತಃ ಅಮೆರಿಕದ ಇಕಾನಮಿ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Tax changes: ಏಪ್ರಿಲ್ 1ರಿಂದ ತೆರಿಗೆ ಬದಲಾವಣೆ ಯಾವುದು ದುಬಾರಿ-ಅಗ್ಗ? ಕಂಪ್ಲೀಟ್ ಡಿಟೇಲ್ಸ್
ಮೋರ್ಗಾನ್ ಸ್ಟಾನ್ಲಿ ಸಂಸ್ಥೆಯ ಸಂಶೋಧನಾ ವರದಿಯ ಪ್ರಕಾರ, ಟ್ರಂಪ್ ತೆರಿಗೆಗಳು ಉನ್ನತ ಮಟ್ಟದ್ದಾಗಿದ್ದು, ಅಮೆರಿಕದ ಕಂದಾಯ ಸಂಗ್ರಹವನ್ನು ಹೆಚ್ಚಿಸಲಿದೆ. ಈಗಿನ ಸರಾಸರಿ 2.2% ತೆರಿಗೆಯು 10%-15%ಕ್ಕೆ ಏರಿಕೆಯಾಗಲಿದೆ. ಇದು ಅಮೆರಿಕದ ಇತಿಹಾಸದಲ್ಲಿಯೇ 1940ರಿಂದೀಚೆಗಿನ ಅತಿ ಹೆಚ್ಚಿನ ಸರಾಸರಿಯ ತೆರಿಗೆ ಆಗಲಿದೆ. ಎರಡನೇ ಜಾಗತಿಕ ಯುದ್ಧದ ಬಳಿಕದ ಅತಿ ದೊಡ್ಡ ಟಾರಿಫ್ ಏರಿಕೆ ಇದಾಗಿದೆ. ಈ ಮೂಲಕ ಅಮೆರಿಕವು 2026ರಿಂದ 2035ರ ಅವಧಿಯಲ್ಲಿ 3.53 ಟ್ರಿಲಿಯನ್ ಡಾಲರ್ ತೆರಿಗೆ ಆದಾಯವನ್ನು ಸಂಗ್ರಹಿಸುವ ನಿರೀಕ್ಷೆ ಇದೆ. ಹೀಗಿದ್ದರೂ, 2034ರ ವೇಳೆಗೆ ಅಮೆರಿಕದ ವಿತ್ತೀಯ ಕೊರತೆ ಕೂಡ 4.6 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ. ಆದ್ದರಿಂದ ವಿತ್ತೀಯ ಕೊರತೆಯ ಸಮಸ್ಯೆ ಅಮೆರಿಕಕ್ಕೆ ಪರಿಹಾರ ಆಗುವುದಿಲ್ಲ.