Tax changes: ಏಪ್ರಿಲ್ 1ರಿಂದ ತೆರಿಗೆ ಬದಲಾವಣೆ ಯಾವುದು ದುಬಾರಿ-ಅಗ್ಗ? ಕಂಪ್ಲೀಟ್ ಡಿಟೇಲ್ಸ್
ತೆರಿಗೆದಾರರು, ಬಿಸಿನೆಸ್ ಮಾಡುವವರು, ಸರಕಾರಕ್ಕೆ ಇದು ಮಹತ್ವದ ದಿನವಾಗಿರುತ್ತದೆ. ಹಣಕಾಸು ಲೆಕ್ಕಾಚಾರಗಳು, ತೆರಿಗೆಗೆ ಸಂಬಂಧಿಸಿ ಮಹತ್ವದ ಬದಲಾವಣೆಗಳು ಏಪ್ರಿಲ್‌ನಿಂದ ಅನ್ವಯವಾಗುತ್ತವೆ(Tax changes).ಕೇಂದ್ರ ಸರಕಾರದ ಬಜೆಟ್ ಕೂಡ ಈದೇ ದಿನದಿಂದ ಜಾರಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ಹೊಸ ಬದಲಾವಣೆಗಳು ಬರುತ್ತಿವೆ ಎಂಬುದನ್ನು ತಿಳಿಯೋಣ.


- ಕೇಶವ ಪ್ರಸಾದ್ ಬಿ.
ಮುಂಬೈ: ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಅಥವಾ ಫೈನಾನ್ಷಿಯಲ್ ಇಯರ್ ಆಗಿರುವ 2025-26 ಆರಂಭವಾಗುತ್ತದೆ. ಏಪ್ರಿಲ್ 1ಕ್ಕೆ ಆರಂಭವಾಗುವ ಆರ್ಥಿಕ ವರ್ಷವು ಮಾರ್ಚ್ 31ಕ್ಕೆ ಮುಕ್ತಾಯವಾಗುತ್ತದೆ. ತೆರಿಗೆದಾರರು, ಬಿಸಿನೆಸ್ ಮಾಡುವವರು, ಸರಕಾರಕ್ಕೆ ಇದು ಮಹತ್ವದ ದಿನವಾಗಿರುತ್ತದೆ. ಹಣಕಾಸು ಲೆಕ್ಕಾಚಾರಗಳು, ತೆರಿಗೆಗೆ ಸಂಬಂಧಿಸಿ ಮಹತ್ವದ ಬದಲಾವಣೆಗಳು ಏಪ್ರಿಲ್‌ನಿಂದ ಅನ್ವಯವಾಗುತ್ತವೆ(Tax changes). ಕೇಂದ್ರ ಸರಕಾರದ ಬಜೆಟ್ ಕೂಡ ಈದೇ ದಿನದಿಂದ ಜಾರಿಯಾಗುತ್ತದೆ. ಹಾಗಾದ್ರೆ ಯಾವೆಲ್ಲ ಹೊಸ ಬದಲಾವಣೆಗಳು ಬರುತ್ತಿವೆ ಎಂಬುದನ್ನು ತಿಳಿಯೋಣ.
ಮೊದಲನೆಯದಾಗಿ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್‌ಗೆ ಸಿಗುವ ಬಡ್ಡಿ ಆದಾಯದ ಮೇಲೆ ಟಿಡಿಎಸ್ ತೆರಿಗೆ ಕಡಿತಕ್ಕೆ ಇರುವ ಮಿತಿಯಲ್ಲಿ ಬದಲಾವಣೆಯಾಗಲಿದೆ. ಇದರಿಂದಾಗಿ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಲಾಭವಾಲಿದೆ. ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್, ಆರ್‌ಡಿ ಮತ್ತು ಅದೇ ರೀತಿಯ ಹೂಡಿಕೆಯ ಯೋಜನೆಗಳಲ್ಲಿ ಸಿಗುವ ಆದಾಯದಲ್ಲಿ 1 ಲಕ್ಷ ರುಪಾಯಿ ತನಕ ಟಿಡಿಎಸ್ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಒಂದು ಲಕ್ಷ ದಾಟಿದ ಬಳಿಕ ತೆರಿಗೆ ಅನ್ವಯವಾಗಲಿದೆ. ಷೇರುದಾರರಿಗೆ 10,000 ರುಪಾಯಿ ತನಕದ ಡಿವಿಡೆಂಡ್‌ಗೆ ಟಿಡಿಎಸ್ ಇರುವುದಿಲ್ಲ. ಮ್ಯೂಚುವಲ್ ಫಂಡ್ ಯುನಿಟ್‌ಗಳ ಆದಾಯಕ್ಕೆ 10,000 ರುಪಾಯಿ ತನಕ ಟಿಡಿಎಸ್‌ನಿಂದ ವಿನಾಯಿತಿ ನೀಡಲಾಗಿದೆ. ವಿಮೆ ಕಮಿಶನ್‌ನಲ್ಲಿ 20,000 ರುಪಾಯಿ ತನಕ ಟಿಡಿಎಸ್ ಇರುವುದಿಲ್ಲ. 20,000 ರುಪಾಯಿ ತನಕ ಬ್ರೋಕರೇಜ್ ಶುಲ್ಕದ ಮೇಲೆ ಟಿಡಿಎಸ್ ಇರುವುದಿಲ್ಲ.
ಏಪ್ರಿಲ್ 1ರಿಂದ 10 ಲಕ್ಷ ರುಪಾಯಿ ತನಕ ವಿದೇಶಿ ಮೂಲದ ಹಣ ಅಥವಾ ರೆಮಿಟೆನ್ಸ್ ಮೇಲೆ ಟಿಸಿಎಸ್ ತೆರಿಗೆ ಇರುವುದಿಲ್ಲ. 2025ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಘೋಷಣೆಯನ್ನು ಮಾಡಿದ್ದರು. ಇಲ್ಲಿಯತನಕ 50,000 ರುಪಾಯಿ ತನಕ ಬಡ್ಡಿ ಆದಾಯ ಮಿತಿ ಇತ್ತು. ಇತರ ಹೂಡಿಕೆದಾರರಿಗೆ ಬಡ್ಡಿ ಆದಾಯ ಮಿತಿಯನ್ನು 40,000 ರುಪಾಯಿಗಳಿಂದ 50,000 ರುಪಾಯಿಗೆ ಏರಿಸಲಾಗಿದೆ. ಬಾಡಿಗೆ ಆದಾಯದ ಮೇಲಿನ ಟಿಡಿಎಸ್ ಕಡಿತಕ್ಕೆ ಆದಾಯದ ಮಿತಿಯನ್ನೂ ಈಗಿನ ವಾರ್ಷಿಕ 2.4 ಲಕ್ಷ ರುಪಾಯಿಗಳಿಂದ 6 ಲಕ್ಷ ರುಪಾಯಿಗೆ ಏರಿಸಲಾಗಿದೆ.
ಕಳೆದ ಫೆಬ್ರವರಿ 1ರಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ದರಗಳ ಶ್ರೇಣಿ ಅಥವಾ ಸ್ಲ್ಯಾಬ್‌ಗಳನ್ನು ಘೋಷಿಸಲಾಗಿದೆ. ಇದರಿಂದ ಮಧ್ಯಮ ವರ್ಷದ ಜನರಿಗೆ ತೆರಿಗೆಯಲ್ಲಿ ಉಳಿತಾಯವಾಗಲಿದೆ. ಪರಿಷ್ಕೃತ ತೆರಿಗೆ ಪದ್ಧತಿಯು 2025-26ರಲ್ಲಿ ಜನರು ಗಳಿಸುವ ಆದಾಯಕ್ಕೆ ಅನ್ವಯವಾಗಲಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಟ್ಯಾಕ್ಸ್ ರಿಬೇಟ್ ಅನ್ನು 25,000 ರುಪಾಯಿಗಳಿಂದ 60,000 ರುಪಾಯಿಗೆ ಹೆಚ್ಚಿಸಿರುವುದರಿಂದ ವಾರ್ಷಿಕ 12 ಲಕ್ಷ ರುಪಾಯಿ ತನಕ ಆದಾಯ ಇರುವವರಿಗೆ ಆದಾಯ ತೆರಿಗೆ ಇರುವುದಿಲ್ಲ. ವೇತನದಾರರಿಗೆ 75,000 ರುಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುವುದರಿಂದ ಅವರಿಗೆ 12 ಲಕ್ಷದ 75 ಸಾವಿರ ರುಪಾಯಿ ತನಕ ಇನ್‌ಕಮ್ ಟ್ಯಾಕ್ಸ್ ಇರುವುದಿಲ್ಲ. ಇದು ದೇಶದ ಕೋಟ್ಯಂತರ ಮಧ್ಯಮ ವರ್ಗದ ಜನರಿಗೆ ಬಹು ದೊಡ್ಡ ರಿಲೀಫ್ ಆಗಿದೆ.
2025-26ಕ್ಕೆ ಹೊಸ ಆದಾಯ ತೆರಿಗೆಯ ಶ್ರೇಣಿ ಹೀಗಿದೆ:
ವಾರ್ಷಿಕ 4 ಲಕ್ಷ ರುಪಾಯಿ ತನಕ ಆದಾಯಕ್ಕೆ, ಆದಾಯ ತೆರಿಗೆ ಇರುವುದಿಲ್ಲ.
4 ಲಕ್ಷದಿಂದ 8 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 5%
8 ಲಕ್ಷದಿಂದ 12 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 10%
12 ಲಕ್ಷದಿಂದ 16 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 15%
20 ಲಕ್ಷದಿಂದ 24 ಲಕ್ಷ ರುಪಾಯಿ ಆದಾಯಕ್ಕೆ ತೆರಿಗೆ : 25%
24 ಲಕ್ಷ ರುಪಾಯಿ ಮೇಲಿನ ಆದಾಯಕ್ಕೆ ತೆರಿಗೆ : 30%
( ಹಳೆಯ ತೆರಿಗೆ ಪದ್ಧತಿಯಲ್ಲಿ ಹಳೆಯ ತೆರಿಗೆಯ ಶ್ರೇಣಿಯೇ ಇರಲಿದೆ)
ಜಿಎಸ್‌ಟಿ ಅಡಿಯಲ್ಲಿಯೂ ಏಪ್ರಿಲ್ 1ರಿಂದ ಬಿಸಿನೆಸ್‌ದಾರರಿಗೆ ಹೊಸ ಬದಲಾವಣೆ ಅನ್ವಯವಾಗಲಿದೆ. ಮುಖ್ಯವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಿಕೊಳ್ಳಲು, ಇನ್‌ಪುಟ್ ಸರ್ವೀಸ್ ಡಿಸ್ಟ್ರಿಬ್ಯೂಟರ್ ಮೆಕಾನಿಸಮ್ ಅನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1ರಿಂದ ಎಟಿಎಂನಿಂದ ಕ್ಯಾಶ್ ವಿತ್ ಡ್ರಾವಲ್ಸ್‌ಗೆ ಸಂಬಂಧಿಸಿಯೂ ಹೊಸ ಬದಲಾವಣೆ ಜಾರಿಯಾಗಲಿದೆ.ಆರ್‌ಬಿಐ ಮತ್ತು ನ್ಯಾಶನಲ್ ಪೇಮೆಂಟ್ಸ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ಇಂಟರ್‌ಚೇಂಜ್ ಶುಲ್ಕದಲ್ಲಿ 2 ರುಪಾಯಿ ಏರಿಕೆಗೆ ಅನುಮೋದಿಸಿದೆ. ಉಚಿತ ಟ್ರಾನ್ಸಕ್ಷಗಳ ಮಿತಿ ದಾಟಿದ ಬಳಿಕ ಪ್ರತಿ ಒಂದು ಕ್ಯಾಶ್ ವಿತ್ ಡ್ರಾವಲ್ಸ್‌ಗೆ 19 ರುಪಾಯಿ ಶುಲ್ಕವಾಗಲಿದೆ. ಹಣಕಾಸೇತರ ಟ್ರಾನ್ಸಕ್ಷನ್‌ಗಳಿಗೆ 7 ರುಪಾಯಿ ಶುಲ್ಕ ಅನ್ವಯವಾಗಲಿದೆ. ಆದರೆ ಈ ಬದಲಾವಣೆಯು ಮೈಕ್ರೊ-ಎಟಿಎಂಗಳಿಗೆ ಮತ್ತು ಕ್ಯಾಶ್ ಡೆಪಾಸಿಟ್ ಟ್ರಾನ್ಸಕ್ಷನ್‌ಗಳಿಗೆ ಇರುವುದಿಲ್ಲ. ಪ್ರತಿ ತಿಂಗಳು ಮೂರು ಸಲ ಮಾತ್ರ ಎಟಿಎಂನಿಂದ ಉಚಿತವಾಗಿ ನಗದು ಹಿಂಪಡೆಯಬಹುದು.
ಎಸ್‌ಬಿಐ, ಪಂಜಾಬ್ ನ್ಯಾಶನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಏಪ್ರಿಲ್ 1ರಿಂದ ಮಿನಿಮಮ್ ಬ್ಯಾಲೆನ್ಸ್ ರೂಲ್ಸ್‌ಗಳನ್ನು ಬದಲಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತದಲ್ಲಿ ಏರಿಕೆಯಾಗಲಿದೆ.
ಪ್ರಾಪರ್ಟಿ ಮಾರಾಟ ಏಪ್ರಿಲ್ 1ರ ಬಳಿಕ ಮಾಡಿ
ನೀವು ನಿಮ್ಮ ಪ್ರಾಪರ್ಟಿಯನ್ನು ಮಾರಾಟ ಮಾಡುವ ಪ್ಲಾನ್ ಮಾಡುತ್ತಿದ್ದರೆ, ಏಪ್ರಿಲ್ 1ರ ಬಳಿಕ ಮಾಡುವುದು ಉತ್ತಮ. ಏಕೆಂದರೆ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ಮುಂದಿನ 2025-26ರ ಆರ್ಥಿಕ ವರ್ಷದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ಇದರಿಂದಾಗಿ ಟ್ಯಾಕ್ಸ್ ಸೇವಿಂಗ್ ಇನ್ವೆಸ್ಟ್‌ಮೆಂಟ್ ಸಲುವಾಗಿ ಒಂದು ಇಡೀ ವರ್ಷದ ಸಮಯ ಸಿಗುತ್ತದೆ. ತೆರಿಗೆ ಪಾವತಿಸಲು ಒಂದು ವರ್ಷದ ಸಮಯ ಸಿಗುತ್ತದೆ.
ಬಜೆಟ್ ಪ್ರಕಾರ ಏಪ್ರಿಲ್ 1ರ ಬಳಿಕ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ದರಗಳಲ್ಲಿ ಇಳಿಕೆಯಾಗಲಿದೆ. ಏಕೆಂದರೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಬಳಕೆಯಾಗುವ 28 ವಸ್ತುಗಳ ಸುಂಕ ಇಳಿಕೆಯಾಗಲಿದೆ. ಎಲ್‌ಇಡಿ, ಎಲ್‌ಸಿಡಿ ಟಿವಿ ಉತ್ಪಾದನೆ ಕುಸಿತ ಬಿಡಿ ಭಾಗಗಳ ಮೇಲಿನ ಸುಂಕ ತಗ್ಗಲಿದೆ. ಇವಿ ಬ್ಯಾಟರಿಗಳು ಮತ್ತು ಬಿಡಿ ಭಾಗಗಳ ಮೇಲಿನ ತೆರಿಗೆ ಇಳಿಯಲಿದೆ. ಬಜೆಟ್ ಪ್ರಕಾರ 36 ಕ್ರಿಟಿಕಲ್ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಏಪ್ರಿಲ್ 1ರಿಂದ ಬಹುತೇಕ ಬ್ರಾಂಡ್‌ಗಳ ಕಾರುಗಳ ದರದಲ್ಲಿ ಏರಿಕೆಯಾಗಲಿದೆ. ಕೇವಲ ಕಾರುಗಳು ಮಾತ್ರವಲ್ಲದೆ, ರಾಜ್ಯದಲ್ಲಿ ದ್ವಿ ಚಕ್ರ ವಾಹನ, ಆಟೊ ರಿಕ್ಷಾ ಖರೀದಿ ಕೂಡ ದುಬಾರಿಯಾಗಲಿದೆ.
ಕಾರು ಉತ್ಪಾದಕ- ದರ ಏರಿಕೆ ಎಷ್ಟು?
ಮಾರುತಿ ಸುಜುಕಿ- 4%
ಕಿಯಾ- 3%
ಹುಂಡೈ-3%
ಮಹೀಂದ್ರಾ-3%
ರೆನಾಲ್ಟ್ - 2%
ಕರ್ನಾಟಕದಲ್ಲಿ ಏಪ್ರಿಲ್ 1ರಿಂದ ಟೋಲ್ ದರಗಳಲ್ಲೂ 3-5% ಏರಿಕೆಯಾಗಲಿದೆ. ರಾಜ್ಯದಲ್ಲಿ 66 ಟೋಲ್ ಪ್ಲಾಜಾಗಳಿದ್ದು, ಬಹುತೇಕ ಎಲ್ಲ ಕಡೆಗಳಲ್ಲಿ 3ರಿಂದ 5% ತನಕ ಟೋಲ್ ಶುಲ್ಕ ಏರಿಕೆಯಾಗಲಿದೆ.
ನಾವೀಗ ನಿರ್ದಿಷ್ಟವಾಗಿ ಏಪ್ರಿಲ್ 1ರಿಂದ ಯಾವೆಲ್ಲ ತೆರಿಗೆ ಬದಲಾವಣೆಯಾಗಲಿದೆ? ಯಾವುದು ಅಗ್ಗವಾಗಲಿದೆ ಮತ್ತು ದುಬಾರಿಯಾಗಲಿದೆ ಎಂಬುದನ್ನು ತಿಳಿದುಕೊಂಡಿದ್ದೇವೆ. ಆದರೆ ಒಟ್ಟಾರೆಯಾಗಿ ನೋಡೋದಿದ್ದರೆ, ಏಪ್ರಿಲ್ 1ರ ಬಳಿಕ ಮಧ್ಯಮ ವರ್ಗದ ಆದಾಯದ ಜನತೆಗೆ ಆದಾಯ ತೆರಿಗೆ ಇಳಿಯಲಿದೆ. 12 ಲಕ್ಷದ ತನಕ ಆದಾಯ ತೆರಿಗೆಯ ಚಿಂತೆ ಇರುವುದಿಲ್ಲ. ಈ ಹಿಂದೆ 12 ಲಕ್ಷ ರುಪಾಯಿ ಆದಾಯ ದಾಟಿದೊಡನೆ 30% ತೆರಿಗೆ ಇರುತ್ತಿತ್ತು. ಏಪ್ರಿಲ್ ಬಳಿಕ 30% ತೆರಿಗೆಯ ಸ್ಲ್ಯಾಬ್, ವಾರ್ಷಿಕ 24 ಲಕ್ಷ ರುಪಾಯಿ ಬಳಿಕ ಬರುತ್ತದೆ. ಇದರ ಪ್ರಯೋಜನ ಒಂದು ಕಡೆಯಾಗಿದ್ದರೆ, ಉಳಿತಾಯವಾಗುವ ಹಣವನ್ನು ಸಮರ್ಪಕವಾಗಿ ಹೂಡಿಕೆ ಮಾಡಿದರೆ ಮಾತ್ರ ಅದರ ಪ್ರಯೋಜಜ ಸಿಗುತ್ತದೆ. ಆದ್ದರಿಂದ ಮಧ್ಯಮ ವರ್ಗದ ಜನರು ಉಳಿತಾಯದ ಹಣದ ನಿರ್ವಹಣೆಯನ್ನು ಎಚ್ಚರಿಕೆಯಿಂದ ಮತ್ತು ಜಾಣ್ಮೆಯಿಂದ ಮಾಡುವುದು ಮುಖ್ಯ. ಇಲ್ಲವಾದರೆ ತಿಂಗಳಿಗೆ ಲಕ್ಷಾಂತರ ರುಪಾಯಿ ಗಳಿಕೆ ಇದ್ದರೂ ಸಾಕಾಗುವುದಿಲ್ಲ. ಉಳಿತಾಯವೂ ಆಗುವುದಿಲ್ಲ.
ಆದ್ದರಿಂದಲೇ ಇತ್ತೀಚೆಗೆ ಹಿರಿಯ ಉದ್ಯಮಿ ಡಾ. ಎ. ವೇಲುಮಣಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಗಮನ ಸೆಳೆಯುವ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇವತ್ತು ಹೇಗಾಗಿದೆ ಎಂದರೆ ಬೆಂಗಳೂರಿನ ಟೆಕ್ಕಿ ತಿಂಗಳಿಗೆ ಒಂದೂವರೆ ಲಕ್ಷ ರುಪಾಯಿ ಗಳಿಸುತ್ತಿದ್ದರೂ, ಕುಟುಂಬದ ಖರ್ಚು ವೆಚ್ಚಗಳಿಗೆ ಸಾಕಾಗುವುದಿಲ್ಲ ಎನ್ನುತ್ತಾನೆ. ಆದರೆ ವಾಸ್ತವವೇನು?ಮಿತವ್ಯಯದಿಂದ ಬದುಕನ್ನು ನಡೆಸದಿದ್ದರೆ, ಬದುಕು ಕಷ್ಟಕರವಾಗುತ್ತದೆ. ಜೀವನದಲ್ಲಿ ಯಶಸ್ಸು ಎಂಬುದು ನೀವೆಷ್ಟು ಗಳಿಸುತ್ತೀರಿ ಎಂಬುದಕ್ಕಿಂತಲೂ ನಿಮಗೆಷ್ಟು ಸಾಕು ಎಂಬುದರ ಮೇಲೆ ನಿಂತಿದೆ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Wheat stock: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ: ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸೂಚನೆ
2025ರ ಏಪ್ರಿಲ್ 1ರಿಂದ ವೇತನದಾರರಿಗೆ ಎಷ್ಟು ಆದಾಯ ತೆರಿಗೆ ಉಳಿಯುತ್ತದೆ ಎಂಬುದನ್ನು ಇವೈ ಇಂಡಿಯಾ ಲೆಕ್ಕಾಚಾರ ಹಾಕಿದೆ. ಅದು ಹೀಗಿದೆ.
- ಒಟ್ಟು ವಾರ್ಷಿಕ ಆದಾಯ: 12 ಲಕ್ಷದ 75 ಸಾವಿರ ರುಪಾಯಿ.
ಏಪ್ರಿಲ್ 1ಕ್ಕೆ ಮುನ್ನ ಪಾವತಿಸಬೇಕಾಗಿದ್ದ ತೆರಿಗೆ: 83,200 ರುಪಾಯಿ.
ಏಪ್ರಿಲ್ ಬಳಿಕ : ಶೂನ್ಯ
ತೆರಿಗೆ ಉಳಿತಾಯ: 83,200 ರುಪಾಯಿಗಳು.
- ಒಟ್ಟು ಆದಾಯ ವಾರ್ಷಿಕ 15 ಲಕ್ಷ ರುಪಾಯಿ
ಏಪ್ರಿಲ್ 1ಕ್ಕೆ ಮುನ್ನ ಪಾವತಿಸಬೇಕಾಗಿದ್ದ ತೆರಿಗೆ: 1,30,000 ರುಪಾಯಿ.
ಏಪ್ರಿಲ್ ಬಳಿಕ : 97,500 ರುಪಾಯಿ.
ತೆರಿಗೆ ಉಳಿತಾಯ: 32,500 ರುಪಾಯಿಗಳು.
- ವಾರ್ಷಿಕ 16 ಲಕ್ಷ ಆದಾಯ ಇರುವವರಿಗೆ ತೆರಿಗೆ ಉಳಿತಾಯ: 40,300 ರುಪಾಯಿ.
- ವಾರ್ಷಿಕ 20 ಲಕ್ಷ ರುಪಾಯಿ ಆದಾಯ ಇರುವವರಿಗೆ ತೆರಿಗೆ ಉಳಿತಾಯ: 85,800 ರುಪಾಯಿ.
- ವಾರ್ಷಿಕ 25 ಲಕ್ಷ ರುಪಾಯಿ ಆದಾಯ ಇರುವವರಿಗೆ ತೆರಿಗೆ ಉಳಿತಾಯ: 1,14,400 ರುಪಾಯಿ.
ಹೀಗೆ ಉಳಿತಾಯವಾಗುವ ಹಣವನ್ನು ಸೂಕ್ತ ರೀತಿಯಲ್ಲಿ ಇನ್ವೆಸ್ಟ್ ಮಾಡುವುದು ವೈಯಕ್ತಿಕ ಹಣಕಾಸು ಸ್ಥಿತಿಗತಿಯ ಸುಧಾರಣೆಯ ನಿಟ್ಟಿನಲ್ಲಿ ನಿರ್ಣಾಯಕವಾಗುತ್ತದೆ