ನವದೆಹಲಿ: ಆರ್ಥಿಕ ವಹಿವಾಟಿಗೆ ಬಳಕೆಯಾಗುವ ಶಾಶ್ವತ ಖಾತೆ ಸಂಖ್ಯೆ (PAN card) ಮತ್ತು ಆಧಾರ್ ಕಾರ್ಡ್ (Aadhaar card) ಲಿಂಕ್ (PAN and Aadhaar link) ಕಡ್ಡಾಯ ಮಾಡಲಾಗಿದೆ. ಇದನ್ನು ಡಿಸೆಂಬರ್ 31ರೊಳಗೆ ಮಾಡಿಸದೇ ಇದ್ದರೆ ಮುಂದೆ ತೆರಿಗೆದಾರರು (taxpayer) ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ನೀಡಿರುವ ಕೊನೆಯ ಗಡುವು ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದೆ. ಹೀಗಾಗಿ ಇನ್ನೂ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಲ್ಲದಿದ್ದರೆ ಕೂಡಲೇ ಮಾಡಿಬಿಡಿ. ಯಾಕೆಂದರೆ ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಗೆ ಇಂದು ಕೊನೆಯ ದಿನವಾಗಿದೆ.ಆಧಾರ್ ಕಾರ್ಡ್ ಲಿಂಕ್ ಮಾಡದ ಪಾನ್ ಕಾರ್ಡ್ ನಾಳೆಯಿಂದ ನಿಷ್ಕ್ರಿಯಗೊಳ್ಳಲಿದೆ. ಇದು ಮುಂದೆ ತೆರಿಗೆ ಸಂಬಂಧಿತ ಕಾರ್ಯಗಳಿಗೆ ತೊಂದರೆಯಾಗಲಿದೆ.
ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಅನ್ನು ಸ್ವತಃ ಮನೆಯಲ್ಲೇ ಕುಳಿತು ಮಾಡಬಹುದಾಗಿದೆ. ಇದಕ್ಕಾಗಿ ಆನ್‌ಲೈನ್‌ನಲ್ಲಿ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕೇವಲ ಪಾನ್ ಕಾರ್ಡ್, ಆಧಾರ್ ಮತ್ತು ಮೊಬೈಲ್ ಸಂಖ್ಯೆ ಇದ್ದರೆ ಸಾಕು. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಯಾಕೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಕುರಿತು ಆದಾಯ ತೆರಿಗೆ ಇಲಾಖೆ ನೀಡಿರುವ ಮಾರ್ಗಸೂಚಿಗಳ ವಿವರ ಇಲ್ಲಿವೆ.
ಆಧಾರ್- ಪಾನ್ ಲಿಂಕ್ ಯಾಕೆ ಮಾಡಬೇಕು?
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವ ಮುಖ್ಯ ಉದ್ದೇಶ ವ್ಯಕ್ತಿಯ ಗುರುತನ್ನು ದೃಢೀಕರಿಸುವುದು ಮತ್ತು ನಕಲಿ ಪಾನ್ ಕಾರ್ಡ್ ನೀಡುವುದನ್ನು ತಡೆಯುವುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಪ್ರಕಾರ ನಿರ್ದಿಷ್ಟ ನಮೂನೆ ಮತ್ತು ಕಾರ್ಯವಿಧಾನದ ಮೂಲಕ ಗಡುವಿನೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು ಇದನ್ನು ಮಾಡಬೇಕಿಲ್ಲ. ಯಾಕೆಂದರೆ ಇದು ಸ್ವಯಂಚಾಲಿತವಾಗಿ ನಡೆಯುತ್ತದೆ.
ಲಿಂಕ್ ಮಾಡುವುದು ಹೇಗೆ?
ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ಮುಖ್ಯವಾಗಿ ಮಾನ್ಯವಾದ ಪಾನ್ ಕಾರ್ಡ್, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಬೇಕಾಗುತ್ತದೆ.
Pravasi Prapancha: ಪೇಡಾ ನಗರಿಯ ಐಷಾರಾಮಿ ರೆಸಾರ್ಟ್ ರೈಸಿಂಗ್ ಬ್ಲಿಸ್ ರಿಟ್ರೀಟ್
- ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ www.incometax.gov.in. ಗೆ ಭೇಟಿ ನೀಡಿ ಇಲ್ಲಿ ಕ್ವಿಕ್ ಲಿಂಕ್ಸ್ ವಿಭಾಗದಲ್ಲಿ ಲಿಂಕ್ ಆಧಾರ್ ಅನ್ನು ಆಯ್ಕೆ ಮಾಡಬೇಕು.
- ಬಳಿಕ ಇಲ್ಲಿ ಪಾನ್ ಮತ್ತು ಆಧಾರ್ ಕಾರ್ಡ್ ಗಳ ಸಂಖ್ಯೆಗಳನ್ನು ನಮೂದಿಸಬೇಕು.
- ಇ- ಪೇ ತೆರಿಗೆ ಮೂಲಕ ಪಾವತಿ ಮಾಡಲು ಮುಂದುವರಿಸಿ ಎಂಬುದನ್ನು ಕ್ಲಿಕ್ ಮಾಡಬೇಕು.
- ಪಾನ್ ಸಂಖ್ಯೆಯನ್ನು ನಮೂದಿಸಿ ಅದನ್ನು ದೃಢೀಕರಿಸಲು ಒಟಿಪಿ ಸ್ವೀಕರಿಸಲು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಒಟಿಪಿ ಪರಿಶೀಲನೆಯ ಬಳಿಕ ಇ-ಪೇ ತೆರಿಗೆ ಪುಟ ತೆರೆದುಕೊಳ್ಳುತ್ತದೆ ಇಲ್ಲಿ ‘ಮುಂದುವರಿಯಿರಿ’ ಎಂಬುದನ್ನು ಕ್ಲಿಕ್ ಮಾಡಬೇಕು.
- ಅನಂತರ ಮೌಲ್ಯಮಾಪನ ವರ್ಷ ಮತ್ತು ಪಾವತಿಯ ಪ್ರಕಾರದಲ್ಲಿ 'ಇತರ ರಶೀದಿಗಳು' ಎಂಬುದನ್ನು ಆಯ್ಕೆ ಮಾಡಿ ಅನಂತರ 'ಮುಂದುವರಿಸಿ' ಎಂಬುದನ್ನು ಕ್ಲಿಕ್ ಮಾಡಿ.
- ಅನಂತರ ತೆರೆದ ಪುಟದಲ್ಲಿ ಇತರ ಎಂಬುದನ್ನು ಆಯ್ಕೆ ಮಾಡಿದ ತಕ್ಷಣ ಸೂಕ್ತ ಮೊತ್ತ ಸ್ವಯಂಚಾಲಿತವಾಗಿ ಭರ್ತಿಯಾಗುತ್ತದೆ. ಬಳಿಕ ಮುಂದುವರಿಸಿ ಎಂಬುದನ್ನು ಕ್ಲಿಕ್ ಮಾಡಬೇಕು.
- ಇದಾದ ಬಳಿಕ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ ಲಾಗಿನ್ ಮಾಡಿ. ಡ್ಯಾಶ್‌ಬೋರ್ಡ್‌ನ ಪ್ರೊಫೈಲ್ ವಿಭಾಗದಲ್ಲಿರುವ 'ಲಿಂಕ್ ಆಧಾರ್ ಟು ಪಾನ್' ಎಂಬುದನ್ನು ಕ್ಲಿಕ್ ಮಾಡಿ ಅಥವಾ ವೈಯಕ್ತಿಕ ವಿವರಗಳ ವಿಭಾಗದಲ್ಲಿ 'ಲಿಂಕ್ ಆಧಾರ್' ಆಯ್ಕೆ ಮಾಡಿ.
- ಬಳಿಕ ಇಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಆಧಾರ್ ಮತ್ತು ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿ.