ನವದೆಹಲಿ, ಸೆ. 27: ದಸರಾ ಹಬ್ಬ (Dussehra festival) ಸಮೀಪಿಸಿದೆ. ಸಾಮಾನ್ಯವಾಗಿ ನವರಾತ್ರಿ ಹಬ್ಬದ ಸಮಯದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಆಫರ್ ಘೋಷಿಸುತ್ತಾರೆ. ಆದರೆ ಈ ವರ್ಷ ಉದ್ಯಮದಲ್ಲಿ ಮೂರನೇ ಸುತ್ತಿನ ಬೆಲೆ ಏರಿಕೆಯಾಗಲಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಲೋಹಗಳ ಬೆಲೆ ಏರಿಕೆ ಮತ್ತು ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತದಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಎಲೆಕ್ಟ್ರಾನಿಕ್ಸ್ ಉತ್ಪಾದಕರು ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ತಾಮ್ರ, ಅಲ್ಯೂಮಿನಿಯಂ, ಉಕ್ಕು ಮತ್ತು ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರ ಜತೆಗೆ ಸರಕು ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಉತ್ಪನ್ನಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯ ಎಂದು ತಯಾರಕರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಉದ್ಯಮದ ಕೆಲವು ಕಂಪನಿಗಳು ಉತ್ಪನ್ನಗಳ ಬೆಲೆ ಏರಿಕೆಯಿಂದ ಹಬ್ಬದ ಸಮಯದ ಮಾರಾಟದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿವೆ. ಮತ್ತೊಂದೆಡೆ, ಕೆಲವು ಕಂಪನಿಗಳು ಬೆಲೆ ಏರಿಕೆಯ ಪರಿಣಾಮ ಸೀಮಿತವಾಗಿರಬಹುದು ಎಂದು ಭಾವಿಸಿವೆ. ಏಕೆಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದಿದ್ದ ಮುಂಗಡ ಖರೀದಿ ಯೋಜನೆಗಳ ಮೂಲಕ, ಡೀಲರ್‌ಗಳು ಮತ್ತು ವಿತರಕರು ಈಗಾಗಲೇ ಹಳೆಯ ಬೆಲೆಯಲ್ಲಿ ಖರೀದಿಸಿದ ಉತ್ಪನ್ನಗಳ ದಾಸ್ತಾನು ಹೊಂದಿರಬಹುದು ಎಂದು ವರದಿ ತಿಳಿಸಿದೆ.
ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸ್ಟಾರ್ ರೇಟಿಂಗ್ ಕಡ್ಡಾಯ
ಓಣಂ, ದಸರಾ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಹೆಚ್ಚಾಗುತ್ತದೆ. ಈ ಹಬ್ಬದ ಅವಧಿಯಲ್ಲೇ ಕಂಪನಿಗಳ ವಹಿವಾಟು ಇಡೀ ವರ್ಷದ ಮಾರಾಟದ ಸುಮಾರು ಶೇ. 30ರಿಂದ 40ರಷ್ಟು ನಡೆಯುತ್ತದೆ ಎನ್ನುವುದು ವಿಶೇಷ.
ಎಸಿ ಬೆಲೆ ಶೇ. 5ರಿಂದ 8 ರಷ್ಟು ಏರಿಕೆಯಾಗಲಿದೆ. ಎಸಿ ಮತ್ತು ಡೀಪ್ ಫ್ರೀಜರ್‌ಗಳ ಬೆಲೆಗಳು ಈಗಾಗಲೇ ಶೇ. 5ರಿಂದ 8 ರಷ್ಟು ಹೆಚ್ಚಾಗಿದೆ. ಎಲ್‌ಜಿ ಮತ್ತು ಬಾಷ್ ಹೋಮ್ ಕಂಫರ್ಟ್ ಕೂಡ ಎಸಿ ಬೆಲೆಯನ್ನು ಸುಮಾರು ಶೇ. 5ರಷ್ಟು ಹೆಚ್ಚಿಸಿವೆ.
ಕೆಲವು ಕಂಪನಿಗಳು ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಎಲ್‌ಇಡಿ ಟಿವಿಗಳಂತಹ ಉಪಕರಣಗಳ ಬೆಲೆಯನ್ನು ಶೇ. 3ರಿಂದ 4 ರಷ್ಟು ಹೆಚ್ಚಿಸಲಿವೆ ಎಂದು ವರದಿಯಾಗಿದೆ. ಬ್ಲೂ ಸ್ಟಾರ್, ಗೋದ್ರೇಜ್ ಅಪ್ಲೈಯನ್ಸ್, ಹೈಯರ್, ಡೈಕಿನ್ ಮತ್ತು ಸೂಪರ್ ಪ್ಲಾಸ್ಟ್ರಾನಿಕ್ಸ್‌ನಂತಹ ಕಂಪನಿಗಳು ಈಗಾಗಲೇ ವಿವಿಧ ವಿಭಾಗಗಳಲ್ಲಿ ಶೇ. 4ರಿಂದ 10ರಷ್ಟು ಬೆಲೆ ಏರಿಕೆಯನ್ನು ಘೋಷಿಸಿವೆ.
ತಾಮ್ರದ ಬೆಲೆಗಳು ಸುಮಾರು ಶೇ. 25ರಿಂದ 35 ರಷ್ಟು ಹೆಚ್ಚಾಗಿದೆ ಎಂದು ಡೈಕಿನ್ ಎಸಿಯ ಭಾರತದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕನ್ವಲ್ಜೀತ್ ಜಾವಾ ಹೇಳಿದ್ದಾರೆ. ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (SPPL) ಅಕ್ಟೋಬರ್ ನಂತರ ಟಿವಿ ಬೆಲೆಗಳನ್ನು ಸುಮಾರು ಶೇ. 7ರಷ್ಟು ಹೆಚ್ಚಿಸಲು ನಿರ್ಧರಿಸಿದೆ.