ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ
ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ, ಉದ್ಯೋಗ ಭದ್ರತೆ, ಸುಧಾರಿತ ಮೂಲಸೌಕರ್ಯ ಮತ್ತು ಸರಳ ಸಾಲ ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ. ಈ ಹಿಂದೆ ಬಾಡಿಗೆ ಮನೆಯಲ್ಲಿದ್ದ ಜೆನ್ ಜೀ ಮತ್ತು ಯುವ ಮಿಲೇನಿಯಲ್ಸ್ ಈಗ ಮೊದಲಿನಿಗಿಂತಲೂ ಬೇಗನೆ ಸ್ವಂತ ಮನೆ ಹೊಂದುವತ್ತ ಹೆಜ್ಜೆ ಹಾಕುತ್ತಿರುವು ದನ್ನು ಬ್ಯಾಂಕ್ ಗಮನಿಸಿದೆ.
-
ತಂತ್ರಜ್ಞಾನ ಆಧಾರಿತ ಆದಾಯ, ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ವಿಶಾಲವಾದ ಸ್ಥಳಗಳ ಆಯ್ಕೆಯು ಯುವ ಖರೀದಿದಾರರು ಮನೆ ಖರೀದಿಸಲು ಸಹಾಯ ಮಾಡುತ್ತಿವೆ.
ಸಿಲಿಕಾನ್ ಸಿಟಿಯ ಯುವ ಪೀಳಿಗೆಯಲ್ಲಿ ಸ್ವಂತ ಮನೆಯ ಕನಸು ಮೊದಲಿನಿಗಿಂತಲೂ ವೇಗವಾಗಿ ನನಸಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಉದ್ಯೋಗ ಭದ್ರತೆ ಮತ್ತು ಆತ್ಮವಿಶ್ವಾಸದಿಂದಾಗಿ ಜೆನ್ ಜೀ ಮತ್ತು ಯುವ ಮಿಲೇನಿಯಲ್ ಗಳು ಬಹಳ ಬೇಗ ಮನೆ ಖರೀದಿಸಲು ಮುಂದಾಗುತ್ತಿದ್ದಾರೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ವರದಿ ಮಾಡಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ, ಉದ್ಯೋಗ ಭದ್ರತೆ, ಸುಧಾರಿತ ಮೂಲಸೌಕರ್ಯ ಮತ್ತು ಸರಳ ಸಾಲ ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ. ಈ ಹಿಂದೆ ಬಾಡಿಗೆ ಮನೆಯಲ್ಲಿದ್ದ ಜೆನ್ ಜೀ ಮತ್ತು ಯುವ ಮಿಲೇನಿಯಲ್ಸ್ ಈಗ ಮೊದಲಿನಿಗಿಂತಲೂ ಬೇಗನೆ ಸ್ವಂತ ಮನೆ ಹೊಂದುವತ್ತ ಹೆಜ್ಜೆ ಹಾಕುತ್ತಿರುವುದನ್ನು ಬ್ಯಾಂಕ್ ಗಮನಿಸಿದೆ.
ಇದನ್ನೂ ಓದಿ: Kotak: ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ನೆರವಾಗಲು ಕೋಟಕ್ ಬಿಸ್ ಲ್ಯಾಬ್ಸ್ ಆಕ್ಸಲರೇಟರ್ ಪ್ರೋಗ್ರಾಮ್ ಆರಂಭಿಸಿದ ಕೋಟಕ್
ಈ ಕುರಿತು ಮಾತನಾಡಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ನ ಹೋಮ್ ಲೋನ್ ವಿಭಾಗದ ಮುಖ್ಯಸ್ಥ ನಕುಲ್ ಸಕ್ಸೇನಾ ಅವರು , "ದೇಶಾದ್ಯಂತ ಕಡಿಮೆ ವಯಸ್ಸಿನವರು ಮನೆ ಖರೀದಿ ಮಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬೆಂಗಳೂರಿನಲ್ಲಿಯೂ ಸಹ, ಮೊದಲ ಬಾರಿಗೆ ಮನೆ ಖರೀದಿಸುವ ಅನೇಕರು ಸೂಕ್ತ ಸಮಯಕ್ಕಾಗಿ ಕಾಯುವ ಬದಲು ಮುಂಚಿತವಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಬಜೆಟ್, ಇಷ್ಟದ ಸ್ಥಳಗಳು ಮತ್ತು ಮನೆಯಲ್ಲಿ ಅವರಿಗೆ ಏನು ಮುಖ್ಯ ಎಂಬ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ" ಎಂದು ಹೇಳಿದರು.
ಬೆಂಗಳೂರಿನಲ್ಲಿ ಆತ್ಮವಿಶ್ವಾಸ ಹೆಚ್ಚಲು ಕಾರಣಗಳೇನು
ಬೆಂಗಳೂರಿನ ಬಲಿಷ್ಠ ಉದ್ಯೋಗ ಮಾರುಕಟ್ಟೆಯು ಈ ಬದಲಾವಣೆಗೆ ನಿರಂತರ ಬೆಂಬಲ ನೀಡುತ್ತಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿಗಳು) ಮತ್ತು ಸ್ಟಾರ್ಟ್ ಅಪ್ ಗಳ ಬೆಳವಣಿಗೆ ಯು ವೃತ್ತಿಜೀವನದ ಆರಂಭಿಕ ಹಂತದಲ್ಲೇ ಸ್ಥಿರವಾದ ಆದಾಯವನ್ನು ಗಳಿಸಲು ವೃತ್ತಿಪರರಿಗೆ ಸಹಾಯ ಮಾಡುತ್ತಿದೆ. ಇದು ಅನೇಕ ಯುವ ಖರೀದಿದಾರರಿಗೆ ಸ್ವಂತ ಮನೆ ಹೊಂದುವ ಯೋಜನೆ ಯನ್ನು ಸುಲಭಗೊಳಿಸುತ್ತಿದೆ.
ಜೊತೆಗೆ, ಪ್ರಗತಿಯಲ್ಲಿರುವ ಮೂಲಸೌಕರ್ಯ ಕಾಮಗಾರಿಗಳು, ಅದರಲ್ಲೂ ವಿಶೇಷವಾಗಿ ಮೆಟ್ರೋ ವಿಸ್ತರಣೆ ಮತ್ತು ರಸ್ತೆ ಸಂಪರ್ಕ ಯೋಜನೆಗಳು ಮನೆ ಖರೀದಿದಾರರು ಈ ನಗರವನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸುತ್ತಿವೆ. ಈ ಹಿಂದೆ ಸುದೀರ್ಘ ಪ್ರಯಾಣ, ದೂರವೆಂದು ಅನಿಸುತ್ತಿದ್ದ ಪ್ರದೇಶಗಳು ಈಗ ಬೇಗನೆ ತಲುಪಬಹುದಾದಂತೆ ಆಗಿವೆ.
ಈ ಕುರಿತು ಸಕ್ಸೇನಾ ಅವರು, "ಉತ್ತರ ಮತ್ತು ಪೂರ್ವ ಬೆಂಗಳೂರಿನಲ್ಲಿ ಮನೆ ಖರೀದಿಗೆ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಇಲ್ಲಿ ಖರೀದಿದಾರರು ವಿಶಾಲವಾದ ಜಾಗವನ್ನು ಪಡೆಯಬಹುದು ಮತ್ತು ಕೆಲಸದ ಸ್ಥಳದೊಂದಿಗೆ ಉತ್ತಮ ಸಂಪರ್ಕವನ್ನೂ ಹೊಂದಿರಬಹುದು ಎಂದು ಭಾವಿಸುತ್ತಾರೆ. ಸಂಪರ್ಕ ವ್ಯವಸ್ಥೆ ಸುಧಾರಿಸುತ್ತಿದ್ದಂತೆ, ಜನರು ಕೇವಲ ಸುಸ್ಥಾಪಿತ ಪ್ರದೇಶಗಳ ಮೇಲೆ ಗಮನ ಹರಿಸುವ ಬದಲು ಹೊಸ ಸ್ಥಳಗಳಲ್ಲಿ ಮನೆ ಖರೀದಿಸಲು ಹೆಚ್ಚು ಮುಕ್ತ ಮನಸ್ಸನ್ನು ಹೊಂದಿ ದ್ದಾರೆ" ಎಂದು ಹೇಳುತ್ತಾರೆ.
ಬಾಡಿಗೆ ಮತ್ತು ಇಎಂಐ ಕುರಿತಾದ ಬದಲಾಗುತ್ತಿರುವ ಮನೋಭಾವ
ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ, ವಿಶೇಷವಾಗಿ ಪ್ರಮುಖ ಉದ್ಯೋಗ ಕೇಂದ್ರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಾಡಿಗೆ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಇದರಿಂದಾಗಿ ಅನೇಕ ಕುಟುಂಬಗಳಿಗೆ ಮನೆ ಖರೀದಿಸುವ ನಿರ್ಧಾರವು ಕೇವಲ ಆರ್ಥಿಕ ಶಕ್ತಿಯ ವಿಷಯವಷ್ಟೇ ಅಲ್ಲದೆ, ದೀರ್ಘಕಾಲದ ಭದ್ರತೆಯ ಪ್ರಶ್ನೆಯೂ ಆಗಿದೆ.
ಹೆಚ್ಚಿನ ಬೇಡಿಕೆಯಿರುವ ಪ್ರದೇಶಗಳಲ್ಲಿ ಸತತವಾಗಿ ಏರುತ್ತಿರುವ ಬಾಡಿಗೆಗೆ ಹೋಲಿಸಿದರೆ, ಸ್ವಂತ ಮನೆ ಹೊಂದುವುದು ಜೀವನದಲ್ಲಿ ಹೆಚ್ಚಿನ ನಿಶ್ಚಿತತೆಯನ್ನು ನೀಡುತ್ತದೆ. ಇದರ ಪರಿಣಾಮವಾಗಿ, ಮೊದಲ ಬಾರಿಗೆ ಮನೆ ಖರೀದಿಸುವವರು ಅನಿರ್ದಿಷ್ಟ ಕಾಲ ಕಾಯುವ ಬದಲು, ಶೀಘ್ರವಾಗಿ ಮನೆ ಖರೀದಿಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.
ಖರೀದಿದಾರರು ವಾಸ್ತವವಾಗಿ ಏನನ್ನು ನಿರೀಕ್ಷಿಸುತ್ತಾರೆ
ಗೃಹ ಸಾಲದ ಗ್ರಾಹಕರೊಂದಿಗೆ ಕೋಟಕ್ ಬ್ಯಾಂಕ್ ನಡೆಸಿದ ಸಂವಾದಗಳ ಪ್ರಕಾರ, ಆಧುನಿಕ ಸೌಲಭ್ಯಗಳು ಮತ್ತು ಸಮುದಾಯ ಜೀವನವು ಖರೀದಿದಾರರನ್ನು (ವಿಶೇಷವಾಗಿ ಬಾಡಿಗೆ ಮನೆ ಯಿಂದ ಸ್ವಂತ ಮನೆಗೆ ಬದಲಾಗುವವರನ್ನು) ಆಕರ್ಷಿಸುತ್ತವೆಯಾದರೂ, ಅಂತಿಮ ನಿರ್ಧಾರವು ಈ ಕೆಳಗಿನ ಕೆಲವು ಮೂಲಭೂತ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ:
- ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ಎಲ್ಲಾ ಕಾನೂನು ಅಂಶಗಳ ಕೂಲಂಕಷ ಪರಿಶೀಲನೆ.
- ನಿಗದಿತ ಸಮಯಕ್ಕೆ ಸರಿಯಾಗಿ ಮನೆಯನ್ನು ಹಸ್ತಾಂತರಿಸುವುದು.
- ಕಟ್ಟಡದ ಗುಣಮಟ್ಟ ಉತ್ತಮವಾಗಿರುವುದು.
- ನೈಸರ್ಗಿಕ ಬೆಳಕು ಮತ್ತು ಗಾಳಿಯ ಸಂಚಾರವಿರುವ ಮನೆಗಳು.
ಈ ಕುರಿತು ಸಕ್ಸೇನಾ ಅವರು, "ಈ ಅಂಶಗಳೇ ಖರೀದಿದಾರರಿಗೆ ನೆಮ್ಮದಿ ನೀಡುತ್ತವೆ. ಸೌಲಭ್ಯಗಳು ಮುಖ್ಯ, ಆದರೆ ಜನರು ತಮ್ಮ ನಿರ್ಧಾರದಲ್ಲಿ ಸ್ಪಷ್ಟತೆ ಮತ್ತು ವಿಶ್ವಾಸವನ್ನು ಬಯಸುತ್ತಾರೆ. ಕಾಲಾನಂತರದಲ್ಲಿ ಆ ಮನೆ ತಮ್ಮ ಕುಟುಂಬಕ್ಕೆ ಎಷ್ಟು ಪೂರಕವಾಗಿರಲಿದೆ ಎಂಬುದರ ಮೇಲೆ ಅಂತಿಮ ನಿರ್ಧಾರ ನಿಂತಿರುತ್ತದೆ" ಎನ್ನುತ್ತಾರೆ.