ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದ ಮೇಲೆ ಅಮೆರಿಕ ವಿಧಿಸುವ ಸುಂಕ ಎಷ್ಟು?

ಯುಎಸ್ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಈ ನಡುವೆ ಅವರು ಜಾಗತಿಕವಾಗಿ ಎಲ್ಲರಿಗೂ ಶೇ. 10 ಸುಂಕ ಘೋಷಣೆ ಮಾಡಿದ್ದಾರೆ. ಇದು ಭಾರತಕ್ಕೆ ಅನ್ವಯವಾಗುವುದೇ? ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಗ್ರಹ ಚಿತ್ರ

ನವದೆಹಲಿ: ಯುಎಸ್ ಸುಪ್ರೀಂ ಕೋರ್ಟ್ (US Supreme Court) ಆದೇಶದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಜಾಗತಿಕವಾಗಿ ಎಲ್ಲಾ ರಾಷ್ಟ್ರಗಳಿಂದ ಆಮದಾಗುವ ಸರಕುಗಳ ಮೇಲೆ ಹೊಸ ಶೇ. 10ರಷ್ಟು ಸುಂಕವನ್ನು (US tariffs) ಕಡ್ಡಾಯಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದಕ್ಕೂ ಮೊದಲು ಮಾತನಾಡಿರುವ ಅವರು ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ (India-US Trade deal) ಯಾವುದೇ ಬದಲಾವಣೆ ಇಲ್ಲ. ಭಾರತ ಅಮೆರಿಕಕ್ಕೆ ಮೊದಲಿನಂತೆಯೇ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ಇದು ಈಗ ಭಾರತ ಶೇ. 10 ಅಥವಾ 18 ಸುಂಕ ಪಾವತಿಸಬೇಕೇ ಎನ್ನುವ ಗೊಂದಲಕ್ಕೆ ಕಾರಣವಾಗಿದೆ.

ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿದೆ. ಈ ತಿಂಗಳ ಆರಂಭದಲ್ಲೇ ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ. 18ರಷ್ಟು ಸುಂಕವನ್ನು ಘೋಷಿಸಿತ್ತು. ಆದರೆ ಈ ಬಳಿಕ ಯುಎಸ್ ಸುಪ್ರೀಂ ಕೋರ್ಟ್‌ ಡೊನಾಲ್ಡ್ ಟ್ರಂಪ್ ಅವರ ಸುಂಕಗಳನ್ನು ರದ್ದುಗೊಳಿಸಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮಣ್ಣು ಮುಕ್ಕಿಸಿದ ಭಾರತೀಯ ಮೂಲದ ವಕೀಲ; ತೆರಿಗೆ ವಿರುದ್ಧ ಕೋರ್ಟ್‌ನಲ್ಲಿ ವಾದಿಸಿದ ನೀಲ್ ಕತ್ಯಾಲ್ ಯಾರು?

ಸುಪ್ರೀಂ ಕೋರ್ಟ್ ಸುಂಕ ರದ್ದುಗೊಳಿಸಿದ ತಕ್ಷಣ ಭಾರತ ಸೇರಿದಂತೆ ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸ ಶೇ. 10 ರಷ್ಟು ಸುಂಕವನ್ನು ಕಡ್ಡಾಯಗೊಳಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಲು ಮುಂದಾದರು. ಇದಕ್ಕಾಗಿ ಅವರು ಎಂದಿಗೂ ಬಳಸದ ಕಾನೂನಾದ 1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ಅನ್ನು ಅನ್ವಯಿಸಿದರು. ಇದು ಯಾವುದೇ ದೇಶದೊಂದಿಗೆ ವ್ಯಾಪಾರ ಅಸಮತೋಲನವನ್ನು ಪರಿಹರಿಸಲು 150 ದಿನಗಳವರೆಗೆ ಶೇಕಡಾ 15 ರಷ್ಟು ಸುಂಕವನ್ನು ವಿಧಿಸುವ ಅಧಿಕಾರವನ್ನು ಅಮೆರಿಕದ ಅಧ್ಯಕ್ಷರಿಗೆ ನೀಡುತ್ತದೆ. ಇದಕ್ಕಾಗಿ ಅವರು ಕಾಂಗ್ರೆಸ್‌ನಿಂದ ಅನುಮೋದನೆ ಪಡೆಯಬೇಕಾಗಿರುವುದರಿಂದ ಶೇಕಡಾ 10 ರಷ್ಟು ಸುಂಕವು ಫೆಬ್ರವರಿ 24ರ ಬಳಿಕ ಜಾರಿಯಾಗಲಿದೆ.

ಭಾರತಕ್ಕೆ ಎಷ್ಟು ಸುಂಕ?

ಶ್ವೇತಭವನದ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆ ಒಪ್ಪಿಕೊಂಡಂತೆ ಭಾರತಕ್ಕೆ ಶೇ. 18ರಷ್ಟು ಸುಂಕ ಇರುವುದಾಗಿ ಹೇಳಿದ್ದರೂ ಭಾರತಕ್ಕೆ ಶೇಕಡಾ 10 ರಷ್ಟು ಸುಂಕ ವಿಧಿಸಲಾಗುವುದು. ಯುಎಸ್ ಜೊತೆ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ಎಲ್ಲಾ ದೇಶಗಳು ತಾತ್ಕಾಲಿಕವಾಗಿ ಶೇಕಡಾ 10 ರಷ್ಟು ಸುಂಕ ಇರಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕದ ಕುರಿತಾಗಿ ಯುಎಸ್ ಸುಪ್ರೀಂ ಕೋರ್ಟ್, ಟ್ರಂಪ್ ಆಡಳಿತವು ಐದು ದಶಕಗಳಷ್ಟು ಹಳೆಯದಾದ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ಅಡಿಯಲ್ಲಿ ಶಾಂತಿಕಾಲದಲ್ಲಿ ಸುಂಕಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಹೀಗಾಗಿ ಭಾರತದ ಮೇಲೆ ವಿಧಿಸಲಾದ ಶೇಕಡಾ 18ರಷ್ಟು ಸುಂಕವನ್ನು ಅಮೆರಿಕ ತೆಗೆದು ಹಾಕಲೇಬೇಕಿದೆ. ಭಾರತಕ್ಕೆ ಈಗ ವಿಧಿಸಲಾಗುವ ಸುಂಕವು ಶೇ. 3.5 ರಷ್ಟಿರಬೇಕು ಜೊತೆಗೆ 1974 ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122 ರ ಅಡಿಯಲ್ಲಿ ವಿಧಿಸಲಾದ ಸುಂಕ ಶೇಕಡಾ 10 ರಷ್ಟಿರಬೇಕು. ಹೀಗಾಗಿ ಇವೆರಡೂ ಸೇರಿ ಒಟ್ಟು ಸುಂಕ ಶೇ. 13.5 ಆಗುತ್ತದೆ. ಆದರೆ ಈ ಬಗ್ಗೆ ಶ್ವೇತಭವನ ಇನ್ನು ಸ್ಪಷ್ಟನೆಯನ್ನು ನೀಡಬೇಕಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾ ಹಿರಿಯ ನಾಯಕ ಸೇರಿ 10 ಮಂದಿಯ ಹತ್ಯೆ

ಸುಂಕಗಳ ಬಗ್ಗೆ ಸ್ಪಷ್ಟತೆ ಪಡೆಯಲು ಭಾರತೀಯ ಸರ್ಕಾರದ ನಿಯೋಗವು ಮುಂದಿನ ವಾರ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಲಿದ್ದು, ಆ ಬಳಿಕ ಎಲ್ಲವೂ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರವು ಯುಎಸ್ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಶೀಲಿಸುತ್ತದೆ/ ಬಳಿಕ ವಾಣಿಜ್ಯ ಸಚಿವಾಲಯ ಅಥವಾ ವಿದೇಶಾಂಗ ಸಚಿವಾಲಯ ಅಧಿಕೃತವಾಗಿ ಪ್ರತಿಕ್ರಿಯಿಸಲಿದೆ ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author