ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮ್ಯೂಚುವಲ್ ಫಂಡ್‌ನಲ್ಲಿ ಕೋಟಿ ರೂ. ಗಳಿಸೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಮ್ಯೂಚುವಲ್ ಫಂಡ್‌ನಲ್ಲಿ ಕಡಿಮೆ ವಯಸ್ಸಿನಲ್ಲಿ ಹೆಚ್ಚು ಹೂಡಿಕೆ ಮಾಡಿದರೆ ಅತೀ ಬೇಗನೆ ಕೋಟ್ಯಧಿಪತಿ ಆಗಬಹುದು. ವಯಸ್ಸು ಹೆಚ್ಚಾದಂತೆ ರಿಸ್ಕ್ ಕೂಡ ಹೆಚ್ಚಾಗಿರುತ್ತದೆ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಕನಿಷ್ಠ ಮೊತ್ತ ಹೂಡಿಕೆ ಮಾಡಿ ಕೋಟ್ಯಧಿಪತಿ ಆಗೋದು ಹೇಗೆ ಎನ್ನುವ ಕುರಿತು ʼವಿಶ್ವವಾಣಿ ಮನಿʼಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ವಿತ್ತಾದ್ವೈತ ಸಂಸ್ಥೆಯ ಸ್ಥಾಪಕಿ ಶ್ರೀಕಲಾ ಭಾಷ್ಯಂ.

ಶ್ರೀಕಲಾ ಭಾಷ್ಯಂ

ಬೆಂಗಳೂರು, ಡಿ. 14: ತಿಂಗಳಿಗೆ ಕನಿಷ್ಠ ಮೊತ್ತ ಹೂಡಿಕೆ (Investment) ಮಾಡಿ ಬಹುಬೇಗನೆ ಕೋಟ್ಯಧಿಪತಿಯಾಗಲು (Billionaire) ಸಾಧ್ಯವಿರುವುದು ಮ್ಯೂಚುವಲ್ ಫಂಡ್ (Mutual fund)ನಲ್ಲಿ ಮಾತ್ರ. ಇದಕ್ಕಾಗಿ ಹೂಡಿಕೆಯಲ್ಲಿ ಶಿಸ್ತು ಮತ್ತು ಗುರಿಯನ್ನು ಇಟ್ಟುಕೊಂಡಿರಲೇಬೇಕು ಎನ್ನುತ್ತಾರೆ ವಿತ್ತಾದ್ವೈತ ಸಂಸ್ಥೆಯ ಸ್ಥಾಪಕಿ ಶ್ರೀಕಲಾ ಭಾಷ್ಯಂ (Srikala bhashyam). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ 25 ವರ್ಷಕ್ಕೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಆತನಿಗೆ 50 ವರ್ಷವಾಗುವಾಗ 1 ಕೋಟಿ ರೂ. ಪಡೆಯಬಹುದು ಎನ್ನುತ್ತಾರೆ.

ಕೆಲಸಕ್ಕೆ ಸೇರಿದ ತಕ್ಷಣದಿಂದಲೇ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಹೂಡಿಕೆ ಮಾಡಿದರೆ ಶೇ. 12ರಷ್ಟು ವರ್ಷಕ್ಕೆ ರಿಟರ್ನ್ಸ್ ಪಡೆಯಬಹುದು. ಇದರ ಲೆಕ್ಕಾಚಾರದಲ್ಲಿ 25 ವರ್ಷದಲ್ಲಿ ಒಂದು ಕೋಟಿ ರೂ. ಗಳಿಸಬಹುದಾಗಿದೆ ಎಂದರು.

ವಿಡಿಯೊ ಇಲ್ಲಿದೆ:



ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡುವವರು ತಿಂಗಳಿಗೆ ಕನಿಷ್ಠ ಹತ್ತು ಸಾವಿರ ರೂ. ಉಳಿತಾಯ ಮಾಡುವಂತೆ ನೋಡಬೇಕು. ಒಂದು ವೇಳೆ ತಿಂಗಳಿಗೆ 20 ಸಾವಿರ ಉಳಿತಾಯ ಮಾಡಿದರೆ 15 ವರ್ಷಕ್ಕೆ ಹಾಗೂ 40 ಸಾವಿರ ರೂ. ಮಾಡಿದರೆ ಹತ್ತೇ ವರ್ಷದಲ್ಲಿ ಕೋಟ್ಯಧಿಪತಿಯಾಗಬಹುದು ಎಂದರು.

ನಮ್ಮ ದೇಶದಲ್ಲಿ ಇನ್ನೂ ಜನರಿಗೆ ಮ್ಯೂಚುವಲ್ ಫಂಡ್ ಮೇಲೆ ಸಂಪೂರ್ಣ ವಿಶ್ವಾಸ ಬಂದಿಲ್ಲ. ಈಗಷ್ಟೇ ವಿಶ್ವಾಸ ಬೆಳೆಯುತ್ತಿದೆ. ಈಗ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 10ರಷ್ಟು ಮಂದಿ ಮಾತ್ರ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಯಾವತ್ತೂ ನಾವು ಹೂಡಿಕೆ ಮಾಡುವಾಗ ಉಳಿತಾಯ, ಖರ್ಚು ನೋಡಿ ಉಳಿದ ಮೊತ್ತದ ಹೂಡಿಕೆ ಮಾಡಲು ಯೋಚಿಸುತ್ತೇವೆ. ಆದರೆ ಇದು ತಪ್ಪು. ನಾವು ಉಳಿತಾಯ, ಹೂಡಿಕೆ ನೋಡಿ ಖರ್ಚು ಬಗ್ಗೆ ಯೋಚಿಸಬೇಕು. ಉದ್ಯೋಗದಲ್ಲಿ ಇರುವಷ್ಟು ವರ್ಷಗಳವರೆಗೆ ನಿರಂತರ ಹೂಡಿಕೆ ಮಾಡಲೇಬೇಕು ಎಂದು ಅವರು ತಿಳಿಸಿದರು.

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ವಯಸ್ಸಿನ ಮಿತಿ ಇದೆಯೇ? ಯಾರೆಲ್ಲ ಇನ್‌ವೆಸ್ಟ್‌ ಮಾಡಬಹುದು?

ಸಣ್ಣ ವಯಸ್ಸಿನಿಂದ ಹೂಡಿಕೆ ಮಾಡುವವರು ತಮ್ಮ ಸಂಬಳದ ಶೇ. 50ರಷ್ಟು ಭಾಗವನ್ನು ಹೂಡಿಕೆಯಲ್ಲಿ ಹಾಕಬೇಕು. ಹೆಚ್ಚಾಗಿ ಸಂಬಳ ಜಾಸ್ತಿಯಾದಷ್ಟು ಉಳಿತಾಯ ಕಡಿಮೆ ಮಾಡುತ್ತೇವೆ. ಇದು ತಪ್ಪು. ಸಂಬಳ ಏರಿಕೆಯಾದಷ್ಟು ಹೂಡಿಕೆಯಲ್ಲಿ ಕೂಡ ಹೆಚ್ಚಳ ಮಾಡಬೇಕು. ಹಣ ನಿರ್ವಹಣೆಯಲ್ಲಿ ಶಿಸ್ತು ಮತ್ತು ಗುರಿ ಇರಬೇಕು ಎನ್ನುತ್ತಾರೆ ಅವರು.

ಸಂಬಳದಲ್ಲಿ ಹೆಚ್ಚಳವಾದಾಗ ಅದು ನಮ್ಮದಲ್ಲ ಎನ್ನುವಂತಿರಬೇಕು. ಬೋನಸ್ ನಲ್ಲಿ ಅರ್ಧದಷ್ಟಾದರೂ ಉಳಿತಾಯಕ್ಕೆ ಹಾಕಬೇಕು. ಹಣಕಾಸು ನಿರ್ವಹಣೆಯಲ್ಲಿ ನಮ್ಮ ಅಭ್ಯಾಸಗಳಿಂದ ಯಶಸ್ಸು ದೊರೆಯುತ್ತದೆ. ಯಶಸ್ಸಿನಿಂದ ಅಭ್ಯಾಸ ಬದಲಾಗಬಾರದು ಎಂದು ಅವರು ತಿಳಿಸಿದರು.

ಚಿನ್ನ ಯಾವಾಗ ಖರೀದಿಸಬೇಕು? ಸೂಕ್ತ ಸಮಯ ಯಾವುದು? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ

ಮ್ಯೂಚುವಲ್ ಫಂಡ್ ನಲ್ಲಿ ಅಪಾಯ ಇರುತ್ತದೆ. ಆದರೆ ಇದನ್ನು ದೀರ್ಘಾವಧಿ ಇಟ್ಟಾಗ ಅಪಾಯಗಳು ಕಡಿಮೆಯಾಗುತ್ತದೆ. ರಿಟರ್ನ್ಸ್ ನಲ್ಲಿ ವ್ಯತ್ಯಯವಾಗುವುದರಿಂದ ದೀರ್ಘಾವಧಿಯ ಹೂಡಿಕೆ ಮಾಡಬೇಕು. ಇದರಲ್ಲಿ ಯಾವುದಾದರೂ ಬದಲಾವಣೆ ಮಾಡಬೇಕಾದರೆ ಹಣಕಾಸು ತಜ್ಞರ ಸಹಾಯ ಪಡೆಯುವುದು ಉತ್ತಮ ಎಂದರು.

ಇತ್ತೀಚೆಗೆ ಡಿಜಿಟಲ್ ಗೋಲ್ಡ್ ಮೇಲಿನ ಹೂಡಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಗೋಲ್ಡ್ ದರ ವ್ಯತ್ಯಯದ ಮೇಲೆ ಇದರಲ್ಲಿ ರಿಟರ್ನ್ಸ್ ಪಡೆಯಬಹುದು. ಆದರೆ ಇಟಿಎಫ್, ಗೋಲ್ಡ್ & ಸಿಲ್ವರ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇರುವವರು ಮಲ್ಟಿ ಎಸೆಟ್‌ನಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸೆಬಿ ಮಾನ್ಯತೆ ಕೂಡ ಇದೆ. ಮ್ಯೂಚುವಲ್ ಫಂಡ್‌ನಲ್ಲಿ ನಮ್ಮ ಶಕ್ತಿಗೆ ಅನುಗುಣವಾಗಿ ಹೂಡಿಕೆ ಮಾಡಿ ಹಣವನ್ನು ಸುರಕ್ಷಿತವಾಗಿ ಇರಿಸಬಹುದು. ಇದರಲ್ಲಿ ಹೂಡಿಕೆ ಬೇಸರ ಮೂಡಿಸಬಹುದು. ಆದರೆ ಹೆಚ್ಚು ಹಣ ಸಂಗ್ರಹಿಸಲು ದಾರಿ ಮಾಡಿ ಕೊಡುತ್ತದೆ.

ವಿದ್ಯಾ ಇರ್ವತ್ತೂರು

View all posts by this author