ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ವಯಸ್ಸಿನ ಮಿತಿ ಇದೆಯೇ? ಯಾರೆಲ್ಲ ಇನ್‌ವೆಸ್ಟ್ ಮಾಡಬಹುದು? ನಿಮ್ಮೆಲ್ಲ ಅನುಮಾನಗಳಿಗೆ ಇಲ್ಲಿದೆ ಉತ್ತರ
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ವಯಸ್ಸಿನ ಮಿತಿ ಇಲ್ಲ. ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಇದರಲ್ಲೂ ಹೂಡಿಕೆ ಮಾಡಲು ನಿವೃತ್ತರಿಗೂ ಅವಕಾಶ ಇದೆ. ಮುಖ್ಯವಾಗಿ ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೋಡಿ ಹೂಡಿಕೆ ಮಾಡುವುದು ಸೂಕ್ತ ಎನ್ನುತ್ತಾರೆ ಹಣಕಾಸು ತಜ್ಞೆ, ಉದ್ಯಮಿ, ಆರ್ಥಿಕ ಸಲಹೆಗಾರ್ತಿ ಶ್ರೀಕಲಾ ಭಾಷಮ್.
ಶ್ರೀಕಲಾ ಭಾಷಮ್ -
ಬೆಂಗಳೂರು, ಡಿ. 5: ದಿನೇ ದಿನೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ನಮ್ಮ ಆರ್ಥಿಕ ಸಮತೋಲನ ತಪ್ಪಬಾರದು. ಹಣದುಬ್ಬರದ (Inflationary) ಪರಿಸ್ಥಿತಿಯನ್ನು ಎದುರಿಸಲು ಪ್ರತಿಯೊಬ್ಬರೂ ಕೂಡ ಮ್ಯೂಚುವಲ್ ಫಂಡ್ (Mutual fund)ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಇದರಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹೂಡಿಕೆ ಮಾಡಬಹುದು. ಇದು ತುಂಬಾ ಸುಲಭವಾದ ಮತ್ತು ಅತ್ಯಂತ ಸುಭದ್ರ ಯೋಜನೆ ಎಂದು ವಿತ್ತದ್ವೈತ ಸಂಸ್ಥೆಯ ಮಾಲಕಿ ಆರ್ಥಿಕ ಸಲಹೆಗಾರ್ತಿ ಶ್ರೀಕಲಾ ಭಾಷಮ್ (Srikala Bhasam) ಹೇಳಿದರು.
'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಮ್ಯೂಚುವಲ್ ಫಂಡ್‌ನಲ್ಲಿ ಯಾರು ಬೇಕಾದರೂ ಹೂಡಿಕೆ ಮಾಡಬಹುದು. ಇದಕ್ಕೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಫೋಟೊ, ವಿಳಾಸ ದಾಖಲೆ ಮತ್ತು ಹಣ ಇದ್ದರೆ ಸಾಕು. ಮಗುವಿನ ಹೆಸರಿನಲ್ಲಿ ಪೋಷಕರು, ನಿವೃತ್ತರೂ ಕೂಡ ಇದರಲ್ಲಿ ಹೂಡಿಕೆ ಮಾಡುವ ಅವಕಾಶವಿದೆ ಎಂದು ತಿಳಿಸಿದರು.
ಮ್ಯೂಚುವಲ್ ಫಂಡ್ ಬಗ್ಗೆ ಇಲ್ಲಿದೆ ಮಾಹಿತಿ:
ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಿಕೆಗೆ ಯಾವುದೇ ವಯೋಮಿತಿ ಇಲ್ಲ. ಆದರೆ ಇದರಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡುವವರಿಗೆ ಲಾಭ ಹೆಚ್ಚಾದರೂ ನಿವೃತ್ತರಿಗೂ ಇದರಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ. ಸಣ್ಣ ವಯಸ್ಸಿನವರು ಹೆಚ್ಚು ರಿಸ್ಕ್ ತಗೊಂಡು ಹೂಡಿಕೆ ಮಾಡಿದರೆ, ನಿವೃತ್ತರು ಹೆಚ್ಚು ರಿಸ್ಕ್ ಇಲ್ಲದ ಮ್ಯೂಚವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೆಚ್ಚಿನ ರಿಸ್ಕ್ ಇರುವ ಸ್ಥಳಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚು ಲಾಭದಾಯಕವಾಗಿರುತ್ತದೆ ಮತ್ತು ಮಧ್ಯೆ ಸ್ವಲ್ಪ ವ್ಯತ್ಯಯವಾದರೂ ದೀರ್ಘಾವಧಿ ಕಾಯುವುದರಿಂದ ನಷ್ಟವೇನು ಉಂಟಾಗುವುದಿಲ್ಲ ಎಂದು ತಿಳಿಸಿದರು.
ನಿವೃತ್ತರು ಹೆಚ್ಚು ಸುರಕ್ಷಿತ ಎಂದೆನಿಸುವ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ಮೇಲ್ಪಟ್ಟವರಿಗಾಗಿಯೇ ಹೆಚ್ಚು ಸುರಕ್ಷಿತವೆನಿಸಿರುವ ಮ್ಯೂಚವಲ್ ಫಂಡ್‌ಗಳಿವೆ. ಇದಕ್ಕಾಗಿ ತಜ್ಞರ ಸಲಹೆ ಪಡೆದರೆ ಅವರು ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಹಣದುಬ್ಬರ ಪ್ರಮಾಣ ದಿನೇ ದಿನೆ ಬದಲಾಗುತ್ತದೆ. ಹೀಗಾಗಿ ಮ್ಯೂಚವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರು ವಾರ್ಷಿಕವಾಗಿ ಶೇ. 12ರಿಂದ 14 ರಷ್ಟು ರಿಟರ್ನ್ಸ್ ಪಡೆದರೆ ಅದು ಸುರಕ್ಷಿತವಾಗಿರುತ್ತದೆ. ಹಣದುಬ್ಬರವನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿ ಇರಬೇಕಾದರೆ ಅದಕ್ಕೆ ನಮಗೆ ಸಹಾಯ ಮಾಡುವ ಒಂದೇ ಒಂದು ಪ್ರಾಡಕ್ಟ್ ಎಂದರೆ ಅದು ಮ್ಯೂಚವಲ್ ಫಂಡ್ ಎಂದು ಅವರು ತಿಳಿಸಿದರು.
ನಿವೃತ್ತರು ಶೇ. 8-10ರಷ್ಟು ರಿಟರ್ನ್ಸ್ ಕೊಡುವ ಮಲ್ಟಿ ಎಸೆಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ನಮ್ಮಲ್ಲಿ ಹಣ ಹೆಚ್ಚು ಇದೆ ಎಂದು ಒಂದೇ ಕಡೆ ಹೂಡಿಕೆ ಮಾಡುವುದು ಸುರಕ್ಷಿತವಲ್ಲ. ಯಾಕೆಂದರೆ ಹಣ ಜಾಸ್ತಿ ಇದ್ದಷ್ಟು ಇಲ್ಲಿ ರಿಸ್ಕ್ ಕೂಡ ಜಾಸ್ತಿಯಾಗಿರುತ್ತದೆ ಎಂದು ಶ್ರೀಕಲಾ ತಿಳಿಸಿದರು.
ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ? ಇಲ್ಲಿದೆ ಪಿನ್ ಟು ಪಿನ್ ಮಾಹಿತಿ
ಇತ್ತೀಚೆಗೆ ಮಹಿಳೆಯರು ಹೆಚ್ಚಾಗಿ ಮ್ಯೂಚವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಶಿಸ್ತು ಬದ್ದವಾಗಿ ಹೂಡಿಕೆ ಮಾಡುತ್ತಾರೆ. ಅವರಿಗಾಗಿ ವಿಶೇಷವಾದ ಯೋಜನೆಗಳು ಏನಿಲ್ಲ. ಆದರೆ ಅವರು ದೀರ್ಘಾವಧಿಯವರೆಗೆ ಕಾಯಲು ಸಿದ್ಧರಿರುತ್ತಾರೆ ಎಂದರು.
ಸಾಮಾನ್ಯವಾಗಿ ಮ್ಯೂಚವಲ್ ಫಂಡ್‌ಗಳಲ್ಲಿ ಇಕ್ವಿಟಿ, ಸ್ಟಾಕ್ ಮಾರ್ಕೆಟ್, ಡೆಟ್ ಫಂಡ್ಸ್, ಹೈಬ್ರಿಟ್ ಫಂಡ್ಸ್, ಮಲ್ಟಿ ಎಸೆಟ್ ಹೀಗೆ ಹಲವು ರೀತಿಯ ಹೂಡಿಕೆಗಳಿವೆ. ಇದರಲ್ಲಿ ನಮಗೆ ಸೂಕ್ತವಾದುದನ್ನು ಪಡೆಯಬಹುದು. ದೀರ್ಘಾವಧಿ ಹೂಡಿಕೆ ಮಾಡುವುದರಿಂದ ಖಂಡಿತ ಇದರಲ್ಲಿ ಲಾಭ ಹೆಚ್ಚು. ನಮ್ಮ ಹಣದ ಅವಶ್ಯಕತೆಗೆ ಅನುಗುಣವಾಗಿ ಎಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿದು ಹೂಡಿಕೆ ಮಾಡುವುದು ಉತ್ತಮ ಎಂದು ಅವರು ತಿಳಿಸಿದರು.