ನಿಮ್ಮ ಚಿಕ್ಕ ನಡೆಯಿಂದ ಬದಲಾಗಲಿದೆ ದೇಶದ ಚಿತ್ರಣ; ಎಸಿಯ ಸಮರ್ಪಕ ಬಳಕೆಯಿಂದ ವಿದ್ಯುತ್ ಅಭಾವಕ್ಕೆ ಬ್ರೇಕ್; 2.5 ಲಕ್ಷ ಕೋಟಿ ರುಪಾಯಿ ಉಳಿತಾಯ ಸಾಧ್ಯ!
Efficient AC: ಮುಂದಿನ ಒಂದು ದಶಕದಲ್ಲಿ ಎಸಿಗಳ ಇಂಧನ ದಕ್ಷತೆಯನ್ನು ದುಪ್ಪಟ್ಟುಗೊಳಿಸಿದರೆ ಭಾರತವು ವಿದ್ಯುತ್ ಅಭಾವವನ್ನು ತಪ್ಪಿಸಿ ಸುಮಾರು 2.5 ಲಕ್ಷ ಕೋಟಿ ರುಪಾಯಿ ಉಳಿತಾಯ ಮಾಡಬಹುದು ಎಂದು ಯುಸಿ ಬರ್ಕ್ಲಿ ಅಧ್ಯಯನ ತಿಳಿಸಿದೆ. ದಕ್ಷ ಎಸಿಗಳ ಬಳಕೆ ಹೆಚ್ಚಾದರೆ 2035ರ ವೇಳೆಗೆ ವಿದ್ಯುತ್ ಬೇಡಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಮೇ 26: ಮುಂದಿನ ಒಂದು ದಶಕದಲ್ಲಿ ಹವಾನಿಯಂತ್ರಣಗಳ (AC) ಇಂಧನ ದಕ್ಷತೆಯನ್ನು ದುಪ್ಪಟ್ಟುಗೊಳಿಸುವ ಮೂಲಕ ಭಾರತವು ವಿದ್ಯುತ್ ಅಭಾವವನ್ನು ತಪ್ಪಿಸಬಹುದು ಮತ್ತು ಗ್ರಾಹಕರಿಗೆ ಸುಮಾರು 2.5 ಲಕ್ಷ ಕೋಟಿ ರುಪಾಯಿ (25 ಬಿಲಿಯನ್ ಡಾಲರ್) ಉಳಿಸಬಹುದು ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (University of California) ಬರ್ಕ್ಲಿ (Berkeley) ನಡೆಸಿದ ಹೊಸ ಅಧ್ಯಯನವು ಬಹಿರಂಗಪಡಿಸಿದೆ.
ಯುಸಿ ಬರ್ಕ್ಲಿಯ ‘ಇಂಡಿಯಾ ಎನರ್ಜಿ ಆ್ಯಂಡ್ ಕ್ಲೈಮೇಟ್ ಸೆಂಟರ್’ ಪ್ರಕಟಿಸಿರುವ ಈ ವರದಿಯ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 1ರಿಂದ 1.5 ಕೋಟಿ ಹೊಸ ಎಸಿಗಳು ಮಾರಾಟವಾಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಇನ್ನು 13ರಿಂದ 15 ಕೋಟಿ ಎಸಿಗಳು ಮಾರುಕಟ್ಟೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಬೇಸಗೆಯ ಗರಿಷ್ಠ ವಿದ್ಯುತ್ ಬೇಡಿಕೆಗೆ ಎಸಿಗಳೇ ಪ್ರಮುಖ ಕಾರಣವಾಗುತ್ತಿದ್ದು, ಪ್ರಸ್ತುತ ಒಟ್ಟು ಬೇಡಿಕೆಯ ಶೇಕಡಾ 25ರಷ್ಟು (60-70 ಗಿಗಾವ್ಯಾಟ್) ಪಾಲನ್ನು ಹೊಂದಿವೆ. ಒಂದು ಎಸಿ ಬಳಕೆಯು ಒಂದು ಎಲ್‌ಇಡಿ ಬಲ್ಬ್‌ಗಿಂತ 100ರಿಂದ 150 ಪಟ್ಟು ಹೆಚ್ಚು ವಿದ್ಯುತ್ ಬಳಸುತ್ತದೆ ಎಂದು ವರದಿ ಎಚ್ಚರಿಸಿದೆ.
ಸೂಕ್ತ ನೀತಿ ನಿಯಮಗಳನ್ನು ಜಾರಿಗೆ ತರದಿದ್ದರೆ, ಎಸಿಗಳ ವಿದ್ಯುತ್ ಬೇಡಿಕೆಯು 2030ರ ವೇಳೆಗೆ 120 ಗಿಗಾವ್ಯಾಟ್‌ಗೆ ಹಾಗೂ 2035ರ ವೇಳೆಗೆ 180 ಗಿಗಾವ್ಯಾಟ್‌ಗೆ ತಲುಪಬಹುದು. ಇದು ದೇಶದ ಒಟ್ಟು ಗರಿಷ್ಠ ವಿದ್ಯುತ್ ಬೇಡಿಕೆಯ ಶೇಕಡ 30ಕ್ಕಿಂತ ಹೆಚ್ಚಾಗಿರಲಿದೆ.
ಭಾರತದಾದ್ಯಂತ ಅಡಗಿರುವ ತೈಲ ಮತ್ತು ಅನಿಲ ನಿಕ್ಷೇಪಗಳ ಪತ್ತೆಗೆ ಕೇಂದ್ರದಿಂದ ಹೊಸ ಹುಡುಕಾಟ ಆರಂಭ
ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಈಗಾಗಲೇ 2028ರ ವೇಳೆಗೆ ಎಸಿ ದಕ್ಷತೆಯ ಮಾನದಂಡಗಳನ್ನು ಶೇಕಡಾ 25ರಷ್ಟು (1 ಸ್ಟಾರ್) ಹೆಚ್ಚಿಸಲು ಸಿದ್ಧತೆ ನಡೆಸಿದೆ. ಆದರೆ ಇಂದಿನ ಅತ್ಯಾಧುನಿಕ 5-ಸ್ಟಾರ್ ಎಸಿಗಳನ್ನೇ 2033ರ ವೇಳೆಗೆ ಕನಿಷ್ಠ ಮಾನದಂಡವನ್ನಾಗಿ ಮಾಡುವ ದೀರ್ಘಾವಧಿ ರೋಡ್‌ಮ್ಯಾಪ್ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದರಿಂದ 2035ರ ವೇಳೆಗೆ ಗರಿಷ್ಠ ವಿದ್ಯುತ್ ಬೇಡಿಕೆಯನ್ನು 47 ಗಿಗಾವ್ಯಾಟ್‌ನಷ್ಟು ಕಡಿಮೆ ಮಾಡಬಹುದು. ಇದು ಸುಮಾರು 100 ದೊಡ್ಡ ವಿದ್ಯುತ್ ಸ್ಥಾವರಗಳ ಸಾಮರ್ಥ್ಯಕ್ಕೆ ಸಮನಾಗಿದ್ದು, ವಿದ್ಯುತ್ ಮೂಲಸೌಕರ್ಯ ಹೂಡಿಕೆಯಲ್ಲಿ ಬರೋಬ್ಬರಿ 8 ಲಕ್ಷ ಕೋಟಿ ರುಪಾಯಿ ಉಳಿಸಲಿದೆ.
ದಕ್ಷತೆಯುಳ್ಳ ಎಸಿಗಳ ಆರಂಭಿಕ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ, ಕಡಿಮೆ ವಿದ್ಯುತ್ ಬಿಲ್ ಮೂಲಕ ಕೇವಲ 2-3 ವರ್ಷಗಳಲ್ಲಿ ಆ ಹಣ ವಾಪಸ್ ಸಿಗಲಿದ್ದು, ಗ್ರಾಹಕರಿಗೆ ಭಾರಿ ಉಳಿತಾಯವಾಗಲಿದೆ. ಪ್ರಸ್ತುತ ಭಾರತದ ನಗರ ಪ್ರದೇಶಗಳಲ್ಲಿ ಶೇಕಡ 10ರಷ್ಟು ಮನೆಗಳಲ್ಲಿ ಎಸಿ ಬಳಕೆಯಲ್ಲಿದ್ದು, ದೆಹಲಿ, ಮುಂಬೈ ಹಾಗೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಇದರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.