ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಗೆ ವೇಗ: ಜಿಡಿಪಿ ಶೇಕಡಾ 7.8ಕ್ಕೆ ಏರಿಕೆ

India’s GDP: ಜಾಗತಿಕ ವ್ಯಾಪಾರ ಅನಿಶ್ಚಿತತೆ, ಹೆಚ್ಚಿನ ಇಂಧನ ಬೆಲೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತದ ಜಿಡಿಪಿ 2026–27ರ ಮೊದಲ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ. RBI ಅಂದಾಜಿಸಿದ್ದ ಶೇ. 7ಕ್ಕಿಂತ ಇದು ಹೆಚ್ಚಾಗಿದೆ. ದೇಶೀಯ ಬೇಡಿಕೆ, ಉತ್ಪಾದನೆ, ನಿರ್ಮಾಣ, ರಫ್ತು ಮತ್ತು ಸೇವಾ ವಲಯಗಳು ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿವೆ. ಪ್ರಧಾನಿ ಮೋದಿ ಇದನ್ನು ‘ಅದ್ಭುತ ಸಾಧನೆ’ ಎಂದು ಶ್ಲಾಘಿಸಿದ್ದಾರೆ.

ಅಂದಾಜು ಮೀರಿ ಭಾರತದ ಜಿಡಿಪಿ ಬೆಳವಣಿಗೆ

ಜಿಡಿಪಿ -

Profile
Sushmitha Jain Aug 31, 2026 10:15 PM

ನವದೆಹಲಿ, ಆ. 31: ಜಾಗತಿಕ ವ್ಯಾಪಾರದಲ್ಲಿನ ಅನಿಶ್ಚಿತತೆ, ಏರಿಕೆಯಾಗಿರುವ ಇಂಧನ ಬೆಲೆಗಳು ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮ ಪ್ರದರ್ಶನ ನೀಡಿದೆ. 2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್–ಜೂನ್) ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಬೆಳವಣಿಗೆ ಶೇ. 7.8ಕ್ಕೆ ಏರಿಕೆಯಾಗಿದೆ.
ಸೋಮವಾರ (ಆಗಸ್ಟ್‌ 31) ಬಿಡುಗಡೆಯಾದ ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈ ಬೆಳವಣಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜಿಸಿದ್ದ ಶೇ. 7ಕ್ಕಿಂತ ಹೆಚ್ಚಾಗಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ. 6.9ರಷ್ಟಿದ್ದರೆ, ಹಿಂದಿನ ತ್ರೈಮಾಸಿಕದಲ್ಲಿ ಶೇ.8.6ರಷ್ಟಿತ್ತು.

ಜಾಗತಿಕ ಮಟ್ಟದಲ್ಲಿ ವ್ಯಾಪಾರ ಅನಿಶ್ಚಿತತೆ, ಹೆಚ್ಚಿನ ಇಂಧನ ಬೆಲೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಹಲವು ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಶಕ್ತಿಯುತವಾಗಿ ಬೆಳೆಯುತ್ತಿರುವುದು ಗಮನಾರ್ಹ. ದೇಶೀಯ ಬೇಡಿಕೆ ಆರ್ಥಿಕ ಬೆಳವಣಿಗೆಗೆ ಪ್ರಮುಖ ಬೆಂಬಲ ನೀಡಿದ್ದು, ಸರ್ಕಾರದ ಬಂಡವಾಳ ವೆಚ್ಚ, ಉತ್ಪಾದನಾ ವಲಯ, ನಿರ್ಮಾಣ ಮತ್ತು ರಫ್ತು ಕ್ಷೇತ್ರಗಳು ಕೂಡ GDP ಬೆಳವಣಿಗೆಗೆ ಕೊಡುಗೆ ನೀಡಿವೆ.

ನರೇಂದ್ರ ಮೋದಿ ಅವರ ಎಕ್ಸ್‌ ಪೋಸ್ಟ್‌:



ಹಣಕಾಸು, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ ಹಾಗೂ ವೃತ್ತಿಪರ ಸೇವೆಗಳಂತಹ ವಲಯಗಳೂ ಮೊದಲ ತ್ರೈಮಾಸಿಕದ ಬೆಳವಣಿಗೆಗೆ ಉತ್ತೇಜನ ನೀಡಿವೆ ಎಂದು ಅಂಕಿಅಂಶಗಳು ತೋರಿಸಿವೆ.

ವೆನೆಜುವೆಲಾದೊಂದಿಗೆ ಅತೀ ದೊಡ್ಡ ತೈಲ ಒಪ್ಪಂದ: ಡೊನಾಲ್ಡ್ ಟ್ರಂಪ್ ಘೋಷಣೆ

ಭಾರತ ಮತ್ತೊಮ್ಮೆ ಅರಳಿದೆ: ಮೋದಿ

GDP ಅಂಕಿ-ಅಂಶಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, 2026–27ರ ಮೊದಲ ತ್ರೈಮಾಸಿಕದಲ್ಲಿ ದಾಖಲಾಗಿರುವ ಶೇ. 7.8ರ GDP ಬೆಳವಣಿಗೆಯನ್ನು ‘ಅದ್ಭುತ ಸಾಧನೆ’ ಎಂದು ಬಣ್ಣಿಸಿದ್ದಾರೆ. “ನಿರಾಶಾವಾದಿಗಳ ನಿರೀಕ್ಷೆಗಳು ವಿಫಲವಾದವು. ಭಾರತ ಮತ್ತೊಮ್ಮೆ ಅರಳಿದೆ” ಎಂದು ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ GDP ಬೆಳವಣಿಗೆಗೆ ಭಾರತೀಯರ ಪರಿಶ್ರಮವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ. NDA ಸರ್ಕಾರ ಕೈಗೊಂಡಿರುವ ಸುಧಾರಣೆಗಳು ಹಾಗೂ ಆರ್ಥಿಕತೆಯ ಚುರುಕಾದ ನಿರ್ವಹಣೆ ಉತ್ತಮ ಫಲಿತಾಂಶ ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಗೆ ವ್ಯತಿರಿಕ್ತ ಚಿತ್ರ

ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದಲ್ಲಿ “ದೊಡ್ಡ ಆರ್ಥಿಕ ಸುನಾಮಿ” ಬರಲಿದೆ ಎಂದು ಜೂನ್‌ನಲ್ಲಿ ಹೇಳಿಕೆ ನೀಡಿದ್ದರು. ಬೆಲೆ ಏರಿಕೆಯಾಗುತ್ತಿದ್ದು, ಭಾರತ ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಅವರು ಎಚ್ಚರಿಸಿದ್ದರು. ಆದರೆ ಇದೀಗ ಬಿಡುಗಡೆಯಾಗಿರುವ GDP ಅಂಕಿಅಂಶಗಳು ದೇಶೀಯ ಆರ್ಥಿಕ ಚಟುವಟಿಕೆಗಳ ಬಲವನ್ನು ಮತ್ತೊಮ್ಮೆ ತೋರಿಸಿವೆ.

ಸ್ಥಿರ ಬೆಲೆಗಳಲ್ಲಿ (Real GDP) ಮೊದಲ ತ್ರೈಮಾಸಿಕದ GDP ₹81.36 ಲಕ್ಷ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದ್ದು, ಕಳೆದ ವರ್ಷದ ಇದೇ ಅವಧಿಯ ₹75.46 ಲಕ್ಷ ಕೋಟಿ ರುಪಾಯಿಗೆ ಹೋಲಿಸಿದರೆ ಬೆಳವಣಿಗೆ ದರ ಶೇ. 7.8ರಷ್ಟಾಗಿದೆ. ಇದೇ ವೇಳೆ Nominal GDP ಶೇ.10.3ರಷ್ಟು ಬೆಳವಣಿಗೆ ದಾಖಲಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ಬೆಳವಣಿಗೆ ಶೇ. 8.1ರಷ್ಟಿತ್ತು.