ದೆಹಲಿ, ಜೂ. 2: ಇರಾನ್‌ನಲ್ಲಿ ನಡೆಯುತ್ತಿರುವ ಯುದ್ಧವು(Iran Conflict) ಜಾಗತಿಕ ಆರ್ಥಿಕತೆಯನ್ನು ಮತ್ತೆ ಅಸ್ಥಿರತೆಯತ್ತ ತಳ್ಳಿದೆ (Economic Slowdown). ವಿಶ್ವದ ತೈಲ ಸರಬರಾಜಿನ ಶೇ. 20ಕ್ಕೂ ಹೆಚ್ಚು ಸಾಗಾಟ ನಡೆಯುವ ಹೋರ್ಮುಜ್ ಜಲಸಂಧಿಯಲ್ಲಿ (Strait of Hormuz) ಉಂಟಾಗಿರುವ ಅಡಚಣೆಗಳಿಂದ ಕಚ್ಚಾ ತೈಲದ ಬೆಲೆಗಳು ಭಾರೀ ಏರಿಕೆ (Oil Prices Hike) ಕಂಡಿವೆ. ಯುದ್ಧ ಆರಂಭವಾಗುವ ಮೊದಲು ಇದ್ದ ಮಟ್ಟಕ್ಕಿಂತ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು ಶೇ. 30ರಷ್ಟು ಹೆಚ್ಚಳಗೊಂಡಿದ್ದು, ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ಗೆ 110 ಡಾಲರ್‌ಗಿಂತಲೂ ಹೆಚ್ಚು ಏರಿಕೆ ಕಂಡಿರುವುದು ಮತ್ತಷ್ಟು ಆರ್ಥಿಕ ಅಸ್ಥಿರತೆ ಕಾಡುವ ಭೀತಿಯನ್ನು ಹುಟ್ಟುಹಾಕಿದೆ.
ಭಾರತ ತನ್ನ ಇಂಧನ ಅಗತ್ಯದ ಸುಮಾರು ಶೇ. 85ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುವುದರಿಂದ ಈ ಬೆಳವಣಿಗೆ ದೇಶದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಹಣದುಬ್ಬರದ ಒತ್ತಡ ಹೆಚ್ಚಾಗಿದ್ದು, ಆರ್ಥಿಕ ಬೆಳವಣಿಗೆಯನ್ನು ಕಾಪಾಡುವುದೋ ಅಥವಾ ಹಣದುಬ್ಬರವನ್ನು ನಿಯಂತ್ರಿಸುವುದೋ ಎಂಬ ಸಂಕಷ್ಟದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಲುಕಿದೆ.
ಈ ನಡುವೆ, ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಭಾರತವು 2013ರ ಕರೆನ್ಸಿ ಬಿಕ್ಕಟ್ಟಿನ ಸಂದರ್ಭಕ್ಕಿಂತ ಈಗ ಹೆಚ್ಚು ಬಲಿಷ್ಠ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ. ಆರ್ಥಿಕ ಮೂಲಭೂತ ಅಂಶಗಳಿಗೆ ಅನುಗುಣವಾಗಿ ರುಪಾಯಿ ಮೌಲ್ಯದಲ್ಲಿ ಏರಿಳಿತವಾಗಲು ಅವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಎನ್‌ಡಿಟಿವಿ ಜತೆ ಅವರು ಮಾತನಾಡಿದರು.
ರುಪಾಯಿ ಈ ವರ್ಷ ಡಾಲರ್ ಎದುರು ಸುಮಾರು ಶೇ. 7ರಷ್ಟು ಕುಸಿತ ಕಂಡಿದ್ದು, ಕೆಲ ಸಮಯ 1 ಡಾಲರ್‌ಗೆ 97 ರೂಪಾಯಿವರೆಗೂ ತಲುಪಿತ್ತು. ಇರಾನ್ ಸಂಘರ್ಷಕ್ಕೂ ಮುನ್ನವೇ ವಿದೇಶಿ ಬಂಡವಾಳ ಹಿಂಪಡೆಯುವಿಕೆಯಿಂದ ರುಪಾಯಿ ಒತ್ತಡದಲ್ಲಿತ್ತು ಎಂದು ಸುಬ್ಬರಾವ್ ಹೇಳಿದ್ದಾರೆ.
ಶೀಘ್ರದಲ್ಲೇ ಯುಪಿಐ ಮೂಲಕ ಪಿಎಫ್ ಹಣ ಪಡೆಯಲು ಅವಕಾಶ; ಬಳಕೆಗೆ ಇಲ್ಲಿದೆ ಗೈಡ್‌ಲೈನ್
ʼʼತೈಲ ಬೆಲೆ ಏರಿಕೆಯಿಂದ ಭಾರತದ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ. 1ರಿಂದ ಶೇ. 2.5ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಬಿಐ ಮಾರುಕಟ್ಟೆಯ ವಿರುದ್ಧ ಹೋರಾಡಬಾರದು. ರುಪಾಯಿ ಮೌಲ್ಯವು ಆರ್ಥಿಕ ವಾಸ್ತವಿಕತೆಗಳಿಗೆ ಅನುಗುಣವಾಗಿ ಕುಸಿಯಲು ಅವಕಾಶ ನೀಡುವುದು ಉತ್ತಮʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಆರ್ಥಿಕ ಬೆಳವಣಿಗೆ
ʼʼ2013ರಲ್ಲಿ ಭಾರತವನ್ನು ʼಫ್ರಾಜೈಲ್ ಫೈವ್ʼ ರಾಷ್ಟ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶದಲ್ಲಿ ಆರ್ಥಿಕ ಬೆಳವಣಿಗೆ ಉತ್ತಮವಾಗಿದ್ದು, ಹಣದುಬ್ಬರ ನಿಯಂತ್ರಣದಲ್ಲಿದೆ. ವಿದೇಶಿ ವಿನಿಮಯ ಸಂಗ್ರಹವೂ ಸುಮಾರು 700 ಬಿಲಿಯನ್ ಡಾಲರ್ ಮಟ್ಟದಲ್ಲಿದ್ದು, ಇದು ಭಾರತದ ಆರ್ಥಿಕ ಸ್ಥಿರತೆಗೆ ಬಲ ನೀಡುತ್ತಿದೆʼʼ ಎಂದು ಅವರು ತಿಳಿಸಿದ್ದಾರೆ.
ʼʼಅದಾಗ್ಯೂ ಸವಾಲುಗಳು ಮುಂದುವರಿದಿವೆ. ಆರ್‌ಬಿಐ ಅಂದಾಜಿನ ಪ್ರಕಾರ, ಕಚ್ಚಾ ತೈಲದ ಬೆಲೆ ಪ್ರತಿ 10 ಡಾಲರ್ ಏರಿದಾಗ ಆರ್ಥಿಕ ಬೆಳವಣಿಗೆ ದರವು 20ರಿಂದ 30 ಬೇಸಿಸ್ ಪಾಯಿಂಟ್‌ಗಳಷ್ಟು ಕುಸಿಯಬಹುದು. ಅದೇ ವೇಳೆ ಹಣದುಬ್ಬರವು 30ರಿಂದ 40 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆʼʼ ಎಂದಿದ್ದಾರೆ.
ತೈಲ ಬೆಲೆ ಏನಾಗಬಹುದು?
ಮುಂದಿನ ದಿನಗಳಲ್ಲಿ ತೈಲದ ಸರಾಸರಿ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಜಾಗತಿಕ ಅನಿಶ್ಚಿತತೆಗಳ ನಡುವೆ ಭಾರತವು ಆರ್ಥಿಕ ಬೆಳವಣಿಗೆಯ ಜತೆಗೆ ಆಘಾತಗಳನ್ನು ಎದುರಿಸುವ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳಬೇಕು. ವಿಶೇಷವಾಗಿ, ತೈಲ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವಂತಹ ದೀರ್ಘಕಾಲಿಕ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.