ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ: 'ಡಿಸೈನ್‌-ಎಕ್ಸ್‌ಥಾನ್‌ 2026' ಸ್ಪರ್ಧೆ ಘೋಷಿಸಿದ ಮಾರುತಿ ಸುಜುಕಿ

Maruti Suzuki DesignXathon 2026: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯು ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ 'ಡಿಸೈನ್‌-ಎಕ್ಸ್‌ಥಾನ್‌ 2026' ಅನ್ನು ಅಧಿಕೃತವಾಗಿ ಘೋಷಿಸಿದೆ. ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ.

ಡಿಸೈನ್‌-ಎಕ್ಸ್‌ಥಾನ್‌ 2026; ಯುವ ವಾಹನ ವಿನ್ಯಾಸಕರಿಗೆ ಭರ್ಜರಿ ಅವಕಾಶ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್. -

Profile
Siddalinga Swamy May 11, 2026 6:52 PM

ಬೆಂಗಳೂರು, ಮೇ 11: ಭಾರತದಲ್ಲಿ ವಾಹನ ವಿನ್ಯಾಸ ಕ್ಷೇತ್ರದಲ್ಲಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಜನಪ್ರಿಯ ವಾಹನ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki) ಮುಂದಾಗಿದೆ. ಈ ನಿಟ್ಟಿನಲ್ಲಿ ಕಂಪನಿಯು ತನ್ನ ಜನಪ್ರಿಯ ವಿನ್ಯಾಸ ಸ್ಪರ್ಧೆಯ 2ನೇ ಆವೃತ್ತಿಯಾದ 'ಡಿಸೈನ್‌-ಎಕ್ಸ್‌ಥಾನ್‌ 2026' ಅನ್ನು (DesignXathon 2026) ಅಧಿಕೃತವಾಗಿ ಘೋಷಿಸಿದೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಭಾರತದಲ್ಲಿರುವ ವಿವಿಧ ಡಿಸೈನ್ ಇನ್‌ಸ್ಟಿಟ್ಯೂಟ್‌ಗಳ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ವಾಹನಗಳ ವಿನ್ಯಾಸ ಹೇಗಿರಬೇಕು ಎಂಬ ತಮ್ಮ ಕಲ್ಪನೆಯನ್ನು ಸ್ಪರ್ಧೆಯಲ್ಲಿ ಮಂಡಿಸಬಹುದಾಗಿದೆ.

ಏನಿದು ಸ್ಪರ್ಧೆಯ ಥೀಮ್?

ಈ ಬಾರಿಯ ಸ್ಪರ್ಧೆಗೆ ಅತ್ಯಂತ ಕುತೂಹಲಕಾರಿ ಥೀಮ್ ನೀಡಲಾಗಿದೆ. ʼ2036ನೇ ಇಸವಿಯಲ್ಲಿ 'ಜೆನ್-ಝಡ್' ಮತ್ತು 'ಆಲ್ಫಾ' ಪೀಳಿಗೆಯ ಯುವಜನರು ಹೊಂದಲು ಬಯಸುವ ಐಕಾನಿಕ್ ವಾಹನ ವಿನ್ಯಾಸʼ ಎಂಬುದು ಈ ಬಾರಿಯ ಸ್ಪರ್ಧೆಯ ವಿಷಯವಾಗಿದೆ.

2035 ರಿಂದ 2040ರ ಕಾಲಘಟ್ಟಕ್ಕೆ ತಕ್ಕಂತೆ ವಾಹನಗಳು ಹೇಗಿರಬೇಕು, ಇಂದಿನ ಯುವಜನರ ಜೀವನಶೈಲಿಗೆ ಅದು ಹೇಗೆ ಹೊಂದಿಕೊಳ್ಳುತ್ತದೆ, ಪರಿಸರ ಸ್ನೇಹಿ ಅಂಶಗಳನ್ನು ಹೇಗೆ ಅಳವಡಿಸಲಾಗಿದೆ ಹಾಗೂ ವಾಹನದ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ನಡುವೆ ಹೇಗೆ ಕೊಂಡಿ ಬೆಸೆಯಲಾಗಿದೆ ಎಂಬುದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹಿಸಾಶಿ ಟೆಕ್ಯುಚಿ ʼವಾಹನ ವಿನ್ಯಾಸ ಎಂಬುದು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ; ಅದು ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ಗ್ರಾಹಕರ ಆಯ್ಕೆಯನ್ನು ಪ್ರಭಾವಿಸುವ ಒಂದು ಕಲೆಯಾಗಿದೆ. ಮೊದಲ ಆವೃತ್ತಿಯ ಸ್ಪರ್ಧೆಯಲ್ಲಿ ಭಾರತದ ಯುವ ವಿನ್ಯಾಸಕರ ಅದ್ಭುತ ಪ್ರತಿಭೆ ನಮಗೆ ಕಾಣಲು ಸಿಕ್ಕಿತು. ಯುವಕರಿಗೆ ತಮ್ಮ ಕಲ್ಪನೆಗಳನ್ನು ವಾಸ್ತವ ರೂಪಕ್ಕೆ ತರಲು ಹಾಗೂ ಮಾರುತಿ ಸುಜುಕಿಯೊಂದಿಗೆ ಕೆಲಸ ಮಾಡಿ ಪ್ರಾಯೋಗಿಕ ಅನುಭವ ಪಡೆಯಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆʼ ಎಂದರು.

ʼಭವಿಷ್ಯದ ವಾಹನಗಳನ್ನು ರೂಪಿಸುವಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಈ ಡಿಸೈನ್‌-ಎಕ್ಸ್-ಥಾನ್ ಸ್ಪರ್ಧೆಯ ಮೂಲಕ ಭಾರತದಲ್ಲಿ ಬಲಿಷ್ಠವಾದ ವಿನ್ಯಾಸ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆʼ ಎಂದು ಅವರು ತಿಳಿಸಿದರು.

ಭಾರೀ ಯಶಸ್ಸು ಕಂಡಿತ್ತು ಮೊದಲ ಆವೃತ್ತಿ

2025ರಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ 70ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಂಐಟಿ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್, ವಿಐಟಿ ವೆಲ್ಲೂರು ಮತ್ತು ಸ್ಟ್ರೇಟ್ ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ವಿಜೇತರಾಗಿ ಹೊರಹೊಮ್ಮಿದ್ದರು. ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 8 ವಿದ್ಯಾರ್ಥಿಗಳು ಪ್ರಸ್ತುತ ಮಾರುತಿ ಸುಜುಕಿ ವಿನ್ಯಾಸ ತಂಡದಲ್ಲಿ 6 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.

ವಿಜೇತರಿಗೆ ಇದೆ ಬಂಪರ್‌ ಬಹುಮಾನ

ವಿಜೇತರಿಗೆ 4.5 ಲಕ್ಷ ರುಪಾಯಿ. ನಗದು ಬಹುಮಾನ ಸಿಗಲಿದೆ. ಅಲ್ಲದೆ, ಟಾಪ್ 3 ತಂಡಗಳಿಗೆ ಮಾರುತಿ ಸುಜುಕಿ ವಿನ್ಯಾಸ ತಂಡದೊಂದಿಗೆ 6 ತಿಂಗಳ ಕಾಲ ಕೆಲಸ ಮಾಡುವ (ಇಂಟರ್ನ್‌ಶಿಪ್) ಅವಕಾಶ ಸಿಗಲಿದೆ. 4 ರಿಂದ 10ನೇ ಸ್ಥಾನ ಪಡೆಯುವ ತಂಡಗಳಿಗೂ ಪ್ರಶಂಸನಾ ಪತ್ರ ಹಾಗೂ ಮುಂದೆ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ. ಇದು ಅವರ ಭವಿಷ್ಯದ ವೃತ್ತಿಜೀವನಕ್ಕೆ ದೊಡ್ಡ ಮೆಟ್ಟಿಲಾಗಲಿದೆ.‌

ಡೇಟಿಂಗ್ ಜಗತ್ತಿಗೆ 'ಜ್ಯೋತಿಷ್ಯ' ಎಂಟ್ರಿ! ಯುವಜನತೆಗಾಗಿ 'ಆಸ್ಟ್ರಾಲಜಿ ಮೋಡ್' ಪರಿಚಯಿಸಿದ ಟಿಂಡರ್‌

ಅರ್ಜಿ ಸಲ್ಲಿಕೆ ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಜುಲೈ 13, 2026 ರೊಳಗೆ ಮಾರುತಿ ಸುಜುಕಿ ಡಿಸೈನ್‌-ಎಕ್ಸ್-ಥಾನ್‌ನ ಅಧಿಕೃತ ಲಿಂಕ್ (https://marutisuzuki.ent.box.com/s/qq6wj8scuf2jbgjjvem3tcnogdlatvs5) ಮೂಲಕ ಅರ್ಜಿ ಸಲ್ಲಿಸಬಹುದು. ಬದಲಾಗುತ್ತಿರುವ ಗ್ರಾಹಕರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಲು ಮಾರುತಿ ಸುಜುಕಿ ಪ್ರತಿವರ್ಷ ಈ ಸ್ಪರ್ಧೆಯನ್ನು ಆಯೋಜಿಸುತ್ತದೆ.