ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಉಪೇಂದ್ರʼ ಸಿನಿಮಾ ರೀ-ರಿಲೀಸ್‌; ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೆ ಸಿಗಲಿದೆ ಕೋಟಿ ರೂಪಾಯಿ ಬಹುಮಾನ!

'ಉಪೇಂದ್ರ' ಸಿನಿಮಾವು ಜೂನ್ 4ರಂದು ಮರು-ಬಿಡುಗಡೆಯಾಗುತ್ತಿದ್ದು, ಪ್ರೇಕ್ಷಕರಿಗೆ ಕೋಟಿ ರೂಪಾಯಿ ಗೆಲ್ಲುವ ಸುವರ್ಣಾವಕಾಶವಿದೆ. 'ಇಶ್ ಮೈರಾ' ಕಂಪನಿಯ ಪರಮೇಶ್ವರ್ ಬಿ ಈ ವಿನೂತನ ಕಾನ್ಸೆಪ್ಟ್‌ನ ರೂವಾರಿಯಾಗಿದ್ದಾರೆ. ಚಿತ್ರದ ಪ್ರತಿ ಪ್ರದರ್ಶನದ ನಂತರ ಪ್ರಶ್ನೆಗೆ ಉತ್ತರಿಸುವವರಿಗೆ ಅಂದಿನ ಕಲೆಕ್ಷನ್ ಮೊತ್ತವನ್ನು ನೀಡಲಾಗುತ್ತದೆಯಂತೆ!

ʻಉಪೇಂದ್ರʼ ಚಿತ್ರ ನೋಡಿ ಕೋಟ್ಯಧಿಪತಿಯಾಗಿ; ಉಪ್ಪಿ ಫ್ಯಾನ್ಸ್‌ಗೆ‌ ಗಿಫ್ಟ್!

-

Avinash GR
Avinash GR May 11, 2026 8:03 PM

ʻರಿಯಲ್‌ ಸ್ಟಾರ್‌ʼ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿದ್ದ ‘ಉಪೇಂದ್ರ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸಿನಿಮಾ ಮರುಬಿಡುಗಡೆಯ ಸುದ್ದಿಯ ಜೊತೆಗೆ ಪ್ರೇಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ ಗೆಲ್ಲುವ ಬಂಪರ್ ಆಫರ್ ಕೂಡ ಘೋಷಣೆಯಾಗಿದೆ. ‘ISH MYRA’ ಪ್ರೊಡಕ್ಷನ್ ಕಂಪನಿ ಅಡಿಯಲ್ಲಿ ಪರಮೇಶ್ವರ್ ಬಿ ಈ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದ್ದು, ಗಾಂಧಿನಗರದ ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳ ಹಳೆಯ ಗತ್ತು ಮತ್ತು ಗಮ್ಮತ್ತನ್ನು ಮರುಕಳಿಸಲು ಸಜ್ಜಾಗಿದ್ದಾರೆ.

ಪ್ರಶ್ನೆಗೆ ಉತ್ತರಿಸಿ ಕಲೆಕ್ಷನ್ ಹಣ ಪಡೆಯಿರಿ!

ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ಪರಮೇಶ್ವರ್ ಬಿ, "ಉಪೇಂದ್ರ ಸಿನಿಮಾವು ಜೂನ್ 4ರಂದು ರಾಜ್ಯಾದ್ಯಂತ ಸುಮಾರು 100 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಆಗಲಿದೆ. ಪ್ರತಿ ಶೋ ಮುಗಿದ ನಂತರ 10 ನಿಮಿಷಗಳ ಕಾಲ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ ಆ ಶೋನ ಸಂಪೂರ್ಣ ಕಲೆಕ್ಷನ್ ಮೊತ್ತವನ್ನು ಬಹುಮಾನವಾಗಿ ನೀಡಲಾಗುವುದು" ಎಂದು ತಿಳಿಸಿದರು. ಇದು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ವಿಭಿನ್ನವಾದ ಪ್ರಚಾರ ತಂತ್ರವಾಗಿದೆ.

Raktha Kashmira Movie: ಉಪೇಂದ್ರ-ರಮ್ಯಾ ಕಾಂಬಿನೇಷನ್‌ನಲ್ಲಿ ಶೀಘ್ರವೇ ತೆರೆಗೆ ಬರಲಿದೆ ‘ರಕ್ತ ಕಾಶ್ಮೀರ’

25ನೇ ದಿನದಂದು 1 ಕೋಟಿ ರೂ. ಬಹುಮಾನ

ಇಷ್ಟಕ್ಕೇ ನಿಲ್ಲದ ಈ ಆಫರ್, ಸಿನಿಮಾ ಪ್ರದರ್ಶನದ 25ನೇ ದಿನದಂದು ಭರ್ಜರಿಯಾಗಿ ಇರಲಿದೆ. ಅಂದು ಸರಿಯಾದ ಉತ್ತರ ನೀಡುವ ಅದೃಷ್ಟವಂತ ಪ್ರೇಕ್ಷಕನಿಗೆ ಬರೊಬ್ಬರಿ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಪರಮೇಶ್ವರ್ ಘೋಷಿಸಿದ್ದಾರೆ. ಈ ಯೋಜನೆಯ ಉದ್ದೇಶ ಈಗಿನ ತಲೆಮಾರಿನ ಸಿನಿಮಾ ಪ್ರೇಮಿಗಳಿಗೆ ಹಳೆಯ ಮೈಲಿಗಲ್ಲು ಚಿತ್ರಗಳನ್ನು ಪರಿಚಯಿಸುವ ಮತ್ತು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ನಶಿಸದಂತೆ ಉಳಿಸುವ ಉದ್ದೇಶವನ್ನು ಹೊಂದಿದೆಯಂತೆ.

Aamir Khan: ಉಪೇಂದ್ರ ಸಿನಿಮಾದ ಟ್ರೇಲರ್ ನೋಡಿ ʼನಾನು ಉಪೇಂದ್ರ ಅಭಿಮಾನಿʼ ಎಂದ ಆಮೀರ್ ಖಾನ್!

ಥಿಯೇಟರ್‌ಗಳನ್ನು ಉಳಿಸುವ ವಿಶಿಷ್ಟ ಪ್ರಯತ್ನ

ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೆ ಸೊರಗುತ್ತಿವೆ. ಈ ಬರಗಾಲದ ಸಮಯದಲ್ಲಿ ಥಿಯೇಟರ್‌ಗಳಿಗೆ ಸಿನಿಮಾಗಳನ್ನು ಪೂರೈಸಿ, ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯುವುದು ಇದರ ಹಿಂದಿನ ಉದ್ದೇಶವಾಗಿದೆ. ‘ಉಪೇಂದ್ರ’ ಚಿತ್ರದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ಈಗಾಗಲೇ ಈ ಯೋಜನೆಗೆ ಗ್ರೀನ್‌ ಸಿಗ್ನಲ್ ತೋರಿಸಿದ್ದು, ಮುಂದಿನ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಗವಹಿಸಿ ಈ ಯೋಜನೆಯ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಿದ್ದಾರಂತೆ.

ಅಂದಹಾಗೆ, 1999ರಲ್ಲಿ ತೆರೆಕಂಡಿದ್ದ ಉಪೇಂದ್ರ ಸಿನಿಮಾದಲ್ಲಿ ಉಪ್ಪಿ ಜೊತೆಗೆ ಪ್ರೇಮಾ, ರವೀನಾ ಟಂಡನ್‌, ದಾಮಿನಿ, ವಿ. ಮನೋಹರ್‌, ಗುರುಕಿರಣ್‌ ಮುಂತಾದವರು ನಟಿಸಿದ್ದರು. ಈ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್‌ ಆಗಿದ್ದಲ್ಲದೇ, ತೆಲುಗಿಗೂ ಡಬ್‌ ಆಗಿ ಹಿಟ್‌ ಆಗಿತ್ತು.