ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Reliance: ರಿಲಯನ್ಸ್ ಇಂಡಸ್ಟ್ರೀಸ್ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಪ್ರಕಟ; 5.50 ರೂ. ಡಿವಿಡೆಂಡ್ ಘೋಷಣೆ

Reliance: ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಶುಕ್ರವಾರ 2025ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಂಪನಿಯಿಂದ ಪ್ರತಿ ಷೇರಿಗೆ 5.50 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಿದ್ದು, 25,000 ಕೋಟಿ ರೂಪಾಯಿಯನ್ನು ನಾನ್ ಕನ್ವರ್ಟ್‌ಬಲ್ ಡಿಬೆಂಚರ್ (ಎನ್‌ಸಿಡಿ) ಮೂಲಕ ಸಂಗ್ರಹಿಸುವ ಯೋಜನೆಗೆ ಮಂಜೂರಾತಿ ನೀಡಿರುವುದಾಗಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ಶೇಕಡಾ 2.4ರಷ್ಟು ಹೆಚ್ಚಳವಾಗಿ 19,407 ಕೋಟಿ ರೂಪಾಯಿ ಬಂದಿದೆ. ಈ ಕುರಿತ ವಿವರ ಇಲ್ಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ 4ನೇ ತ್ರೈಮಾಸಿಕ ಫಲಿತಾಂಶ ಪ್ರಕಟ

Profile Siddalinga Swamy Apr 25, 2025 10:48 PM

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್‌ನಿಂದ (Reliance Industries) ಶುಕ್ರವಾರ 2025ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಪ್ರಕಟಿಸಲಾಗಿದೆ. ಕಂಪನಿಯಿಂದ ಪ್ರತಿ ಷೇರಿಗೆ 5.50 ರೂಪಾಯಿ ಡಿವಿಡೆಂಡ್ ಘೋಷಣೆ ಮಾಡಿದ್ದು, 25,000 ಕೋಟಿ ರೂಪಾಯಿಯನ್ನು ನಾನ್ ಕನ್ವರ್ಟ್‌ಬಲ್ ಡಿಬೆಂಚರ್ (ಎನ್‌ಸಿಡಿ) ಮೂಲಕ ಸಂಗ್ರಹಿಸುವ ಯೋಜನೆಗೆ ಮಂಜೂರಾತಿ ನೀಡಿರುವುದಾಗಿ ತಿಳಿಸಲಾಗಿದೆ. ಈ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭವು ಶೇಕಡಾ 2.4ರಷ್ಟು ಹೆಚ್ಚಳವಾಗಿ 19,407 ಕೋಟಿ ರೂಪಾಯಿ ಬಂದಿದೆ. ಮಾರ್ಚ್ 31ಕ್ಕೆ ಕೊನೆಯಾದ ಅವಧಿಗೆ ಕಂಪನಿಯ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 8.8ರಷ್ಟು ಹೆಚ್ಚಳವಾಗಿ 2.88 ಲಕ್ಷ ಕೋಟಿ ರೂಪಾಯಿ ಆಗಿದೆ. ಅಂದ ಹಾಗೆ ನಿವ್ವಳ ಮೌಲ್ಯ ಹತ್ತು ಲಕ್ಷ ಕೋಟಿ ರೂಪಾಯಿ ದಾಟಿದ ಭಾರತದ ಮೊದಲ ಕಂಪನಿ ಎಂದೆನಿಸಿಕೊಂಡಿದೆ ರಿಲಯನ್ಸ್ ಇಂಡಸ್ಟ್ರೀಸ್.

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯ ಡಿಜಿಟಲ್ ಸೇವೆಗಳು ಅತ್ಯುತ್ತಮ ಸಾಧನೆ ಮಾಡಿದೆ. ಕಂಪನಿಯ ಇಬಿಐಟಿಡಿಎ ಶೇಕಡಾ 18.5ರಷ್ಟು ಮೇಲೇರಿದೆ. ಜಿಯೋ ಪ್ಲಾಟ್ ಫಾರ್ಮ್ಸ್ ನಿವ್ವಳ ಲಾಭವು 7,022 ಕೋಟಿ ರೂಪಾಯಿ ಬಂದಿದ್ದು, ಕಳೆದ ವರ್ಷ ಮಾರ್ಚ್ ಕೊನೆಯ ಇದೇ ಅವಧಿಗೆ 5,587 ಕೋಟಿ ರೂಪಾಯಿ ಲಾಭ ಗಳಿಸಿತ್ತು. ರಿಲಯನ್ಸ್ ರೀಟೇಲ್ ಇಬಿಐಟಿಡಿಎ ಶೇ.14.3ರಷ್ಟು ಬೆಳೆದಿದೆ. ಶೇಕಡಾ 29ರಷ್ಟು ಲಾಭದ ಏರಿಕೆಯಾಗಿ 3,545 ಕೋಟಿಗೆ ಮುಟ್ಟಿದೆ. ಪ್ರಬಲವಾದ ಮಳಿಗೆ ಕಾರ್ಯ ನಿರ್ವಹಣೆ ಮೆಟ್ರಿಕ್ಸ್ ಹಾಗೂ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 2.4 ಪಟ್ಟು ಹೈಪರ್- ಲೋಕಲ್ ಡೆಲಿವರಿ ವ್ಯವಹಾರದಲ್ಲಿ ಬೆಳವಣಿಗೆ ಆಗಿದೆ. ಎರಡು ವರ್ಷದ ಹಿಂದಷ್ಟೇ ಎಫ್ಎಂಸಿಜಿ ಘಟಕವನ್ನು ಆರಂಭಿಸಲಾಗಿತ್ತು. ಅದೀಗ 11,450 ಕೋಟಿ ರೂಪಾಯಿ ಮಾರಾಟ ಮಾಡಿದ್ದು, ಈ ಮೂಲಕ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಫ್ಎಂಸಿಜಿ ಆರಂಭಿಕ ಕಂಪನಿ ಎನಿಸಿದೆ.

ತೈಲದಿಂದ ರಾಸಾಯನಿಕ (ಒಟುಸಿ) ವ್ಯವಹಾರದಲ್ಲಿನ ಇಬಿಐಟಿಡಿಎ ಶೇಕಡಾ ಹತ್ತರಷ್ಟು ಇಳಿಕೆ ಕಂಡು, 15,080 ಕೋಟಿ ರೂಪಾಯಿ ಮುಟ್ಟಿದೆ. ತೈಲ ಹಾಗೂ ಅನಿಲ ವ್ಯವಹಾರದ ಇಬಿಐಟಿಡಿಎ ಶೇಕಡಾ 8.6 ಇಳಿಕೆ ಕಂಡು, 5,123 ಕೋಟಿ ರೂಪಾಯಿ ಮುಟ್ಟಿದೆ.

ಕಳೆದ ಹಣಕಾಸು ವರ್ಷದ ಒಟ್ಟಾರೆ ಅದಾಯವು ಶೇ 7.1ರಷ್ಟು ಏರಿಕೆಯಾಗಿ, 10.71 ಲಕ್ಷ ಕೋಟಿ ರೂಪಾಯಿ ಆಗಿದೆ. ಇನ್ನು ಇಬಿಐಟಿಡಿಎ ಶೇ 2.9ರಷ್ಟು ಮೇಲೇರಿ 1.83 ಲಕ್ಷ ಕೋಟಿ ರೂಪಾಯಿ ತಲುಪಿದೆ. ನಿವ್ವಳ ಲಾಭವು ಶೇ 2.9ರಷ್ಟು ಹೆಚ್ಚಳವಾಗಿ, 81,309 ಕೋಟಿ ರೂಪಾಯಿ ಆಗಿದೆ. ತೈಲ ಹಾಗೂ ಅನಿಲ ಇಬಿಐಟಿಡಿಎ ಸಾರ್ವಕಾಲಿಕ ದಾಖಲೆಯ ಎತ್ತರದ 21,188 ಕೋಟಿ ರೂಪಾಯಿ ಮುಟ್ಟಿದೆ. ಇದೇ ಮೊದಲ ಬಾರಿಗೆ ರೀಟೇಲ್ ಅಂಗದ ಇಬಿಐಟಿಡಿಎ 25,000 ಕೋಟಿ ರೂಪಾಯಿ ದಾಟಿದೆ. ಜಿಯೋ ಪ್ಲಾಟ್ ಫಾರ್ಮ್ಸ್ ಲಾಭವು ಶೇಕಡಾ 22ರಷ್ಟು ಮೇಲೇರಿ 25,000 ಕೋಟಿ ದಾಟಿದೆ.

ವಯಾಕಾಮ್18 ಮತ್ತು ಡಿಸ್ನಿಯ ಸ್ಟಾರ್ ಇಂಡಿಯಾ ವಿಲೀನದ ನಂತರ ಜಿಯೋಸ್ಟಾರ್ 10,006 ಕೋಟಿ ರೂಪಾಯಿ ಆದಾಯವನ್ನು ವರದಿ ಮಾಡಿದೆ. ʼಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಪಿಎಲ್ ಪ್ರಮುಖ ಕ್ರೀಡಾಕೂಟಗಳಿಂದ ಮತ್ತು 320 ಸಾವಿರ ಗಂಟೆಗಳಿಗಿಂತ ಹೆಚ್ಚಿನ ಭಾರತದ ಅತಿದೊಡ್ಡ ಡಿಜಿಟಲ್ ಕಂಟೆಂಟ್ ಲೈಬ್ರರಿಯಂಥ ಜಿಯೋಹಾಟ್‌ಸ್ಟಾರ್ ಮಾರ್ಚ್ 2025 ರಲ್ಲಿ 50.3 ಕೋಟಿ ಎಂಎಯುಗಳಿಗೆ ಸೇವೆ ಸಲ್ಲಿಸಿದೆʼ ಎಂದು ಕಂಪನಿ ತಿಳಿಸಿದೆ. ಜಿಯೋಸ್ಟಾರ್ ಟಿವಿ ನೆಟ್‌ವರ್ಕ್ ಟಿವಿ ಎಂಟರ್‌ಟೈನ್‌ಮೆಂಟ್‌ನಲ್ಲಿ ಶೇ.34ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿದೆ ಮತ್ತು ದೇಶಾದ್ಯಂತ 76. ಕೋಟಿ ಮಾಸಿಕ ವೀಕ್ಷಕರನ್ನು ತಲುಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ʼರಿಲಯನ್ಸ್ ರೀಟೇಲ್ ಆದಾಯ ಮತ್ತು ಲಾಭ ಎರಡರಲ್ಲೂ ಅಗಾಧ ಬೆಳವಣಿಗೆ ದಾಖಲಿಸಿದೆ. ನಮ್ಮ ಕಾರ್ಯಾಚರಣೆಗಳನ್ನು ಹೆಚ್ಚಿಸಲು, ನವೀನ ಸ್ವರೂಪಗಳನ್ನು ತರುವ ಮೂಲಕ ನಮ್ಮ ಉತ್ಪನ್ನ ಮಿಶ್ರಣವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ. ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿದ್ದೇವೆ ಮತ್ತು ಗ್ರಾಹಕರು ನಮ್ಮಿಂದ ಏನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ರೀಟೇಲ್ ವ್ಯಾಪಾರದ ಭವಿಷ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆʼ ಎಂದು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಇಶಾ ಅಂಬಾನಿ ಹೇಳಿದ್ದಾರೆ.

ʼಜಿಯೋ ವಿಶ್ವದ ಅತ್ಯುತ್ತಮ ತಂತ್ರಜ್ಞಾನದ ಮೂಲಕ ತನ್ನ ಗ್ರಾಹಕರಿಗೆ ನಿರಂತರವಾಗಿ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡುತ್ತಿದೆ. ವಿಶ್ವದ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾದ ಮಹಾ ಕುಂಭ ಮೇಳದಲ್ಲಿ ನಮ್ಮ ಬಲಿಷ್ಠ ಮತ್ತು ಅತ್ಯುತ್ತಮ ನೆಟ್‌ವರ್ಕ್ ಸಹಾಯದಿಂದ ಕೋಟ್ಯಂತರ ಭಕ್ತರಿಗೆ ನಮ್ಮ ಸೇವೆಗಳನ್ನು ತಲುಪಿಸಿದ್ದೇವೆ ಎಂದು ಜಿಯೋ ಹೆಮ್ಮೆಪಡುತ್ತದೆ. ಎಲ್ಲಾ ಜಿಯೋ ಸೇವೆಗಳಿಗೆ ಬುದ್ಧಿವಂತಿಕೆಯ ಮತ್ತೊಂದು ಪದರವನ್ನು ಸೇರಿಸಲು ಜಿಯೋ ಈಗ ಕೃತಕ ಬುದ್ಧಿಮತ್ತೆಯ ಮೂಲಸೌಕರ್ಯವನ್ನು ರೂಪಿಸುವ ಕೆಲಸ ಮಾಡುತ್ತಿದೆʼ ಎಂದು ರಿಲಯನ್ಸ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಎಂ ಅಂಬಾನಿ ತಿಳಿಸಿದ್ದಾರೆ.

ʼಇಂಧನ ಮಾರುಕಟ್ಟೆಯಲ್ಲಿನ ಏರಿಳಿತದ ಹೊರತಾಗಿಯೂ ತೈಲದಿಂದ ರಾಸಾಯನಿಕ ವ್ಯವಹಾರದಲ್ಲಿ ಉತ್ತಮ ಹಾಗೂ ಸ್ಥಿರವಾದ ಫಲಿತಾಂಶ ನೀಡಿದೆ. ಗರಿಷ್ಠ ಮಟ್ಟದ ಸಂಯೋಜಿತ ವ್ಯವಹಾರಗಳ ಕಾರ್ಯಾಚರಣೆಯು ನಮ್ಮ ತಂಡದಿಂದ ಉತ್ತಮ ಫಲಿತಾಂಶ ತರಲು ನೆರವಾಗಿದೆʼ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರು, ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Longest Road: 14 ದೇಶಗಳ ಮೂಲಕ ಹಾದು ಹೋಗುವ ವಿಶ್ವದ ಅತ್ಯಂತ ಉದ್ದದ ರಸ್ತೆ; 30,600 ಕಿ.ಮೀ. ನೋ ಯೂ ಟರ್ನ್‌!