ಇರಾನ್ ವಾರ್ ಎಫೆಕ್ಟ್: ಸೆನ್ಸೆಕ್ಸ್ 1,122 ಅಂಕ ಪತನ; 10 ಲಕ್ಷ ಕೋಟಿ ರುಪಾಯಿ ನಷ್ಟ
Share Market: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಣ ಯುದ್ಧಕ್ಕೆ ಜಾಗತಿಕ ಷೇರು ಮಾರುಕಟ್ಟೆ ಬಲಿಯಾಗಿದೆ. ಮಾರ್ಚ್ 4ರಂದು ಸೆನ್ಸೆಕ್ಸ್ 1,122 ಅಂಕ ಪತನವಾಗಿದ್ದು, 79,116ಕ್ಕೆ ಸ್ಥಿರವಾಯಿತು. ನಿಫ್ಟಿ 386 ಅಂಕ ಕಳೆದುಕೊಂಡು 24,480ಕ್ಕೆ ಕುಸಿಯಿತು. ಆ ಮೂಲಕ ಹೂಡಿಕೆದಾರರಿಗೆ ಒಟ್ಟು 10 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.
ಸಾಂದರ್ಭಿಕ ಚಿತ್ರ. -
ಮುಂಬೈ, ಮಾ. 4: ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಣ ಯುದ್ಧ (US-Israel-Iran War) ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆ (Share Market) ತಲ್ಲಣವಾಗಿದೆ. ಸೆನ್ಸೆಕ್ಸ್ ಬುಧವಾರ (ಮಾರ್ಚ್ 4) 1,122 ಅಂಕ ಪತನವಾಗಿದ್ದು, 79,116ಕ್ಕೆ ಸ್ಥಿರವಾಯಿತು. ನಿಫ್ಟಿ 386 ಅಂಕ ಕಳೆದುಕೊಂಡು 24,480ಕ್ಕೆ ಕುಸಿಯಿತು. ಟಾಟಾ ಸ್ಟೀಲ್ 7 ಪರ್ಸೆಂಟ್, ಎಲ್ &ಟಿ 4 ಪರ್ಸೆಂಟ್ ಇಳಿಕೆ ದಾಖಲಿಸಿತು. ಹೂಡಿಕೆದಾರರಿಗೆ 10 ಲಕ್ಷ ಕೋಟಿ ರುಪಾಯಿ ನಷ್ಟವಾಗಿದೆ.
ಷೇರುಪೇಟೆಯಲ್ಲಿ ಇವತ್ತಿನ ಸೂಚ್ಯಂಕ ಪತನಕ್ಕೆ ಪ್ರಮುಖವಾದ 4 ಕಾರಣಗಳು ಇಂತಿವೆ:
- ಇರಾನ್ -ಇಸ್ರೇಲ್ ಯುದ್ಧದ ತೀವ್ರತೆ
- ಕಚ್ಚಾ ತೈಲ ದರ ಹೆಚ್ಚಳ
- ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟ
- ಜಾಗತಿಕ ತಲ್ಲಣಗಳು
ಏಷ್ಯನ್ ಮಾರ್ಕೆಟ್‌ಗಳಲ್ಲಿ ಸೂಚ್ಯಂಕಗಳು ಇಳಿದಿವೆ. ಅಮೆರಿಕದಲ್ಲೂ ತೀವ್ರ ನಷ್ಟ ದಾಖಲಾಯಿತು. ಅಮೆರಿಕ- ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧ ಯಾವಾಗ ಮುಕ್ತಾಯವಾಗಲಿದೆ ಎಂಬ ಅನಿಶ್ಚಿತತೆ ಈಗ ಇದೆ. ಇದು ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.
ಇವತ್ತು ಸೆಕ್ಟರ್‌ವೈಸ್ ನೋಡೋದಿದ್ರೆ ನಿಫ್ಟಿ ಐಟಿ ಮಾತ್ರ ಪಾಸಿಟಿವ್ ಆಗಿ ಕ್ಲೋಸ್ ಆಗಿತ್ತು. ಡಾಲರ್ ಎದುರು ರುಪಾಯಿ ಮೌಲ್ಯ ಇವತ್ತು ಒಂದೇ ದಿನ 68 ಪೈಸೆ ಇಳಿದಿದ್ದು, 92.15 ರುಪಾಯಿಗೆ ತಗ್ಗಿದೆ. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆರ್‌ಗೆ 84 ಡಾಲರ್‌ಗೆ ಏರಿಕೆ ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಫೆಬಬ್ರವರಿಯಲ್ಲಿ ಭಾರತೀಯ ಷೇರು ಪೇಟೆಯಿಂದ 6,641 ಕೋಟಿ ರುಪಾಯಿ ಹಿಂತೆಗೆದುಕೊಂಡಿದ್ದಾರೆ.
ನಿಫ್ಟಿ ಮೆಟಲ್ ಇವತ್ತು ವರ್ಸ್ಟ್ ಪರ್ಫಾಮೆನ್ಸ್ ದಾಖಲಿಸಿತ್ತು. ನಿಫ್ಟಿ ಪಿಎಸ್‌ಯು ಬ್ಯಾಂಕ್ ಇಳಿದಿತ್ತು. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಮಂದಗತಿಯಲ್ಲಿತ್ತು.
ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಷೇರು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 10 ಲಕ್ಷ ಕೋಟಿ ರುಪಾಯಿ ನಷ್ಟವಾಗಿದ್ದು, 457 ಲಕ್ಷ ಕೋಟಿ ರುಪಾಯಿಯಿಂದ 447 ಲಕ್ಷ ಕೋಟಿ ರುಪಾಯಿಗೆ ತಗ್ಗಿದೆ.
ಹೊರ್ಮುಜ್ ಜಲಸಂಧಿ ಬಂದ್: ಅತಂತ್ರ ಸ್ಥಿತಿಯಲ್ಲಿ 37 ಭಾರತೀಯ ಹಡಗುಗಳು, 1,109 ನಾವಿಕರು
ನಷ್ಟಕ್ಕೀಡಾದ ಷೇರುಗಳು
ಟಾಟಾ ಸ್ಟೀಲ್: 196/-: 6.77%
ಟಾಟಾ ಮೋಟಾರ್ಸ್ ಪಿವಿ: 351/-: 5.24%
ಎಸ್ ಬಿಐ ಲೈಫ್: 1,931/-: 5%
L&T: 3,883/-: 4.53%
ಜೆಎಸ್‌ಡಬ್ಲ್ಯು ಸ್ಟೀಲ್: 1,213/-: 4.29%
ಶ್ರೀರಾಮ್ ಫೈನಾನ್ಸ್: 1,010/-: 4.04%
ಬಜಾಜ್ ಫೈನಾನ್ಸ್: 945/-: 3.39%
ಲಾಭ ಗಳಿಸಿದ ಷೇರುಗಳು
ಕೋಲ್ ಇಂಡಿಯಾ: 435/-: 2.09%
ಭಾರ್ತಿ ಏರ್ ಟೆಲ್: 1,906/-: 1.75%
ಇನ್ಫೋಸಿಸ್: 1,307/-: 1.44%
ಟೆಕ್ ಮಹೀಂದ್ರಾ: 1,351/-: 0.44%
ಹೊರ್ಮುಜ್ ಜಲಸಂಧಿ ಸ್ಥಗಿತ
ಇರಾನ್ ಯುದ್ಧದಿಂದ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡಚಣೆ ಎದುರಾಗಿದೆ. ಈ ಜಲಸಂಧಿಯಲ್ಲಿ ತೈಲ ಹೊತ್ತ ಹಡಗುಗಳನ್ನು ಮುಂದೆ ಹೋಗಲು ಬಿಡುವುದಿಲ್ಲ. ಹೊಡೆದುರುಳಿಸಲಾಗುವುದು ಎಂದು ಇರಾನ್ ಎಚ್ಚರಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕ ಸೇನೆಯು ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ರಕ್ಷಣೆ ಒದಗಿಸಲಿದೆ ಎಂದು ಹೇಳಿದ್ದರೂ, ಆತಂಕ ನಿಂತಿಲ್ಲ. ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದರಿಂದ ಕೇವಲ ತೈಲ ಪೂರೈಕೆ ಮಾತ್ರವಲ್ಲದೆ, ಇಡೀ ಜಾಗತಿಕ ವ್ಯಾಪಾರಕ್ಕೂ ಧಕ್ಕೆ ಆಗಲಿದೆ. ಭಾರತದಿಂದ ಔಷಧ, ಸೆಮಿಕಂಡಕ್ಟರ್ ಸಾಗಣೆಗೆ ಅಡ್ಡಿಯಾಗಲಿದೆ. ಮಧ್ಯಪ್ರಾಚ್ಯದಿಂದ ತೈಲ, ರಸಗೊಬ್ಬರ ಆಮದಿಗೆ ಕಷ್ಟವಾಗಲಿದೆ.
ಕ್ಲಾರ್ಕ್‌ಸನ್ಸ್ ರಿಸರ್ಚ್ ಡೇಟಾ ಪ್ರಕಾರ 3,200 ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ನಿಂತಿವೆ. ಅದರಲ್ಲಿ 1,231 ಹಡಗುಗಳು ಕೊಲ್ಲಿಯೊಳಗೆ ಸಂಚರಿಸಲಿವೆ. 500 ಹಡಗುಗಳು ಗಲ್ಫ್‌ನಿಂದ ಹೊರಗೆ ಬಂದರುಗಳಲ್ಲಿ ಕಾಯುತ್ತಿವೆ. ಹರ್ಮುಜ್ ಜಲಸಂಧಿಯ ಮೂಲಕ ಹೋಗಲು ಅವುಗಳಿಗೆ ಅಡಚಣೆ ಉಂಟಾಗಿದೆ.
ಇರಾನ್- ಇಸ್ರೇಲ್ ಸಮರ: ಪೆಟ್ರೋಲ್ ಬೆಲೆ 200 ರುಪಾಯಿ ಆಗುತ್ತಾ?
ಇರಾನ್‌ನಲ್ಲಿ ಅಲ್ಲಿನ ಸರ್ವಧಿಕಾರಿ ಅಯೊತೊಲ್ಲಾ ಆಲಿ ಖಮೇನಿಯ ಹತ್ಯೆಯ ಬಳಿಕ ಆತನ ಮಗನಿಗೆ ಪಟ್ಟ ಕಟ್ಟಲು ತೆರೆಮರೆಯಲ್ಲಿ ಯತ್ನ ನಡೆಯುತ್ತಿದೆ. ಆದರೆ ಯಾರೇ ಸರ್ವಾಧಿಕಾರಿಯಾದರೂ, ಅವರನ್ನು ನಿರ್ಮೂಲನೆ ಮಾಡುವುದಾಗಿ ಇಸ್ರೇಲ್ ಎಚ್ಚರಿಸಿದೆ. ಟೆಹರಾನ್ ಮತ್ತು ಬೈರುಟ್ ಮೇಲೆ ಇಸ್ರೇಲ್ ದಾಳಿಯನ್ನು ಹೆಚ್ಚಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ ಈ ಯುದ್ಧ 4-5 ವಾರಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ. ಆದರೆ ಅದಕ್ಕಿಂತಲೂ ದೀರ್ಘಾವಧಿಗೆ ಟ್ರಂಪ್ ಸಿದ್ಧತೆ ಮಾಡಿರುವಂತಿದೆ.
ಈ ನಡುವೆ ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್, ರಷ್ಯಾವು ಚೀನಾ ಮತ್ತು ಭಾರತಕ್ಕೆ ಕಚ್ಚಾ ತೈಲ ಪೂರೈಕೆಯನ್ನು ಹೆಚ್ಚಿಸಲು ಸಿದ್ಧ ಎಂದು ತಿಳಿಸಿದ್ದಾರೆ.