Stock Market: ಟ್ರಂಪ್ ಟಾರಿಫ್ ಮುಂದೂಡಿಕೆ, ಟೆಕ್ಸ್‌ಟೈಲ್ ಷೇರುಗಳಿಗೆ ಶುಕ್ರದೆಸೆ! ಬಾಂಗ್ಲಾಗೆ ಬಿತ್ತು ಟ್ರಂಪ್ ಟ್ಯಾಕ್ಸ್
Share Market: ಭಾರತೀಯ ಟೆಕ್ಸ್‌ಟೈಲ್ ಕಂಪನಿಗಳ ಷೇರುಗಳಿಗೆ ಶುಕ್ರದೆಸೆ ಆರಂಭವಾಗಿದೆ. ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್, ಕೆಪಿಆರ್ ಮಿಲ್, ವರ್ಧಮಾನ್ ಟೆಕ್ಸ್‌ಟೈಲ್ ಮತ್ತು ಅರವಿಂದ್ ಲಿಮಿಟೆಡ್ ಸೇರಿದಂತೆ ಪ್ರಮುಖ ಟೆಕ್ಸ್‌ಟೈಲ್ ಕಂಪನಿಗಳ ಷೇರುಗಳ ದರದಲ್ಲಿ ಮಂಗಳವಾರ ಮಧ್ಯಂತರದಲ್ಲಿ ಶೇ. 8ರ ತನಕ ಷೇರುಗಳ ದರ ಹೆಚ್ಚಳವಾಯಿತು. ಇದಕ್ಕೆ ಕಾರಣವೇನೆಂದರೆ, ಅಮೆರಿಕ ಸರ್ಕಾರವು ಬಾಂಗ್ಲಾದೇಶದಿಂದ ಅಮೆರಿಕಕ್ಕೆ ರಫ್ತಾಗುವ ಜವಳಿ ಉತ್ಪನ್ನಗಳ ಮೇಲೆ ಶೇ. 35 ಟಾರಿಫ್ ಅಥವಾ ತೆರಿಗೆಯನ್ನು ಜಾರಿಗೊಳಿಸಿರುವುದು.


-ಕೇಶವ ಪ್ರಸಾದ್ ಬಿ.
ಮುಂಬೈ: ಅಮೆರಿಕವು ಕಳೆದ ಏಪ್ರಿಲ್ 2ರಂದು ತನ್ನ ಪ್ರತಿ ಸುಂಕಗಳನ್ನು ಅಮಾನತುಗೊಳಿಸಿತ್ತು. ಅದರ ಗಡುವು ಸಮೀಪಿಸುತ್ತಿರುವಂತೆ ಇದೀಗ ಆಗಸ್ಟ್ 1ರ ತನಕ ಮುಂದೂಡಿರುವ ಹಿನ್ನೆಲೆಯಲ್ಲಿ ಭಾರತದ ರಫ್ತುದಾರರಿಗೆ ರಿಲೀಫ್ ಸಿಕ್ಕಿದಂತಾಗಿದೆ. ಇದರ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲೂ ಸೆನ್ಸೆಕ್ಸ್ ಮತ್ತು ನಿಫ್ಟಿ ದಿನದ ಕೊನೆಯ ಕ್ಷಣಗಳಲ್ಲಿ ಜಿಗಿದಿದೆ. ಸ್ಟಾಕ್ ಮಾರ್ಕೆಟ್‌ನಲ್ಲಿ (Stock Market) ದಿನದ ಮುಕ್ತಾಯದ ವೇಳೆಗೆ ಇವತ್ತು ಸೆನ್ಸೆಕ್ಸ್ 270 ಅಂಕ ಚೇತರಿಸಿ 83,712ಕ್ಕೆ ಸ್ಥಿರವಾಯಿತು. ನಿಫ್ಟಿ 62 ಅಂಕ ಚೇತರಿಸಿಕೊಂಡು 25,522ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.
ಭಾರತೀಯ ಟೆಕ್ಸ್‌ಟೈಲ್ ಕಂಪನಿಗಳ ಷೇರುಗಳಿಗೆ ಶುಕ್ರದೆಸೆ ಆರಂಭವಾಗಿದೆ. ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್, ಕೆಪಿಆರ್ ಮಿಲ್, ವರ್ಧಮಾನ್ ಟೆಕ್ಸ್‌ಟೈಲ್ ಮತ್ತು ಅರವಿಂದ್ ಲಿಮಿಟೆಡ್ ಸೇರಿದಂತೆ ಪ್ರಮುಖ ಟೆಕ್ಸ್‌ಟೈಲ್ ಕಂಪನಿಗಳ ಷೇರುಗಳ ದರದಲ್ಲಿ ಮಂಗಳವಾರ ಮಧ್ಯಂತರದಲ್ಲಿ 8 ಪರ್ಸೆಂಟ್ ತನಕ ಷೇರುಗಳ ದರ ಹೆಚ್ಚಳವಾಯಿತು. ಇದಕ್ಕೆ ಕಾರಣವೇನೆಂದರೆ, ಅಮೆರಿಕ ಸರ್ಕಾರವು ಬಾಂಗ್ಲಾದೇಶದಿಂದ ಅಮೆರಿಕಕ್ಕೆ ರಫ್ತಾಗುವ ಜವಳಿ ಉತ್ಪನ್ನಗಳ ಮೇಲೆ 35 ಪರ್ಸೆಂಟ್ ಟಾರಿಫ್ ಅಥವಾ ತೆರಿಗೆಯನ್ನು ಜಾರಿಗೊಳಿಸಿರುವುದು. ಈ ಹೊಸ ತೆರಿಗೆಯು ಆಗಸ್ಟ್ 1ರಿಂದ ಅನ್ವಯವಾಗಲಿದೆ.
ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ 37% ಟ್ಯಾಕ್ಸ್ ಅನ್ನು ಘೋಷಿಸಲಾಗಿತ್ತು. ಬಳಿಕ 35%ಕ್ಕೆ ಇಳಿಸಲಾಗಿದೆ. ಹೀಗಿದ್ದರೂ ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶಕ್ಕೆ ಭಾರಿ ತೆರಿಗೆಯ ಪ್ರಹಾರವನ್ನು ಅಮೆರಿಕ ಮಾಡಿದೆ. ಗ್ಲೋಬಲ್ ಗಾರ್ಮೆಂಟ್ ಸಪ್ಲೈ ಚೈನ್‌ನಲ್ಲಿ ಬಾಂಗ್ಲಾದೇಶದ ಸ್ಪರ್ಧಾತ್ಮಕತೆಗೆ ಭಾರಿ ಪೆಟ್ಟು ಬಿದ್ದಿದೆ. ಇದು ಭಾರತದ ಗಾರ್ಮೆಂಟ್ಸ್ ಸೆಕ್ಟರ್‌ಗೆ ಲಾಭದಾಯಕವಾಗಲಿದೆ. ಏಕೆಂದರೆ 35% ಟ್ಯಾಕ್ಸ್ ಹೊರೆಯಿಂದಾಗಿ ಬಾಂಗ್ಲಾದೇಶದ ಗಾರ್ಮೆಂಟ್ಸ್ ಉತ್ಪನ್ನಗಳು ಅಮೆರಿಕದಲ್ಲಿ ದುಬಾರಿಯಾಗಲಿವೆ. ಭಾರತದ್ದು ಅಗ್ಗವಾಗಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಭಾರತದ ಗಾರ್ಮೆಂಟ್ಸ್ ಉತ್ಪನ್ನಗಳ ಮಾರಾಟ ಹೆಚ್ಚಲಿದೆ. ಆಗ ಭಾರತೀಯ ಗಾರ್ಮೆಂಟ್ಸ್ ಕಂಪನಿಗಳಿಗೆ ಆದಾಯ ಮತ್ತು ಲಾಭ ಎರಡೂ ಹೆಚ್ಚಲಿದೆ.
ಗಾರ್ಮೆಂಟ್ಸ್ ಕಂಪನಿಗಳ ಷೇರು ದರ ಏರಿಕೆ
ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್ (Gokaldas Exports): 922/-
ವರ್ಧಮಾನ್ ಟೆಕ್ಸ್‌ಟೈಲ್ಸ್ (Vardhman Textiles): 512/-
ಕೆಪಿಆರ್ ಮಿಲ್ (KPR Mill): 1,214/-
ಅರವಿಂದ್ ಲಿಮಿಟೆಡ್ (Arvind Ltd): 348/-
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಮುಖ ಟ್ರೇಡಿಂಗ್ ಪಾಲುದಾರ ರಾಷ್ಟ್ರಗಳ ವಿರುದ್ಧ ಆಮದು ಸುಂಕವನ್ನು ಹೆಚ್ಚಿಸುತ್ತಿರುವುದರಿಂದ ಹಾಗೂ ಟ್ರೇಡ್ ಡೀಲ್‌ಗಳ ಕುರಿತ ಅನಿಶ್ಚಿತತೆ ಇರುವುದರಿಂದ ಹೂಡಿಕೆದಾರರು ಎಚ್ಚರ ವಹಿಸುತ್ತಿದ್ದಾರೆ. ಇದರ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಫ್ಲಾಟ್ ಆಗಿದೆ.
ಮಂಗಳವಾರದ ಹೈಲೈಟ್ಸ್
* ಟೆಕ್ಸ್‌ಟೈಲ್ ಸ್ಟಾಕ್ಸ್‌ಗಳ ದರದಲ್ಲಿ 8% ತನಕ ಏರಿಕೆ
* ಪಿಸಿ ಜ್ಯುವೆಲ್ಲರ್ ಷೇರು ದರದಲ್ಲಿ 8% ಇಳಿಕೆ
* ಟೈಟನ್ ಷೇರು ದರದಲ್ಲಿ 5% ಇಳಿಕೆ.
* ಟ್ರಾವೆಲ್ ಫುಡ್ ಸರ್ವೀಸ್ ಐಪಿಒದ 2ನೇ ದಿನ 22% ಸಬ್‌ಸ್ಕ್ರೈಬ್ ಆಗಿದೆ.
ಈ ನಡುವೆ ಸೆಬಿಯು ಒಂದು ಸ್ಫೋಟಕ ವರದಿಯನ್ನು ಬಿಡುಗಡೆಗೊಳಿಸಿದೆ. ಭಾರತದ ಸ್ಟಾಕ್ ಮಾರ್ಕೆಟ್‌ನಲ್ಲಿ ರಿಟೇಲ್ ಟ್ರೇಡರ್ಸ್‌ಗೆ 2022-2025ರ 4 ವರ್ಷಗಳಲ್ಲಿ 2 ಲಕ್ಷದ 87 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. 2024-25 ಒಂದರಲ್ಲಿಯೇ 1 ಲಕ್ಷದ 5 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ ಎಂದು ಮಾರುಕಟ್ಟೆ ನಿಯಂತ್ರಕ ಸೆಬಿಯ ವರದಿ ತಿಳಿಸಿದೆ.
ಪ್ರತಿ ವರ್ಷ 90% ಟ್ರೇಡರ್ಸ್‌ಗೆ ನಷ್ಟ ಸಂಭವಿಸುತ್ತಿದೆ ಎಂದು ಸೆಬಿಯ ಸ್ಫೋಟಕ ವರದಿ ತಿಳಿಸಿದೆ. ಡಿರೈವಟೀಸ್ ಟ್ರೇಡಿಂಗ್‌ನಲ್ಲಿ ಇರುವ ಸಿಸ್ಟಮ್ಯಾಟಿಕ್ ಚಾಲೆಂಜ್ ಅನ್ನು ಇದು ಬಿಂಬಿಸಿದೆ. ಈ ಭಾರಿ ನಷ್ಟದ ಹೊರತಾಗಿಯೂ 2022-2025ರ ಅವಧಿಯಲ್ಲಿ ಟ್ರೇಡರ್ಸ್ ಸಂಖ್ಯೆ 43 ಲಕ್ಷದಿಂದ 96 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿ ಟ್ರೇಡರ್ಸ್‌ಗೆ ಸರಾಸರಿ 86,000 ರುಪಾಯಿಗಳಿಂದ 1 ಲಕ್ಷದ 12 ಸಾವಿರ ರುಪಾಯಿ ತನಕ ನಷ್ಟ ಸಂಭವಿಸಿದೆ ಎಂದು ಸೆಬಿಯ ಸ್ಫೋಟಕ ವರದಿ ತಿಳಿಸಿದೆ. ಆದ್ದರಿಂದ ಸ್ಟಾಕ್ ಟ್ರೇಡಿಂಗ್ ಮಾಡುವವರು ಈ ವರದಿಯನ್ನು ತಪ್ಪದೆ ಗಮನಿಸಬೇಕು. ನೆನಪಿಡಿ, ಸ್ಟಾಕ್ ಮಾರ್ಕೆಟ್‌ನಲ್ಲಿ ಲಾಂಗ್ ಟರ್ಮ್ ಹೂಡಿಕೆ ನಷ್ಟ ಉಂಟು ಮಾಡುವುದಿಲ್ಲ. ಅದು ಲಾಭದಾಯಕವಾಗಿದೆ ಎಂಬುದನ್ನು ಇತಿಹಾಸದ ಅಂಕಿ ಅಂಶಗಳು ದೃಢಪಡಿಸಿವೆ. ಆದರೆ ಟ್ರೇಡಿಂಗ್, ಫ್ಯೂಚರ್ ಆಂಡ್ ಆಪ್ಷನ್ಸ್ ಅಪಾಯಕಾರಿ ಎಂಬುದನ್ನು ಮರೆಯಕೂಡದು.
ಈ ಸುದ್ದಿಯನ್ನೂ ಓದಿ | IBPS Recruitment 2025: 6,215 ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್; ಅಪ್ಲೈ ಮಾಡುವ ವಿಧಾನ ಇಲ್ಲಿದೆ