ತಾಂತ್ರಿಕ ದೋಷ: ಮುಂಬೈ, ದೆಹಲಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದ ಕಾರಣದಿಂದಾಗಿ ದೆಹಲಿ, ಮುಂಬೈ ಸೇರಿದಂತೆ ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡ ಘಟನೆ ಗುರುವಾರ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ಉಂಟಾದ ತಾಂತ್ರಿಕ ದೋಷದಿಂದಾಗಿ ವಿಮಾನ ಸಂಚಾರದಲ್ಲಿ ವಿಳಂಬ ಉಂಟಾಗಿ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ತಾಂತ್ರಿಕ ದೋಷದಿಂದಾಗಿ (technical issue) ಮುಂಬೈ (Mumbai airport), ದೆಹಲಿ (delhi airport) ಸೇರಿದಂತೆ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡ ಘಟನೆ ಗುರುವಾರ ನಡೆದಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು. ಬುಕಿಂಗ್ ಮತ್ತು ಚೆಕ್-ಇನ್‌ಗಳಿಗಾಗಿ ವಿಮಾನಯಾನ ಸಂಸ್ಥೆಗಳು ಬಳಸುವ ನವಿಟೈರ್ ವ್ಯವಸ್ಥೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಾಂತ್ರಿಕ ದೋಷ ಕಂಡು ಬಂದಿತ್ತು. ಇದರಿಂದಾಗಿ ದೆಹಲಿ, ಮುಂಬೈ ಸೇರಿದಂತೆ ಹಲವಾರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆ ಕಾಲವು ಕಾಲ ಸ್ಥಗಿತಗೊಳಿಸಲಾಯಿತು.
ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ 6.45ರ ಸುಮಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ವಿವರಗಳನ್ನು ಹಸ್ತಚಾಲಿತವಾಗಿ ನಡೆಸಬೇಕಾಯಿತು. ಬೆಳಗಿನ ಸಮಯವಾದ್ದರಿಂದ ಜನದಟ್ಟಣೆ ಹೆಚ್ಚಾಗಿದ್ದು, ದೀರ್ಘ ಸರತಿ ಸಾಲುಗಳು ಕಂಡುಬಂದವು.
ನವಿಟೈರ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣದಿಂದ ಇಂಡಿಗೋ, ಆಕಾಶ ಏರ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇರಿದಂತೆ ಹಲವಾರು ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸುಮಾರು 25 ನಿಮಿಷಗಳಲ್ಲಿ ತನ್ನ ವ್ಯವಸ್ಥೆಗಳನ್ನು ಮರು ಸ್ಥಾಪಿಸಿತ್ತು. ಸುಮಾರು ಎರಡು ಗಂಟೆಗಳ ಬಳಿಕ ಅಂದರೆ 8.25ರ ಸುಮಾರಿಗೆ ನವಿಟೈರ್ ವ್ಯವಸ್ಥೆಯನ್ನು ಮತ್ತೆ ಸ್ಥಾಪಿಸಲಾಯಿತು. ಆ ಬಳಿಕ ಸೇವೆಗಳು ಸುಲಲಿತವಾಗಿ ಸಾಗಿದವು. ಜನದಟ್ಟಣೆಯನ್ನು ನಿಭಾಯಿಸಲು ಕೆಲವು ಕಾಲ ಬೇಕಾಯಿತು.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿದೆ. ನವಿಟೈರ್ ಸ್ಥಗಿತದಿಂದಾಗಿ ಚೆಕ್-ಇನ್ ಕೌಂಟರ್‌ಗಳಲ್ಲಿ ವಿಳಂಬ ಮತ್ತು ಜನದಟ್ಟಣೆ ಹೆಚ್ಚಾಗಿತ್ತು.
ಭಾರತದ ಅತೀ ದೊಡ್ಡ ವಿಮಾನ ನಿಲ್ದಾಣವಾದ ದೆಹಲಿ ವಿಮಾನ ನಿಲ್ದಾಣವು ಪ್ರತಿದಿನ 1,500ಕ್ಕೂ ಹೆಚ್ಚು ಹಾಗೂ ಮುಂಬೈ ವಿಮಾನ ನಿಲ್ದಾಣವು ಸುಮಾರು 1,000 ವಿಮಾನಗಳನ್ನು ನಿರ್ವಹಿಸುತ್ತದೆ. ಹೀಗಾಗಿ ಬುಕಿಂಗ್, ಚೆಕ್-ಇನ್ ಮತ್ತು ಬೋರ್ಡಿಂಗ್‌ಗೆ ಸಹಾಯ ಮಾಡುವ ನವಿಟೈರ್ ವ್ಯವಸ್ಥೆಯು ವಿಫಲವಾದಾಗ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಸಕಾಲಿಕವಾಗಿ ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಇದರಿಂದ ವಿಳಂಬ ಮತ್ತು ಜನ ದಟ್ಟಣೆ ಉಂಟಾಗುತ್ತದೆ.
ಬಾಂಗ್ಲಾ ಹಿಂದೂ ಪೊಲೀಸ್ ಹತ್ಯೆ ಪ್ರಕರಣದ ಆರೋಪಿ ಪಲಾಯನಕ್ಕೆ ಯತ್ನ; ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ
ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ 800 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿತ್ತು.