ಇಂಧನ ಉಳಿತಾಯಕ್ಕೆ ಪ್ರಧಾನಿ ಮನವಿ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದ ಸರ್ಕಾರ
ಇಂಧನ ಉಳಿತಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ ಎಂದು ಸರ್ಕಾರ ಹೇಳಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಈ ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ದೇಶದಲ್ಲಿ ಪೆಟ್ರೋಲ್ (Petrol), ಡೀಸೆಲ್ (diesel) ಕೊರತೆ ಇಲ್ಲ ಎಂದು ಸರ್ಕಾರ ದೃಢಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಜಾಗತಿಕ ಉದ್ವಿಗ್ನತೆಯ ನಡುವೆ ಇಂಧನ ಉಳಿಸಲು ( save fuel) ಮನವಿ ಮಾಡಿದ ಬೆನ್ನಲ್ಲೇ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಯುಎಸ್ ಮತ್ತು ಇರಾನ್ ನಡುವೆ ಸಂಘರ್ಷ (US-Iran war) ಆರಂಭವಾದ ಮೇಲೆ ದೇಶಕ್ಕೆ ಇಂಧನ ಪೂರೈಕೆಯಲ್ಲಿ ಅಡೆತಡೆಗಳು ಎದುರಾಗಿವೆ. ಇದನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆಯೂ ಭಾರತದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಉದ್ವಿಗ್ನತೆಯ ನಡುವೆ ಇಂಧನವನ್ನು ಸಂರಕ್ಷಿಸುವಂತೆ ಕರೆ ನೀಡಿದ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಅಥವಾ ಕಚ್ಚಾ ತೈಲದ ಕೊರತೆ ಇರುವ ಬಗ್ಗೆ ಊಹಾಪೋಹಗಳು ಹೆಚ್ಚಾಗುವ ಕಾರಣ ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಸೋಮವಾರ ಸ್ಪಷ್ಟನೆ ನೀಡಿರುವ ಸರ್ಕಾರ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ. ಜನರು ಭಯಭೀತರಾಗಬೇಕಿಲ್ಲ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಭಾರತದಲ್ಲಿ ಸಾಕಷ್ಟು ಕಚ್ಚಾ ತೈಲ, ಎಲ್‌ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವಿದೆ. ಭಾರತದ ಇಂಧನ ಆಮದುಗಳಲ್ಲಿ ಸುಮಾರು ಶೇಕಡಾ 90ರಷ್ಟು ಪೀಡಿತ ಪ್ರದೇಶದಿಂದಲೇ ಬರುತ್ತಿವೆ. ಆದರೆ ಎದುರಾಗುವ ಅಡಚಣೆಯನ್ನು ಕಡಿಮೆ ಮಾಡಲು ಈ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಇಂಧನ ಪೂರೈಕೆ ಇದೆ. ಯಾವುದೇ ಕೊರತೆ ಇಲ್ಲ. ಭಯಭೀತರಾಗಿ ಜನರು ಹೆಚ್ಚುವರಿ ಖರೀದಿ ಮಾಡಬೇಕಿಲ್ಲ. ಜಾಗತಿಕ ಅನಿಶ್ಚಿತತೆಯ ಅವಧಿಯಲ್ಲಿ ಇಂಧನ ಸಂರಕ್ಷಣೆ ಮತ್ತು ದೇಶದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಪ್ರಧಾನ ಮಂತ್ರಿಯವರು ಇಂಧನ ಉಳಿಸಲು ಕರೆ ನೀಡಿದ್ದಾರೆ ಎಂದು ಅವರು ಹೇಳಿದರು.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತವು ತನ್ನ ಇಂಧನ ಸಂರಕ್ಷಣೆ ಮತ್ತು ಪೂರೈಕೆ ಪ್ರಯತ್ನಗಳ ಭಾಗವಾಗಿ ಹಲವಾರು ರಾಷ್ಟ್ರಗಳಿಂದ ಇಂಧನವನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಬ್ರಿಕ್ಸ್ ರಾಷ್ಟ್ರಗಳು ಮತ್ತು ಪಾಲುದಾರ ರಾಷ್ಟ್ರಗಳ ವಿದೇಶಾಂಗ ಸಚಿವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬಂದರುಗಳು ಮತ್ತು ಹಡಗು ಸಚಿವಾಲಯದ ಅಧಿಕಾರಿ ಓಪೇಶ್ ಶರ್ಮಾ ಅವರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ ಇಲ್ಲಿಯವರೆಗೆ 10 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಹೊರ್ಮುಜ್ ಜಲಸಂಧಿಯಿಂದ ಸುರಕ್ಷಿತವಾಗಿ ದಾಟಿವೆ/ ಇನ್ನು 13 ಹಡಗುಗಳು ಇಲ್ಲಿವೆ. ಅವುಗಳನ್ನು ಸುರಕ್ಷಿತವಾಗಿ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದರು.