Gold Rate: ಬಂಗಾರದ ದರ ಸ್ಫೋಟ: 10 ಗ್ರಾಮ್‌ಗೆ 91,000 ರೂ.; ಕಾರಣವೇನು?
ಬಂಗಾರದ ದರ ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ. ಹಾಗಾದರೆ ನಿರಂತರವಾಗಿ ಬಂಗಾರದ ದರ ಏರುತ್ತಿರುವುದು ಏಕೆ? ಇಲ್ಲಿದೆ ವಿವರ.

ಸಾಂದರ್ಭಿಕ ಚಿತ್ರ.

-ಕೇಶವ ಪ್ರಸಾದ್ ಬಿ.
ಹೊಸದಿಲ್ಲಿ: ಬಂಗಾರದ ದರ (Gold Rate) ಏ. 1ರಂದು ಹೊಸ ದಾಖಲೆಯ ಎತ್ತರಕ್ಕೇರಿದೆ. ಪ್ರತಿ 10 ಗ್ರಾಮ್ ಚಿನ್ನದ ದರ ಬರೋಬ್ಬರಿ 91,000 ರೂ.ಗೆ ಜಿಗಿದಿದೆ. ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಪ್ರತಿ ಗ್ರಾಮ್ ಬಂಗಾರದ ದರ 9,284 ರುಪಾಯಿಗೆ ಏರಿಕೆಯಾಗಿದೆ. ಹಾಗಾದರೆ ನಿರಂತರವಾಗಿ ಬಂಗಾರದ ದರ ಏರುತ್ತಿರುವುದು ಏಕೆ? ಇದಕ್ಕೆ ಮೊದಲ ಕಾರಣ ಜಾಗತಿಕ ಆರ್ಥಿಕ ಪರಿಸ್ಥಿತಿಯ ಅನಿಶ್ಚಿತತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಘೋಷಿಸಿರುವ ಟಾರಿಫ್ ವಾರ್ (Tariff War). ಜತೆಗೆ ಹಣದುಬ್ಬರ ಕೂಡ ಪ್ರಭಾವ ಬೀರಿದೆ. ನಾನಾ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಕೂಡ ಬಂಗಾರದ ಖರೀದಿಯನ್ನು ಹೆಚ್ಚಿಸಿವೆ. ವಿಶ್ಲೇಷಕರ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಪ್ರತಿ ಔನ್ಸಿಗೆ 3,500 ಡಾಲರ್ ಮಟ್ಟಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.
ಕಳೆದ 2024-25ರ ಆರ್ಥಿಕ ವರ್ಷದಲ್ಲಿ ಚಿನ್ನದ ದರ 32% ಹೆಚ್ಚಳವಾಗಿತ್ತು. ಹೀಗೆ ಮುಂದುವರಿದರೆ 2025-26ರಲ್ಲಿ ಪ್ರತಿ 10 ಗ್ರಾಮ್ ಚಿನ್ನದ ದರ 1 ಲಕ್ಷ ರೂ.ಗೆ ಏರಿಕೆಯಾಗಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಟ್ರೇಡ್ ವಾರ್ ಹುಟ್ಟಿಸಿರುವ ಅನಿಶ್ಚಿತತೆ, ಹಣದುಬ್ಬರದ ಹಿನ್ನೆಲೆಯಲ್ಲಿ ನಾನಾ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳೂ ಚಿನ್ನವನ್ನು ಖರೀದಿಸುತ್ತಿವೆ. ಚೀನಾ, ಭಾರತ, ಕತಾರ್, ಸಿಂಗಾಪುರ, ಪೊಲೆಂಡ್, ಉಜ್ಬೆಕಿಸ್ತಾನ್, ಟರ್ಕಿಯ ಸೆಂಟ್ರಲ್ ಬ್ಯಾಂಕ್‌ಗಳು ಬಂಗಾರವನ್ನು ಖರೀದಿಸಿವೆ. ಸಾಂಪ್ರದಾಯಿಕ ಸುರಕ್ಷಿತ ಹೂಡಿಕೆಯ ಸಾಧನವಾಗಿ ಬಂಗಾರ ಮಹತ್ವ ಗಳಿಸಿದೆ. ಹಿಂದಿನಿಂದಲೂ ಷೇರು ಮಾರುಕಟ್ಟೆ ಮಂದಗತಿಯಲ್ಲಿದ್ದಾಗ ಬಂಗಾರದ ದರ ಏರಿಕೆಯಾಗುವುದು ವಾಡಿಕೆ. ಈಗಲೂ ಅದೇ ಆಗುತ್ತಿದೆ. ನಾನಾ ದೇಶಗಳಲ್ಲಿ ಷೇರು ಸೂಚ್ಯಂಕಗಳು ಮುಗ್ಗರಿಸಿದ್ದರೆ, ಚಿನ್ನದ ದರ ಗಗನಕ್ಕೇರಿದೆ.
ಈ ಸುದ್ದಿಯನ್ನೂ ಓದಿ: Stock market crash: ಟ್ರಂಪ್ ತೆರಿಗೆ ಸಮರ ಎಫೆಕ್ಟ್: ಸೆನ್ಸೆಕ್ಸ್ 1,291 ಅಂಕ ಕುಸಿತ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸುತ್ತಿರುವ ಆಮದು ತೆರಿಗೆ ಹೆಚ್ಚಳ ಕುರಿತ ಸಂಘರ್ಷ ದೊಡ್ಡ ಪ್ರಮಾಣದಲ್ಲಿ ಮುಂದುವರಿಯುವ ಮತ್ತು ಜಾಗತಿಕ ವಾಣಿಜ್ಯ ಬಿಕ್ಕಟ್ಟಾಗಿ ಬದಲಾಗುವ ಆತಂಕ ಉಂಟಾಗಿದೆ. ಈ ರೆಸಿಪ್ರೊಕಲ್ ಟಾರಿಫ್, ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿರದೆ, ಎಲ್ಲ ದೇಶಗಳಿಗೆ ಅನ್ವಯವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬಂಗಾರದ ದರ ಮತ್ತಷ್ಟು ಏರಿಕೆಯಾದರೆ ಆಶ್ಚರ್ಯವಿಲ್ಲ.
ಸಾಮಾನ್ಯವಾಗಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವದಲ್ಲೇ ಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತದೆ ಎಂಬ ಭಾವನೆ ಇದೆ. ಆದರೆ ಕಳೆದ ಕೆಲ ವರ್ಚಗಳಿಂದ ಜಗತ್ತಿನಲ್ಲಿಯೇ ಹೆಚ್ಚು ಬಂಗಾರವನ್ನು ಉತ್ಪಾದಿಸುತ್ತಿರುವ ರಾಷ್ಟ್ರ ಚೀನಾ ಆಗಿದೆ. 2019ರಲ್ಲಿ ಚೀನಾ 3,300 ಟನ್ ಬಂಗಾರವನ್ನು ಉತ್ಪಾದಿಸಿತ್ತು. 2024ರಲ್ಲಿ 380 ಟನ್ ಉತ್ಪಾದಿಸಿತ್ತು. ಹೀಗಿದ್ದರೂ ಮುಂಚೂಣಿಯಲ್ಲಿತ್ತು. ರಷ್ಯಾ ಎರಡನೇ ಸ್ಥಾನದಲ್ಲಿದ್ದು, 310 ಟನ್ ಚಿನ್ನವನ್ನು ಕಳೆದ ವರ್ಷ ಉತ್ಪಾದಿಸಿತ್ತು. ಆಸ್ಟ್ರೇಲಿಯಾ 290 ಟನ್ ಬಂಗಾರವನ್ನು ಉತ್ಪಾದಿಸಿ ಮೂರನೇ ಸ್ಥಾನದಲ್ಲಿತ್ತು.
ಹಾಗಾದ್ರೆ ಬಂಗಾರದಲ್ಲಿ ಹೇಗೆ ಹೂಡಿಕೆ ಮಾಡಬಹುದು?
ಫಿಸಿಕಲ್ ಗೋಲ್ಡ್ ಅಂದ್ರೆ ಬಂಗಾರದ ಒಡವೆ, ಗಟ್ಟಿಗಳನ್ನು, ನಾಣ್ಯಗಳನ್ನು ಖರೀದಿಸಬಹುದು. ಗೋಲ್ಡ್ ಇಟಿಎಫ್‌ಗಳಲ್ಲಿಯೂ ಇನ್ವೆಸ್ಟ್ ಮಾಡಬಹುದು. ಡಿಜಿಟಲ್ ಗೋಲ್ಡ್ ಕೂಡ ಈಗ ಲಭ್ಯ. ಮೊಬೈಲ್ ವ್ಯಾಲೆಟ್‌ಗಳಾದ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೂಲಕವೂ ಬಂಗಾರದಲ್ಲಿ ಹೂಡಿಕೆ ಮಾಡಬಹುದು.
2014ರಿಂದ 2025 ಬಂಗಾರದ ದರ ಏರಿಕೆ (ರೂ.ಗಳಲ್ಲಿ)
(24 ಕ್ಯಾರಟ್, 10 ಗ್ರಾಮ್)
2014: 28,006
2015: 26,343
2016: 28,623
2017: 29,667
2018: 31,438
2019: 35,220
2020: 48,651
2021: 48,720
2022: 52,670
2023: 65,330
2024: 77,913
2025: 91,000