UPI Charges: ಯಾವುದೇ ಕಾರಣಕ್ಕೂ ಹಿಂಪಡೆಯಲ್ಲ ಎಂದ ಕೇಂದ್ರ ಸರ್ಕಾರ; ಜನ ಸಾಮಾನ್ಯರಿಗೆ ಶುಲ್ಕ ಇಲ್ಲ ಎಂದು ಸ್ಪಷ್ಟನೆ
UPI Charges: ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ನಿರ್ಧಾರದ ಕುರಿತು ವಿವರಣೆ ನೀಡಿರುವ ಸರ್ಕಾರದ ಉನ್ನತ ಮೂಲಗಳು, ಇದು ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ, ಬದಲಿಗೆ ಐದು ವರ್ಷಗಳ ಹಿಂದೆಯೇ ಸುದೀರ್ಘವಾಗಿ ಆಲೋಚಿಸಿ ಕೈಗೊಂಡಿದ್ದ ತೀರ್ಮಾನ ಎಂದು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ.16: 2,000 ರೂಪಾಯಿಗಿಂತ ಹೆಚ್ಚಿನ ಕೆಲವು ಯುಪಿಐ (UPI Charges) ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ನಿರ್ಧಾರದ ಕುರಿತು ವಿವರಣೆ ನೀಡಿರುವ ಕೇಂದ್ರ ಸರ್ಕಾರದ (Centre Government) ಉನ್ನತ ಮೂಲಗಳು, ಇದು ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಐದು ವರ್ಷಗಳ ಹಿಂದೆಯೇ ಸುದೀರ್ಘವಾಗಿ ಆಲೋಚಿಸಿ ಕೈಗೊಂಡಿದ್ದ ತೀರ್ಮಾನ ಎಂದು ತಿಳಿಸಿವೆ. ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದರೂ ಸಹ, ಯಾವುದೇ ಕಾರಣಕ್ಕೂ ಈ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ಸರ್ಕಾರ ಒತ್ತಿ ಹೇಳಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ ಪ್ರಕಟಣೆ ಹೊರಡಿಸಿದ್ದು, ಗ್ರಾಹಕರಿಗೆ ಎಲ್ಲ ಯುಪಿಐ ವಹಿವಾಟುಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿವೆ. ಆದರೆ 2,000 ರೂ.ಗಿಂತ ಹೆಚ್ಚಿನ ಕೆಲವು ಯುಪಿಐ ಪಾವತಿಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯವಾಗಲಿದೆ ಎಂದು ತಿಳಿಸಿದೆ.
2,000 ರೂ.ಗಿಂತ ಹೆಚ್ಚಿನ ಗ್ರಾಹಕರಿಂದ ವ್ಯಾಪಾರಿಗಳಿಗೆ ನಡೆಯುವ ವಹಿವಾಟುಗಳಿಗೆ ಶೇಕಡಾ 0.4ರಷ್ಟು ಶುಲ್ಕ ಇರಲಿದೆ (ಅಂದರೆ 2,001 ರೂ. ಮೊತ್ತಕ್ಕೆ ಸುಮಾರು 8 ರೂ. ಶುಲ್ಕವಾಗುತ್ತದೆ). ರೈಲ್ವೆ, ಟೆಲಿಕಾಂ ಸೇವೆಗಳು, ವಿಮೆ ಮತ್ತು ಇಂಧನಗಳಂತಹ ನಿರ್ದಿಷ್ಟ ವಲಯಗಳಿಗೆ ಪ್ರತಿ ವಹಿವಾಟಿಗೆ 5 ರೂ. ಸ್ಥಿರ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಯುಪಿಐ ಶುಲ್ಕದ ಮೇಲಿನ ಬಾಹ್ಯ ಒತ್ತಡ ಆರೋಪಕ್ಕೆ ಕೇಂದ್ರ ಸರ್ಕಾರ ತಿರುಗೇಟು
ವ್ಯಕ್ತಿಯಿಂದ ವ್ಯಕ್ತಿಗೆ ವಹಿವಾಟುಗಳು ಉಚಿತವಾಗಿ ಮುಂದುವರಿಯಲಿದ್ದು, ಯುಪಿಐ ಕ್ಯುಆರ್ ಕೋಡ್‌ಗಳ ಮೂಲಕ ತಿಂಗಳಿಗೆ 1 ಲಕ್ಷ ರೂ.ವರೆಗೆ ಹಣ ಪಡೆಯುವ ಸಣ್ಣ ವ್ಯಾಪಾರಿಗಳು ಯಾವುದೇ ವಹಿವಾಟುಗಳಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಸಂಪೂರ್ಣವಾಗಿ ಉಚಿತ
ಹೊಸದಾಗಿ ಪರಿಚಯಿಸಲಾದ ಯುಪಿಐ ನಿಯಮಾವಳಿಯು ಯಾವುದೇ ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಹಣ ವರ್ಗಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಿನಿಮಯ ಮಾಡುವ ಮೊತ್ತ ಎಷ್ಟೇ ಇರಲಿ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ಎಲ್ಲ ವಹಿವಾಟುಗಳು ಸಂಪೂರ್ಣ ಉಚಿತವಾಗಿ ಮುಂದುವರಿಯಲಿವೆ.
ಇದರೊಂದಿಗೆ, ವ್ಯಾಪಾರಿಗಳಿಗೆ ಮಾಡಲಾಗುವ 2,000 ರೂ.ವರೆಗಿನ ಪಾವತಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗಾಗಿ ಇರುವ ಶೂನ್ಯ-ಎಂಡಿಆರ್ ವ್ಯಾಪ್ತಿಗೆ ಒಳಪಡುವ ವಹಿವಾಟುಗಳು ಕೂಡ ಉಚಿತವಾಗಿಯೇ ಇರಲಿವೆ. ಪರಿಣಾಮವಾಗಿ, ಗ್ರಾಹಕರಿಂದ ವ್ಯಾಪಾರಿಗಳಿಗೆ ನಡೆಯುವ ಒಟ್ಟು ವಹಿವಾಟುಗಳ ಪೈಕಿ ಸುಮಾರು ಶೇಕಡಾ 96ರಷ್ಟು ವಹಿವಾಟುಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎಂಡಿಆರ್ ಶುಲ್ಕವು ಕೇವಲ 2,000 ರೂಗಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಂಡಿಆರ್ ಅನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಯುಪಿಐ ಮೇಲೆ ಯಾವುದೇ ಶುಲ್ಕವಿಲ್ಲ ಎಂಬ ನಿಯಮವನ್ನು ಈಗ 2000 ರೂ.ವರೆಗಿನ ಯುಪಿಐ ವಹಿವಾಟುಗಳಿಗೆ ಮಾತ್ರ ಶುಲ್ಕವಿಲ್ಲ ಎಂದು ಬದಲಾಯಿಸಲಾಗಿದೆ. ʼʼಹಣದುಬ್ಬರವು ಈಗಾಗಲೇ ಸಾಮಾನ್ಯ ಜನರ ಜೇಬನ್ನು ಖಾಲಿ ಮಾಡಿದೆ. ಆದರೂ, ಬಿಜೆಪಿ ಸರ್ಕಾರವು ಸಾರ್ವಜನಿಕರ ಮೇಲೆ ಡಿಜಿಟಲ್ ಪಾವತಿ ತೆರಿಗೆ ಹೇರಲು ಯೋಜಿಸಿದೆ. ಆ ಮೂಲಕ ಅವರ ಬಳಿ ಉಳಿದಿರುವ ಅಲ್ಪಸ್ವಲ್ಪ ಉಳಿತಾಯವನ್ನೂ ನಾಶಮಾಡಲು ಮುಂದಾಗಿದೆʼʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.