US-China tariff War: ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ; ಚೈನೀಸ್ ಅಧಿಕಾರಿ ಹೇಳಿದ್ದೇನು?
US-China tariff War: ಅಮೆರಿಕದ ಹೊಸ ಸುಂಕ ನೀತಿಯು ಜಾಗತಿಕ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಗಳು ಮಕಾಡೆ ಮಲಗಿದೆ. ಈ ಮಧ್ಯೆ ಚೀನಾ ಮೇಲೆ ಶೇ. 104ರಷ್ಟು ಸುಂಕ ವಿಧಿಸುವ ಮೂಲಕ, ಡೊನಾಲ್ಡ್ ಟ್ರಂಪ್ ಸುಂಕ ಸಮರ ಸಾರಿದ್ದು, ಅಮೆರಿಕ-ಚೀನಾದ ನಡುವಿನ ಈ ಯುದ್ಧದಿಂದ ಆರ್ಥಿಕ ಕ್ಷೇತ್ರದಲ್ಲಿ ಬಿಕ್ಕಟ್ಟು ಮೂಡುತ್ತಿದೆ. ಈ ಹಿನ್ನಲೆ ಅಮೆರಿಕಾ ವಿಧಿಸಿರುವ ಹೆಚ್ಚುವರಿ ಸುಂಕ ವಿರುದ್ಧ ಹೋರಾಡಲು ಚೀನಾ ಭಾರತದ ನೆರವನ್ನು ಕೇಳಿದೆ.

ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(US President Donald Trump) ಅವರ ʼಪರಸ್ಪರ ಸುಂಕʼ(US-China Tariff War) ವಿಧಿಸುವ ನಿರ್ಧಾರದಿಂದ ವಿಶ್ವದಲ್ಲಿ ಆರ್ಥಿಕ ಯುದ್ಧ(Economic) ಆರಂಭದ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಟ್ರಂಪ್ ಅವರ ʼಪರಸ್ಪರ ಸುಂಕʼವನ್ನು ವಿರೋಧಿಸಿ, ಚೀನಾ ʼಪ್ರತಿಕಾರ ಸುಂಕʼವನ್ನು ವಿಧಿಸಿತ್ತು. ಇದರಿಂದ ಕೋಪಗೊಂಡ ವಿಶ್ವದ ದೊಡ್ಡಣ್ಣ ಅಮೆರಿಕ, ಚೀನಾ ವಿರುದ್ಧ ವಿಧಿಸಲಾಗಿದ್ದ ಪರಸ್ಪರ ಸುಂಕವನ್ನು 104%ಕ್ಕೆ ಏರಿಸಿದೆ ಎಂದು ಹಲವು ವರದಿಗಳು ಹೇಳಿವೆ. ಈ ವರದಿಗಳು ಹೊರಬಿದ್ದ ಬೆನ್ನಲ್ಲೇ, ಚೀನಾ ಭಾರತದತ್ತ ಕೈಚಾಚಿದ್ದು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ.
ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು ಮಂಗಳವಾರ X ಪೋಸ್ಟ್ ಮೂಲಕ ಚೀನಾ ಮತ್ತು ಭಾರತ ಅಮೆರಿಕದ ಸುಂಕ ನೀತಿಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಹೇಳಿದೆ. "ಚೀನಾ ಮತ್ತು ಭಾರತದ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪರಸ್ಪರ ಪೂರಕ ಮತ್ತು ಲಾಭವನ್ನು ಆಧರಿಸಿ ನಡೆಯುತ್ತಿದೆ. ಅಮೆರಿಕದ ವಿಧಿಸಿದ ಸುಂಕಗಳು ದುರುಪಯೋಗವಾಗುವುದನ್ನು ಎದುರಿಸಲು ಎರಡು ದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು (ಭಾರತ-ಚೀನಾ) ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ವಕ್ತಾರರಾದ ಯು ಜಿಂಗ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
China's economy is underpinned by a system that ensures steady growth, and produces positive spillovers. Chinese manufacturing is built on a complete and continually upgrading industrial system, sustained investment in R&D, and a strong focus on innovation.
— Yu Jing (@ChinaSpox_India) April 8, 2025
China is a firm… pic.twitter.com/w3QuSCingL
ಚೀನಾ ಆರ್ಥಿಕ ಬೆಳವಣಿಗೆ ಜಗತ್ತಿಗೆ ಪೂರಕ ಮತ್ತು ಅಮೆರಿಕಾದ ಸುಂಕ ನೀತಿ ವಿಶ್ವ ಆರ್ಥಿಕ ವ್ಯವಸ್ಥೆಗೆ ಮಾರಕ ಎಂದಿರುವ ಯು ಜಿಂಗ್, "ಚೀನಾದ ಆರ್ಥಿಕತೆ ಸ್ಥಿರವಾದ ಬೆಳವಣಿಗೆಯನ್ನು ಖಚಿತಪಡಿಸುವ ಮತ್ತು ಜಗತ್ತಿನ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಚೀನಾ ವಾರ್ಷಿಕವಾಗಿ ಜಾಗತಿಕ ಆರ್ಥಿಕ ಬೆಳವಣಿಗೆಗೆ ಸರಾಸರಿ ಶೇಕಡಾ 30 ರಷ್ಟು ಕೊಡುಗೆ ನೀಡಿದೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಊಳಿಸುವ ಸಲುವಾಗಿ ನಾವು ಪ್ರಪಂಚದ ಉಳಿದ ಭಾಗಗಳೊಂದಿಗೆ ಆರ್ಥಿಕ ವ್ಯವಹಾರಗಳನ್ನು ಮುಂದುವರೆಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.
ಅಮೆರಿಕಾದ ಸುಂಕ ನೀತಿಯನ್ನು ಟೀಕಿಸುತ್ತಾ, “ವ್ಯಾಪಾರ ಮತ್ತು ತೆರಿಗೆ ಯುದ್ಧ ಸಾರಿದರೆ ಅದನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ” ಎಂದರು. ಎಲ್ಲಾ ದೇಶಗಳು ಸಮಾಲೋಚನೆಯ ತತ್ವಗಳನ್ನು ಎತ್ತಿಹಿಡಿಯಬೇಕು, ನಿಜವಾದ ಅರ್ಥದಲ್ಲಿ ಬಹುಪಕ್ಷೀಯ ಸಂಬಂಧಗಳನ್ನು ಹೊಂದಬೇಕು, ಎಲ್ಲಾ ರೀತಿಯ ಏಕಪಕ್ಷೀಯ ವಾದ ಮತ್ತು ರಕ್ಷಣಾವಾದವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಅವರು ಹೇಳಿದ್ದಾರೆ.
ಚೀನಾಗೆ ಬೆದರಿಕೆ ಹಾಕಿದ್ದ ಟ್ರಂಪ್
ಅಮೆರಿಕ ವಿರುದ್ಧ ಚೀನಾ ಪ್ರತಿಕಾರ ಸುಂಕವನ್ನು ಹೇರಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಗೆ ಸುಂಕ ಏರಿಕೆಯ ಬೆದರಿಕೆ ಹಾಕಿದ್ದರು. “ಏಪ್ರಿಲ್ 8, 2025 ರೊಳಗೆ ಪ್ರತಿಕಾರ ಸುಂಕವನ್ನು ವಾಪಸ್ ಪಡೆಯದಿದ್ದರೆ, ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಚೀನಾದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುವುದು” ಎಂದು ಟ್ರಂಪ್ ಅವರು ತಮ್ಮದೇ ಒಡೆತನದ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ್ದರು.