ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B K Meenakshi Column: ಪಾಯಸ ಸಿಹಿ ಕಣ್ಣೀರು

ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣ, ನೀರು ನಿಡಿ, ಹೂವು ಹಣ್ಣು ಪೂಜೆ ಅಂತ ಪ್ರಾಥಮಿಕ ಹಂತಗಳನ್ನೇ ಮನೆ ತುಂಬ ಓಡಾಡಿಕೊಂಡು ಮಾಡಲು ಶುರುವಿಟ್ಟರೆ ಸಾಕು, ಸಂತೋಷ, ಸಂಭ್ರಮ, ಉತ್ಸಾಹ ತಂತಾನೇ ಮುಗಿಬಿದ್ದು ಎಲ್ಲರ ಮುಖಗಳೂ ಅರಳಿ ನಿಲ್ಲುತ್ತವೆ. ಅಭ್ಯಂಜನವಾಗಬೇಕಾದರಂತೂ ಮಕ್ಕಳ ಹಠ, ಎಣ್ಣೆ ಹಾಕಬೇಡಿ ಎಂಬ ರಚ್ಚೆ, ಅಯ್ಯೋ ಬಿಸಿ ನೀರು.....ಇಷ್ಟು ಬಿಸೀನಾ ಎಂದು ಕುಣಿದಾಡುವ ಮಕ್ಕಳು!

B K Meenakshi Column: ಪಾಯಸ ಸಿಹಿ ಕಣ್ಣೀರು

-

Ashok Nayak
Ashok Nayak Nov 9, 2025 3:51 PM

ಬಿ.ಕೆ.ಮೀನಾಕ್ಷಿ

ಒಬ್ಬಟ್ಟು ಮಾಡಿದರೆ ಪಾಯಸಕ್ಕೆ ಅಳು ಏಕೆ ಬರಬೇಕು? ಅದೇಕೆ ಪಾಯಸ ಸಿಹಿ ಕಣ್ಣೀರು ಹಾಕಿತು? ಪಾಯಸ ಮಾಡುವುದು ಸುಲಭ ಎಂಬ ತಾತ್ಸಾರವನ್ನು ಅರಿತೇ?

ಮೊನ್ನೆ ತಾನೇ ದೀಪಾವಳಿ ಬಂತಾ? ಬಂದು ಹೋಯ್ತಾ? ಬಂದು ಹೋಗುವುದರ ನಡುವೆ ನಮ್ಮ ಆಚರಣೆಗಳು ಇದ್ದೇ ಇರುತ್ತವಾ? ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಲಕ್ಷ್ಮೀಪೂಜೆ, ಬಲಿ ಪಾಡ್ಯಮಿ ಇಷ್ಟೂ ದಿನಗಳು ಸಂಭ್ರಮ ಪಡಲೇಬೇಕು. ನಾವು ಕೃತಕ ವಾಗಿ ಯಾವ ಸಂಭ್ರಮವನ್ನು ಸೃಷ್ಟಿಸಿಕೊಳ್ಳಲೇಬೇಕಿಲ್ಲ.

ಮನೆಯನ್ನು ಸ್ವಚ್ಛಗೊಳಿಸಿ, ತಳಿರುತೋರಣ, ನೀರು ನಿಡಿ, ಹೂವು ಹಣ್ಣು ಪೂಜೆ ಅಂತ ಪ್ರಾಥಮಿಕ ಹಂತಗಳನ್ನೇ ಮನೆ ತುಂಬ ಓಡಾಡಿಕೊಂಡು ಮಾಡಲು ಶುರುವಿಟ್ಟರೆ ಸಾಕು, ಸಂತೋಷ, ಸಂಭ್ರಮ, ಉತ್ಸಾಹ ತಂತಾನೇ ಮುಗಿಬಿದ್ದು ಎಲ್ಲರ ಮುಖಗಳೂ ಅರಳಿ ನಿಲ್ಲುತ್ತವೆ. ಅಭ್ಯಂಜನವಾಗಬೇಕಾದರಂತೂ ಮಕ್ಕಳ ಹಠ, ಎಣ್ಣೆ ಹಾಕಬೇಡಿ ಎಂಬ ರಚ್ಚೆ, ಅಯ್ಯೋ ಬಿಸಿ ನೀರು.....ಇಷ್ಟು ಬಿಸೀನಾ ಎಂದು ಕುಣಿದಾಡುವ ಮಕ್ಕಳು! ಇದಕ್ಕಿಂತ ಖುಷಿ ಇನ್ನೇನಿದೆ ಮನೆಯಲ್ಲಿ? ಅಮ್ಮಂದಿರು ಗದರುತ್ತಾ, ಹಬ್ಬದ ದಿನ ಹಠ ಮಾಡ್ಬಾರ‍್ದು, ಏಟೂ ತಿನ್ನಬಾರ‍್ದು ಎಂದು ಪ್ರೀತಿಯಿಂದ ಗದರುತ್ತಲೇ ಸ್ನಾನಕ್ಕೆ ಓಲೈಸುವ ಬಗೆ ಶುರುವಾಗುತ್ತಲೇ ರೇಡಿಯೋಲಿ ‘ನಾಡೀನಂದಾ, ಈ ದೀಪಾವಳಿ ಬಂತು’ ಎಂದು ಜಾನಕಿ ಬೆಂಗಳೂರು ಲತಾ ರಾಗ ಹಾಡುತ್ತಿದ್ದಂತೆ ಹಬ್ಬಕ್ಕೊಂದು ಹೊಸಕಳೆ ಬಂದು ಬಿಡುತ್ತದೆ.

ಹಬ್ಬ ಮುಗಿದ ಮೇಲೆ ಇದ್ಯಾಕೆ ಈ ಕತೇನೆಲ್ಲ ಹೇಳ್ತಾ ಕೂತಿದಾರೆ ಅಂತ ಅಂದುಕೊಳ್ಳಬೇಡಿ. ಕಾರಣವಿದೆ. ಗೌರಿ ಹಿಂದೇನೇ ದಸರಾ, ದಸರಾ ಮೂಡ್ ಇನ್ನೂ ಹೋಗೇ ಇಲ್ಲ, ಆಗಲೇ ದೀಪಾವಳಿ!

ಇದನ್ನೂ ಓದಿ: Srivathsa Joshi Column: ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ಒಬ್ಬಟ್ಟು ಮಾಡಿದ್ವಲ್ಲ ಆ ಹಬ್ಬಗಳಿಗೆ ದೀಪಾವಳೀಗೇನೂ ಬೇಡ. ಬರೀ ಗಸಗಸೆ ಪಾಯಸ ಮಾಡಿಬಿಡೋಣ ಅಂತ ಲೆಕ್ಕ ಹಾಕಿಕೊಳ್ಳುತ್ತಿದ್ದೆ. ಅಂದು ರಾತ್ರಿ ನನಗೊಂದು ಕನಸು ಬಿತ್ತು. ಒಳ್ಳೆ ಹೊಸ ಸ್ಟೀಲ್ ಪಾತ್ರೆಯ ತುಂಬ ಗಸಗಸೆ ಪಾಯಸ ಘಂ ಅಂತ ಕುಳಿತಿತ್ತು. ಮನೆಯ ತುಂಬಾ ಪರಿಮಳ!

ನನಗೆ ಬಹಳ ಸಂತೋಷವಾಗಿ ಹತ್ತಿರ ಹೋಗಿ ಮುಚ್ಚಳ ತೆರೆದೆ. ನನ್ನನ್ನು ನೋಡಿದ ಕೂಡಲೇ ಪಾಯಸ ಹಲ್ಲು ಕಿರಿದು ಸಂತೋಷದಿಂದ ನಕ್ಕಿತು. ನಾನೂ ಮೆಲ್ಲಗೆ ನಕ್ಕೆ. ‘ಏನು ಸಮಾಚಾರ? ಯಾಕೆ ನಗುತ್ತಿದ್ದೀಯಾ?’ ಅಂದೆ. ‘ಹಬ್ಬಕ್ಕೆ ನನ್ನನ್ನು ತಯಾರಿಸಬೇಕು ಅಂದು ಕೊಂಡಿರಲ್ಲ, ನನಗೆ ಬಹಳ ಸಂತೋಷವಾಯಿತು. ನಿಮ್ಮನ್ನು ನೋಡಿದ ಕೂಡಲೇ ನಕ್ಕು ಧನ್ಯವಾದ ಸಲ್ಲಿಸಿದೆ. ಆದರೆ ಒಂದು ತಿದ್ದುಪಡಿ! ಅದೆಂದರೆ ಬರೀ ಪಾಯಸ ಮಾಡುತ್ತೇನೆ ಅಂದಿರಲ್ಲ ಅದು. ‘ಬರೀ ಅಂತ ನೀವು ಬಳಸಿದ್ದು ನನಗೆ ಹಿಡಿಸಲಿಲ್ಲ’ ಅಂತು.

ನಾನೂ ನಕ್ಕು, ‘ಇರಲಿ, ನೀನೆಂದರೆ ನನಗೆ ಬಹಳ ಇಷ್ಟವೇ. ವಿಶೇಷವಾಗಿ ನಿನ್ನನ್ನೇ ಮಾಡುತ್ತೇನೆ. ಆಯ್ತಾ? ಬೇಗ ತಣ್ಣಗಾಗಬೇಡ. ಹೀಗೇ ಊಟ ಮಾಡುವವರೆಗೂ ಬಿಸಿಯಾ ಗಿರು. ಮೊದಲು ನೈವೇದ್ಯವಾಗಲಿ. ಎಲ್ಲರೂ ನಿನ್ನನ್ನು ಹೀರಿ ಹೀರಿ ಗಡದ್ದಾಗಿ ಕುಡಿದು ಬಿಡುತ್ತಾರೆ. ನಮ್ಮ ಉದರ ಸೇರಿದ ಮೇಲೆ ನಿನಗೆ ಇನ್ನೂ ಸಂತೋಷ ವಾಗುತ್ತದೆ’ ಎಂದು ಮುಚ್ಚಳ ಮುಚ್ಚಿದೆ.

ತಕ್ಷಣ ಎಚ್ಚರವಾಯಿತು. ಇದೇನಿದು? ಪಾಯಸ ಬಂದಿತ್ತಲ್ಲ ಕನಸಿನಲ್ಲಿ? ಹಬ್ಬಕ್ಕೆ ಅದನ್ನೇ ಮಾಡೇಬಿಡೋಣ ಎಂದು ನಿರ್ಧರಿಸಿದೆ. ಮತ್ತೆ ಮನೆಯಲ್ಲಿ ಚರ್ಚೆ ಶುರುವಾಯಿತು. ‘ಪಾಯಸ ಮಾಡಲೊ, ಒಬ್ಬಟ್ಟೋ?’ ಅಂತ ಕೇಳಿದರೆ, ಯಜಮಾನರು, ‘ನಿನಗೇನು ಸುಲಭ ವೋ ಅದೇ ಮಾಡು. ಒಬ್ಬಟ್ಟು ಸುಲಭ ಅಲ್ವಾ ಪಾಯಸಕ್ಕಿಂತ?’ ಅಂತ ತನಗೇನು ಬೇಕೋ ಅದರ ಸೂಚನೆ ನೀಡಿ ಬಿಡುವುದೇ? ನನ್ನ ಮಗಳೂ, ‘ಅಮ್ಮಾ, ನಾನು ಪಾಯಸ ಮಾಡ್ತೇನೆ. ನೀನು ನನಗೆ ಒಬ್ಬಟ್ಟು ಕೊಡು’ ಎಂದು ಬಿಟ್ಟಳು.

ವಿಧಿಯಿಲ್ಲ! ಇನ್ನೇನು ಮಾಡಲಿ? ಹೋಗಲಿ, ಎರಡೂ ಮಾಡಿಬಿಡೋಣ, ರಾತ್ರಿ ಬೇರೆ ಕನಸಿನಲ್ಲಿ ಬಂದು ಹೇಳಿತ್ತಲ್ಲ, ಈ ಗಸಗಸೆ ಪಾಯಸ ಅಂತ ಯೋಚಿಸಿದರೆ, ಶುಗರ್ ಫ್ಯಾಕ್ಟರಿ ಇದೆ ಅಂತಲೂ ಯೋಚಿಸದೆ, ಸ್ವೀಟು ಅಂದರೆ ಸಾಕು ಹಿಗ್ಗಾ ಮುಗ್ಗಾ ಬಾರಿಸಿ ಬಿಡುತ್ತಾರಲ್ಲಾ ಅದಕ್ಕೆ ಭಯವಾಗಿ, ಹೋಗಲಿ, ಒಬ್ಬಟ್ಟೊಂದೇ ಸಾಕು ಎಂದು ನಿರ್ಧರಿಸಿ ಒಬ್ಬಟ್ಟನ್ನೇ ಮಾಡತೊಡಗಿದೆ. ಮಾಡಿಯೂ ಬಿಟ್ಟೆ. ನೀನು ಏನು ಮಾಡುತ್ತೀಯಾ ಅಂತ ಕೇಳದೆ, ಒಬ್ಬಟ್ಟು ನನಗೂ ಕೊಟ್ಟುಬಿಡು ಎಂದ ಮಗಳಿಗೆ ನಿರಾಶೆ ಮಾಡುವುದು ತರವೇ? ಒಬ್ಬಟ್ಟೇ ಸುಲಭ ಅಲ್ವಾ? ಅಂತ ಮಹಾ ಮಾಡಿ ನೋಡಿರುವವರಂತೆ ಸೂಚನೆ ಕೊಟ್ಟ ಇವರನ್ನೂ ನಿರಾಶೆ ಮಾಡಲು ಮನಸ್ಸಿಗೆ ಒಪ್ಪಿಗೆಯಾಗದೆ, ಒಬ್ಬಟ್ಟು ತಯಾರಾಗಿ ಕುಳಿತವು.

ರಾತ್ರಿ ಹನ್ನೆರಡಾದರೂ ಪಟಾಕಿ ಶಬ್ದಕ್ಕೆ ನಿದ್ದೆ ಬರದೆ, ಯಾವಾಗಲೋ ನಿದ್ರಾದೇವಿ ಆವರಿಸಿಕೊಂಡಿದ್ದಾಳೆ. ಮೆಲ್ಲಗೆ ಒಂದು ಹಾಡು ಕೇಳಿಸತೊಡಗಿತು. ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ ಸುತ್ತಲೂ ನೋಡಿದೆ. ಯಾರೂ ಇಲ್ಲ. ಯಾರು ಹೇಳುತ್ತಿರುವುದು ಅಂತ ಹಾಗೇ ಆಲಿಸಿದೆ.

ಅಡುಗೆಮನೆಯಿಂದ ನಾದ ಹೊಮ್ಮುತ್ತಿದೆ. ಅಡುಗೆಮನೆ ಕಡೆಗೆ ಹೆಜ್ಜೆ ಹಾಕಿದೆ. ಗೊತ್ತಾಗು ತ್ತಲೇ ಇಲ್ಲ. ಸುಮ್ಮನೆ ಸದ್ದಿಲ್ಲದಂತೆ ಗಮನಿಸಿ ನಿಂತೆ. ಬೆಲ್ಲದ ಡಬ್ಬದಿಂದ ಬರುತ್ತಿದೆ ಮೆಲ್ಲನೆಯ ಸೊಲ್ಲು! ಅದಕ್ಕೆ ತಾಳ ಹಾಕುತ್ತಿರುವುದು ಗಸಗಸೆ ಡಬ್ಬ. ಹೆಸರುಬೇಳೆಯ ಡಬ್ಬ ತಲೆದೂಗುತ್ತಿದೆ. ಏಲಕ್ಕಿಗಳು ಭಜನೆ ಮಾಡುತ್ತಿವೆ.

ಶೃತಿ ಮೀರಿದ ಹಾಡು

ನನಗೆ ಒಮ್ಮೆಲೇ ಅಯೋಮಯವಾಯಿತು. ಇದೇನಿದು ಹೀಗೆ? ಇವುಗಳಿಗೇನಾಗಿದೆ ಅಂತ ಯೋಚಿಸುವಷ್ಟರಲ್ಲಿ, ಶೃತಿ ಮೀರಿ ಕಿರುಚಿಕೊಳ್ಳತೊಡಗಿದವು. ನೋಡೀ ದಾಸಶ್ರೇಷ್ಟರೇ ನಮ್ಮನ್ನು ಕೊಂಡಾಡಿದ್ದಾರೆ. ಇನ್ನು ನೀವೇನು ನಮಗೆ! ನಾನು ಕಿವಿ ಮುಚ್ಚಿಕೊಂಡೆ. ಅದನ್ನು ಹಾಡಿ ಮುಗಿಸಿ ನನ್ನ ಕಡೆ ಕ್ರೂರವಾಗಿ ನೋಡತೊಡಗಿದವು. ನಾನು ಹೆದರಿ ಕೊಂಡು ‘ಯಾಕೆ ಏನಾಯಿತು?’ ಎನ್ನುವಂತೆ ದೀನಳಾಗಿ ನೋಡಿದೆ.

ತಕ್ಷಣ ಗಸಗಸೆ ಶುರುವಿಟ್ಟುಕೊಂಡಿತು ‘ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಬೀಗರಿಗೆ ಔತಣವಿದು ದೊರಕೊಂಡಿತೆನಗೆ ಬಂದು...’ ಹಾಡತೊಡಗಿದಂತೆ ಮತ್ತೆ ಹಿಮ್ಮೇಳ ಶುರುವಾಯಿತು. ನನಗೆ ಖುಷಿಯಾಗಿ ನಾನೂ ಹಾಡತೊಡಗಿದೆ. ಎಲ್ಲವೂ ಹಾಡುವುದನ್ನು ನಿಲ್ಲಿಸಿ ನನ್ನ ಕಡೆಗೆ ತಿರುಗಿ, ‘ನಿನಗೆ ಇದನ್ನು ಹಾಡಲು ಹಕ್ಕಿಲ್ಲ, ಸುಮ್ಮನಿರಬೇಕು.

ಹಿರಿಯಳೆಂದು ಗೌರವದಿಂದ ಹೇಳುತ್ತಿದ್ದೇವೆ’ ಎಂದು ಹೆದರಿಸಿ ಬಾಯಿ ಮುಚ್ಚಿಸುವುದೇ? ನಾನು ಹೆದರಿ ಸುಮ್ಮನಾಗಿಬಿಟ್ಟೆ. ಅವುಗಳೆಲ್ಲ ಒಮ್ಮೆಲೇ, ‘ವಹಾರೇ ಪಾಯಸಗಳು..... ವಹಾರೇ ಪಾಯಸಗಳು.....ವಹಾರೇ ಪಾಯಸಗಳು....’ ಅಷ್ಟು ದೊಡ್ಡ ಹಾಡಿನಲ್ಲಿ ಅದೊಂದೇ ಸಾಲನ್ನೇ ಪದೇ ಪದೇ ಕೆಟ್ಟುಹೋದ ರೆಕಾರ್ಡು ಪ್ಲೇಯರಿನಂತೆ ಹಾಡತೊಡಗಿ ದವು.

ಥೋ! ಕರ್ಮನೇ! ಇವ್ಯಾಕ್ಹೀಗ್ ಹಾಡ್ತಿವೆ ಅಂತ ನನಗೆ ತಲೆ ಕೆಟ್ಟು ಹೋಯ್ತು. ‘ಏಯ್, ಸ್ವಲ್ಪ ಬಾಯಿ ಮುಚ್ಚುತ್ತೀರಾ? ಎಂದೆ. ಎಲ್ಲವೂ ಭೀಷಣವಾದ ನಗೆ ನಕ್ಕು ಹೇಳಿದವು, ‘ಸುಮ್ಮನಿರಬೇಕಾ ಅಕ್ಕಾ? ಎಂಥಾ ದ್ರೋಹವೆಸಗಿದ್ದೀಯೇ ನೀನು? ನಿಮಗೆಲ್ಲಿ ಗೊತ್ತಾಗ ಬೇಕು? ಮಾತು ಕೊಟ್ಟು ಮುರಿಯುವವರು ನೀವು ಮನುಷ್ಯರು’ ಎಂದು ಎಲ್ಲವೂ ಅಳತೊಡಗಿದವು.

ನನಗೆ ತಲೆಬುಡ ಅರ್ಥವಾಗಲಿಲ್ಲ. ಯಾಕೆ ಹೀಗೆ ನನ್ನನ್ನ ಹಿಗ್ಗಾಮುಗ್ಗಾ ಬೈಯ್ಯುತ್ತಿವೆ ಯಲ್ಲಾ? ಎಂದು ತಲೆಗೆ ಎಷ್ಟು ಹುಳ ಬಿಟ್ಟುಕೊಂಡರೂ ಕಾರಣ ಹುಡುಕುವಲ್ಲಿ ವಿಫಲಳಾದೆ. ಮತ್ತೆ ಡ್ಯಾನ್ಸ್ ಮಾಡತೊಡಗಿದವು, ‘ಪಾಯಸ ಬಿಸಿ ಪಾಯಸ, ರುಚಿಯಿದು ಹೊಸದಾಗಿ, ಸವಿಯಿದು ಸೊಗಸಾಗಿ, ಪ್ರೀತಿಯ ಸುರಿಸಿ, ಖುಷಿಯನು ಬೆರೆಸಿ, ನಲಿವನು ಸೇರಿಸಿ, ಎಲ್ಲಾನು ಕಲೆಸಿ.....ಪಾಯಸ ಬಿಸಿ ಪಾಯಸ.. ಎಂದು ಕೂಗಾಡಿಕೊಳ್ಳತೊಡಗಿದವು. ನನಗಂತೂ ಇದ್ಯಾವ ಕರ್ಮಕಾಂಡವೆನಿಸಿ, ‘ಎಯ್, ಬಾಯ್ಮುಚ್ಚಿ ಸ್ವಲ್ಪ ಎಂದು ಜೋರಾಗಿ ಗದರಿದೆ. ಅಷ್ಟರಲ್ಲಿ ಈ ಗಲಾಟೆಗೋ ಏನೋ ಇವರೂ ಎದ್ದು ಬಂದರು. ಮಕ್ಕಳೆಲ್ಲ ಒಬ್ಬೊಬ್ಬರೇ ಮಲಗಿದ್ದವರು ಎದ್ದು ಬಂದರು. ಎಲ್ಲರೂ ನನ್ನ ಕಡೆಗೆ ನೋಡಿ, ‘ಏನಿದು ಇಷ್ಟು ಗಲಾಟೆ ಮಾಡಿಸುತ್ತಿದ್ದೀಯಾ? ಎಂದರು.

ನಾನು ಏನು ಹೇಳಲಿ? ಇದ್ದಕ್ಕಿದ್ದಂತೆ ಎಲ್ಲವೂ ಸ್ತಬ್ಧವಾದವು. ‘ಯಾಕೆ ಹೀಗೆ ಆಡ್ತಿದ್ದೀರಿ? ಬೆಲ್ಲವೇ.....ನೀನು ಹಿರಿಯ. ಅದೇನು ವಿಷಯ ಹೇಳು’ ಎಂದೆ.

ಗಸಗಸೆ ಉವಾಚ

ಗಸಗಸೆ ಇವರ ಕಡೆಗೆ ತಿರುಗಿ, ‘ಇದಕ್ಕೆಲ್ಲ ನೀವೇ ಮೊದಲ ಕಾರಣ. ನಾವು ಈ ಅಕ್ಕನನ್ನು ನಂಬುತ್ತೇವೆ. ನಮಗ್ಯಾರಿಗೂ ಏನೂ ಅರ್ಥವಾಗಲಿಲ್ಲ. ‘ಇವರು ಪಾಯಸ ಮಾಡ್ತೇನೆ ಎಂದರೂ ನೀವು ಬಲವಂತ ಮಾಡಿ ಒಬ್ಬಟ್ಟು ಮಾಡಿಸಿದಿರಿ. ಒಬ್ಬಟ್ಟು ಸುಲಭ ಅಲ್ವಾ? ಅಂತ ನಿಮ್ಮಾಸೆಯನ್ನು ಹೇಳಿಬಿಟ್ಟಿರಿ ‘ಅಯ್ಯೋ, ನಮಗೇ ನಿಷ್ಟವೋ ಅದನ್ನು ಮಾಡಿಸಿ ಕೊಂಡು ತಿಂತೀವಿ.

ನಿಮ್ಮ ದೇನು ತಕರಾರು? ಬೆಲ್ಲ ಮತ್ತು ಗಸಗಸೆ ಇದ್ದಕ್ಕಿದ್ದಂತೆ ಅಳಲು ಶುರುವಿಟ್ಟು ಕೊಂಡವು. ನನಗೆ ತಬ್ಬಿಬ್ಬಾಗಿ ಅವುಗಳ ಮುಖ ನೋಡಿದೆ. ‘ನೀವು ಮನುಷ್ಯರಿದ್ದೀರಲ್ಲಾ .....ಯಾವಾಗಲೂ ಒಬ್ಬಟ್ಟಿಗೇ ಪ್ರಾಶಸ್ತ್ಯ ಕೊಡ್ತೀರಿ. ಪಾಯಸವೆಂದರೆ ಮೂಲೆಗುಂಪು ಮಾಡ್ತೀರಿ. ದೀಪಾವಳಿಗೆ ಪಾಯಸ ಮಾಡುತ್ತೇನೆಂದವರು ಒಬ್ಬಟ್ಟು ಮಾಡಿಬಿಟ್ಟಿರಿ. ಯಾರಾದರೂ ಬರಲಿ, ಒಂದಿಷ್ಟು ಪಾಯ್ಸ ಕಾಯ್ಸಿ ಬಿಡಿ ಅಂತೀರಾ.. ನೈವೇದ್ಯವಾ ಸುಲಭ ವಾಗಿ ಸುಮ್ಮನೆ ನಾಮ್‌ಕೇವಾಸ್ತೇ ಒಂಚೂರು ಪಾಯಸ ಮಾಡಿ ಇಟ್ಟುಬಿಡ್ತೀರಾ. ಎಲ್ಲಿಗಾ ದರೂ ಯಾರ ಮನೆಗಾದರೂ ಊಟಕ್ಕೆ ಹೋದರೆ, ಅಲ್ಲಿ ಪಾಯಸ ಮಾಡಿದ್ರೆ, ಅಯ್ಯೋ ಪಾಯ್ಸಾನಾ ಅಂತ ಮೂಗು ಮುರೀತೀರಾ.

ನಿಮಗೆಲ್ಲ ನಮ್ಮನ್ನು ಕಂಡರೆ ತಾತ್ಸಾರ ಬಂದುಬಿಟ್ಟಿದೆ’ ಗಸಗಸೆ ಉಸಿರೂ ತೆಗೆದುಕೊಳ್ಳದೆ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿತು. ನಾವೆಲ್ಲಿ ಈ ಪಾಯಸವನ್ನು ಅವಗಣನೆ ಮಾಡಿದ್ದೇವೆಂದು ಅರ್ಥವಾಗಲಿಲ್ಲ. ಸುಲಭ ಅಂತ ಪಾಯಸ ಮಾಡುತ್ತೇನೆ. ಏನೋ ವಿಶೇಷ ದಿನಗಳಲ್ಲಿ ಮಾತ್ರ ಒಬ್ಬಟ್ಟು ಅದೂ ಇದೂ ಅಂತ ಸ್ವಲ್ಪ ಸ್ಪೆಷಲ್ ಆಗಿ ಮಾಡ್ತೀನಪ್ಪಾ... ಹೀಗಂದುಕೊಳ್ಳೋದಕ್ಕೇ ತಡ ಇಲ್ಲ, ‘ಹಾ, ನೋಡಿ, ಇದನ್ನೇ ನಾವು ಹೇಳ್ತಿರೋದು.

ಸುಲಭ ಅಂತ ಕಾಯ್ಸಿಡ್ತೀರಿ. ಅಯ್ಯೋ ದೇವ್ರೇ ಇದಕ್ಕೆ ಮನಸ್ಸನ್ನು ಓದಲು ಬರುತ್ತದೆಯೇ? ವಿಧವಿಧದ ಒಬ್ಬಟ್ಟುಗಳಿರುವಾಗ ಈ ಪಾಯಸವನ್ನು ಯಾರು ಇಷ್ಟ ಪಡುತ್ತಾರೆ ಎಂದುಕೊಂಡೆ. ಆದರೆ ಬಾಯಿ ಬಿಡಲಿಲ್ಲ. ‘ನಿಜ, ಒಬ್ಬಟ್ಟಲ್ಲಿ ನಾನಾ ವಿಧಗಳಿವೆ. ನಮ್ಮಲ್ಲಿಲ್ಲವೇ? ಮಾತೆತ್ತಿದರೆ ನಮ್ಮಣ್ಣ ಹೆಸರು ಬೇಳೆ, ಇಲ್ಲ ನಾನು ಗಸಗಸೆ! ನಮ್ಮಿಬ್ಬರನ್ನೇ ಮಾಡಿ ಹಾಕೋದು ನೀವು!

ಖರ್ಜೂರದ ಪಾಯಸ, ಬಾದಾಮಿ, ಅನಾನಸ್ ಪಾಯಸ, ಅದೂ ಇದೂ ಅಂತ ನಮ್ಮಲ್ಲೂ ಬೇಕಾದಷ್ಟು ವರೈಟಿಗಳಿವೆ. ಅದೇ ಹೇಳಿದ್ನಲ್ಲ, ನಿಮಗೆ ನಮ್ಮನ್ನು ಕಂಡರೆ ತಾತ್ಸಾರ’ ಮತ್ತೂ ಮುಂದುವರೆದು, ‘ನಮ್ಮ ಮಹತ್ವವೇ ನಿಮಗೆ ಗೊತ್ತಿಲ್ಲ. ಎಲೆ ತುದಿಗೆ ಮೊದಲು ಪಾಯಸ ಬೇಕೇಬೇಕು.

ಹೇಗಪ್ಪಾ ಇವುಗಳ ಮಾತಿನ ಭರಾಟೆಯಿಂದ ತಪ್ಪಿಸಿಕೊಳ್ಳೋದು ಅನ್ನಿಸಿ ಹೋಗಲಿ ಬಿಡಿ, ನಾಳೆ ನಿಮ್ಮನ್ನು ಸ್ಪೆಷಲ್ ಆಗಿ ಹದವಾಗಿ ಹುರಿದು ಒಳ್ಳೆಯ ರುಚಿಕಟ್ಟಾದ ಪಾಯಸ ಮಾಡುತ್ತೇನೆ. ನನ್ನ ತಮ್ಮ ಬರುತ್ತಿದಾನೆ ನಾಳೆ. ಅವನಿಗೆ ನೀವೇ ವಿಶೇಷ ರುಚಿ ಮತ್ತು ಖುಷಿ. ಸಮಾಧಾನಾನಾ? ಎಲ್ಲವೂ ಜೋರಾಗಿ ಚಪ್ಪಾಳೆ ತಟ್ಟಿ ನನ್ನ ಸುತ್ತ ಕುಣಿದಾಡಿದವು.

ಕಿವಿಯ ಬಳಿ ಏನೋ ಜೋರು ಶಬ್ದ! ಚಪ್ಪಾಳೆ! ಮಕ್ಕಳು ಚಪ್ಪಾಳೆ ತಟ್ಟಿಕೊಂಡು ಹಾಡು ಹೇಳುತ್ತಿದ್ದಾರೆ. ಅಯ್ಯೋ! ಇಷ್ಟೋ ತನಕ ಮಲಗಿದ್ದೇನೆ? ಮಕ್ಕಳು ಎದ್ದರೂ ನಾನು ಎದ್ದಿಲ್ಲವಲ್ಲ ಅಂತ ಗಡಿಬಿಡಿಯಿಂದ ಎದ್ದೆ. ಏನೋ ಕನಸು ಬೀಳುತ್ತಿತ್ತು ಅಲ್ವಾ? ಎಂದು ಎಷ್ಟು ನೆನಪು ಮಾಡಿಕೊಂಡರೂ ಒಂಥರಾ ಮಸುಕು ಮಸುಕು.

ಸಂಜೆಯಾಗುತ್ತಾ ನೆನಪಾಗತೊಡಗಿ ನನಗೆ ನಗು ಬಂತು. ಇನ್ನಿವುಗಳಿಗೆ ನಿರಾಸೆ ಮಾಡಬಾರದೆಂದು ಒಳ್ಳೆಯ ಪಾಯಸ ಮಾಡಿದೆ. ದ್ರಾಕ್ಷಿ, ದ್ರಾಕ್ಷಿಗಿಂತ ಗೋಡಂಬಿಯನ್ನು ತುಪ್ಪದಲ್ಲಿ ಕರಿದು ಪಾಯಸಕ್ಕೆ ಬೆರೆಸಿ, ನಾವೆಲ್ಲರೂ ಕುಳಿತು, ತಟ್ಟೆಯಲ್ಲಿ ಹಾಕಿಕೊಂಡು ಸವಿಯುತ್ತಾ ಕುಡಿದೆವು. ಎಲ್ಲರೂ ಪರಮಾನಂದ ಅನುಭವಿಸಿಕೊಂಡು ಕುಡಿಯುವುದನ್ನು ಅಡುಗೆಮನೆಯಿಂದ ಬೆಲ್ಲ ಗಸಗಸೆ ಬಗ್ಗಿ ನೋಡುತ್ತಾ, ಆನಂದಬಾಷ್ಟ ಸುರಿಸಿಕೊಂಡು ಎದೆಯ ಮೇಲೆ ಧನ್ಯತೆಯಿಂದ ಕೈಯ್ಯಿಟ್ಟುಕೊಂಡವು, ಅಲ್ಲದೆ ನನ್ನೆಡೆಗೆ ಕೃತಜ್ಞತೆಯಿಂದ ನೋಡಿ ನಮಸ್ಕರಿಸಿದವು.

ನಾನೂ ನಕ್ಕು ಸಂತಸದಿಂದ ‘ಈಗ ಸಮಾಧಾನಾನಾ?’ ಎಂದು ನೋಟದಲ್ಲೇ ಪ್ರಶ್ನಿಸಿದೆ. ಅವುಗಳು ಕಣ್ಣು ಮುಚ್ಚಿ ಒಪ್ಪಿಕೊಂಡು ಒಳ ಸರಿದವು.