ನಿತೀಶ್ ಕುಮಾರ್ ನಂತರ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು? ರೇಸ್‌ನಲ್ಲಿರುವ ಪ್ರಮುಖ ನಾಯಕರು ಇವರೇ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿ ರಾಜ್ಯಸಭೆ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚರ್ಚೆಗಳು ಜೋರಾಗಿವೆ. ಹಾಗಾದರೆ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ರಾಜಕೀಯ ವಲಯದಲ್ಲಿ ಮೂವರು ಪ್ರಮುಖ ನಾಯಕರ ಹೆಸರು ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.
ನಿತೀಶ್ ಕುಮಾರ್ -
ಪಾಟ್ನಾ, ಮಾ. 5: ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ (75) (Nitish Kumar) ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ (Social Media) ಪೋಸ್ಟ್‌ನಲ್ಲಿ, "ನಾನು ಈ ಬಾರಿ ರಾಜ್ಯಸಭೆಯ (Rajya Sabha) ಸದಸ್ಯನಾಗಲು ಬಯಸುತ್ತೇನೆ. ಬಿಹಾರದ ಅಭಿವೃದ್ಧಿಗಾಗಿ ಹೊಸದಾಗಿ ರಚನೆಯಾಗಲಿರುವ ಸರ್ಕಾರಕ್ಕೆ ನನ್ನ ಪೂರ್ಣ ಬೆಂಬಲ ಮತ್ತು ಮಾರ್ಗದರ್ಶನ ಸದಾ ಇರಲಿದೆ" ಎಂದು ತಿಳಿಸಿದ್ದಾರೆ.
ನಿತೀಶ್ ಕುಮಾರ್ ಅವರ ಈ ನಿರ್ಧಾರದ ಬೆನ್ನಲ್ಲೇ, ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಮೂವರು ಪ್ರಮುಖ ನಾಯಕರ ಹೆಸರು ಮುಂಚೂಣಿಯಲ್ಲಿವೆ:
ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಿತೀಶ್ ಕುಮಾರ್:
राज्य सभा के लिए अपना नामांकन पत्र दाखिल किया। pic.twitter.com/R9mDOHUfYr
— Nitish Kumar (@NitishKumar) March 5, 2026
ಸಾಮ್ರಾಟ್ ಚೌಧರಿ (Samrat Choudhary)
ಪ್ರಸ್ತುತ ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಇವರು, ಈ ಹಿಂದೆ ಪಂಚಾಯತ್ ರಾಜ್ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಗೃಹ ಇಲಾಖೆಯಂತಹ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ಇವರು, ಆಡಳಿತಾತ್ಮಕವಾಗಿ ಹಿಡಿತ ಹೊಂದಿದ್ದು, ಪಕ್ಷದ ಹೈಕಮಾಂಡ್‌ನ ವಿಶ್ವಾಸ ಗಳಿಸಿದ್ದಾರೆ.
ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ?; ಬಿಹಾರ ರಾಜಕೀಯದಲ್ಲಿ ಹೊಸ ತಿರುವು
ನಿತ್ಯಾನಂದ ರೈ (Nityanand Rai)
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರಾಗಿರುವ ನಿತ್ಯಾನಂದ ರೈ ಬಿಹಾರದ ಮುಂದಿನ ನಾಯಕತ್ವದ ರೇಸ್‌ನಲ್ಲಿರುವ ಮತ್ತೊಬ್ಬ ಪ್ರಮುಖ ವ್ಯಕ್ತಿ. ಹಜಿಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಇವರು, ಪ್ರಸ್ತುತ ಉಜಿಯಾರ್‌ಪುರ ಸಂಸದರಾಗಿದ್ದಾರೆ. ಬಿಹಾರದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಕೀರ್ತಿ ಇವರಿಗಿದೆ. ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಇವರು ಬಿಹಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ನಿಶಾಂತ್ ಕುಮಾರ್ (Nishant Kumar)
ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಈ ಬಾರಿ ಸಕ್ರಿಯ ರಾಜಕಾರಣಕ್ಕೆ ಅನಿರೀಕ್ಷಿತ ಪ್ರವೇಶ ಪಡೆಯುವ ಸೂಚನೆ ಸಿಕ್ಕಿದೆ. ಜೆಡಿಯು (JD-U) ಪಕ್ಷದೊಳಗೆ ಇವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಅವರು ಇತ್ತೀಚೆಗೆ ಈ ಬಗ್ಗೆ ಸುಳಿವು ನೀಡಿದ್ದು, ಯುವಕರ ಬೇಡಿಕೆಯಂತೆ ನಿಶಾಂತ್ ರಾಜಕೀಯಕ್ಕೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ನಿತೀಶ್ ಕುಮಾರ್ ಎರಡು ದಶಕಗಳ ತಮ್ಮ ಸುದೀರ್ಘ ಪಯಣವನ್ನು ನೆನೆಯುತ್ತಾ, ಬಿಹಾರವನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಲು ಜನರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೊಸ ಮುಖ್ಯಮಂತ್ರಿಯ ಆಯ್ಕೆಯ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.