ಹೊಸ ವರ್ಷದಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು? ಬಂಗಾರದ ದರ ಏರುತ್ತಿರುವುದೇಕೆ? ಈ ಬಗ್ಗೆ ತಜ್ಞರು ಹೇಳೋದೇನು?
Gold Price: ಕಳೆದ ಕೆಲವು ತಿಂಗಳಿಂದ ಚಿನ್ನದ ದರದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಕಡಿಮೆಯಾಗಬಹುದು ಎಂದು ಕಾದು ಕುಳಿತವರಿಗೆ ನಿರಾಸೆಯಾಗಿದೆ. ಹೀಗಾಗಿ ಮುಂದಿನ ವರ್ಷ ಅಂದರೆ ಹೊಸ ವರ್ಷದಲ್ಲಿ ಚಿನ್ನದ ದರ ಇಳಿಕೆಯಾಗಬಹುದೇ ಅಥವಾ ಮತ್ತಷ್ಟು ಹೆಚ್ಚಾಗಬಹುದೇ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಕೇಶವ ಪ್ರಸಾದ್ -
ಬೆಂಗಳೂರು, ಡಿ. 29: ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ (US Federal Reserve Bank) ಬಡ್ಡಿ ಕಡಿತ ಮಾಡಬಹುದು ಎನ್ನುವ ನಿರೀಕ್ಷೆ ಮತ್ತು ಜಾಗತಿಕವಾಗಿ ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಈ ವರ್ಷ ಚಿನ್ನದ ದರದಲ್ಲಿ (Gold rate) ನಿರಂತರ ಹೆಚ್ಚಳವಾಗಿದ್ದು, ಇದು ಹೊಸ ವರ್ಷದಲ್ಲಿ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ ಎಂದು ವಿಶ್ವವಾಣಿ ಟಿವಿ ಸುದ್ದಿ ಸಂಪಾದಕ ಕೇಶವ ಪ್ರಸಾದ್ (Keshav Prasad) ತಿಳಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 10 ಕ್ಯಾರೆಟ್ ಚಿನ್ನದ ದರ 12,42,340 ರುಪಾಯಿ ಆಗಿದ್ದು, 2 ಕ್ಯಾರೆಟ್ ಚಿನ್ನದ ದರ 19,29,450 ರುಪಾಯಿಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ಈ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 26ರಂದು ಚಿನ್ನದ ದರದಲ್ಲಿ ಭಾರಿ ಪ್ರಮಾಣದ ಹೆಚ್ಚಳವಾಗಿದೆ. ಇದಕ್ಕೆ ಮುಖ್ಯ ಕಾರಣ ಜಾಗತಿಕ ಅನಿಶ್ಚಿತತೆ. ರಷ್ಯಾ-ಉಕ್ರೇನ್, ಇರಾನ್- ಇಸ್ರೇಲ್, ಅಮೆರಿಕ- ವೆನಿಜುವೆಲಾ ನಡುವೆ ನಡೆಯುತ್ತಿರುವ ಸಂಘರ್ಷದ ಪರಿಣಾಮ ಚಿನ್ನದ ದರದ ಮೇಲೂ ಬೀಳುತ್ತಿದೆ. ದಿನೇ ದಿನೆ ದರ ಹೆಚ್ಚಾಗುತ್ತಿರುವುದರಿಂದ ಚಿನ್ನ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಚಿನ್ನದಲ್ಲಿ ಹೂಡಿಕೆ ಸುರಕ್ಷಿತ ಎನ್ನುವಂತೆ ಮಾರುಕಟ್ಟೆ ಪರಿಸ್ಥಿತಿಗಳು ಮಾಡಿವೆ. ಇದು ಮುಂದಿನ ವರ್ಷ ಚಿನ್ನದ ದರ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎನ್ನುತ್ತಾರೆ ತಜ್ಞರು.
ವಿಡಿಯೊ ಇಲ್ಲಿದೆ:
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಔನ್ಸ್‌ಗೆ ಡಿಸೆಂಬರ್ 26ರಂದು ಸುಮಾರು 4,500 ಡಾಲರ್ ಹೆಚ್ಚಳವಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳಕ್ಕೆ ಮುಖ್ಯ ಕಾರಣ. ದರ ಹೆಚ್ಚಳದಲ್ಲಿ ಚಿನ್ನ ತನ್ನ ಸೀಮಿತತೆಯ ಮಟ್ಟವನ್ನು ಮುರಿದಿದೆ. ಇದು ಮುಂದಿನ ದಿನಗಳಲ್ಲಿ 5,000 ಡಾಲರ್ ದಾಟಬಹುದು ಎನ್ನುತ್ತಾರೆ ತಜ್ಞರು.
ಅಮೆರಿಕ ನೈಜೀರಿಯಾದ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಹೀಗಾಗಿ ಇದು ಕೂಡ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಸೃಷ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಸಲು ಒತ್ತಾಯ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮುಂದಿನ ವರ್ಷದ ಆರಂಭದಲ್ಲೇ ಅಮೆರಿಕದ ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಎರಡು ಬಾರಿ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ಇದು ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ ಕೇಶವ್ ಪ್ರಸಾದ್.
ಫೆಡರಲ್ ರಿಸರ್ವ್ ಬಡ್ಡಿ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲೇ ಚಿನ್ನ ದರ ಶೇ. 7ರಷ್ಟು ಹಾಗೂ ಬೆಳ್ಳಿ ದರ ಸುಮಾರು ಶೇ. 4ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಚಿನ್ನ ಮತ್ತು ಬೆಳ್ಳಿಗೆ ದೀರ್ಘಾವಧಿಯ ಬೇಡಿಕೆ ಇರುವಂತೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
ಜಾಗತಿಕ ಸಂಘರ್ಷ, ಆರ್ಥಿಕತೆ ದುರ್ಬಲವಾಗಿದೆ, ಫೆಡರಲ್ ಬಡ್ಡಿ ದರ ಕಡಿತವಾಗುತ್ತಿದೆ ಎನ್ನುವ ಭರವಸೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಳವಾಗಿದೆ. ಗೋಲ್ಡ್ ಇಟಿಎಫ್ ಭಾರಿ ಪ್ರಮಾಣದಲ್ಲಿ ಈ ವರ್ಷದಲ್ಲಿ ಹೆಚ್ಚಳವಾಗಿದೆ. 2025ರ ಕೇವಲ 11 ತಿಂಗಳಲ್ಲಿ 25,566 ಕೋಟಿ ರುಪಾಯಿ ಹೂಡಿಕೆಯಾಗಿದೆ ಎಂದು ಅವರು ತಿಳಿಸಿದರು.
ಮ್ಯೂಚುವಲ್ ಫಂಡ್‌ನಲ್ಲಿ ಕೋಟಿ ರೂ. ಗಳಿಸೋದು ಹೇಗೆ?
ಚಿನ್ನದ ಮೇಲೆ ಹೂಡಿಕೆಗೆ ಇದು ಸರಿಯಾದ ಸಮಯವಾಗಿದೆ. ಹೀಗಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಬಯಸುವವರು ತಮ್ಮ ಆದಾಯದಲ್ಲಿ ಶೇ. 5ರಿಂದ 10ರಷ್ಟನ್ನು ಹೂಡಿಕೆ ಮಾಡಬಹುದು. ಫಿಸಿಕಲ್ ಗೋಲ್ಡ್‌ನಲ್ಲಿ ಮೇಕಿಂಗ್ ಚಾರ್ಜ್ ಇರುತ್ತೆ. ಇದಕ್ಕಿಂತ ಇಟಿಎಫ್ ಉತ್ತಮ ಎನ್ನುತ್ತಾರೆ ತಜ್ಞರು ಎಂದು ಕೇಶವ್ ಪ್ರಸಾದ್ ಹೇಳಿದ್ದಾರೆ.