2013ರ ಲೈಂಗಿಕ ದೌರ್ಜನ್ಯ ಪ್ರಕರಣ: ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅಪರಾಧಿ ಎಂದು ಘೋಷಿಸಿದ ಬಾಂಬೆ ಹೈಕೋರ್ಟ್
ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಬಂಧಿಸಲಾಗಿದ್ದ ತೆಹಲ್ಕಾದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ನನ್ನು ಬಾಂಬೆ ಹೈಕೋರ್ಟ್ ದೋಷಿ ಎಂದು ಘೋಷಿಸಿದೆ. 2013ರಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತರುಣ್ ತೇಜ್‌ಪಾಲ್ ನನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ (2013 physical abuse case) ಎಸಗಿದ ಆರೋಪಕ್ಕೆ ಸಂಬಂಧಿಸಿ ತೆಹಲ್ಕಾ ನಿಯತಕಾಲಿಕೆಯ ಸ್ಥಾಪಕ ಮತ್ತು ಮಾಜಿ ಸಂಪಾದಕ (Ex-Tehelka Editor) ತರುಣ್ ತೇಜ್‌ಪಾಲ್ (Tarun Tejpal) ನನ್ನು ಬಾಂಬೆ ಹೈಕೋರ್ಟ್ (Bombay High Court) ಅಪರಾಧಿ ಎಂದು ಘೋಷಿಸಿ ಗುರುವಾರ ತೀರ್ಪು ನೀಡಿದೆ. 2013ರಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮ್ಸಂದೇಕರ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗುರುವಾರ ಅವರನ್ನು ದೋಷಿ ಎಂದು ತೀರ್ಮಾನಿಸಿದೆ.
ಏನಿದು ಪ್ರಕರಣ?
ಗೋವಾದಲ್ಲಿ 2013 ರ ನವೆಂಬರ್ 7 ಮತ್ತು ನವೆಂಬರ್ 8 ರಂದು ನಡೆದ ಕಾರ್ಯಕ್ರಮ ವೊಂದರಲ್ಲಿ ಪಂಚತಾರಾ ಹೊಟೇಲ್ ನ ಲಿಫ್ಟ್‌ನಲ್ಲಿ ತರುಣ್ ತೇಜ್‌ಪಾಲ್ ಅವರು ಮಾಜಿ ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದರು. 2013ರ ನವೆಂಬರ್ 30ರಂದು ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಇದರ ಬಳಿಕ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತೆಹಲ್ಕಾದ ಪ್ರಧಾನ ಸಂಪಾದಕ ಹುದ್ದೆಯಿಂದ ಕೆಳಗಿಳಿಸಲಾಯಿತು.
ರೈತನ ಜೀವ ಉಳಿಸಲು ತನ್ನ ಲೈಫ್ ಜಾಕೆಟ್ ನೀಡಿ ತಾನೇ ಪ್ರವಾಹದಲ್ಲಿ ಕೊಚ್ಚಿ ಹೋದ ಈಜು ತರಬೇತುದಾರ
ಅವರ ವಿರುದ್ಧ ಮಹಿಳೆಯರ ಮೇಲಿನ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 342, 354, 354-ಎ, 354-ಬಿ, 376(2)(ಎಫ್) ಮತ್ತು 376(2)(ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಗೋವಾದ ವಿಚಾರಣಾ ನ್ಯಾಯಾಲಯವು 2021ರಲ್ಲಿ ಅವರ ವಿರುದ್ಧದ ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರವು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಪರವಾಗಿ ನ್ಯಾಯಾಲಯದಲ್ಲಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ ಸೆಷನ್ಸ್ ನ್ಯಾಯಾಲಯವು ಗಂಭೀರ ತಪ್ಪು ಮಾಡಿದೆ ಎಂದು ಹೇಳಿದರು. ಅಲ್ಲದೇ ಅವರ ಖುಲಾಸೆಯನ್ನು ರದ್ದುಗೊಳಿಸುವಂತೆ ಕೋರಿದರು. ತೇಜ್ ಪಾಲ್ ಪರ ಹಿರಿಯ ವಕೀಲ ಅಬಾದ್ ಪೊಂಡಾ ಅವರು ವಾದ ಮಂಡಿಸಿದರು.
ತರುಣ್ ತೇಜ್‌ಪಾಲ್ ಹೇಳಿದ್ದೇನು?
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತೇಜ್ ಪಾಲ್ ಅವರು, ತನಗೆ ಈಗ 62 ವರ್ಷ. ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ನಾನೊಬ್ಬ ಸಂತ್ರಸ್ತ. ನನಗೆ ಹೆಂಡತಿ ಇದ್ದಾಳೆ. ದಯವಿಟ್ಟು ನನ್ನ ಬಗ್ಗೆ ದಯೆ ತೋರಿ. ಎಲ್ಲಾ ವಿಷಯಗಳನ್ನು ದಾಖಲೆ ಮೂಲಕ ತಿಳಿಸಿದ್ದೇನೆ. ಹೇಳಲು ಬೇರೆ ಏನೂ ಇಲ್ಲ ಎಂದು ಹೇಳಿದ್ದಾರೆ.
ಅವರ ಪರ ವಕೀಲರು ಈ ಪ್ರಕರಣವು 13 ವರ್ಷ ಹಳೆಯದ್ದಾಗಿದೆ. ಈ ಅಂಶವನ್ನು ಪರಿಗಣಿಸಿ ಶಿಕ್ಷೆ ಪ್ರಕಟಿಸುವಾಗ ತಮ್ಮ ಕಕ್ಷಿದಾರರ ಮೇಲೆ ದಯೆ ತೋರಿಸುವಂತೆ ನ್ಯಾಯಪೀಠದ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಎರಡು ಪಕ್ಷಗಳ ಮಾತುಗಳು ಆಲಿಸಿದ ನ್ಯಾಯಾಲಯ ಘಟನೆಯ ಮೊದಲು ಮತ್ತು ಅನಂತರ ದೂರುದಾರರ ನಡವಳಿಕೆ, ಇಮೇಲ್, ವಾಟ್ಸಾಪ್ ಸಂದೇಶಗಳು ಮತ್ತು ಸಾಕ್ಷ್ಯಚಿತ್ರ ದಾಖಲೆಗಳು, ದೂರುದಾರರ ಹೇಳಿಕೆ, ತಜ್ಞರ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳೆದ ವಾರ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ತರುಣ್ ತೇಜ್‌ಪಾಲ್ ಅವರನ್ನು ದೋಷಿ ಎಂದು ತೀರ್ಮಾನಿಸಿ ತೀರ್ಪು ನೀಡಿದೆ.