ಮುಂಬೈ: ಭೂಗತ ಪಾತಕಿಯ (Underworld Don) ಮಗಳೊಬ್ಬಳು ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (PM narendra modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಅವರಲ್ಲಿ ಮನವಿ ಮಾಡಿದ್ದಾರೆ. ಭೂಗತ ಲೋಕದ ಪಾತಕಿ ಹಾಜಿ ಮಸ್ತಾನ್ ಅವರ ಮಗಳು ಬಲವಂತದ ಮದುವೆ ಮತ್ತು ಅತ್ಯಾಚಾರದ ಆರೋಪ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹಸೀನ್ ಮಸ್ತಾನ್ ಮಿರ್ಜಾ (Haseen Mastan Mirza), ಭೂಗತ ಪಾತಕಿಯ ಮಗಳಾಗಿದ್ದರೂ ತಾನು ಮಾಜಿ ಪತಿಯಿಂದ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಮಾವನ ಮಗ ನಾಸೀರ್ ಹುಸೇನ್ 1996ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದನು. ಆಗ ನನಗೆ ಕೇವಲ 12 ವರ್ಷ. ಬಳಿಕ ಅವನೊಂದಿಗೆ ನನ್ನನ್ನು ಬಲವಂತವಾಗಿ ಮದುವೆ ಮಾಡಿಸಲಾಯಿತು. ತಾನು ಭೂಗತ ಪಾತಕಿಯ ಮಗಳಾದರೂ ತಾನು ಈ ಅಗ್ನಿ ಪರೀಕ್ಷೆ ಎದುರಿಸಬೇಕಾಯಿತು. ತಂದೆಯ ಮರಣದ ಬಳಿಕ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಚಾಕೋಲೆಟ್ ನೀಡಿ ಲೈಂಗಿಕ ದೌರ್ಜನ್ಯ; ಹಾಸನದಲ್ಲಿ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ
ನನ್ನ ಮೇಲೆ ಅಪರಾಧಗಳು ನಡೆದಾಗ ನಾನು ಅಪ್ರಾಪ್ತ ವಯಸ್ಕಳಾಗಿದ್ದೆ. ತನ್ನ ಮೇಲೆ ಅತ್ಯಾಚಾರ, ನಿರಂತರ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಸಲಾಗಿದೆ. ನನ್ನ ಗುರುತನ್ನು ಮರೆಮಾಡಿ ಆಸ್ತಿಯನ್ನು ಕಬಳಿಸಿದರು ಎಂದು ಅವರು ಹೇಳಿದ್ದಾರೆ.
ತಂದೆಯ ಸಂಪತ್ತಿಗಾಗಿ ನನ್ನ ಮೇಲೆ ಈ ಅಪರಾಧಗಳನ್ನು ಮಾಡಲಾಗಿದೆ. ನಾನು ಹಾಜಿ ಮಸ್ತಾನ್ ಅವರ ಮಗಳಾಗಿ ಜನಿಸದಿದ್ದರೆ ಈ ಸವಾಲುಗಳನ್ನು ಎದುರಿಸುತ್ತಿರಲಿಲ್ಲ. ಅಪರಾಧಿಗಳು ಹಣವನ್ನು ನೋಡಿದರು. ತಂದೆ ನಿಧನರಾಗಿದ್ದರಿಂದ ಅವರು ನಮ್ಮ ಎಲ್ಲಾ ಸಂಪತ್ತನ್ನು ಪಡೆಯಬಹುದು ಎಂದು ಭಾವಿಸಿದ್ದರು. ಇದಕ್ಕಾಗಿಯೇ ನನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಮಾಜಿ ಪತಿ ಕೂಡ ನನಗೆ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.
ನಾನು ತಂದೆಯ ಹೆಸರು ಕಳಂಕಿತವಾಗುವುದನ್ನು ಬಯಸುವುದಿಲ್ಲ. ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಆಶೀರ್ವಾದಗಳನ್ನು ಪಡೆದಿದ್ದರು. ಅವರು ಅನೇಕ ಜನರಿಗೆ ಸಹಾಯ ಕೂಡ ಮಾಡಿದ್ದರು. ಅವರ ಮಗಳಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಹೀಗಾಗಿ ನಾನು ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ ಎಂದು ಹಸೀನ್ ಹೇಳಿದರು.
ಬಹಿರಂಗವಾಗಿ ಅಪರಾಧಗಳನ್ನು ಮಾಡುತ್ತಿರುವ ಅಪರಾಧಿಗಳು ಭಯಪಡುವಂತೆ ಕಾನೂನುಗಳನ್ನು ಕಠಿಣಗೊಳಿಸಬೇಕು ಎಂದ ಅವರು ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ನನ್ನ ಮೇಲೆ ಅತ್ಯಾಚಾರ ಮಾಡಲಾಯಿತು, ನನ್ನನ್ನು ಕೊಲ್ಲಲು ಪ್ರಯತ್ನಿಸಲಾಯಿತು, ನನ್ನ ಗರ್ಭದಲ್ಲಿರುವ ಮಗುವನ್ನು ಕೊಲ್ಲಲಾಯಿತು, ನನ್ನನ್ನು ಬಲವಂತವಾಗಿ ಮದುವೆ ಮಾಡಲಾಯಿತು, ಬಳಿಕ ನನ್ನನ್ನು ಸಾಯಲು ಬೀದಿಗಳಲ್ಲಿ ಬಿಡಲಾಯಿತು; ನನ್ನ ಬಳಿ ಹಣವಿರಲಿಲ್ಲ, ಏನೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 2013 ರಿಂದ ಹೋರಾಡುತ್ತಿದ್ದೇನೆ. ಆರ್ಥಿಕ ತೊಂದರೆಗಳ ಕಾರಣದಿಂದ ಅದನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಪೊಲೀಸರಿಂದ ತನಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
14ನೇ ವಯಸ್ಸಿನಲ್ಲಿ ಗರ್ಭಪಾತವಾದಾಗ ನನ್ನ ಚಿಕ್ಕಮ್ಮ ಪೊಲೀಸರಿಗೆ ಕರೆ ಮಾಡಿ ನನ್ನನ್ನು ಬಾಲಾಪರಾಧಿ ಮನೆಗೆ ಕಳುಹಿಸಲು ಪ್ರಯತ್ನಿಸಿದ್ದರು. ಪೊಲೀಸರು ನಮ್ಮ ಮನೆಗೆ ಬಂದರು. ಆದರೆ ಅವರು ನನಗೆ ಸಹಾಯ ಮಾಡಲಿಲ್ಲ. ವಿಚ್ಛೇದನದ ಬಳಿಕ ದೀರ್ಘಕಾಲದ ದುಃಖವು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡಿತು ಎಂದು ಅವರು ತಿಳಿಸಿದ್ದಾರೆ.
ತನಗೆ ರಾಜಕೀಯ ಸೇರುವ ಯಾವುದೇ ಇಚ್ಛೆ ಇಲ್ಲ ಎಂದ ಅವರು, ರಾಜಕೀಯದಲ್ಲಿ ಅನೇಕರ ಪರಿಚಯವಿದೆ. ಆದರೆ ನಾನು ಅದರಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಅಧಿಕಾರದಲ್ಲಿ ಯಾರೇ ಇದ್ದರೂ ಈಗಿರುವ ಬಿಜೆಪಿಯಂತೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.
Theft Case: ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್‌ನಿಂದ 80,000 ರೂ. ಎಗರಿಸಿದ ಖದೀಮರು!
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಕ್ರಮವನ್ನು ಬೆಂಬಲಿಸುವುದಾಗಿ ಹೇಳಿದ ಅವರು, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ತಮಗೆ ಅಹ್ವಾನ ಬಂದಿತ್ತು. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಆ ಆಫರ್ ನಿರಾಕರಿಸಿದ್ದೇನೆ ಎಂದರು.
ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡ ಅವರು ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಪ್ರಧಾನ ಮಂತ್ರಿಯ ನಿರ್ಧಾರವನ್ನು ಶ್ಲಾಘಿಸಿದರು. ಇಂತಹ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾನೂನುಗಳಿಗೆ ಮನವಿ ಮಾಡಿದರು. ಇಸ್ಲಾಂನಲ್ಲಿ ಧಾರ್ಮಿಕ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.