ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಸಂಶಯಕ್ಕೆ ಪತ್ನಿ ಬಲಿ, ಲೇಡಿ ಕಂಡಕ್ಟರ್‌ನ ಇರಿದು ಕೊಂದ ಕಾನ್‌ಸ್ಟೇಬಲ್

Belagavi crime: ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಗಂಡನಿಂದ ಪಾರಾಗಲು ಕಾಶಮ್ಮ ನೆಲ್ಲಿಗಣಿ ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಆರೋಪಿ ಸಂತೋಷ್, ಕಾಶಮ್ಮನಿಗೆ ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಸಂಶಯಕ್ಕೆ ಪತ್ನಿ ಬಲಿ, ಲೇಡಿ ಕಂಡಕ್ಟರ್‌ನ ಇರಿದು ಕೊಂದ ಕಾನ್‌ಸ್ಟೇಬಲ್

-

ಹರೀಶ್‌ ಕೇರ ಹರೀಶ್‌ ಕೇರ Oct 18, 2025 9:21 AM

ಬೆಳಗಾವಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಸಂಶಯಪೀಡಿತ ಪೊಲೀಸ್ ಕಾನ್​ಸ್ಟೇಬಲ್ (Police Constable) ಬರ್ಬರವಾಗಿ ಕೊಲೆ (Murder case) ಮಾಡಿ ಪರಾರಿ ಆಗಿರುವ ಘಟನೆ ಬೆಳಗಾವಿ (Belagavi crime news) ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್​ನಲ್ಲಿ ಐದು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಶಮ್ಮ ನೆಲ್ಲಿಗಣಿ (34) ಅನ್ನು ಪಿಸಿ ಸಂತೋಷ್ ಕಾಂಬಳೆ ಹತ್ಯೆಗೈದಿದ್ದಾರೆ. ಕೊಲೆಯಾದ ಕಾಶಮ್ಮ ಕೆಎಸ್​ಆರ್​ಟಿಸಿ ಬಸ್​ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ಪತಿಗಾಗಿ ಸವದತ್ತಿ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಸುಮಾರು 13 ವರ್ಷಗಳ ಹಿಂದೆ ಸಂತೋಷ್ ಹಾಗೂ ಕಾಶಮ್ಮ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸಂತೋಷ್ ಹೆಂಡತಿಯ ಮೇಲೆ ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ದೈಹಿಕ ಹಾಗೂ ಮಾನಸಿಕ ಹಿಂಸೆ ತಾಳಲಾರದೆ ಕಾಶಮ್ಮ ಗಂಡನಿಂದ ದೂರವಾಗಿದ್ದು, ತವರು ಮನೆ ಸೇರಿದ್ದರು. ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಅಲ್ಲೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಮದುವೆ ಜೀವನದಲ್ಲಿ ನಿರಂತರ ಕಲಹ ಮುಂದುವರಿದ ಹಿನ್ನೆಲೆಯಲ್ಲಿ ಕಾಶಮ್ಮ ಅವರು ಬೈಲಹೊಂಗಲ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 5, 2025ರಂದು ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಆರೋಪಿ ಸಂತೋಷ್, ಕಾಶಮ್ಮನನ್ನು ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಹೇಳಿದ್ದಾರೆ.

ಇದನ್ನೂ ಓದಿ: Crime News: ಗೆಳತಿಯನ್ನು ಕೊಂದ 48 ವರ್ಷಗಳ ನಂತರ ಆರೋಪಿ ಅರೆಸ್ಟ್; 23ನೇ ಹರೆಯದಲ್ಲಿ ಕೊಲೆ, 71ನೇ ವಯಸ್ಸಿನಲ್ಲಿ ಬಂಧನ

ಅಕ್ಟೋಬರ್ 13ರ ರಾತ್ರಿ 8 ಗಂಟೆಯ ವೇಳೆಗೆ ಸಂತೋಷ್ ಕಾಶಮ್ಮನ ಮನೆಗೆ ತೆರಳಿ ಗಲಾಟೆ ನಡೆಸಿದ್ದ. ಕೋಪದಿಂದ ಕತ್ತು ಕೊಯ್ದು , ಹೊಟ್ಟೆಗೆ ಮೂರು ಬಾರಿ ಇರಿದು ಕ್ರೂರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮೂರು ದಿನಗಳ ಬಳಿಕ ಮನೆಯೊಳಗಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಾರಿಯಾಗಿರುವ ಆರೋಪಿ ಸಂತೋಷ್ ಕಾಂಬಳೆಯ ಪತ್ತೆಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.