ನವದೆಹಲಿ: ಥೈಲ್ಯಾಂಡ್ (thailand)ನ ಫುಕೆಟ್ ನಿಲ್ದಾಣದಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದು (Air india flight) ಆಗಸ್ಟ್ 4ರಂದು ತೀವ್ರ ಪ್ರಕ್ಷುಬ್ದತೆಗೆ ( Air India flight turbulence) ಗುರಿಯಾಗಿ ಸುಮಾರು 300 ಅಡಿಗಳಷ್ಟು ಕುಸಿದಿತ್ತು. ಇದರಿಂದ ವಿಮಾನದಲ್ಲಿದ್ದ 12 ಪ್ರಯಾಣಿಕರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದ್ದು, ಇದರ ಪೈಲೆಟ್ ಮಾದಕ ದ್ರವ್ಯ (drug) ಸೇವಿಸಿರುವುದು ದೃಢಪಟ್ಟಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇದೀಗ ಇನ್ನು ಮುಂದೆ ಎಲ್ಲಾ ಪೈಲೆಟ್ ಗಳಿಗೂ ಮಾದಕ ದ್ರವ್ಯ ಪರೀಕ್ಷೆ ನಡೆಸಲು ಏರ್ ಇಂಡಿಯಾ ನಿರ್ಧರಿಸಿದೆ.
ಥೈಲ್ಯಾಂಡ್ (thailand)ನ ಫುಕೆಟ್ ನಿಲ್ದಾಣದಿಂದ ಆಗಸ್ಟ್ 4ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ 2379 ಇಳಿಯುವ ಮೊದಲು ತೀವ್ರ ಪ್ರಕ್ಷುಬ್ದತೆಗೆ ಗುರಿಯಾಗಿತ್ತು. ಸ್ವಲ್ಪ ಸಮಯ ನಿಯಂತ್ರಣ ಕಳೆದುಕೊಂಡ ವಿಮಾನವನ್ನು ಬಳಿಕ ಪೈಲೆಟ್ ನಿಯಂತ್ರಿಸಿದ್ದರು. ಈ ಘಟನೆ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡಿತ್ತು.
ಫುಕೆಟ್-ದೆಹಲಿ ಪೈಲಟ್ ಗೆ ನಡೆಸಿದ ಮಾದಕ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಪೈಲಟ್‌ಗಳನ್ನು ಮಾದಕ ದ್ರವ್ಯ ಸೇವನೆ ಕುರಿತು ಪರೀಕ್ಷಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಸದ್ಯ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಇನ್ನು ಮುಂದೆ ನಿಷೇಧಿಸಲಾದ ವಸ್ತುಗಳು ಮತ್ತು ಔಷಧ ಸೇವನೆ ಬಗ್ಗೆ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಿದೆ. ಈ ಪರೀಕ್ಷೆಯು ಗುರುವಾರದಿಂದಲೇ ಪ್ರಾರಂಭವಾಗಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್ ಇಂಡಿಯಾ ವಿಮಾನ ಹಾರಾಟದ ವೇಳೆ ಟರ್ಬುಲೆನ್ಸ್: ಏಕಾಏಕಿ 300 ಅಡಿ ಕುಸಿದು 12 ಪ್ರಯಾಣಿಕರಿಗೆ ಗಾಯ; ವಿಡಿಯೊ ವೈರಲ್
ಆಗಸ್ಟ್ 4 ರಂದು ಫುಕೆಟ್-ದೆಹಲಿ ವಿಮಾನದಲ್ಲಿ ಮೂರು ಶಿಶುಗಳು, ಎಂಟು ಸಿಬ್ಬಂದಿ ಸೇರಿದಂತೆ 137 ಪ್ರಯಾಣಿಕರು ಇದ್ದರು. ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಘಟನೆಯಲ್ಲಿ ಇಪ್ಪತ್ತು ಪ್ರಯಾಣಿಕರು ಮತ್ತು ನಾಲ್ಕು ಕ್ಯಾಬಿನ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ಇಬ್ಬರು ಪೈಲಟ್‌ಗಳನ್ನು ಕಡ್ಡಾಯವಾಗಿ ಸೈಕೋಆಕ್ಟಿವ್-ಮ್ಯಾನ್ಯೂಸ್ಟ್ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದ್ದು, ಇದರಲ್ಲಿ ಪೈಲಟ್-ಇನ್-ಕಮಾಂಡ್ ಅವರ ಆರಂಭಿಕ ಸ್ಕ್ರೀನಿಂಗ್ ನಲ್ಲಿ ಪಾಸಿಟಿವ್ ತೋರಿಸಿದ್ದು, ಇದರ ಬಳಿಕ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ತನಿಖೆ ಪೂರ್ಣಗೊಳ್ಳುವವರೆಗೆ ಇಬ್ಬರು ಪೈಲೆಟ್ ಗಳನ್ನು ಕೂಡ ವಜಾಗೊಳಿಸಲಾಗಿದೆ. ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿ ಭಾರತದ ಅಸ್ತಿತ್ವದಲ್ಲಿರುವ ಕಾನೂನು ಪರಿಶೀಲನೆ ನಡೆಸಿ ಇನ್ನಷ್ಟು ಕಠಿಣಗೊಳಿಸುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲನೆ ನಡೆಸುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ಪ್ರಸ್ತುತ ಇರುವ ಕಾನೂನಿನ ಪ್ರಕಾರ ಮಾದಕ ದ್ರವ್ಯ ಸೇವನೆಯು ಎರಡು ಬಾರಿ ದೃಢಪಟ್ಟರೆ ವಾಯುಯಾನ ಸಿಬ್ಬಂದಿಯ ಪರವಾನಗಿಯನ್ನು ತಲಾ ಮೂರು ವರ್ಷಗಳವರೆಗೆ ಅಮಾನತುಗೊಳಿಸಬಹುದು. ಮೂರನೇ ಬಾರಿಗೆ ಕಾನೂನು ಉಲ್ಲಂಘಿಸಿದರೆ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.
ತಪ್ಪಿದ ಭಾರೀ ಅನಾಹುತ ; ಮುಂಬೈ ವಿಮಾನ ನಿಲ್ದಾಣದಲ್ಲಿ ದೆಹಲಿ-ಬೌಂಡ್ ಏರ್ ಇಂಡಿಯಾ, ಎಐ ಎಕ್ಸ್‌ಪ್ರೆಸ್ ವಿಮಾನ ಮುಖಾಮುಖಿ
ಘಟನೆಗೆ ಸಂಬಂಧಿಸಿ ತನಿಖೆಯನ್ನು ಮುಂದುವರಿಸಲಾಗಿದೆ. ಒಂದು ತಿಂಗಳೊಳಗೆ ಮಧ್ಯಂತರ ವರದಿ ಸಲ್ಲಿಕೆಯಾಗುವ ನೀರಿಕ್ಷೆ ಇದೆ. ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಸೇರಿದಂತೆ ಪ್ರಮುಖ ಪುರಾವೆಗಳನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ಕೂಡ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.