ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮದುವೆ ಮಂಟಪದಲ್ಲಿ ವರನಿಗೆ ಚೂರಿ ಇರಿತ; ದಾಳಿಕೋರರನ್ನು 2 ಕಿ.ಮೀ. ಬೆನ್ನಟ್ಟಿದ ಡ್ರೋನ್ ಕ್ಯಾಮರ

Groom stabbed wedding: ವಿವಾಹ ಸಮಾರಂಭವೊಂದರಲ್ಲಿ ವರನ ಮೇಲೆ ಹಲ್ಲೆ ನಡೆದಿದೆ. ದುಷ್ಕರ್ಮಿಯೊಬ್ಬ ಚಾಕುವಿನಿಂದ ವರನಿಗೆ ಇರಿದು ಪರಾರಿಯಾಗಿದ್ದಾನೆ. ಆತ ಪರಾರಿಯಾಗುತ್ತಿರುವ ದೃಶ್ಯ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಸುಮಾರು 2 ಕಿ.ಮೀ.ವರೆಗೆ ಡ್ರೋನ್ ಆರೋಪಿಗಳನ್ನು ಹಿಂಬಾಲಿಸಿದೆ.

ಮದುವೆ ಮಂಟಪದಲ್ಲಿ ವರನಿಗೆ ಚೂರಿ ಇರಿತ

ವರನಿಗೆ ಚಾಕು ಇರಿದು, ಆರೋಪಿಗಳು ಎಸ್ಕೇಪ್ (ಸಂಗ್ರಹ ಚಿತ್ರ) -

Priyanka P
Priyanka P Nov 12, 2025 9:40 PM

ಮುಂಬೈ: ವಿವಾಹ ಸಮಾರಂಭವೊಂದರಲ್ಲಿ ದುಷ್ಕರ್ಮಿಗಳು ವರನಿಗೆ ವೇದಿಕೆಯಲ್ಲೇ ಇರಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ. ಸಮಾರಂಭವನ್ನು ಚಿತ್ರೀಕರಿಸಲು ನಿಯೋಜಿಸಲಾದ ಡ್ರೋನ್ ದಾಳಿಯನ್ನು ಸೆರೆ ಹಿಡಿದಿದಲ್ಲದೆ, ಪರಾರಿಯಾಗುತ್ತಿದ್ದ ಆರೋಪಿ ಮತ್ತು ಆತನ ಸಹಚರನನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿದೆ (Crime News). ಈ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral video) ಆಗಿದೆ.

ಬದ್ನೇರಾ ರಸ್ತೆಯ ಸಾಹಿಲ್ ಲಾನ್‌ನಲ್ಲಿ ರಾತ್ರಿ 9:30ರ ಸುಮಾರಿಗೆ 22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂದು ಗುರುತಿಸಲಾದ ಆರೋಪಿಯು ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ತೊಡೆ ಮತ್ತು ಮೊಣಕಾಲಿಗೆ ಇರಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಬರೋಬ್ಬರಿ 14 ರೇಪ್‌ & ಮರ್ಡರ್‌ ಕೇಸ್‌ನ ನರ ಹಂತಕ ಸುರೇಂದರ್‌ ಕೋಲಿ ಖುಲಾಸೆ; ತಕ್ಷಣ ರಿಲೀಸ್‌ಗೆ ಸುಪ್ರೀಂ ಆದೇಶ

ಮದುವೆಯ ಸಂಭ್ರಮದ ಕ್ಷಣವನ್ನು ರೆಕಾರ್ಡ್ ಮಾಡಲು ಡ್ರೋನ್ ಕ್ಯಾಮರವನ್ನು ಬಳಸಲಾಗಿತ್ತು. ಮದುವೆ ಕಾರ್ಯಕ್ರಮವು ಅಪರಾಧ ಸ್ಥಳವಾಗಿ ಮಾರ್ಪಟ್ಟಿದ್ದರಿಂದ ಡ್ರೋನ್ ಇದಕ್ಕೆ ಸಾಕ್ಷಿಯಾಯಿತು. ಈ ಘಟನೆಯು ವಿವಾಹ ಸಂಭ್ರಮವನ್ನು ಚಿತ್ರೀಕರಿಸಲು ನಿಯೋಜಿಸಲಾದ ಡ್ರೋನ್ ಕ್ಯಾಮರದಲ್ಲಿ ಸೆರೆಯಾಗಿದೆ. ಅದು ಈಗ ಅತ್ಯಂತ ನಿರ್ಣಾಯಕ ಸಾಕ್ಷಿಗಳಲ್ಲಿ ಒಂದಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಅತಿಥಿಗಳು ಭಯಭೀತರಾಗಿದ್ದರು. ಆದರೆ ಡ್ರೋನ್ ಆಪರೇಟರ್ ದಾಳಿಕೋರನ ಚಲನೆಯನ್ನು ರೆಕಾರ್ಡ್ ಮಾಡುತ್ತಲೇ ಇದ್ದನು. ಆರೋಪಿಯು ತಪ್ಪಿಸಿಕೊಳ್ಳುವುದನ್ನು ಸಹ ಸೆರೆ ಹಿಡಿದಿದ್ದಾನೆ. ಆರೋಪಿಯ ಚಲನವಲನಗಳನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾದನು. ನಂತರ ಯಾವ ಕಡೆ ಹೋದ ಎಂಬುದು ತಿಳಿದು ಬಂದಿಲ್ಲ.

ವಿಡಿಯೊ ವೀಕ್ಷಿಸಿ:



ಆರೋಪಿಯ ಮುಖ ಮತ್ತು ತಪ್ಪಿಸಿಕೊಳ್ಳುವ ಮಾರ್ಗವನ್ನು ಸ್ಪಷ್ಟವಾಗಿ ತೋರಿಸುವ ದೃಶ್ಯಾವಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಇದನ್ನು ಪ್ರಕರಣದ ಪ್ರಮುಖ ಸಾಕ್ಷಿ ಎಂದು ಹೇಳಿದ್ದಾರೆ.

ವಿಡಿಯೊ ವಿವಾಹ ವೇದಿಕೆಯಿಂದ ಪ್ರಾರಂಭವಾಗುತ್ತದೆ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿದ ದಾಳಿಕೋರನನ್ನು ಡ್ರೋನ್‌ ವೇಗವಾಗಿ ಹಿಂಬಾಲಿಸುತ್ತದೆ. ಅವನು ಹುಲ್ಲುಹಾಸಿನಿಂದ ಹೊರಗೆ ಓಡಿಹೋಗಿ ಹೊರಗೆ ನಿಲ್ಲಿಸಿದ್ದ ಬೈಕನ್ನು ಹತ್ತಿ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಈ ವೇಳೆ ಕಪ್ಪು ಉಡುಪಿನಲ್ಲಿದ್ದ ಮತ್ತೊಬ್ಬ ವ್ಯಕ್ತಿಯು ಕೈಯಲ್ಲಿ ಚಾಕು ಹಿಡಿದುಕೊಂಡು ಬೈಕ್ ಹತ್ತಿದ್ದಾನೆ. ಬಳಿಕ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ದಂಪತಿಯ ಸಂಬಂಧಿಕರಲ್ಲಿ ಒಬ್ಬರು ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಬೆದರಿಸಿ, ಇಬ್ಬರೂ ಓಡಿಹೋದರು. ಡ್ರೋನ್ ಕ್ಯಾಮರ ಇಬ್ಬರು ದಾಳಿಕೋರರನ್ನು ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿತು.

ಡ್ರೋನ್ ಆಪರೇಟರ್‌ನ ಜಾಗರೂಕತೆಯು ನಮಗೆ ತುಂಬಾ ಸಹಾಯಕವಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (SHO) ಸುನಿಲ್ ಚೌಹಾಣ್ ಹೇಳಿದರು. ಆರೋಪಿಗಳನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ಈ ವಿಡಿಯೊ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಡಿಜೆ ಪ್ರದರ್ಶನದ ಸಂದರ್ಭದಲ್ಲಿ ಉಂಟಾದ ಸಣ್ಣ ವಿವಾದ ಈ ಘಟನೆಗೆ ಕಾರಣ. ಡ್ಯಾನ್ಸ್‌ ಮಾಡುವಾಗ ವರ ಮತ್ತು ಆರೋಪಿಯನ್ನು ತಳ್ಳಿದ್ದಾನೆ. ಇದಕ್ಕೆ ಆರೋಪಿ ಸೇಡು ತೀರಿಸಿದ್ದಾನೆ ಎನ್ನಲಾಗಿದೆ. ಗದ್ದಲದಲ್ಲಿ ಆರೋಪಿಯು ವರನ ತಂದೆ ರಾಮ್‌ಜಿ ಸಮುದ್ರ ಅವರ ಮೇಲೂ ಹಲ್ಲೆ ನಡೆಸಲು ಯತ್ನಿಸಿ, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬದ್ನೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಯ ಚಲನವಲನಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳು ಡ್ರೋನ್ ದೃಶ್ಯಾವಳಿಗಳನ್ನು ಬಳಸುತ್ತಿದ್ದು, ಹುಡುಕಾಟ ಆರಂಭಿಸಿವೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಗಾಯಗೊಂಡ ವರನನ್ನು ಅಮರಾವತಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.