ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ; ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು 58 ಗ್ರಾಂ ಚಿನ್ನಾಭರಣ ದೋಚಿದ ಯುವತಿ!
Bengaluru Fraud Case: ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಮಿಳುನಾಡಿನ ಯುವಕ ವಂಚನೆಗೊಳಗಾಗಿದ್ದಾನೆ. ಯುವ ನೀಡಿದ ದೂರಿನ ಮೇರೆಗೆ ಆರೋಪಿ ಯುವತಿ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
-
ಬೆಂಗಳೂರು, ನ. 12: ಡೇಟಿಂಗ್ ಆ್ಯಪ್ ಮುಖಾಂತರ ಪರಿಚಯವಾದ ಯುವಕನನ್ನು ಯುವತಿಯೊಬ್ಬಳು ಲಾಡ್ಜ್‌ಗೆ ಕರೆದೊಯ್ದು ಪ್ರಜ್ಞೆ ತಪ್ಪಿಸಿ ಆತನ ಬಳಿ 58 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿ (Bengaluru Fraud Case) ಪರಾರಿಯಾಗಿರುವುದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಅವಿನಾಶ್ ಕುಮಾರ್ ವಂಚನೆಗೊಳಗಾದ ಯುವಕ. ಈತ ನೀಡಿದ ದೂರಿನ ಮೇರೆಗೆ ಕವಿಪ್ರಿಯಾ ಎಂಬಾಕೆಯ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಪೀಣ್ಯದ ನಾಗಸಂದ್ರದ ಪಿಜಿಯೊಂದರಲ್ಲಿ ವಾಸವಾಗಿದ್ದ ಅವಿನಾಶ್, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಹ್ಯಾಪನ್ ಆ್ಯಪ್ ಹೆಸರಿನ ಡೇಟಿಂಗ್ ಆ್ಯಪ್‌ನಲ್ಲಿ ಯುವಕನನ್ನು ಆರೋಪಿ ಯುವತಿ ಪರಿಚಯಿಸಿಕೊಂಡಿದ್ದಳು. ಇಬ್ಬರು ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪೋನ್ನಲ್ಲಿ ಮಾತನಾಡುತ್ತಿದ್ದರು. ಬಳಿಕ ನ.1ರಂದು ಇಂದಿರಾನಗರದ ರೆಸ್ಟೋರೆಂಟ್ವೊಂದರಲ್ಲಿ ಇಬ್ಬರೂ ಭೇಟಿಯಾಗಿ ಮದ್ಯ ಪಾರ್ಟಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ಧಾರೆ.
ದೂರಿನಲ್ಲೇನಿದೆ?
ಮದ್ಯ ಸೇವಿಸಿದ ಬಳಿಕ ನಾನು ಪಿಜಿಗೆ ಹೋಗಲು ಸಾಧ್ಯವಿಲ್ಲ ಎಂದೆ. ಹೀಗಾಗಿ ಯುವತಿ ಲಾಡ್ಜ್ನಲ್ಲಿರೂಮ್ ಬುಕ್ ಮಾಡಿದಳು. ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಊಟವನ್ನು ಇಬ್ಬರು ಕುಳಿತುಕೊಂಡು ಸೇವಿಸಿದೆವು. ಬಳಿಕ ಯುವತಿ ಕುಡಿಯಲು ನೀರು ಕೊಟ್ಟಳು. ಸೇವಿಸಿದ ಬಳಿಕ ನನಗೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಬೆಳಗ್ಗೆ ಎದ್ದು ನೋಡಿದಾಗ ಚಿನ್ನದ ಸರ, ಚಿನ್ನದ ಕೈಬಳೆ, 10 ಸಾವಿರ ನಗದು ಸೇರಿದಂತೆ ಒಟ್ಟು 6.80 ಲಕ್ಷ ರೂ ಮೌಲ್ಯದ 58 ಗ್ರಾಂ ಚಿನ್ನಾಭರಣ ಇರಲಿಲ್ಲ. ಯುವತಿ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಳು ಎಂದು ಅವಿನಾಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಚಿನ್ನ ಮಾರಾಟ ಮಾಡಿ, ಹಣ ಕೊಡೋದಾಗಿ ವಂಚನೆ; ಇಬ್ಬರು ಅರೆಸ್ಟ್
ಬೆಂಗಳೂರು: ಚಿನ್ನ ಮಾರಾಟ ಮಾಡಿ, ಹಣ ಕೊಡುವುದಾಗಿ ಹೇಳಿ 1.6 ಕೋಟಿ ರೂ. ಮೌಲ್ಯದ 1,300 ಗ್ರಾಂ ಚಿನ್ನವನ್ನು ಲಪಟಾಯಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜೀರನ್ ಸಕಾರಿಯಾ, ರಾಜೇಂದ್ರ ಸಕಾರಿಯಾ ಎಂದು ಗುರುತಿಸಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಹರ್ಷಿತ್.ಬಿ ಎಂಬುವವರಿಗೆ ಆರೋಪಿಗಳು ಪರಿಚಯವಾಗಿದ್ದರು. ಅದಾದ ಬಳಿಕ ಮಹಿಳೆಯಿಂದ 1.60 ಕೋಟಿ ಮೌಲ್ಯದ 1300 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದು ಮಾರಾಟ ಮಾಡಿಕೊಡುವುದಾಗಿ ಹೇಳಿದ್ದರು. ಚಿನ್ನ ಪಡೆದು ಮೂರು ತಿಂಗಳಾದರೂ ಕೂಡ ಹಣ ನೀಡಿರಲಿಲ್ಲ. ಇದರಿಂದ ಮಹಿಳೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸುದ್ದಿಯನ್ನೂ ಓದಿ | ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುವುದಾಗಿ ವಂಚನೆ; ಟೆಕ್ಕಿ ದಂಪತಿಗೆ ವಂಚಿಸಿದ್ದು ಬರೋಬ್ಬರಿ 14 ಕೋಟಿ ರೂ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಇನ್ನೂ ಹಲವರಿಗೆ ವಂಚನೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.