ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸೆರೆಸಿಕ್ಕ ಶಾಹಿನ್ ವಿದೇಶಕ್ಕೆ ತೆರಳಲು ಬಯಸಿದ್ದಳು; ರಹಸ್ಯ ಬಹಿರಂಗಪಡಿಸಿದ ಮಾಜಿ ಪತಿ
ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಫರಿದಾಬಾದ್ ಭಯೋತ್ಪಾದಕ ಮಾಡ್ಯೂಲ್‌ನಲ್ಲಿ ಭಾಗಿಯಾಗಿರುವ ಡಾ. ಶಾಹೀನ್ ಮದುವೆಯಾದ ಬಳಿಕ ವಿದೇಶಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಳು. ಆದರೆ ತಾನು ಭಾರತದಲ್ಲೇ ಇರಲು ಬಯಸಿದ್ದೆ ಎಂದು ಆಕೆಯ ಮಾಜಿ ಪತಿ ಜಾಫರ್ ಹಯಾತ್ ತನಿಖೆ ವೇಳೆ ತಿಳಿಸಿದ್ದಾರೆ.
ಡಾ. ಶಾಹೀನ್ ಮತ್ತು ಆಕೆಯ ಮಾಜಿ ಪತಿ ಜಾಫರ್ ಹಯಾತ್ (ಸಂಗ್ರಹ ಚಿತ್ರ) -
ನವದೆಹಲಿ: ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಶಾಹೀನ್ (Dr. Shaheen) ಮದುವೆಯಾದ ಬಳಿಕ ವಿದೇಶಕ್ಕೆ ಹೋಗಲು ಬಯಸಿದ್ದಳು. ಆದರೆ ನನಗೆ ಅದು ಇಷ್ಟ ಇರಲಿಲ್ಲ. ಹೀಗಾಗಿ ನಮ್ಮಿಬ್ಬರ ಮದುವೆ 2013ರಲ್ಲಿ ಕೊನೆಗೊಂಡಿತು. ಆ ಬಳಿಕ ನಾನು ಆಕೆಯೊಂದಿಗೆ ಸಂಪರ್ಕದಲ್ಲಿ ಇಲ್ಲ ಎಂದು ಆಕೆಯ ಮಾಜಿ ಪತಿ ಜಾಫರ್ ಹಯಾತ್ (dr.shaheen ex husband) ತಿಳಿಸಿದ್ದಾರೆ. ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ನಡೆದ ಬಾಂಬ್ ಸ್ಪೋಟದಲ್ಲಿ (Delhi bomb blast) ಡಾ. ಶಾಹೀನ್ ಳ ಮಾಜಿ ಪತಿ ಜಾಫರ್ ಹಯಾತ್ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜೈಶ್-ಎ-ಮೊಹಮ್ಮದ್ (Jaish-e-Mohammad) ಸಂಘಟನೆಯ ಫರಿದಾಬಾದ್ ಭಯೋತ್ಪಾದಕ ಮಾಡ್ಯೂಲ್‌ನಲ್ಲಿ ಭಾಗಿಯಾಗಿರುವ ಡಾ. ಶಾಹೀನ್ ಬಂಧನದ ಬಳಿಕ ಆಕೆಯ ಮಾಜಿ ಪತಿ, ವೃತ್ತಿಯಲ್ಲಿ ವೈದ್ಯರಾಗಿರುವ ಜಾಫರ್ ಹಯಾತ್ ಅವರನ್ನು ಅಪರಾಧ ವಿಭಾಗದ ಅಧಿಕಾರಿಗಳು ಕಾನ್ಪುರದ ಅವರ ಕಚೇರಿಯಲ್ಲಿ ವಿಚಾರಣೆ ನಡೆಸಿದರು.
ಇದನ್ನೂ ಓದಿ: Masood Azhar: ಭಯೋತ್ಪಾದಕ ಮಸೂದ್ ಅಜರ್ ಗೆ ಕಾವಲಾಗಿರುವ ಪಾಕಿಸ್ತಾನ
ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಲಕ್ನೋ ಮೂಲದ ಶಾಹೀನ್ ಜೊತೆ ನನ್ನ ವಿವಾಹ 2013 ರಲ್ಲಿ ಕೊನೆಯಾಗಿದೆ. ಇದು ಹಿರಿಯರು ನಿಶ್ಚಯಿಸಿದ ವಿವಾಹವಾಗಿತ್ತು. ಮದುವೆ ಕೊನೆಗೊಂಡ ಬಳಿಕ ನಾವು ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲಎಂದು ತಿಳಿಸಿದ್ದಾರೆ.
ನಮ್ಮ ನಡುವೆ ಯಾವುದೇ ಸಂಘರ್ಷವಿರಲಿಲ್ಲ. ಮದುವೆಯ ಬಳಿಕ ಅವರು ಕಾನ್ಪುರಕ್ಕೆ ತೆರಳಿದರು. ಉದ್ಯೋಗಾವಕಾಶ ಮತ್ತು ಉಜ್ವಲ ಭವಿಷ್ಯದ ದೃಷ್ಟಿಯಿಂದ ಶಾಹೀನ್ ಯುರೋಪ್ ಅಥವಾ ಆಸ್ಟ್ರೇಲಿಯಾಕ್ಕೆ ತೆರಳಲು ಬಯಸಿದ್ದಳು. ಆದರೆ ನನಗೆ ಭಾರತವನ್ನು ಬಿಡಲು ಇಷ್ಟವಿರಲಿಲ್ಲ ಎಂದು ಅವರು ಹೇಳಿದ್ದಾರೆ.
ನಮಗೆ ಇಬ್ಬರು ಮಕ್ಕಳಿದ್ದಾರೆ. ಶಾಹೀನ್ ವಿಚ್ಛೇದನದ ಬಳಿಕ ಮನೆ ತೊರೆದಿದ್ದರಿಂದ ಆ ಮಕ್ಕಳಿಬ್ಬರೂ ನಮ್ಮ ಜೊತೆ ಇದ್ದಾರೆ. ಅವರ ತಾಯಿಯ ಬಗ್ಗೆ ಪ್ರಸಾರವಾಗುತ್ತಿರುವ ಸುದ್ದಿಗಳ ಬಗ್ಗೆ ನಾನು ಅವರಿಗೆ ಏನೂ ತಿಳಿಸಿಲ್ಲ ಎಂದರು.
ಅವಳು ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿದ್ದಾಳೆ ಎಂಬುದು ನಮಗೆ ಗೊತ್ತಿಲ್ಲ. ನಾವು ಉದಾರವಾದಿ ಮತ್ತು ವಿದ್ಯಾವಂತ ಜನರು. ಸಮಾಜದ ಸದಸ್ಯರಾಗಿ ಶಾಂತಿಯುತವಾಗಿ ಬದುಕಿದ್ದೇವೆ. ಅವಳೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಶಾಹೀನ್ ಕಾನ್ಪುರವನ್ನು ತೊರೆದ ಬಳಿಕ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಎಂದು ಹಯಾತ್ ಹೇಳಿದ್ದಾರೆ.
ಶಾಹೀನ್ ಅವರ ಕಿರಿಯ ಸಹೋದರ ಪರ್ವೇಜ್ ಅನ್ಸಾರಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ. ಅವರು ಹೆಚ್ಚು ಮಾತನಾಡುವುದಿಲ್ಲ, ಮೌನವಾಗಿರಲು ಇಷ್ಟಪಡುತ್ತಾರೆ ಎಂದರು.