ಮಂಗಳೂರು: ಪೆಟ್ರೋಲ್ ಪಂಪ್ವೊಂದರ ಬಳಿ ಪಿಕಪ್ ವಾಹನ ಡಿಕ್ಕಿಯಾಗಿ (pickup and Scooter accident) ಸ್ಕೂಟರ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ (Manglore crime) ಸೋಮವಾರ ಸಂಜೆ ನಡೆದಿದೆ. ಮೇಲ್ನೋಟಕ್ಕೆ ಇದು ಅಪಘಾತದಂತೆ ಭಾಸವಾದರೂ ಕೊಲೆಯಾಗಿರಬಹುದು (murder case) ಎಂಬ ಶಂಕೆ ವ್ಯಕ್ತವಾಗಿದೆ. ಸ್ನೇಹಿತರ ನಡುವೆ ಮೊಬೈಲ್ ಫೋನ್ ವಿಚಾರವಾಗಿ ಜಗಳ ನಡೆದ ಮೇಲೆ ಈ ಅಪಘಾತ ಸಂಭವಿಸಿದೆ. ಹೀಗಾಗಿ ಉದ್ದೇಶಪೂರ್ವಕವಾಗಿ ಪ್ರತೀಕಾರ ತೀರಿಸಿಕೊಳ್ಳಲು ನಡೆದ ಕೃತ್ಯ ಇದಾಗಿರಬಹುದು ಎಂದು ಶಂಕಿಸಿರುವ ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬೋಲಿಯಾರ್ನಲ್ಲಿರುವ ಪೆಟ್ರೋಲ್ ಪಂಪ್ವೊಂದರ ಬಳಿ ಸೋಮವಾರ ಸಂಜೆ ಬೊಲೆರೋ ಪಿಕಪ್ ವಾಹನವೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರ ಸಂಪೂರ್ಣ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನವು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಪಿಕಪ್ ವಾಹನ ಕೂಡ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದು ಬಿದ್ದಿದೆ.
Tiger Shroff Firing: ಶೂಟರ್ಸ್ ಪತ್ತೆಗೆ ಮಹತ್ವದ ಸುಳಿವು ನೀಡಿದ ಕ್ಯಾಬ್ ಚಾಲಕನ ಆ ಒಂದು ಫೋನ್ ಕರೆ
ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ, ಕಿನ್ಯಾದ ಅರೆಬಿನಗರ ನಿವಾಸಿ ಮೊಹಮ್ಮದ್ ಅರ್ಫಾಜ್ (22) ಮತ್ತು ಅವರ ಸ್ನೇಹಿತ ಮೊಹಮ್ಮದ್ ಅಫ್ರಾಜ್ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಇದು ರಸ್ತೆ ಅಪಘಾತದಂತೆ ಬಂದಿತ್ತು.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ, ಪಿಕಪ್ ಚಾಲಕ ಹಫೀಜ್ ಹಾಗೂ ದ್ವಿಚಕ್ರ ವಾಹನದಲ್ಲಿದ್ದ ಮೊಹಮ್ಮದ್ ಅರ್ಫಾಜ್, ಮೊಹಮ್ಮದ್ ಅಫ್ರಾಜ್ ನಡುವೆ ರಂತಡ್ಕ ಕ್ರಾಸ್ ಬಳಿ ಮೊಬೈಲ್ ಫೋನ್ಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾಗಿ ಜಗಳ ನಡೆದಿದೆ. ಇದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದರ ಬಳಿಕ ಆರೋಪಿ ತನ್ನ ಪಿಕಪ್ ವಾಹನದಲ್ಲಿ ಸ್ಕೂಟರ್ ಅನ್ನು ಹಿಂಬಾಲಿಸಿಕೊಂಡು ಬಂದು ಅದಕ್ಕೆ ಡಿಕ್ಕಿ ಹೊಡೆದಿರಬಹುದು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪಿಕಪ್ ಚಾಲಕ ಹಫೀಜ್ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ನೀಡಿರುವ ಹೇಳಿಕೆ ಮತ್ತು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಇತರ ಸಾಕ್ಷ್ಯಾಧಾರಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ.