ಪ್ರೇಮಿಯನ್ನು ಮದುವೆಯಾಗಿದ್ದಕ್ಕೆ ಯುವತಿಯನ್ನು ಹತ್ಯೆಗೈದ ಕುಟುಂಬಸ್ಥರು; ಆತ್ಮಹತ್ಯೆ ಎಂದು ಬಿಂಬಿಸಿದ ಪೊಲೀಸ್ ಅಧಿಕಾರಿ
Crime News: 22 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾದ ಕಾರಣಕ್ಕೆ ಆಕೆಯ ಕುಟುಂಬದವರೇ ಹತ್ಯೆ ಮಾಡಿದ್ದಲ್ಲದೆ ನಂತರ ಪೊಲೀಸ್ ಅಧಿಕಾರಿಯ ಸಹಾಯದಿಂದ ಆತ್ಮಹತ್ಯೆ ಪ್ರಕರಣ ಎಂದು ಮುಚ್ಚಿಹಾಕಲು ಪ್ರಯತ್ನಿಸಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ -
ಅಮರಾವತಿ, ಏ. 5: 22 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಮದುವೆಯಾದ ಕಾರಣಕ್ಕೆ ಆಕೆಯ ಕುಟುಂಬದವರೇ ಹತ್ಯೆ ಮಾಡಿದ್ದಲ್ಲದೆ (Crime News), ನಂತರ ಪೊಲೀಸ್ ಅಧಿಕಾರಿಯ ಸಹಾಯದಿಂದ ಆತ್ಮಹತ್ಯೆ ಪ್ರಕರಣ ಎಂದು ಮುಚ್ಚಿಹಾಕಲು ಪ್ರಯತ್ನಿಸಿದ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ. ಸದ್ಯ ಕೃತ್ಯಕ್ಕೆ ನೆರವಾದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಕೃತ್ಯ ಕಳೆದ ತಿಂಗಳು ಆಂಧ್ರ ಪ್ರದೇಶದ ಮಾಚೆರ್ಲಾ ಪಟ್ಟಣದಲ್ಲಿ ನಡೆದಿತ್ತು. ಚೌಡೇಶ್ವರಿ ಎಂಬ ಯುವತಿ ಯುವಕನೊಬ್ಬನ್ನ ಪ್ರೀತಿಸುತ್ತಿದ್ದಳು. ಅವಳ ಮನೆಯವರು ಇದನ್ನು ವಿರೋಧಿಸಿದ್ದರು. ಮಾರ್ಚ್ 4ರಂದು ಆಕೆ ಪೋಷಕರ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನನ್ನು ಮದುವೆಯಾದಳು. ಕೆಲವು ದಿನಗಳ ನಂತರ ಆಕೆಯ ಕುಟುಂಬವು ನಾಪತ್ತೆ ದೂರು ದಾಖಲಿಸಿತು. ನಂತರ ಯುವತಿಯನ್ನು ಪತ್ತೆಹಚ್ಚಲು ಹುಡುಕಾಟ ನಡೆಸಲಾಯಿತು.
ಮಾಚೆರ್ಲಾ ಪಟ್ಟಣದ ವೃತ್ತ ನಿರೀಕ್ಷಕರು (ಸಿಐ) ಮಾರ್ಚ್ 15ರಂದು ದಂಪತಿಯನ್ನು ಪತ್ತೆಹಚ್ಚಿ, ಯುವತಿಯನ್ನು ಆಕೆಯ ಪೋಷಕರ ಮನೆಗೆ ಹಿಂತಿರುಗುವಂತೆ ಆಗ್ರಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಪೊಲೀಸ್ ಅಧಿಕಾರಿ ಆಕೆಯನ್ನು ಬೆದರಿಸಿ ಕುಟುಂಬಕ್ಕೆ ಒಪ್ಪಿಸಿದ್ದಾರೆ. ಮೂರು ದಿನಗಳ ನಂತರ, ಚೌಡೇಶ್ವರಿ ತನ್ನ ಹೆತ್ತವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಕಮಲಾಪುರದಲ್ಲಿ ಯುವತಿಯನ್ನು ಕೊಂದು, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!
ಆರಂಭದಲ್ಲಿ, ಆಕೆಯ ಕುಟುಂಬವು ಆಕೆ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾಳೆಂದು ಹೇಳಿಕೊಂಡಿತ್ತು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಸಾವು ಸ್ವಯಂ ಪ್ರೇರಿತವಲ್ಲ, ಕೊಲೆ ಎಂದು ದೃಢಪಡಿಸಿತು. ಮಲಗಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವೈದ್ಯರು ಬಹಿರಂಗಪಡಿಸಿದರು.
ತರುವಾಯ, ಯುವತಿಯ ತಂದೆ ಚಂದ್ರಶ್ರೀನು ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಯಿತು. ಆತ್ಮಹತ್ಯೆ ಎಂದು ಬಿಂಬಿಸಲು ಪೊಲೀಸ್ ಅಧಿಕಾರಿಯೂ ಸಹಾಯ ಮಾಡಿದ್ದ. ಇದಕ್ಕೆ ಲಂಚ ಪಡೆದಿರುವ ಶಂಕೆಯಿದೆ. ಪ್ರಕರಣ ಸಂಬಂಧ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ, ಪಿತೂರಿ, ಲಂಚ ಪಡೆಯುವುದು ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ್ದಕ್ಕಾಗಿ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ.