ಅಹಮದಾಬಾದ್: ಕೊಳವೆ ಬಾವಿಗೆ ಬಿದ್ದ ಮಗಳನ್ನು ರಕ್ಷಿಸಲು ತಂದೆಯೇ ಕೊಳವೆ ಬಾವಿಗೆ ಹಾರಿದ ಘಟನೆ ಅಹಮದಾಬಾದ್‌ನ ಚಾಂದ್ಲೋಡಿಯಾ ಪ್ರದೇಶದಲ್ಲಿ ನಡೆದಿದೆ. ಗಜರಾಜ್ ಸೊಸೈಟಿಯ ಜೈನ ದೇವಸ್ಥಾನದಲ್ಲಿ ತೋಟಗಾರರಾಗಿ ಕೆಲಸ ಮಾಡುತ್ತಿದ್ದ ಕುಟುಂಬದ 19 ವರ್ಷದ ಯುವತಿ 60 ಅಡಿ ಆಳದ ನೀರು ತುಂಬಿದ ಕೊಳವೆ ಬಾವಿಗೆ ಜಾರಿ ಬಿದ್ದಿದ್ದಳು. ಅವಳನ್ನು ರಕ್ಷಿಸಿ ತಂದೆಯೇ ಕೊಳವೆ ಬಾವಿಗೆ ಹಾರಿದ್ದಾರೆ. ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಅವರಿಬ್ಬರನ್ನೂ ರಕ್ಷಿಸಿದ್ದಾರೆ.
ಅಹಮದಾಬಾದ್‌ನ ಚಾಂದ್ಲೋಡಿಯಾ ಪ್ರದೇಶದಲ್ಲಿರುವ ಗಜರಾಜ್ ಸೊಸೈಟಿಯ ಜೈನ ದೇವಸ್ಥಾನದಲ್ಲಿ ತೋಟದಲ್ಲಿ ಡಿಸೆಂಬರ್ 15ರಂದು ರಾತ್ರಿ ಈ ಘಟನೆ ನಡೆದಿದೆ. ಕೊಳವೆ ಬಾವಿಗೆ ಬಿದ್ದ ಅಂಜಲಿ ಸೈನಿಯನ್ನು ರಕ್ಷಿಸಲು ರಾಜೇಶ್‌ಭಾಯ್ ಸೈನಿ ಕೂಡ ಕೊಳವೆ ಬಾವಿಗೆ ಹಾರಿದ್ದಾರೆ. ಅವರಿಬ್ಬರನ್ನು ರಕ್ಷಿಸಲು ಅಗ್ನಿಶಾಮಕದಳ ಆಗಮಿಸಬೇಕಾಯಿತು.
ಕೊಳವೆ ಬಾವಿಯಲ್ಲಿ ನೀರು ತುಂಬಿದ್ದು ಸಮಯ ಕಳೆಯುತ್ತಿದ್ದಂತೆ ಅಂಜಲಿ ಮತ್ತು ರಾಜೇಶ್ ಅವರಿಗೆ ಅಪಾಯ ಹೆಚ್ಚಾಗುತ್ತಿತ್ತು. ಅಗ್ನಿಶಾಮಕ ದಳ ಆಗಮಿಸಿ 20 ನಿಮಿಷಗಳ ಕಾರ್ಯಾಚರಣೆ ನಡೆಸಿ ಅವರಿಬ್ಬರನ್ನು ರಕ್ಷಿಸಿತು. ಅವರನ್ನು ಬಳಿಕ ಸೋಲಾ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ನವರಂಗಪುರ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ಅಧಿಕಾರಿ ಹಿತೇಶ್ ಪಟೇಲ್ ಭಾಸ್ಕರ್, ಚಂದಲೋಡಿಯದ ಗಜರಾಜ್ ಸೊಸೈಟಿಯಲ್ಲಿರುವ ಜೈನ ದೇವಾಲಯವೊಂದರಲ್ಲಿ ನೀರು ತುಂಬಿದ ಬೋರ್‌ವೆಲ್‌ಗೆ ಇಬ್ಬರು ಬಿದ್ದಿರುವ ಬಗ್ಗೆ ಮಾಹಿತಿ ಬಂದಿತ್ತು. ಕೂಡಲೇ ಅಗ್ನಿಶಾಮಕ ದಳದ ರಕ್ಷಣಾ ತಂಡ, ಮಿನಿ ಟ್ಯಾಂಕರ್ ಮತ್ತು ಇತರ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿತು. ಉಪ ಅಧಿಕಾರಿ ಭೂಮಿತ್ ಮಿಸ್ತ್ರಿ ಮತ್ತು ಇತರ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಮೊದಲು ಯುವತಿಯನ್ನು ಬಳಿಕ ಆಕೆಯ ತಂದೆಯನ್ನು ರಕ್ಷಿಸಲಾಗಿದೆ ಎಂದರು.
ಇಬ್ಬರನ್ನು ಹಗ್ಗದ ಸಹಾಯದಿಂದ ಹೊರತೆಗೆಯಲಾಗಿದೆ. ಕೊಳವೆಬಾವಿ ಐದು ಅಡಿ ಅಗಲ ಮತ್ತು ಸುಮಾರು 50 ರಿಂದ 60 ಅಡಿ ಆಳವಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಮೊದಲು ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.
ಸೈಬರ್ ಕ್ರೈಮ್ ಹೊಸ ತಂತ್ರ.. ಸೈಲೆಂಟ್ ಕಾಲ್ ಮೂಲಕವೂ ವಂಚಿಸ್ತಾರೆ ಎಚ್ಚರ
ದೇವಾಲಯದಲ್ಲಿ ರಾಜೇಶ್‌ಭಾಯ್ ಮತ್ತು ಅವರ ಕುಟುಂಬ ತೋಟಗಾರರಾಗಿ ಕೆಲಸ ಮಾಡುತ್ತಿದ್ದರು. ಅವರ ಮಗಳು ಅಂಜಲಿ ಅಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ನೀರು ತುಂಬಿದ ಕೊಳವೆಬಾವಿಗೆ ಬಿದ್ದಳು. ಶಬ್ದ ಕೇಳಿದ ರಾಜೇಶ್‌ಭಾಯ್ ತಕ್ಷಣ ಸ್ಥಳಕ್ಕೆ ಧಾವಿಸಿ ಅವಳನ್ನು ರಕ್ಷಿಸಲು ಬಾವಿಗೆ ಹಾರಿದರು. ಇಬ್ಬರಿಗೂ ಹೊರಬರಲು ಸಾಧ್ಯವಾಗಲಿಲ್ಲ.ಕೂಡಲೇ ಯುವತಿಯ ತಾಯಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ತನಿಖೆ ಆರಂಭಿಸಲಾಗಿದೆ ಎಂದರು.