ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾವನ್ನೂ ಮೀರಿಸುವ ಘಟನೆ: ಗೆಳತಿಗಾಗಿ ಸತ್ತಿದ್ದೇನೆ ಎಂದು ನಾಟಕವಾಡಿದ ಆರೋಪಿ ಅಂದರ್; ಹಾಗಾದರೆ ಸತ್ತಿದ್ದು ಯಾರು? ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

Crime News: ಗೆಳತಿಗಾಗಿ ಹಾಗೂ ವಿಮೆ ಹಣ ಪಡೆಯುವುದಕ್ಕಾಗಿ ವ್ಯಕ್ತಿಯೊಬ್ಬ ತಾನು ಸತ್ತಿದ್ದೇನೆ ಎಂಬಂತೆ ನಾಟಕವಾಡಿದ ಘಟನೆ ಬೆಳಕಿಗೆ ಬಂದಿದೆ. ಕಾರಿಗೆ ಬೆಂಕಿ ಹಚ್ಚಿ, ಅದರೊಳಗೆ ವ್ಯಕ್ತಿಯೊಬ್ಬನನ್ನು ಕೊಂದು ಪ್ರಕರಣವನ್ನು ಆತ್ಮಹತ್ಯೆಯಂತೆ ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸತ್ತಿದ್ದೇನೆ ಎಂದು ನಾಟಕವಾಡಿದ ಆರೋಪಿ ಅರೆಸ್ಟ್

ಕಾರಿಗೆ ಬೆಂಕಿ ಹಚ್ಚಿ, ವ್ಯಕ್ತಿಯೊಬ್ಬನನ್ನು ಕೊಂದ ಆರೋಪಿ ಬಂಧನ -

Priyanka P
Priyanka P Dec 16, 2025 4:34 PM

ಮುಂಬೈ, ಡಿ. 16: ಮಹಾರಾಷ್ಟ್ರದ ಲೂತೂರು ಬಳಿ ಬೆಂಕಿಯಿಂದ ಹೊತ್ತಿ ಉರಿದಿದ್ದ ಕಾರಿನಲ್ಲಿ ಸುಟ್ಟ ಶವವೊಂದು ಪತ್ತೆಯಾದ ಪ್ರಕರಣ ಇತ್ತೀಚೆಗೆ ದೇಶದ ಗಮನ ಸೆಳೆದಿತ್ತು. ಈ ಸಂಬಂಧ ಕೊಲೆ ಪ್ರಕರಣ (Murder case) ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಪ್ರಕರಣವನ್ನು ಭೇದಿಸಿದ್ದಾರೆ. ತನಿಖೆ ವೇಳೆ ವ್ಯಕ್ತಿಯೊಬ್ಬ ತಾನು ಸತ್ತಿದ್ದೇನೆ ಎಂದು ಗೆಳತಿ ತಿಳಿದುಕೊಳ್ಳುವಂತಾಗಲು ಬೇರೊಬ್ಬ ವ್ಯಕ್ತಿಗೆ ಬೆಂಕಿ ಹಚ್ಚಿ ಕೊಂದಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ತಾನು ಸತ್ತಿದ್ದೇನೆ ಎಂದು ತಿಳಿದು ತನ್ನ ಕುಟುಂಬ, ಗೆಳತಿ ದುಃಖಿಸಬೇಕು ಎಂದು ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ (ಡಿಸೆಂಬರ್‌ 16) ಮುಂಜಾನೆ, ಮಹಾರಾಷ್ಟ್ರದ ಲಾತೂರಿನ ಔಸಾ ತಾಲೂಕಿನಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಕಾರಿನಲ್ಲಿ ಯುವಕನ ಶವ ಪತ್ತೆಯಾಗಿತ್ತು. ಕಾರು ಹೊತ್ತಿ ಉರಿಯುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಕಾರಿನೊಳಗೆ ಪರಿಶೀಲಿಸಿದಾಗ ಗೋಣಿಚೀಲದಲ್ಲಿ ಸುಟ್ಟ ಶವ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು.

ಮಕ್ಕಳನ್ನು ಸಾಕಲು ಸಾಧ್ಯವಾಗದೆ ಮೂವರನ್ನು ಕೊಂದು ತಂದೆ ಆತ್ಮಹತ್ಯೆ

ಈ ಸಂಬಂಧ ಪೊಲೀಸರು ಕಾರಿನ ಮಾಲೀಕರನ್ನು ಪತ್ತೆಹಚ್ಚಿದಾಗ ಅವರು ಅದನ್ನು ತಮ್ಮ ಸಂಬಂಧಿಕರೊಬ್ಬರಿಗೆ ನೀಡಿರುವುದು ಗೊತ್ತಾಯಿತು. ಆ ವ್ಯಕ್ತಿಯ ಸಂಬಂಧಿ, ಬ್ಯಾಂಕ್ ವಸೂಲಾತಿ ಏಜೆಂಟ್ ಗಣೇಶ್ ಚವ್ಹಾಣ್ ಎಂದು ತಿಳಿದು ಬಂತು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಮನೆಗೆ ಹಿಂತಿರುಗಿಲ್ಲ ಮತ್ತು ಅವರ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎಂಬುದು ಗೊತ್ತಾಗಿದೆ.

ಈ ಎಲ್ಲ ಸಂಗತಿಗಳ ಆಧಾರದ ಮೇಲೆ ಮೃತಪಟ್ಟ ವ್ಯಕ್ತಿ ಗಣೇಶ್ ಚವ್ಹಾಣ್ ಎಂಬುದು ನಮ್ಮ ಆರಂಭಿಕ ಊಹೆಯಾಗಿತ್ತು ಎಂದು ಲಾತೂರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಮೋಲ್ ತಂಬಲ್ ಹೇಳಿದರು. ತನಿಖೆ ಮುಂದುವರಿದಂತೆ, ಪೊಲೀಸರಿಗೆ ಇಲ್ಲಿ ಏನೋ ಸರಿಯಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಅವರು ಚವ್ಹಾಣ್ ಬಗ್ಗೆ ಪರಿಶೀಲಿಸಲು ಪ್ರಾರಂಭಿಸಿದರು. ಈ ವೇಳೆ ಆತನಿಗೆ ಯುವತಿಯೊಬ್ಬಳ ಜತೆ ಸಂಬಂಧವಿರುವುದು ಗೊತ್ತಾಯಿತು.

ಹೀಗಾಗಿ ಯುವತಿಯನ್ನು ಪೊಲೀಸರು ವಿಚಾರಿಸಿದಾಗ ಆತ ಸತ್ತಿಲ್ಲ, ಬದುಕಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ನಂತರ, ಗಣೇಶ್ ಚವ್ಹಾಣ್ ಬೇರೆ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಆಕೆಗೆ ಸಂದೇಶ ಕಳುಹಿಸುತ್ತಿದ್ದ ಮತ್ತು ಚಾಟ್ ಮಾಡುತ್ತಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದರು.

ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿ ಜೀವಂತವಾಗಿದ್ದಾನೆ ಎಂದು ಸಾಬೀತಾದ ನಂತರ, ಕಾರಿನಲ್ಲಿ ಸಿಕ್ಕ ಮೃತದೇಹ ಯಾರದ್ದು ಎಂಬ ಪ್ರಶ್ನೆ ಮೂಡಿತು. ಇದೀಗ ಮೃತನ ಗುರುತು ಕೂಡ ಪತ್ತೆಯಾಗಿದೆ. ಇತ್ತ ಚವ್ಹಾಣ್ ಎಲ್ಲಿದ್ದಾನೆ ಎಂದು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಆತ ಕೊಲ್ಲಾಪುರ ಮತ್ತು ಸಿಂಧುದುರ್ಗ ಜಿಲ್ಲೆಯ ವಿಜಯದುರ್ಗದಲ್ಲಿದ್ದಾನೆ ಎಂಬುದು ತಿಳಿದು ಬಂತು. ಅಲ್ಲಿಗೆ ತೆರಳಿದ ಪೊಲೀಸರು ಗಣೇಶ್ ಚವ್ಹಾಣ್‌ನನ್ನು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಚವ್ಹಾಣ್ ಅನ್ನು ಪ್ರಶ್ನಿಸಿದಾಗ, 1 ಕೋಟಿ ರೂ.ಯ ಜೀವ ವಿಮಾ ಹಣ ಮತ್ತು ಗೃಹ ಸಾಲವನ್ನು ತೀರಿಸಲು ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ. ಜತೆಗೆ ಪ್ರೇಯಸಿಯ ಅನುಕಂಪ ಗಿಟ್ಟಿಸಲು ಕೊಲೆಯ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಕಾರಿನೊಳಗೆ ಯುವಕ ಸಜೀವ ದಹನ; ಗೋಣಿಚೀಲದಲ್ಲಿ ತುಂಬಿದ್ದ ಸುಟ್ಟ ಮೃತದೇಹ ಪತ್ತೆ

ಮೃತ ವ್ಯಕ್ತಿ ಯಾರು?

ಶನಿವಾರ (ಡಿಸೆಂಬರ್‌ 13) ಔಸಾದ ತುಲ್ಜಾಪುರ ಟಿ-ಜಂಕ್ಷನ್‌ನಲ್ಲಿ ಗೋವಿಂದ್ ಯಾದವ್ ಎಂಬ ವ್ಯಕ್ತಿಯು ಚವ್ಹಾಣ್ ಕಾರನ್ನು ಅನ್ನು ನಿಲ್ಲಿಸಿ ಲಿಫ್ಟ್ ಕೇಳಿದ್ದಾನೆ. ಯಾದವ್ ತುಂಬ ಕುಡಿದಿದ್ದರಿಂದ ಪರಿಸ್ಥಿತಿ ಲಾಭ ಪಡೆದ ಚವ್ಹಾಣ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಒಂದು ಉಪಾಹಾರ ಗೃಹದಲ್ಲಿ ನಿಲ್ಲಿಸಿ ಆಹಾರ ಪಾರ್ಸೆಲ್ ತೆಗೆದುಕೊಂಡಿದ್ದಾನೆ. ಸ್ವಲ್ಪ ದೂರ ಕಾರನ್ನು ಚಲಾಯಿಸಿದ ನಂತರ ಯಾದವ್ ಆಹಾರ ಸೇವಿಸಿ ನಿದ್ರೆಗೆ ಜಾರಿದ್ದಾನೆ. ಇದರ ಲಾಭ ಪಡೆದ ಚವ್ಹಾಣ್ ಆತನನ್ನು ಕಟ್ಟಿ, ಮೈ ಮೇಲೆ ಗೋಣಿ ಚೀಲ ತುಂಬಿದ್ದಾನೆ. ಬಳಿಕ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಪೊಲೀಸರನ್ನು ದಾರಿ ತಪ್ಪಿಸಲು ಮತ್ತು ತಾನು ಸತ್ತಿದ್ದೇನೆ ಎಂದು ತನ್ನ ಕುಟುಂಬಕ್ಕೆ ಮನವರಿಕೆ ಮಾಡಿಕೊಡಲು, ಚವ್ಹಾಣ್ ತನ್ನ ಬಳೆಯನ್ನು ಯಾದವ್ ಬಳಿಯೇ ಬಿಟ್ಟು ಹೋಗಿದ್ದ. ಇದೀಗ ಚವ್ಹಾಣ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಚವ್ಹಾಣ್ ಜತೆ ಯಾರಾದರೂ ಕೈ ಜೋಡಿಸಿದ್ದಾರಾ ಎಂದು ತಿಳಿದುಕೊಳ್ಳಲು, ಪೊಲೀಸರು ಮತ್ತಷ್ಟು ತನಿಖೆಗೆ ಮುಂದಾಗಿದ್ದಾರೆ.