ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud Case: ಐಷಾರಾಮಿ ಮನೆ ತೋರಿಸಿ ಉದ್ಯಮಿಗಳಿಂದ ಕೋಟಿ ಕೋಟಿ ವಂಚಿಸಿದವನ ಬಂಧನ

Fraud Case: ಮಂಗಳೂರಿನ ಕಂಕನಾಡಿ ಬಳಿಯ ಬೊಳ್ಳಗುಡ್ಡ ಬಜಾಲ್‌ನ 43 ವರ್ಷದ ವಂಚಕ ರೋಷನ್ ಸಲ್ಡಾನಾ, ಜಿಲ್ಲೆ ಮತ್ತು ರಾಜ್ಯಾದ್ಯಂತ ಹಲವು ಜನರಿಗೆ ವಂಚಿಸಿದ್ದು, ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಅವನ ಮನೆಯೊಳಗೆ ಹಲವಾರು ರಹಸ್ಯ ಕೋಣೆಗಳು ಇರುವುದನ್ನು ಪತ್ತೆಹಚ್ಚಿದ್ದಾರೆ.

ಐಷಾರಾಮಿ ಮನೆ ತೋರಿಸಿ ಉದ್ಯಮಿಗಳಿಂದ ಕೋಟಿ ಕೋಟಿ ವಂಚಿಸಿದವನ ಬಂಧನ

ಆರೋಪಿ ರೋಷನ್ ಸಲ್ಡಾನಾ ಹಾಗೂ ಆತನ ಮನೆ

ಹರೀಶ್‌ ಕೇರ ಹರೀಶ್‌ ಕೇರ Jul 19, 2025 8:50 AM

ಮಂಗಳೂರು: ತನ್ನ ಐಷಾರಾಮಿ ಬಂಗಲೆ, ಚಿನ್ನದ ಸ್ವತ್ತುಗಳು, ದುಬಾರಿ ಬೆಲೆಯ ಮದ್ಯದ ಬಾರ್ ಮೊದಲಾದವುಗಳನ್ನು ತೋರಿಸಿ ಆ ಮೂಲಕ ತಾನೊಬ್ಬ ದೊಡ್ಡ ಉದ್ಯಮಿಯೆಂದು (Businessman) ಬಿಂಬಿಸಿಕೊಂಡು, ಉದ್ಯಮಿಗಳು ಮತ್ತು ಇತರ ಶ್ರೀಮಂತ ವ್ಯಕ್ತಿಗಳಿಗೆ ಕಡಿಮೆ ಬಡ್ಡಿದರದಲ್ಲಿ ನೂರಾರು ಕೋಟಿ ರೂ. ಸಾಲ (Loan) ನೀಡುವುದಾಗಿ ಭರವಸೆ ನೀಡಿ, ಅವರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ, ವಂಚನೆ (Fraud case) ಮಾಡಿ ನಾಪತ್ತೆಯಾಗಿದ್ದ ವಂಚಕನನ್ನು ಪೊಲೀಸರು ಮಂಗಳೂರಿನಲ್ಲಿ (Mangaluru) ಬಂಧಿಸಿದ್ದಾರೆ.

ಮಂಗಳೂರಿನ ಕಂಕನಾಡಿ ಬಳಿಯ ಬೊಳ್ಳಗುಡ್ಡ ಬಜಾಲ್‌ನ 43 ವರ್ಷದ ವಂಚಕ ರೋಷನ್ ಸಲ್ಡಾನಾ, ಜಿಲ್ಲೆ ಮತ್ತು ರಾಜ್ಯಾದ್ಯಂತ ಹಲವು ಜನರಿಗೆ ವಂಚಿಸಿದ್ದು, ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗುರುವಾರ ರಾತ್ರಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ, ಎಸಿಪಿ ರವೀಶ್ ನಾಯಕ್ ನೇತೃತ್ವದ ಸಿಇಎನ್ ಪೊಲೀಸ್ ತಂಡ, ಸಲ್ಡಾನಾ ಅವರ ಮನೆಯ ಮೇಲೆ ದಾಳಿ ನಡೆಸಿದೆ. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಅವರ ಮನೆಯೊಳಗೆ ಹಲವಾರು ರಹಸ್ಯ ಕೋಣೆಗಳು ಇರುವುದನ್ನು ಪತ್ತೆಹಚ್ಚಿದ್ದಾರೆ. ಆ ಕೋಣೆಗಳನ್ನು ಆರೋಪಿ, ಹಠಾತ್ ನಾಪತ್ತೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಬಳಸುತ್ತಿದ್ದ.

ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರು ಸಿಇಎನ್ ಪೊಲೀಸರು ಈ ವರ್ಷ ಬಿಎನ್‌ಎಸ್‌ನ ಸೆಕ್ಷನ್ 316(2), 316(5), 318(2) ಅಡಿಯಲ್ಲಿ ಸಲ್ಡಾನಾ ವಿರುದ್ಧ ಎರಡು ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಲ್ಡಾನಾ ಗೋವಾ, ಬೆಂಗಳೂರು. ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ಮತ್ತು ಬಾಗಲಕೋಟೆ ಸೇರಿದಂತೆ ಹಲವು ಪ್ರದೇಶಗಳ ಜನರನ್ನು ವಂಚಿಸಿದ್ದಾನೆ.

ಸಲ್ಡಾನಾ ತಾನು ಉದ್ಯಮಿ, ಫೈನಾನ್ಸರ್ ಎಂದು ಹೇಳಿ, ಗ್ರಾಹಕರನ್ನು, ಹೆಚ್ಚಾಗಿ ಉದ್ಯಮಿಗಳು ಮತ್ತು ಶ್ರೀಮಂತ ವ್ಯಕ್ತಿಗಳನ್ನು ತನ್ನ ಮನೆಗೆ ಆಹ್ವಾನಿಸಿ 100 ಕೋಟಿ ರೂ.ಗಳಿಗೂ ಹೆಚ್ಚಿನ ಸಾಲದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಬಳಿಕ ಸ್ಟಾಂಪ್ ಡ್ಯೂಟಿ, ಕಮಿಷನ್ ಮತ್ತು ಇತರ ಶುಲ್ಕಕ್ಕಾಗಿ 4 ಕೋಟಿ ರೂ.ಗಳವರೆಗೆ ಹಣ ಪಾವತಿಸಲು ಕೇಳುತ್ತಿದ್ದ. ಅವರಿಂದ ನಗದು ರೂಪದಲ್ಲಿ ಮಾತ್ರ ಹಣ ಸ್ವೀಕರಿಸುತ್ತಿದ್ದ. ಹಣ ಪಡೆದ ನಂತರ ನಾಪತ್ತೆಯಾಗುತ್ತಿದ್ದ ಎಂದು ಆರೋಪಿಸಲಾಗಿದೆ.

ದಾಳಿಯ ಸಮಯದಲ್ಲಿ ಪೊಲೀಸರು, ರಿಮೋಟ್ ಆಧಾರಿತ ಪ್ರವೇಶ ದ್ವಾರ, ಮನೆ ಮತ್ತು ಸುತ್ತಮುತ್ತ ಹಲವು ಸಿಸಿಟಿವಿ ಕ್ಯಾಮೆರಾಗಳು, ದುಬಾರಿ ವಿದೇಶಿ ಮದ್ಯ ಇರುವ ಬಾರ್, ಹಲವು ರಹಸ್ಯ ಕೋಣೆಗಳನ್ನು ಹೊಂದಿರುವ ಒಳಾಂಗಣ ಮತ್ತು ಅಡಗುಕೋಣೆಗಳನ್ನು ಪತ್ತೆಹಚ್ಚಿದ್ದಾರೆ.

ಬಹುಕೋಟಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಲ್ದಾನಾ ಸ್ವಲ್ಪ ಸಮಯದಿಂದ ತಲೆಮರೆಸಿಕೊಂಡಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

"ನಾವು ಆತನನ್ನು ಮನೆಯಲ್ಲಿ ರಹಸ್ಯ ಕೊಠಡಿಯಲ್ಲಿ ಯಶಸ್ವಿಯಾಗಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದೇವೆ. ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ, ಅವರ ಮನೆಯಲ್ಲಿ ಅಪರಾಧ ದಾಖಲೆಗಳು, ಚೆಕ್‌ಗಳು, 4 ಕೋಟಿ ರೂ. ಮೌಲ್ಯದ ವಜ್ರದ ಉಂಗುರ ಮತ್ತು 6.5 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ ದುಬಾರಿ ಆಭರಣಗಳು ಹಾಗೂ ವಿದೇಶಿ ಮದ್ಯವೂ ಪತ್ತೆಯಾಗಿದ್ದು, ಸೂಕ್ತ ಪ್ರಕ್ರಿಯೆಯಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಆರೋಪಿಯು ಮನೆಯಲ್ಲಿ ಮಿತಿ ಮೀರಿದ ಮದ್ಯವನ್ನು ಹೊಂದಿದ್ದಕ್ಕಾಗಿ ಅಬಕಾರಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ, ಕಳೆದ 3-4 ತಿಂಗಳುಗಳಲ್ಲಿ, ಆರೋಪಿಯ ಖಾತೆಗಳಲ್ಲಿ 40 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಂಚನೆ ವಹಿವಾಟು ನಡೆದಿರುವುದು ಕಂಡುಬಂದಿದೆ. ತನಿಖೆಯ ಭಾಗವಾಗಿ ಎಲ್ಲಾ ಹಿಂದಿನ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Prabhu Chauhan: ಮದುವೆಯಾಗುವುದಾಗಿ ನಂಬಿಸಿ ವಂಚನೆ, ಯುವತಿಯಿಂದ ಬಿಜೆಪಿ ಶಾಸಕನ ಪುತ್ರನ ಮೇಲೆ ದೂರು