Karnataka New CM: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಅಧಿಕೃತ ಆಯ್ಕೆ; ಬುಧವಾರ ಸಂಜೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸೇರಿ ಹಿರಿಯ ನಾಯಕರ ಜತೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಬುಧವಾರ ಸಂಜೆ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು: ವಿಧಾನಸೌಧದಲ್ಲಿ ಶನಿವಾರ ನಡೆದ ಸಿಎಲ್‌ಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿಕೆ ಶಿವಕುಮಾರ್ ಅವರ ಹೆಸರನ್ನು ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಇದಕ್ಕೆ ಸಭೆಯಲ್ಲಿ ಶಾಸಕರಿಂದ ಅನುಮೋದನೆ ದೊರೆತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಸೇರಿ ಹಲವು ಹಿರಿಯ ನಾಯಕರು ಸಭೆಯಲ್ಲಿ ಹಾಜರಿದ್ದರು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನನಗೆ 17 ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದೆ, ಎರಡು ಅವಧಿಯಲ್ಲಿ ಸಿಎಂ ಆಗಿ ಸೇವೆ ಸಲ್ಲಿಸಲು ಸಹಕಾರ ನೀಡಿದ ಹೈಕಮಾಂಡ್ ನಾಯಕರು, ಸಚಿವರು, ಶಾಸಕರಿಗೆ ಧನ್ಯವಾದ ಸಲ್ಲಿಸುವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಧನ್ಯವಾದ ಸಲ್ಲಿಕೆ
ಸಭೆಯಲ್ಲಿ ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್ ಅವರು ಧನ್ಯವಾದ ಸಲ್ಲಿಸಿದರು. ಈ ಬಗ್ಗೆ ನಿರ್ಣಯ ಮಂಡಿಸಿದ ಅವರು, ಕರ್ನಾಟಕದ ಜನತೆಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ವಿಶಿಷ್ಟ ಸೇವೆಯನ್ನು ಸ್ಮರಿಸಿ, ಕಾಂಗ್ರೆಸ್ ಶಾಸಕಾಂಗ ಪಕ್ಷವು ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಅವರು 2013-2018 ಮತ್ತು 2023-2026 ರವರೆಗೆ ಮುಖ್ಯಮಂತ್ರಿಯಾಗಿ ಹಾಗೂ ಎರಡು ಅವಧಿಗಳಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಸೇವೆಯನ್ನು ಜನತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಯಾವಾಗಲೂ ಅಪಾರ ಪ್ರೀತಿ ಹಾಗೂ ಹೆಮ್ಮೆಯಿಂದ ಸ್ಮರಿಸುತ್ತಾರೆ. ಸಾಮಾಜಿಕ ನ್ಯಾಯದ ಮೇಲಿನ ಅವರ ಸಮರ್ಪಣಾ ಭಾವ, ಆಡಳಿತಾತ್ಮಕ ಸಾಮರ್ಥ್ಯ, ಪಕ್ಷದ ಸಿದ್ಧಾಂತಕ್ಕೆ ಅವರ ಬದ್ಧತೆ ಮತ್ತು ಪಕ್ಷದ ನಾಯಕತ್ವದಲ್ಲಿನ ಅವರ ಸಂಪೂರ್ಣ ನಂಬಿಕೆಯು ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಅನುಕರಿಸಬೇಕಾದ ಮಾದರಿಯಾಗಿದೆ.
ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಯಾವಾಗಲೂ ಇದೇ ಆದರ್ಶಗಳ ಹಾದಿಯಲ್ಲಿ ಮುನ್ನಡೆಯುತ್ತದೆ. ನಾವು ಅವರಿಗೆ ನಮ್ಮ ಹೃದಯದಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕರ್ನಾಟಕದ ಜನತೆಯ ಸೇವೆ ಮಾಡಲು, ಪ್ರತಿಯೊಂದು ವಲಯದಲ್ಲೂ ಪರಿವರ್ತನಾತ್ಮಕ ಅಭಿವೃದ್ಧಿಯನ್ನು ತರಲು ಮತ್ತು ಕನ್ನಡಿಗರ ಜೀವನದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಪಯಣದಲ್ಲಿ ಅವರ ನಿರಂತರ ಪಾಲ್ಗೊಳ್ಳುವಿಕೆ ಮತ್ತು ಮಾರ್ಗದರ್ಶನವನ್ನು ನಾವು ಸದಾ ಬಯಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
CM ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ರಾಜ್ಯಪಾಲರಿಂದ ಅಂಗೀಕಾರ, ಸಚಿವ ಸಂಪುಟವೂ ವಿಸರ್ಜನೆ
ಜೂನ್ 3ರ ಸಂಜೆ ನೂತನ ಸಿಎಂ ಪ್ರಮಾಣ ವಚನ ಸ್ವೀಕಾರ
ಇನ್ನು ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸೇರಿ ಹಿರಿಯ ನಾಯಕರ ಜತೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಪಕ್ಷಕ್ಕೆ ಬಹುಮತ ಇರುವುದರಿಂದ ರಾಜ್ಯಪಾಲರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಆಗಿ ನೇಮಕ ಮಾಡಲಿದ್ದಾರೆ.
ಲೋಕಭವನದ ಗ್ಲಾಸ್‌ಹೌಸ್‌ನಲ್ಲಿ ಜೂನ್ 3ರ ಬುಧವಾರ ಸಂಜೆ 4.05 ನಿಮಿಷಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.