ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸರ್ಕಾರಿ ಕಚೇರಿಯಲ್ಲೇ ವಕೀಲೆಯ ಮೇಲೆ ಹಲ್ಲೆ; ಕ್ಯಾಮರಾದಲ್ಲಿ ದಾಖಲಾಯ್ತು ಬೆಚ್ಚಿಬೀಳಿಸುವ ದೃಶ್ಯ

Viral Video: ಅಸ್ಸಾಂನ ಗುವಾಹಟಿ ಸಮೀಪದ ಅಜಾರಾದ ಕಂದಾಯ ಕಚೇರಿಯಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಲಾಗಿದೆ. ಭೂಸ್ವಾಧೀನ ಪ್ರಕರಣದ ವಿಚಾರಣೆ ವೇಳೆ ವಾಗ್ವಾದ ನಡೆದಿದ್ದು, ವಕೀಲೆಯನ್ನು ನಿಂದಿಸಿ, ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಲಾಗಿದೆ. ವ್ಯಕ್ತಿಯೊಬ್ಬ ವಕೀಲೆಯನ್ನು ಕಪಾಟಿಗೆ ತಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ. ಕಂದಾಯ ಅಧಿಕಾರಿ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ.

ಕಂದಾಯ ಕಚೇರಿಯಲ್ಲೇ ವಕೀಲೆಯ ಮೇಲೆ ಹಲ್ಲೆ; ವಿಡಿಯೊ ವೈರಲ್‌

ಅಸ್ಸಾಂನ ಗುವಾಹಟಿಯಲ್ಲಿ ವಕೀಲೆಯ ಮೇಲೆ ನಡೆದ ಹಲ್ಲೆಯ ದೃಶ್ಯ -

Profile
Sushmitha Jain Oct 10, 2026 9:29 PM

ದಿಸ್‌ಪುರ, ಅ. 10: ಅಸ್ಸಾಂನ ಗುವಾಹಟಿ ಸಮೀಪದ ಅಜಾರಾದಲ್ಲಿರುವ ಕಂದಾಯ ವೃತ್ತಾಧಿಕಾರಿಯ (Revenue Circle Officer) ಕಚೇರಿಯಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ವಿಡಿಯೊ ವೈರಲ್‌ ಆಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಭೂಸ್ವಾಧೀನ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಯ ಸಂಬಂಧಪಟ್ಟಂತೆ ವಕೀಲೆ ಕಂದಾಯ ವೃತ್ತಾಧಿಕಾರಿ ಬಿಪ್ಲಬ್ ಶರ್ಮಾ ಬರ್ಡೊಲೊಯ್ ಅವರ ಕಚೇರಿಗೆ ತೆರಳಿದ್ದರು. ಈ ವೇಳೆ ವಕೀಲೆ ಮತ್ತು ಕಂದಾಯ ಅಧಿಕಾರಿ ಬಿಪುಲ್ ಡೇಕಾ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಬಳಿಕ ಬರ್ಡೊಲೊಯ್ ವಕೀಲೆಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡಿದ್ದು, ಅಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಘಟನೆಯನ್ನು ಚಿತ್ರೀಕರಿಸಲು ವಕೀಲೆ ಮುಂದಾದಾಗ, ಬಿಪುಲ್ ಡೇಕಾ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ವಕೀಲೆಯ ಮೇಲೆ ನಡೆದ ಹಲ್ಲೆ:



ಕಪಾಟಿಗೆ ತಳ್ಳಿ ಹಲ್ಲೆ ಮಾಡಿದ ಆರೋಪ

ಘಟನೆ ನಡೆದ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಬಸ್ತಬ್ ರಮಣ್ ಬರ್ಮನ್ ಎಂಬಾತ ತಾನು ವಕೀಲ ಎಂದು ಪರಿಚಯಿಸಿಕೊಂಡಿದ್ದು, ವಕೀಲೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಸಂತ್ರಸ್ತ ವಕೀಲೆಯನ್ನು ಆತ ಕಪಾಟಿಗೆ ತಳ್ಳುತ್ತಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಘಟನೆಯ ಕುರಿತು ಚರ್ಚೆಗೆ ಕಾರಣವಾಗಿದೆ.

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 5 ಮಂದಿ ಸಾವು, ಮನೆಗಳಿಗೆ ಹಾನಿ

ಇದಲ್ಲದೆ ವಕೀಲೆಯ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ವಕೀಲೆ ಕೂಗಿಕೊಂಡು ಸಹಾಯಕ್ಕಾಗಿ ಮೊರೆಹೋದಾಗ, ಕಂದಾಯ ವೃತ್ತಾಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂವರ ವಿರುದ್ಧ ದೂರು, ಪ್ರತ್ಯೇಕ ದೂರು ದಾಖಲು

ಘಟನೆಯ ಬಳಿಕ ವಕೀಲೆ ಅಜಾರಾ ಪೊಲೀಸ್ ಠಾಣೆಯಲ್ಲಿ ಬಿಪುಲ್ ಡೇಕಾ, ಬಿಪ್ಲಬ್ ಶರ್ಮಾ ಬರ್ಡೊಲೊಯ್ ಮತ್ತು ಬಸ್ತಬ್ ರಮಣ್ ಬರ್ಮನ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ವೇಳೆ, ವಕೀಲೆಯ ವಿರುದ್ಧವೂ ಪ್ರತ್ಯೇಕ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ದೂರುಗಳ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲ್ಲೆ ಆರೋಪಗಳ ಕುರಿತು ತನಿಖೆಯಿಂದ ಹೆಚ್ಚಿನ ವಿವರಗಳು ಹೊರಬರಬೇಕಿದೆ.