ಆಪರೇಷನ್ ಘೋಸ್ಟ್ ಸಿಮ್: ಪಾಕ್ ಸಂಪರ್ಕ ಹೊಂದಿರುವ ಬೃಹತ್ ಜಾಲ ಪತ್ತೆ
Operation Ghost SIM: ಪಾಕಿಸ್ತಾನಿ ಏಜೆಂಟ್‌ಗಳ ಸಂಪರ್ಕ ಹೊಂದಿರುವ ನಕಲಿ ಸಿಮ್ ಕಾರ್ಡ್ ಜಾಲ ನಡೆಸುತ್ತಿದ್ದ ಏಳು ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ. ಅಸ್ಸಾಂನ ಧುಬ್ರಿ ಜಿಲ್ಲೆಯಿಂದ ಕನಿಷ್ಠ 14 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪಿಗಳನ್ನು ಗುರುತಿಸಿ, ಜಾಲವನ್ನು ಪತ್ತೆ ಮಾಡಲು ಭಾರತೀಯ ಸೇನೆ ಮತ್ತು ಅಸ್ಸಾಂ ಪೊಲೀಸರು ‘ಆಪರೇಷನ್ ಘೋಸ್ಟ್ ಸಿಮ್’ ಕಾರ್ಯಾಚರಣೆಯಡಿ ಒಟ್ಟಾಗಿ ಕೆಲಸ ಮಾಡಿದ್ದಾರೆ.


ಗುವಾಹಟಿ: ಪಾಕಿಸ್ತಾನಿ ಏಜೆಂಟ್‌ಗಳ ಸಂಪರ್ಕ ಹೊಂದಿರುವ ನಕಲಿ ಸಿಮ್ ಕಾರ್ಡ್ ಜಾಲ (SIM Card Racket) ನಡೆಸುತ್ತಿದ್ದ ಏಳು ಜನರನ್ನು ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು (Assam Police) ತಿಳಿಸಿದ್ದಾರೆ. ಅಸ್ಸಾಂನ (Assam) ಧುಬ್ರಿ ಜಿಲ್ಲೆಯಿಂದ ಕನಿಷ್ಠ 14 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪಿಗಳನ್ನು ಗುರುತಿಸಿ, ಜಾಲವನ್ನು ಪತ್ತೆ ಮಾಡಲು ಭಾರತೀಯ ಸೇನೆ (Indian Army) ಮತ್ತು ಅಸ್ಸಾಂ ಪೊಲೀಸರು ‘ಆಪರೇಷನ್ ಘೋಸ್ಟ್ ಸಿಮ್’ (Operation Ghost SIM) ಕಾರ್ಯಾಚರಣೆಯಡಿ ಒಟ್ಟಾಗಿ ಕೆಲಸ ಮಾಡಿದ್ದಾರೆ.
ಅಸ್ಸಾಂ, ರಾಜಸ್ಥಾನ ಮತ್ತು ತೆಲಂಗಾಣದ ಗುಪ್ತ ತಾಣಗಳಿಂದ ಫೇಕ್ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸೇನೆಯ ಗಜರಾಜ್ ಕಾರ್ಪ್ಸ್‌ನಿಂದ ಮೊದಲಿಗೆ ಗುಪ್ತಚರ ಮಾಹಿತಿ ಲಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಫೇಕ್ ಸಿಮ್ ಕಾರ್ಡ್‌ಗಳನ್ನು ಸೈಬರ್ ಅಪರಾಧಗಳಿಗೆ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು. ಇದರಲ್ಲಿ ಪಾಕಿಸ್ತಾನದ ಏಜೆಂಟ್‌ಗಳಿಗೆ ಸಂವೇದನಾಶೀಲ ಮಾಹಿತಿಯನ್ನು ಒದಗಿಸುವುದೂ ಸೇರಿದೆ.
ಈ ಸುದ್ದಿಯನ್ನು ಓದಿ: Odisha Crime: ಅನಾಥ ಮಗುವನ್ನು ರಕ್ಷಿಸಿದ್ದೇ ಜೀವಕ್ಕೆ ಮುಳುವಾಯ್ತು; ದತ್ತು ಮಗಳಿಂದಲೇ ಕೊಲೆಯಾದ ತಾಯಿ
ದೇಶಾದ್ಯಂತ ಏಕಕಾಲಕ್ಕೆ ದಾಳಿ
ಸೇನೆಯಿಂದ ಗುಪ್ತಚರ ಮಾಹಿತಿ ಪಡೆದ ನಂತರ, ಅಸ್ಸಾಂ ಪೊಲೀಸರ ವಿಶೇಷ ಶಾಖೆ ಮತ್ತು ವಿಶೇಷ ಕಾರ್ಯಪಡೆಯು ಮಾಹಿತಿಯನ್ನು ಮತ್ತಷ್ಟು ವಿಶ್ಲೇಷಿಸಿ ‘ಆಪರೇಷನ್ ಘೋಸ್ಟ್ ಸಿಮ್’ ಆರಂಭಿಸಿತು. ಭಾರತದಾದ್ಯಂತ ಏಕಕಾಲದಲ್ಲಿ ಹಲವು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಲಾಯಿತು. ರಾಜಸ್ಥಾನ ಮತ್ತು ತೆಲಂಗಾಣಕ್ಕೆ ಪ್ರತ್ಯೇಕ ತಂಡಗಳು ತೆರಳಿದರೆ, ಇನ್ನೊಂದು ತಂಡ ಅಸ್ಸಾಂನ ಧುಬ್ರಿ ಮತ್ತು ಮೊರಿಗಾಂವ್‌ನಲ್ಲಿ ದಾಳಿ ನಡೆಸಿತು.
ಏಳು ಆರೋಪಿಗಳ ಬಂಧನ
ಮೇ 16ರಂದು ಆರಂಭವಾದ ಈ ಜಂಟಿ ಕಾರ್ಯಾಚರಣೆಯಲ್ಲಿ ಏಳು ಪ್ರಮುಖ ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತರನ್ನು ರಾಜಸ್ಥಾನದ ಭರತ್‌ಪುರದ ಸಿಕ್ರಿಯ 47 ವರ್ಷದ ಸದ್ದಿಕ್, ರಾಜಸ್ಥಾನದ ಸಹೋರಿ ಅಲ್ವಾರ್‌ನ 20 ವರ್ಷದ ಆರಿಫ್ ಖಾನ್, ಅಲ್ವಾರ್‌ನ 21 ವರ್ಷದ ಸಾಜಿದ್, ಭರತ್‌ಪುರದ 25 ವರ್ಷದ ಅಕೀಕ್, ಭರತ್‌ಪುರದ 34 ವರ್ಷದ ಅರ್ಸಾದ್ ಖಾನ್, ಧುಬ್ರಿಯ 19 ವರ್ಷದ ಮೊಫಿಜುಲ್ ಇಸ್ಲಾಂ ಮತ್ತು ಅಸ್ಸಾಂನ ಬಿಲಾಸಿಪಾರಾದ 24 ವರ್ಷದ ಜಾಕರಿಯಾ ಅಹ್ಮದ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯಲ್ಲಿ 948 ಸಿಮ್ ಕಾರ್ಡ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
“ಮೇ 16ರ ಮಧ್ಯಾಹ್ನ ಕಾರ್ಯಾಚರಣೆ ಆರಂಭವಾಯಿತು. ವಿವಿಧ ಸ್ಥಳಗಳಿಂದ ಏಳು ಜನರನ್ನು ವಶಕ್ಕೆ ಪಡೆದು ಬಂಧಿಸಲಾಯಿತು” ಎಂದು ಅಸ್ಸಾಂ ಡಿಜಿಪಿ ಹರ್ಮೀತ್ ಸಿಂಗ್ ತಿಳಿಸಿದ್ದಾರೆ. “ಈ ಸಿಮ್ ಕಾರ್ಡ್‌ಗಳನ್ನು ಕೇವಲ ಸೈಬರ್ ಅಪರಾಧಗಳಿಗೆ ಮಾತ್ರವಲ್ಲ, ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೂ ಬಳಸಲಾಗುತ್ತಿತ್ತು. ಈ ನಂಬರ್‌ಗಳನ್ನು ರಾಷ್ಟ್ರವಿರೋಧಿ ಮತ್ತು ಶತ್ರು ಶಕ್ತಿಗಳಿಗೆ ಹಂಚಿಕೆ ಮಾಡಲಾಗಿತ್ತು. ಇವುಗಳನ್ನು ಭಾರತದಿಂದ ಕಾರ್ಯ ನಿರ್ವಹಿಸುವಂತೆ ಕಾಣುವ ವಾಟ್ಸಾಪ್ ಖಾತೆಗಳಿಗೆ ಬಳಸಲಾಗುತ್ತಿತ್ತು” ಎಂದು ಡಿಜಿಪಿ ವಿವರಿಸಿದ್ದಾರೆ.